Advertisement
1924ರ ಒಲಿಂಪಿಕ್ಸ್‌ನಲ್ಲಿ ಮೊದಲ ಬಾರಿಗೆ ಸೇರ್ಪಡೆಯಾದ ದೋಣಿ ಚಾಲನ ಸ್ಪರ್ಧೆಯಲ್ಲಿ ಆಯ್ಕೆಯಾದ ತಂಡದಲ್ಲಿದ್ದ ಬಿಲ್ ಪಾಲ್ಗೊಂಡರೆ ಮತ್ತಾರಿಗೂ ಅವಕಾಶವಿಲ್ಲ ಎಂಬ ಮಾತು ಜನಜನಿತವಾಗಿತ್ತು. ಒಲಿಂಪಿಕ್ಸ್ ನಡೆಯುವ ಪ್ಯಾರಿಸ್‌ಗೆ ಹಡಗಿನಲ್ಲಿ ಹೋಗಿ ಬರಲು ತಿಂಗಳುಗಳು ಬೇಕಿತ್ತು. ಅದೇ ಸಮಯ ಆತನ ಹೆಂಡತಿ ಗರ್ಭಿಣಿ. ಒಲಿಂಪಿಕ್ಸ್ ಸ್ಪರ್ಧೆಯಲ್ಲಿ ಪಾಲ್ಗೊಳ್ಳುವುದೋ? ಹೆಂಡತಿ ಆರೋಗ್ಯ ಕಾಪಾಡುವುದೋ ಎಂಬ ಗೊಂದಲದಲ್ಲಿ ಬಿಲ್ ಸಿಲುಕಿದ್ದ. ಕೊನೆಗೆ ಆಯ್ದುಕೊಂಡದ್ದು ಪತ್ನಿ, ಹುಟ್ಟಲಿರುವ ಮಗುವನ್ನು. ಸ್ಪರ್ಧೆ ಮುಗಿದು ನಾಲ್ಕು ದಿನಗಳ ಬಳಿಕ 1924ರ ಆಗಸ್ಟ್ 1ರಂದು ಮಗು ಜನಿಸಿತು. ವಿಲಿಯಂಗೆ ಚಿನ್ನದ ಪದಕ ಕೈತಪ್ಪಿ ಆತನ ಉಚ್ಛಾಯ ಕಾಲವೂ ಇಳಿಮುಖವಾಗತೊಡಗಿತು. ಮಾಧ್ಯಮಗಳಲ್ಲಿ ರಾರಾಜಿಸುತ್ತಿದ್ದ ವಿಲಿಯಂ ತೆರೆಮರೆಗೆ ಸಂದಂತಾದ.
Related Articles
ಭಾವನೆಯಲ್ಲೇ ಭವಿಷ್ಯದ ಕನಸುಗಳನ್ನು ಕಾಣುತ್ತೇವೆ. ಆದರೆ ಕಾಣದ ಕನಸು ಕೈಗೂಡುವುದಿದೆ. ಇಂಗ್ಲಿಷ್‌ನಲ್ಲಿ ಗಾದೆ ಮಾತೊಂದಿದೆ: truth is stranger than fiction. ತಂದೆ ಬಿಲ್ ಹೆವೆನ್ಸ್ ಮಾಡಿದ ತ್ಯಾಗ ಪುತ್ರ ಫ್ರಾಂಕ್ ಹೆವೆನ್ಸ್ ರೂಪದಲ್ಲಿ ಮರಳಿ ಬಂತು. ಕುತೂಹಲವೆಂದರೆ ಬರುತ್ತದೆಂದು ಗೊತ್ತಿರದೆ ಇರುವುದು! ಸಮುದ್ರಕ್ಕೆ ಏನನ್ನೇ ಎಸೆದರೂ ಕಡಲತೀರಕ್ಕೆ ಬರುತ್ತದೆ. ನಿಸರ್ಗಕ್ಕೆ ಏನನ್ನೇ ಕೊಟ್ಟರೂ ಅದು ಕೊಡುವ ಹತ್ತು ಪಟ್ಟು ಫಲವನ್ನು ಪಡೆಯುತ್ತೇವೆ ವಿನಾ ನೈಸರ್ಗಿಕ (ವಿ)ಜ್ಞಾನವನ್ನು ಮನಸ್ಸಿಟ್ಟು ಗಮನಿಸುವುದಿಲ್ಲ. ನಿಸರ್ಗವೆಂದರೆ ಕಣ್ಣಿಗೆ ಕಾಣುವ ದೇವರು ಎಂದಿಟ್ಟುಕೊಳ್ಳಬಹುದು. ನಿಸರ್ಗ ನಾವು ಕೊಟ್ಟ ಒಳ್ಳೆಯ ಅಥವಾ ಕೆಟ್ಟದ್ದನ್ನೇ ಹಿಂದಿರುಗಿಸುವುದು. “ಕರ್ಮ ಸಿದ್ಧಾಂತ’ ಅಂದರೆ ಧಾರ್ಮಿಕತೆ ಅಂಟಬಹುದು. ಇಂತಹ ಶಬ್ದಗಳು ಬಲು ಸೂಕ್ಷ್ಮ. ಒಂದೆಡೆ ದೇವರು- ಜನರ ನಡುವಿನ ಮಧ್ಯಸ್ಥಿಕೆದಾರರು ದುರುಪಯೋಗಪಡಿಸಿಕೊಂಡರೆ, ಇನ್ನೊಂದೆಡೆ ಮಧ್ಯಸ್ಥಿಕೆದಾರರ ದೋಷದಿಂದ ನಿಸರ್ಗವೇ (ದೇವರು) ವಾಗ್ಧಾಳಿ ಎದುರಿಸಬೇಕಾಗುತ್ತದೆ. ತಂದೆ ನೆಟ್ಟ ಸಸ್ಯಗಳಿಂದ ಮಕ್ಕಳು ಫಲ ಉಣ್ಣುತ್ತಾರೆ. ತತ್‌ಕ್ಷಣ ಫಲ ಸಿಗುತ್ತದೆಯೆ? ಅದಕ್ಕೂ ನಿಸರ್ಗ ಕಾಲಮಿತಿ ಹಾಕಿದೆ. ಸಸ್ಯಗಳಿಗೆ ಉತ್ತಮ ಗೊಬ್ಬರ ಹಾಕಿದರೆ ಉತ್ತಮ ಫಲ ಎಂದು ಒಪ್ಪಿಕೊಳ್ಳುವುದಾದರೂ ಒಳ್ಳೆಯದನ್ನು ಮಾಡಿದರೆ ಒಳ್ಳೆಯ ಫಲ ಪಡೆಯುತ್ತೇವೆ ಎಂಬುದನ್ನು ಒಪ್ಪಿಕೊಳ್ಳುವುದಿಲ್ಲ. ತಾತ್ವಿಕವಾಗಿ ಒಪ್ಪಿಕೊಂಡರೂ ಜಾರಿಗೊಳಿಸುವಾಗ ದಾರಿ ತಪ್ಪಿಸುತ್ತೇವೆ. ನಿಸರ್ಗದ ನೀತಿಗೆ ಸಸ್ಯ, ಮಾನವ ಎಂಬ ಭೇದವಿಲ್ಲ.
Advertisement
“ಕಾನೂನು ಎಲ್ಲರಿಗೂ ಸಮಾನ’ ಎನ್ನುವ ನಾವು ನಿಸರ್ಗಕ್ಕೂ ಅನ್ವಯಿಸಬಹುದು. ಇದು “ಪೊಳ್ಳು’ ಎಂದು ಹೇಳುವುದಾದರೂ ನಿಸರ್ಗ “ಪೊಳ್ಳು’ ಆದೀತೆ? ನ. 14 ಮಕ್ಕಳ ದಿನ. “ಮಕ್ಕಳಿಗೆ ಕೊಡುವ ಸಮಯ ಏನೇನೂ ಸಾಕಾಗದು’ ಎನ್ನುತ್ತಾರೆ ಮನೋವೈದ್ಯರು. ಬಿಲ್ ಹೆವೆನ್ಸ್‌ನಂತೆ ನಮ್ಮದೇ ಮಕ್ಕಳಿಗಾಗಿ ಎಷ್ಟು ತ್ಯಾಗ ಮಾಡುತ್ತೇವೆಂದು ಆತ್ಮಾವಲೋಕನ ಮಾಡಿಕೊಳ್ಳಬೇಕು. ತ್ಯಾಗದಲ್ಲಿಯೂ ಪ್ರಾಮಾಣಿಕತೆ ಬೇಕು, ಪ್ರಾಮಾಣಿಕತೆಯ ಸೋಗು ಅಲ್ಲ. ನಿಸರ್ಗಕ್ಕೆ ನಮ್ಮ ತ್ಯಾಗದಿಂದ ಆಗಬೇಕಾದದ್ದೇನೂ ಇಲ್ಲ. ನಮಗಾದರೂ ಯಾರೋ ಮಾಡಿದ ತ್ಯಾಗದ ಮೇಲೆ “ಸೌಧ’ ಕಟ್ಟಿ ಮೆರೆಯುವ ತವಕ ಇರಬಹುದು. ನಿಸರ್ಗ ನಮ್ಮ ಹಾಗಲ್ಲ. ಅದು ಸಂಕುಚಿತವಲ್ಲ, ವಿಕಸಿತ; ಸುಖಿಯೂ ಅಲ್ಲ, ದುಃಖಿಯೂ ಅಲ್ಲ; ನಿಷ್ಕಾಮಕರ್ತವ್ಯ ಮಾತ್ರ; ರಾಗವೂ ಇಲ್ಲ, ದ್ವೇಷವೂ ಇಲ್ಲ; ಅಪೂರ್ಣವಲ್ಲ, ಪೂರ್ಣ, ಸ್ವಯಂಪೂರ್ಣ. ಈ ಅರಿವಿನೊಂದಿಗೆ ಹೆಜ್ಜೆ ಇಡೋಣ, ಏನಾದರೂ ಕೊಡೋಣ, ಒಳ್ಳೆಯದನ್ನೇ ಕೊಡೋಣ, ಮನಸ್ಸಿನಲ್ಲಿ ಕಲಬೆರಕೆ ಬೇಡ. ಹೇಳುವುದೊಂದು, ಮಾಡುವುದೊಂದು ಬೇಡ. “ಕೆರೆಯ ನೀರನು ಕೆರೆಗೆ ಚೆಲ್ಲಿ…’ ಎಂಬ ದಾಸರ ಕನ್ನಡದ ಹಾಡೂ ಅಮೆರಿಕದ ಬಿಲ್‌ಗೂ ಫ್ರಾಂಕ್‌ಗೂ ಅನ್ವಯ… ಇದು ವಿಶಾಲವಾದ ವಿಶ್ವವೆಂಬ ಕೆರೆ. ಕೊಟ್ಟರೂ ಅದೊಂದೇ ಕೆರೆಗೆ… ಪಡೆಯುವುದೂ ಅದೊಂದೇ ಕೆರೆಯಿಂದ… “ಸಾಯುವುದು ಏಕೆ? ಉತ್ತರ -ಹುಟ್ಟುವುದಕ್ಕೆ; ಹುಟ್ಟುವುದು ಏಕೆ? ಉತ್ತರ-ಸಾಯುವುದಕ್ಕೆ’ – ಈ ಮಾತನ್ನು “ಉದಯವಾಣಿ’ ಸಾಪ್ತಾಹಿಕ ಸಂಪಾದಕರಾಗಿದ್ದ ವಿದ್ವಾಂಸ ಡಾ|ಬನ್ನಂಜೆ ಗೋವಿಂದಾಚಾರ್ಯರು ಹೇಳುತ್ತಿದ್ದರು. ಅದೇ ತೆರದಿ ನಾವು/ನಮ್ಮವರು ಸಮಾಜವೆಂಬ ಕೆರೆಗೆ ಕೊಡುವುದು ಏತಕ್ಕೆ? ಉತ್ತರ-ಪಡೆಯುವುದಕ್ಕೆ. ಪಡೆಯುವುದು ಏತಕ್ಕೆ? ಉತ್ತರ- ಕೊಡುವುದಕ್ಕೆ. ಇದೊಂದು ಜಗಚ್ಚಕ್ರ. ಗೀತೆಯಲ್ಲಿ ಉಲ್ಲೇಖವಿರುವ ಜನರಿಂದ ಯಜ್ಞ, ದೇವತೆಗಳಿಂದ ಮಳೆ, ಮಳೆಯಿಂದ ಬೆಳೆ, ಬೆಳೆಯನ್ನು ಬಳಸಿದ ಜನರಿಂದ ಮತ್ತೆ ಯಜ್ಞ ಎಂಬ ಚಕ್ರದಂತೆ…
-ಮಟಪಾಡಿ ಕುಮಾರಸ್ವಾಮಿ