Advertisement
ಏನಾದರೂ ಸಾಧಿಸಬೇಕೆಂಬ ಉತ್ಸಾಹ ಅಂಬರೀಷ್ ಅವರದು. ಆ ಉತ್ಸಾಹಕ್ಕೆ ತಕ್ಕಂತೆಯೇ, ಪುಟ್ಟಣ್ಣ ಕಣಗಾಲ್, ಖಳ ಪಾತ್ರ ಕೊಡುವ ಮೂಲಕ ಅಂಬರೀಷ್ ಅವರೊಳಗಿರುವ ಕಲಾವಿದನನ್ನು ಹೊರ ತಂದಿದ್ದರು. ಅಂಬರೀಷ್, ಆ ರಂಗಯ್ಯನ ಬಾಗಿಲು ಸಮೀಪ ಸೈಕಲ್ ತಳ್ಳಿಕೊಂಡು ಬರುವ ದೃಶ್ಯ ಇಂದಿಗೂ ಹೈಲೈಟ್. ನಾಯಕಿಯನ್ನು ರೇಗಿಸುವ ದೃಶ್ಯವದು.
ಕನ್ನಡ ಚಿತ್ರರಂಗದ ಆಪದ್ಭಾಂಧವ: ಅಂಬರೀಷ್ ಅಂದರೆ ಕನ್ನಡ ಚಿತ್ರರಂಗಕ್ಕೆ ಆಪದ್ಭಾಂದವ ಎಂದೇ ಅರ್ಥ. ಕನ್ನಡ ಚಿತ್ರರಂಗದಲ್ಲಿ ಯಾವುದೇ ಸಮಸ್ಯೆ ಇದ್ದರೂ, ಅದು ಅಂಬರೀಷ್ ಅಂಗಳಕ್ಕೆ ಬಂದು ಬಿದ್ದರೆ, ಎಲ್ಲವೂ ಸಲೀಸಾಗುತ್ತಿತ್ತು. ಅಷ್ಟರ ಮಟ್ಟಿಗೆ ಅಂಬರೀಷ್ ಅವರು ಸಮಸ್ಯೆಯನ್ನು ಬಗೆಹರಿಸುತ್ತಿದ್ದರು. ನಿರ್ಮಾಪಕರ ಸಮಸ್ಯೆ ಇರಲಿ, ನಿರ್ದೇಶಕರ ಸಮಸ್ಯೆ ಇರಲಿ, ಕಲಾವಿದರ ಸಮಸ್ಯೆಯೇ ಬರಲಿ, ಅದಕ್ಕೊಂದು ಪರಿಹಾರ ಕೊಟ್ಟು, ಎಲ್ಲವನ್ನೂ ಸಲೀಸಾಗಿ ನಡೆಯುವಂತೆ ಮಾಡುತ್ತಿದ್ದರು. ಅದು ಅಂಬರೀಷ್ ವ್ಯಕ್ತಿತ್ವ. ಹಾಗೆ ಹೇಳುವುದಾದರೆ, ಕನ್ನಡ ಚಿತ್ರರಂಗದಲ್ಲಿ ಮುಖ್ಯವಾಗಿ ಸ್ಟಾರ್‌ಗಳ ವೈಯಕ್ತಿಕ ಬದುಕಿನಲ್ಲಾದ ಸಮಸ್ಯೆಗಳನ್ನು ಸೂಕ್ಷ್ಮವಾಗಿ ಬಗೆಹರಿಸಿದ ಕೀರ್ತಿ ಅಂಬರೀಷ್ ಅವರಿಗೆ ಸಲ್ಲುತ್ತದೆ. ನಟರ ಅದೆಷ್ಟೇ ಸಮಸ್ಯೆ ಇದ್ದರೂ, ಅಂಬರೀಷ್ ಅವರ ಮನೆಯ ಬಾಗಿಲಿಗೆ ಹೋದರೆ, ಕ್ಷಣಾರ್ಧದಲ್ಲೇ ಬಗೆಹರಿಯುತ್ತಿತ್ತು. ಇತ್ತೀಚೆಗೆ ಮಿಟೂ ಪ್ರಕರಣ ಕುರಿತಂತೆ ಸಮಸ್ಯೆ ಬಗೆಹರಿಸಲು ಮುಂದಾದರಾದರೂ, ಆ ವಿಷಯ ಕೋರ್ಟ್ ಮೆಟ್ಟಿಲೇರಿದ್ದರಿಂದ ಆ ವಿಷಯದ ಬಗ್ಗೆ ಅವರು ಹೆಚ್ಚು ಗಮನಹರಿಸಲಿಲ್ಲ.
Related Articles
Advertisement
ಅಂಬರೀಷ್ ಇದ್ದರೆ, ಅಲ್ಲಿ ಮಾತಿಗೆ, ನಗುವಿಗೆ ಬರ ಇರುತ್ತಿರಲಿಲ್ಲ. ಸದಾ ಟಿಪ್‌ಟಾಪ್ ಆಗಿ ಕಲರ್‌ಫುಲ್ ಡ್ರೆಸ್ ಮಾಡಿಕೊಂಡು, ತಮ್ಮದೇ ಶೈಲಿಯಲ್ಲಿ ಡೈಲಾಗ್ ಹರಿಬಿಡುತ್ತಲೇ ಮಾತಿಗಿಳಿಯುತ್ತಿದ್ದರು. ಬದುಕಿನುದ್ದಕ್ಕೂ ಅವರು ರೆಬೆಲ್ ಆಗಿಯೇ ಇದ್ದರು. ನೇರವಾಗಿ ಮಾತಾಡಿದರೂ, ಅವರ ಮನಸು ಮಗುವಿನಂತಿರುತ್ತಿತ್ತು. ಎದುರಿಗಿದ್ದವರಿಗೆ, ಪಕ್ಕದಲ್ಲಿದ್ದವರಿಗೆ ಎಷ್ಟೇ ಬೈದರೂ, ಕ್ಷಣಾರ್ಧದಲ್ಲೇ ಅವರ ಹೆಗಲ ಮೇಲೆ ಕೈ ಹಾಕಿ ಪ್ರೀತಿಯಿಂದ ಮಾತನಾಡಿಸುವ ಮೂಲಕ ಪ್ರೀತಿ ತೋರುತ್ತಿದ್ದರು.
ಕೊಡುಗೈ ದಾನಿ: ಕಲಿಯುಗದ ಕರ್ಣ ಎಂದೇ ಕರೆಸಿಕೊಳ್ಳುತ್ತಿದ್ದ ಅಂಬರೀಷ್, ಅದೆಷ್ಟೋ ಜನರಿಗೆ ಸಹಾಯ ಮಾಡಿದ್ದನ್ನು ಎಂದಿಗೂ ಹೇಳಿಕೊಂಡಿದ್ದಿಲ್ಲ. ಅವರು ಸಚಿವರಾಗಿದ್ದಾಗಲೂ, ಇಲ್ಲದಿರುವಾಗಲೂ ಅದೆಷ್ಟೋ ಜನರ ಬದುಕು ಹಸನು ಮಾಡಿದ್ದಾರೆ. ಚಿತ್ರರಂಗದ ವಿಷಯಕ್ಕೆ ಬಂದರಂತೂ, ಅವರಿಂದ ಸಹಾಯ ಪಡೆದವರು ತೀರಾ ವಿರಳ.
ಅವರೊಂದಿಗೆ ತೆರೆ ಹಂಚಿಕೊಂಡ ಅದೆಷ್ಟೋ ಕಲಾವಿದರು ಅನಾರೋಗ್ಯಕ್ಕೆ ತುತ್ತಾದ ಸಂದರ್ಭದಲ್ಲಿ, ಅಂಬರೀಷ್ ಅವರು ಸ್ವತಃ ಮುತುವರ್ಜಿ ವಹಿಸಿ, ಅವರಿಗೆ ಹಣ ಸಹಾಯ ಮಾಡಿದ್ದುಂಟು. ಆದರೆ, ಎಂದೂ ಅವರು ಹಣ ಕೊಟ್ಟ ಬಗ್ಗೆಯಾಗಲಿ, ಬೇರೇನೋ ಸಹಾಯ ಮಾಡಿದ್ದಾಗಲಿ ಹೇಳಿಕೊಳ್ಳುತ್ತಿರಲಿಲ್ಲ. ಪ್ರತಿ ದಿನ ಅವರ ಮನೆ ಬಾಗಿಲಿಗೆ ಆದೆಷ್ಟು ಮಂದಿ ಸಹಾಯ ಕೇಳಿಕೊಂಡು ಹೋದರೂ, ಇಲ್ಲ ಎನ್ನದೆ, ಕೊಡುಗೈ ದಾನಿಯಾಗಿಯೇ ಉಳಿದಿದ್ದರು.
ಇದೇ ನನ್ನ ಕೊನೇ ಸಿನಿಮಾ ಆಗಬಹುದು: ಅಂಬರೀಷ್ ಅವರಿಗೆ ಯಾಕೆ ಹಾಗೆ ಹೇಳಬೇಕೆನ್ನಿಸಿತ್ತೋ ಗೊತ್ತಿಲ್ಲ. “ಅಂಬಿ ನಿಂಗ್ ವಯಸ್ಸಾಯ್ತೋ’ ಚಿತ್ರದ ಪತ್ರಿಕಾಗೋಷ್ಠಿಯಲ್ಲಿ, “ಇದೇ ನನ್ನ ಕೊನೆಯ ಸಿನಿಮಾ ಆಗಬಹುದು’ ಎಂದು ಹೇಳಿಕೆ ಕೊಟ್ಟಿದ್ದರು. ಅವರ ಮಾತು ಕೇಳಿದ ಪತ್ರಕರ್ತರು, ಕ್ಷಣಕಾಲ ಮೌನವಾಗಿದ್ದರಲ್ಲದೆ, ಅವರ ಬಾಯಲ್ಲಿ ಆ ಮಾತು ಬಂದಿದ್ದು ಯಾಕೆ ಎಂಬ ಪ್ರಶ್ನೆಗಳನ್ನು ತಮಗೆ ತಾವೇ ಹಾಕಿಕೊಂಡಿದ್ದೂ ಉಂಟು. ಆದರೂ, ಈ ಮಾತೇಕೆ ಎಂಬ ಪ್ರಶ್ನೆಗೆ, ಅಂಬರೀಷ್ ಅವರು ಸಹಜವಾಗಿಯೇ ಹಾಗೊಂದು ನಗೆ ಬೀರಿ, ಸುಮ್ಮನಾಗಿದ್ದರು. ಅವರ ಆ ಮಾತಿಗೆ ಅವರಿಗೆ ಆಗಾಗ ಕಾಡುತ್ತಿದ್ದ ಅನಾರೋಗ್ಯ, ಸುಸ್ತು ಕಾರಣವಾಗಿದ್ದವು. ಅವರ ಮಾತು ಕೊನೆಗೂ ನಿಜವಾಯಿತು.
ಸಾವು ಗೆದ್ದು ಬಂದಿದ್ದರು: ಮೂರು ವರ್ಷಗಳ ಹಿಂದೆ ಶ್ವಾಸಕೋಶದ ಸೋಂಕಿನಿಂದ ತೀರಾ ಅನಾರೋಗ್ಯಕ್ಕೆ ತುತ್ತಾಗಿದ್ದ ಅಂಬರೀಶ್ ವಿಕ್ರಂ ಆಸ್ಪತ್ರಗೆ ದಾಖಲಾಗಿ ಅಲ್ಲಿಂದ ಸಿಂಗಪುರದ ಮೌಂಟ್ ಎಲಿಜಿಬೆತ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಗುಣಮುಖ ರಾಗಿದ್ದರು. ಸಿಂಗಾಪುರ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಗ ಅಂಬರೀಶ್ ಅಭಿಮಾನಿಗಳು ದೇವಾಲಯಗಳಲ್ಲಿ ಪೂಜೆ, ವಿಶೇಷ ಪ್ರಾರ್ಥನೆ ಸಲ್ಲಿಸಿದ್ದರು.
ಒಂದು ರೀತಿಯಲ್ಲಿ ಅವರು ಆಗ ಸಾವು ಗೆದ್ದು ಬಂದಿದ್ದರು. ಸಿಂಗಾಪುರದಿಂದ ಗುಣಮುಖರಾಗಿ ವಿಧಾನಸೌಧಕ್ಕೆ ಆಗಮಿಸಿದ್ದ ಅಂಬರೀಷ್ ಗಿರೀಜಾ ಮೀಸೆಯೊಂದಿಗೆ ಕಣ್ಣು ಮಿಟುಕಿಸಿ ಆರೋಗ್ಯವಾಗಿದ್ದೀನಿ ಎಂದು ಹೇಳಿದ್ದರು. ನಂತರ ಬೆಳಗಾವಿ ಅಧಿವೇಶನದಲ್ಲೂ ಭಾಗಿಯಾಗಿದ್ದರು. ಅಂಬರೀಶ್ ಆನಾರೋಗ್ಯಕ್ಕೆ ತುತ್ತಾದ ನಂತರ ಆಗಾಗ್ಗೆ ನಿಧನದ ವದಂತಿ ಹರಡುತ್ತಿದ್ದಾಗ ಆತ್ಮೀಯರಲ್ಲಿ ಓಯ್ ನನ್ಮಕ್ಳಾ ನಾನಿನ್ನೂ ಬದುಕಿದ್ದೀನಿ ಕಣ್ರೋ…..ಎಷ್ಟು ಸಲ ಸಾಯ್ಸಿತೀರೋ ಎಂದು “ಆವಾಜ್’ ಹಾಕುತ್ತಿದ್ದರು.