Advertisement

ಅಂಬೇಡ್ಕರ್‌ ಕಾರ್ಮಿಕ ಸಹಾಯ ಹಸ್ತ ಯೋಜನೆ ಶೀಘ್ರ ಜಾರಿ

12:40 PM Oct 04, 2017 | |

ಧಾರವಾಡ: ರಾಜ್ಯದಲ್ಲಿರುವ 53ಲಕ್ಷ ನರೇಗಾ ಕಾರ್ಮಿಕರು ಸೇರಿದಂತೆ ಎಲ್ಲಾ ಕಟ್ಟಡ ಕಾರ್ಮಿಕರಿಗೆ ಸ್ಮಾರ್ಟ್‌ಕಾರ್ಡ್‌,ಅಡುಗೆ ಅನಿಲ ಸಂಪರ್ಕ ಸೇರಿದಂತೆ 11 ಬಗೆಯ ಸೌಲಭ್ಯಗಳನ್ನು ನೀಡುವ ಅಂಬೇಡ್ಕರ್‌ ಕಾರ್ಮಿಕ ಸಹಾಯ ಹಸ್ತ ಯೋಜನೆಯನ್ನು ಶೀಘ್ರ ಜಾರಿಗೊಳಿಸುವುದಾಗಿ ಕಾರ್ಮಿಕ ಸಚಿವ ಸಂತೋಷ ಲಾಡ್‌ ಹೇಳಿದರು.

Advertisement

ಇಲ್ಲಿನ ಜಿಲ್ಲಾಧಿಕಾರಿ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಡಾ|ಬಿ.ಆರ್‌.ಅಂಬೇಡ್ಕರ್‌ ಅವರು ಕಾರ್ಮಿಕ ಸಚಿವರಾಗಿ 75ವರ್ಷ ತುಂಬಿದ ಸವಿ ನೆನಪಿಗಾಗಿ ರಾಜ್ಯ ಸರ್ಕಾರ ಈ ಯೋಜನೆ ಜಾರಿಗೊಳಿಸಲಾಗುತ್ತಿದೆ. ಮೊದಲು ನರೇಗಾ ಕಾರ್ಮಿಕರನ್ನು ಈ ವ್ಯಾಪ್ತಿಗೆ ತರಲು ತೊಂದರೆ ಇದ್ದವು. ಅವುಗಳನ್ನು ಸರಿಪಡಿಸಲಾಗಿದೆ.

ಇದೀಗ ನರೇಗಾದ 53ಲಕ್ಷ  ಸೇರಿದಂತೆ ಅಂದಾಜು 60ಲಕ್ಷಕ್ಕೂ ಅಧಿಕಕಾರ್ಮಿಕರಿಗೆ ಈ ಯೋಜನೆ ಫಲ ನೀಡಲಿದೆ. ಆರಂಭಿಕ ಹಂತದಲ್ಲಿ ಧಾರವಾಡ, ಬಳ್ಳಾರಿ, ಗದಗ, ಕೊಪ್ಪಳ, ಚಿತ್ರದುರ್ಗ ಮತ್ತು ರಾಯಚೂರು ಜಿಲ್ಲೆಯಲ್ಲಿ ಯೋಜನೆ ಅನುಷ್ಠಾನಗೊಳಿಸಿ, ನಂತರ ಇದನ್ನು ರಾಜ್ಯವ್ಯಾಪಿ ವಿಸ್ತರಿಸುತ್ತೇವೆ.

ಪ್ರತಿ ನೋಂದಾಯಿತ ಕಾರ್ಮಿಕರಿಗೆ ಸ್ಮಾರ್ಟ್‌ ಕಾರ್ಡ್‌, ಕಟ್ಟಡ ಕಾರ್ಮಿಕರ ಪ್ರತಿ ಕುಟುಂಬಕ್ಕೆ ಅಡುಗೆ ಅನಿಲ ಸಂಪರ್ಕ, ಪ್ರಮುಖ ಶಸ್ತ್ರ ಚಿಕಿತ್ಸೆಗೆ 2 ಲಕ್ಷ ರೂ.ಗಳವರೆಗೂ ಸಹಾಯ ಧನ, ಆಸ್ಪತ್ರೆಯ ಖರ್ಚಿಗಾಗಿ 10 ಸಾವಿರ ರೂ.ಹಣಕಾಸು ನೆರವು ನೀಡುವುದಾಗಿ ಸಚಿವ ಲಾಡ್‌ ಹೇಳಿದರು. 

ಪ್ರತಿ ವರ್ಷ ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ ಪ್ರಾಥಮಿಕ ಶಿಕ್ಷಣಕ್ಕಾಗಿ 2 ಸಾವಿರ ರೂ. ಮಾಧ್ಯಮಿಕ ಶಿಕ್ಷಣಕ್ಕಾಗಿ 3 ಸಾವಿರ ರೂ, ಮಾಧ್ಯಮಿಕ ಶಿಕ್ಷಣಕ್ಕಾಗಿ 6 ಸಾವಿರ, ಪದವಿ ಪೂರ್ವ ಶಿಕ್ಷಣಕ್ಕೆ 6-8 ಸಾವಿರ ರೂ.,  ಉನ್ನತ ಶಿಕ್ಷಣಕ್ಕಾಗಿ 8 ಸಾವಿರ ರೂ., ಪದವಿಗಾಗಿ 20 ಸಾವಿರ ರೂ., ವೈದ್ಯಕೀಯ ಶಿಕ್ಷಣಕ್ಕೆ 25 ಸಾವಿರ ರೂ. ಮತ್ತು ಪಿಎಚ್‌.ಡಿ ಶಿಕ್ಷಣಕ್ಕಾಗಿ 20 ಸಾವಿರ ರೂ.ಗಳ ವರೆಗೂ ಧನಸಹಾಯ ನೀಡಲು ಯೋಚಿಸಲಾಗಿದೆ ಎಂದರು. 

Advertisement

ಕಟ್ಟಡ ಕಾರ್ಮಿಕರ ಗೃಹ ನಿರ್ಮಾಣಕ್ಕಾಗಿ 2 ಲಕ್ಷ ರೂ.ಗಳವರೆಗೂ ಹಣಕಾಸು ನೆರವು ನೀಡಲಾಗುತ್ತದೆ. ಹೆಣ್ಣು ಮಗುವಿನ ಜನನಕ್ಕೆ 30 ಸಾವಿರ ರೂ. ಗಂಡು ಮಗುವಿನ ಜನನಕ್ಕೆ 20 ಸಾವಿರ ರೂ. ತಾಯಿಯ ಹೆಸರಿನಲ್ಲಿ 3 ವರ್ಷಗಳಿಗೆ ಕಾರ್ಮಿಕ ಗೃಹ ಲಕ್ಷ್ಮಿ ಬಾಂಡ್‌ ನೀಡಲು ಪ್ರಸ್ತಾಪಿಸಲಾಗಿದೆ. ಕಟ್ಟಡ ನಿರ್ಮಾಣ ವೇಳೆ ಅಪಘಾತವಾಗಿ ಮರಣ ಹೊಂದಿದರೆ ಅಂತಹ ಸಂತ್ರಸ್ತ ಕುಟುಂಬಗಳಿಗೆ 5 ಲಕ್ಷ ರೂ. ಗಳ ಧನಸಹಾಯ ನೀಡಲಾಗುವುದು ಎಂದು ಸಚಿವ ಲಾಡ್‌ ತಿಳಿಸಿದರು. 

ಕಾರ್ಮಿಕ ಪಿಂಚಣಿ: ಕಟ್ಟಡ ಕಾರ್ಮಿಕರಾಗಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ 60 ವರ್ಷ ಮೇಲ್ಪಟ್ಟ ಕಟ್ಟಡ ಕಾರ್ಮಿಕರಿಗೆ ಪ್ರತಿ ತಿಂಗಳು 1ಸಾವಿರ ರೂ. ಪಿಂಚಣಿ ನೀಡಲಾಗುವುದು. ವಿವಾಹ ಸಹಾಯ ಧನ 50 ಸಾವಿರ ರೂ.ಗಳನ್ನು ವಧುವಿನ ಹೆಸರಿನಲ್ಲಿ 3 ವರ್ಷಗಳಿಗೆ ಕಾರ್ಮಿಕ ಗೃಹ ಲಕ್ಷ್ಮೀಬಾಂಡ್‌ನ್ನು ನೀಡಬೇಕೆಂದು ಪ್ರಸ್ತಾಪಿಸಲಾಗಿದೆ.

ಕೌಶಲ್ಯ ತರಬೇತಿ ನೀಡಿ  ದೃಢೀಕರಣ ಪತ್ರ ಮತ್ತು ಕೌಶಲ್ಯತೆಗೆ ಬೇಕಾದ ಉಪಕರಣ ಪೆಟ್ಟಿಗೆ ನೀಡುವುದು. ಕಟ್ಟಡ ಕಾರ್ಮಿಕರ ಮಕ್ಕಳಿಗೆ ಕೆಎಸ್‌ಆರ್‌ಟಿಸಿ ಮತ್ತು ಬಿಎಂಟಿಸಿಯಲ್ಲಿ ಉಚಿತ ಬಸ್‌ಪಾಸ್‌ ನೀಡಲು ಯೋಜಿಸಲಾಗಿದೆ ಎಂದು ಸಚಿವ ಲಾಡ್‌ ಹೇಳಿದರು.  

Advertisement

Udayavani is now on Telegram. Click here to join our channel and stay updated with the latest news.

Next