Advertisement

ಅಂಬೇಡ್ಕರ್‌-ಬಾಬೂಜಿ ಕೊಡುಗೆ ಅಪಾರ

05:41 PM Apr 15, 2021 | Team Udayavani |

ದಾವಣಗೆರೆ: ಭಾರತರತ್ನ, ಸಂವಿಧಾನ ಶಿಲ್ಪಿ ಡಾ| ಅಂಬೇಡ್ಕರ್‌ ಸ್ವಾತಂತ್ರ್ಯ, ಸಮಾನತೆಯನ್ನು ಪ್ರತಿಪಾದಿಸುವುದರೊಂದಿಗೆ ಶೋಷಿತ ಸಮುದಾಯಗಳ ಪರವಾಗಿ ನಿರಂತರವಾಗಿ ಹೋರಾಡಿದರು ಎಂದು ಸಂಸದ ಡಾ| ಜಿ.ಎಂ. ಸಿದ್ದೇಶ್ವರ ಹೇಳಿದರು.

Advertisement

ಬುಧವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್‌, ಸಮಾಜಕಲ್ಯಾಣ ಇಲಾಖೆ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಂಯುಕ್ತಾಶ್ರಯದಲ್ಲಿ ತುಂಗಭದ್ರಾ ಸಭಾಂಗಣದಲ್ಲಿ ಏರ್ಪಡಿಸಿದ್ದ ಡಾ| ಬಾಬು ಜಗಜೀವನರಾಂರವರ 114ನೇ ಮತ್ತು ಡಾ| ಬಿ.ಆರ್‌. ಅಂಬೇಡ್ಕರ್‌ ರವರ 130ನೇ ಜಯಂತ್ಯುತ್ಸವದಲ್ಲಿ ಅವರು ಮಾತನಾಡಿದರು. ಅಂಬೇಡ್ಕರ್‌ ಮೊದಲ ಬಾರಿ ದೇಶಕ್ಕೆ ಡಾಕ್ಟರೇಟ್‌ ಪದವಿ ತಂದುಕೊಟ್ಟವರು. ತ್ರಿವರ್ಣ ಧ್ವಜದಲ್ಲಿ ಅಶೋಕ ಚಕ್ರ ಸ್ಥಾಪಿಸುವಲ್ಲಿ ಮಾರ್ಗದರ್ಶನ ಮಾಡಿದ ಚಿಂತನಕಾರ ಎಂದರು. ಸಂವಿಧಾನದ ಮೂಲಕ ಎಲ್ಲಾ ವರ್ಗದವರಿಗೂ ಸಮಾನತೆ ದೊರಕಿಸಿಕೊಟ್ಟವರು. ಕಾರ್ಮಿಕರ 12 ಗಂಟೆಯ ಕೆಲಸದ ಅವಧಿಯನ್ನು 8 ಗಂಟೆಗೆ ಕಡಿತಗೊಳಿಸಿದರು.

ಗರ್ಭಿಣಿಯರಿಗೆ 3 ತಿಂಗಳ ಹೆರಿಗೆ ರಜೆ ಘೋಷಿಸಿದವರಾಗಿದ್ದಾರೆ. ಒಟ್ಟು 64 ವಿಷಯಗಳಲ್ಲಿ ಪರಿಣಿತರಾಗಿದ್ದರು. ಮಾತ್ರವಲ್ಲ 9 ಭಾಷೆಗಳನ್ನು ನಿರರ್ಗಳವಾಗಿ ಮಾತನಾಡುವ ವಾಕ್ಪಟುವೂ ಆಗಿದ್ದರು ಎಂದು ಸ್ಮರಿಸಿದರು.

ಮೇರು ನಾಯಕನಿಗೆ ಗೌರವ ಸಲ್ಲಿಸುವ ನಿಟ್ಟಿನಲ್ಲಿ ಅಂಬೇಡ್ಕರ್‌ ಭವನ ನಿರ್ಮಾಣಕ್ಕೆ ಪ್ರಾದೇಶಿಕ ಸಾರಿಗೆ ಕಚೇರಿ ಬಳಿ ಜಾಗ ಗುರುತಿಸಿದ್ದು ಸಂಘಟನೆಗಳು ಒಪ್ಪಿಕೊಂಡಿದ್ದಾರೆ. ಮೇ ತಿಂಗಳ ಅಂತ್ಯದಲ್ಲಿ ಮುಖ್ಯಮಂತ್ರಿಗಳಿಂದ ಶಂಕುಸ್ಥಾಪನೆ ನೆರವೇರಿಸಲು ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ ಎಂದು ತಿಳಿಸಿದರು. ಮಾಜಿ ಉಪ ಪ್ರಧಾನಿ ಬಾಬು ಜಗಜೀವನರಾಂ ಅಪ್ರತಿಮ ಸಂಘಟನಕಾರರು. ಅವರ ಪರಿಶ್ರಮದ ಫಲವಾಗಿ ದೇಶ ಇಂದು ಕೃಷಿ ಕ್ಷೇತ್ರದಲ್ಲಿ ಅಪ್ರತಿಮ ಸಾಧನೆ ಮಾಡಲು ಸಾಧ್ಯವಾಗಿದೆ. ಐದು ದಶಕಗಳ ಕಾಲ ಸಂಸದರಾಗಿದ್ದ ಅವರು ಆಹಾರ ಉತ್ಪಾದನೆಯ ಹೆಚ್ಚಳಕ್ಕೆ ಕಾರಣರಾಗಿದ್ದರು.

ಕಾರ್ಮಿಕ, ಕೃಷಿ, ರಕ್ಷಣಾ ಖಾತೆಗಳನ್ನು ಯಶಸ್ವಿಯಾಗಿ ನಿಭಾಯಿಸಿದ್ದರು ಎಂದು ಸ್ಮರಿಸಿದರು. ನಿವೃತ್ತ ಪ್ರಾಧ್ಯಾಪಕ ಟಿ. ರಾಜಪ್ಪ ಮಾತನಾಡಿ, ಭಾರತ ರತ್ನ ಸಂವಿಧಾನ ಶಿಲ್ಪಿ ಅಂಬೇಡ್ಕರ್‌ ಮತ್ತು ಹಸಿರು ಕ್ರಾಂತಿ ಹರಿಕಾರ ಡಾ| ಬಾಬು ಜಗಜೀವನರಾಂ ದೇಶದ ಅಪರೂಪದ ವ್ಯಕ್ತಿತ್ವಗಳು. ಅಂಬೇಡ್ಕರ್‌ ಜ್ಞಾನದ ಸಂಕೇತ, ವಿಶ್ವಕೋಶ, ಪರ್ವತ, ಸಾಗರ, ಸರೋವರ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಅಂಬೇಡ್ಕರ್‌ ಹೆಸರಿನಲ್ಲಿ ಸಮಾನತೆಯ ದಿನ ಹಾಗೂ ವಿಶ್ವಸಂಸ್ಥೆ ಅವರ ಜನ್ಮ ದಿನವನ್ನು ವಿಶ್ವ ಜ್ಞಾನದಿನವನ್ನಾಗಿ ಆಚರಿಸಲು ಕರೆ ನೀಡಿದೆ.

Advertisement

ಆಸ್ಟ್ರೇಲಿಯದಲ್ಲಿ ಗ್ರಂಥಾಲಯ ನಿರ್ಮಾಣ ಮಾಡಿದೆ. ಸಾರ್ವತ್ರಿಕ ಮತದಾನದ ಮಹತ್ವವನ್ನು ಸಂವಿಧಾನದ ಮೂಲಕ ಪರಿಚಯಿಸಿದವರು. ಎಲ್ಲ ತಳ ಸಮುದಾಯಗಳ ಸಂಘಟನೆಗೆ ಹೋರಾಡಿದ ಮಹಾನ್‌ ಚೇತನ ಎಂದರು. ಬಾಬು ಜಗಜೀವನರಾಂ ದೇಶದ ಉಪ ಪ್ರಧಾನಿಯಾಗಿ ಹಾಗೂ ಕೃಷಿ ಸಚಿವರಾಗಿ ಹಸಿರು ಕ್ರಾಂತಿಗೆ ಹೆಚ್ಚು ಒತ್ತು ನೀಡಿ ಆಹಾರ ಉತ್ಪಾದನೆಗೆ ಶ್ರಮಿಸಿದ್ದರು.

ಇಬ್ಬರು ಮಹನೀಯರ ತತ್ವಾದರ್ಶಗಳನ್ನ ಮೈಗೂಡಿಸಿಕೊಂಡಾಗ ಮಾತ್ರ ಸಮ ಸಮಾಜದ ನಿರ್ಮಾಣವಾಗಲಿದೆ ಎಂದು ಅಭಿಪ್ರಾಯಪಟ್ಟರು. ಮೇಯರ್‌ ಎಸ್‌.ಟಿ. ವೀರೇಶ್‌ ಮಾತನಾಡಿ, ಅಂಬೇಡ್ಕರ್‌ ದೇಶದ ವಿಶ್ವಕೋಶ. ದೇಶಕ್ಕಾಗಿ, ಸಮಾಜಕ್ಕಾಗಿ ಹೋರಾಟ ಮಾಡಿದವರು. ಸಮಸ್ಯೆಗಳನ್ನು ಮಾತ್ರ ಬಿಂಬಿಸದೆ ಪರಿಹಾರವನ್ನು ಸಹ ಸಂವಿಧಾನದ ಮೂಲಕ ತಿಳಿಸಿದ ಮಹಾನ್‌ ವ್ಯಕ್ತಿತ್ವದ ಚಿಂತಕರು ಎಂದರು. ಜಿಲ್ಲಾಧಿ ಕಾರಿ ಮಹಾಂತೇಶ ಬೀಳಗಿ ಮಾತನಾಡಿ, ಸಮಾಜದಲ್ಲಿ ಸಾಮಾಜಿಕ ನ್ಯಾಯ ಎಲ್ಲರಿಗೂ ಸಿಗಲು ದೂರದರ್ಶಿತ್ವ ಹೊಂದಿದ್ದ ಮಹಾನ್‌ ನಾಯಕ ಅಂಬೇಡ್ಕರ್‌. ಮೇ ಅಂತ್ಯಕ್ಕೆ ಬಾಬಾ ಸಾಹೇಬ್‌ ಅಂಬೇಡ್ಕರ್‌ ಭವನಕ್ಕೆ ಶಂಕುಸ್ಥಾಪನೆ ನೆರವೇರಲಿದೆ ಎಂದು ತಿಳಿಸಿದರು. ಬಾಬು ಜಗಜೀವನರಾಂ ಕುರಿತು ಡಾ| ಎಚ್‌. ವಿಶ್ವನಾಥ್‌ ಉಪನ್ಯಾಸ ನೀಡಿದರು. ಶಾಸಕರಾದ ಎಸ್‌ .ಎ. ರವೀಂದ್ರನಾಥ್‌, ಪ್ರೊ| ಎನ್‌. ಲಿಂಗಣ್ಣ, ಜಿಲ್ಲಾ ಪಂಚಾಯತ್‌ ಅಧ್ಯಕ್ಷೆ ಕೆ.ವಿ. ಶಾಂತಕುಮಾರಿ, ಉಪಾಧ್ಯಕ್ಷೆ ಸಾಕಮ್ಮ ಗಂಗಾಧರ ನಾಯ್ಕ, ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷ ಲೋಕೇಶ್ವರಪ್ಪ, ಸದಸ್ಯರಾದ ತೇಜಸ್ವಿ ಪಟೇಲ್‌, ಕೆ.ಎಸ್‌. ಬಸವಂತಪ್ಪ, ಜಿ.ಸಿ. ನಿಂಗಪ್ಪ, ಜಿಲ್ಲಾ ಮತ್ತು ತಾಲೂಕು ಮಟ್ಟದ ಅಧಿಕಾರಿಗಳು ಇದ್ದರು. ಹೆಗ್ಗೆರೆ ರಂಗಪ್ಪ ಹಾಗೂ ಐರಣಿ ಚಂದ್ರು ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟರು. ಅಂಬೇಡ್ಕರ್‌, ಬಾಬು ಜಗಜೀವನರಾಂ ಕುರಿತ ಪ್ರಬಂಧ ಸ್ಪರ್ಧೆ ವಿಜೇತರನ್ನು ಸನ್ಮಾನಿಸಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next