Advertisement
ಗಂಗೊಳ್ಳಿಯ ಹಸಿ ಮೀನು ವ್ಯಾಪಾರಸ್ಥರ ಸಂಘ ತನ್ನ ದಶಮಾನೋತ್ಸವದ ಅಂಗವಾಗಿ ಮೂಡಬಿದಿರೆಯ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಆಶ್ರಯದಲ್ಲಿ ಆಳ್ವಾಸ್ ಸಾಂಸ್ಕೃತಿಕ ವೈಭವ ಕಾರ್ಯಕ್ರಮ ಹಮ್ಮಿಕೊಂಡಿತ್ತು. ಬೃಹತ್ತಾದ ವೇದಿಕೆಯಲ್ಲಿ ಸುಮಾರು ಮುನ್ನೂರಕ್ಕೂ ಅಧಿಕ ಆಳ್ವಾಸ್‌ನ ಪ್ರತಿಭಾವಂತ ವಿದ್ಯಾರ್ಥಿಗಳು ನಡೆಸಿಕೊಟ್ಟ ಈ ಕಾರ್ಯಕ್ರಮ ಜನಮನಸೂರೆಗೊಳ್ಳುವಲ್ಲಿ ಯಶಸ್ವಿಯಾಯಿತು.
Related Articles
Advertisement
ಮಣಿಪುರದ ಭಕ್ತಿ ಚಳವಳಿಯ ಹಿನ್ನೆಲೆಯಲ್ಲಿ ಹುಟ್ಟಿಕೊಂಡ ನೃತ್ಯವನ್ನು ತಮ್ಮದೇ ಶೈಲಿಯಲ್ಲಿ ಧೋಲ್ ಚಲಮ್ ಮೂಲಕ ವಿದ್ಯಾರ್ಥಿಗಳು ಪ್ರದರ್ಶಿಸಿ ದರು. ವೇದಿಕೆಯ ಮೇಲೆಯೇ ನೇರವಾದ ಹಾಡುಗಾರಿಕೆ, ವಯೋಲಿನ್ ಹೋಲುವ ತಂತಿವಾದ್ಯ, ತಾಳ, ಡೋಲು ಇತ್ಯಾದಿಗಳನ್ನು ಬಳಸಿಕೊಂಡಿದ್ದರಿಂದ ಈ ನೃತ್ಯ ಮತ್ತಷ್ಟು ಕಳೆಗಟ್ಟಿತ್ತು. ಸುಗ್ಗಿ ಕಾಲದಲ್ಲಿ ಸಂಭ್ರಮಿಸುವ ಪಂಜಾಬ್‌ನ ಬಾಂಗ್ರಾ ನೃತ್ಯ ಎಂದಿನ ಜೋಶ್‌ನಿಂದ ಮನಸೆಳೆದರೆ ಕಥಕ್‌ನ ನವರಂಗ್ ತನ್ನ ಲಯಬದ್ಧತೆಯೊಂದಿಗೆ ಚಿತ್ತಾಕರ್ಷಕ ಉಡುಗೆಗಳೊಂದಿಗೆ ವೀಕ್ಷಕರ ಹೃದಯ ತಲುಪಿತ್ತು.
ಪಶ್ಚಿಮ ಬಂಗಾಳದ ದೇವರ ಆರಾಧನೆಯ ಭಾಗವಾಗಿರುವ ದುಷ್ಟ ಸಂಹಾರ ಶಿಷ್ಟ ರಕ್ಷಣೆಯ ಸಂದೇಶವುಳ್ಳ ವಿಶಿಷ್ಟ ಪುರುಲಿಯಾ ಸಿಂಹ ಬೇಟೆಯ ನೃತ್ಯ ಇಡೀ ವೇದಿಕೆಗೆ ಹೊಸತೊಂದು ಕಳೆ ತಂದಿತ್ತು. 16 ಸಿಂಹಗಳು ಮತ್ತು ಎರಡು ಕೋಣಗಳು ಅರ್ಭಟಿಸಿದ ಪರಿ ನೋಡುಗರನ್ನು ಹಿಡಿದಿಟ್ಟಿತ್ತು. ಎರಡು ಕೋಣಗಳನ್ನು ಬರೋಬ್ಬರಿ 16 ಸಿಂಹಗಳು ಬೇಟೆಯಾಡುವ ಕೊನೆಯ ದೃಶ್ಯ ಅಂತಕರಣವನ್ನು ಮಾನವೀಯ ನೆಲೆಯಲ್ಲಿ ಕಲಕಿತ್ತು. ಎಲ್ಲೋ ಒಂದು ಕಡೆ ಅದು ಕ್ರೌರ್ಯವನ್ನು ಪ್ರತಿನಿಧಿಸಿತಲ್ಲ ಎನ್ನುವಂತಿದ್ದರೂ ಒಟ್ಟಾರೆ ನೃತ್ಯ ಆಕರ್ಷವಾಗಿ ಮೂಡಿಬಂದಿತ್ತು. ಕೊನೆಯದಾಗಿ ಪ್ರಸ್ತುತ ಪಡಿಸಿದ ತೆಂಕುತಿಟ್ಟಿನ ಯಕ್ಷಪ್ರಯೋಗ ಅಗ್ರ ಪೂಜೆಯ ಹಿಮ್ಮೇಳ ಮುಮ್ಮೇಳಗಳನ್ನು ವಿದ್ಯಾರ್ಥಿಗಳೇ ನಿರ್ವಹಿಸಿದ್ದು ವಿಶೇಷವಾಗಿತ್ತು. ಮಧ್ಯೆ ಸ್ವಲ್ಪವಾದರೂ ಮಾತುಗಳು ಇದ್ದಿದ್ದರೆ ಮತ್ತಷ್ಟು ಚೆನ್ನಾಗಿ ಬರುತಿತ್ತೇನೋ ಎಂತನ್ನಿಸಿದ್ದು ಸಹಜ.
ನರೇಂದ್ರ ಎಸ್. ಗಂಗೊಳ್ಳಿ