ಬೆಂಗಳೂರು: ಲೋಕಸಭೆ ಚುನಾವಣೆಯಲ್ಲಿ ಪಕ್ಷದ ಹೀನಾಯ ಸೋಲಿಗೆ ಹಲವಾರು ಕಾರಣಗಳನ್ನು ನೀಡಿರುವ ಕಾಂಗ್ರೆಸ್ ಪರಾಜಿತ ಅಭ್ಯರ್ಥಿಗಳು, ಜೆಡಿಎಸ್ ಜೊತೆಗಿನ ಮೈತ್ರಿ, ಇವಿಎಂ ದುರ್ಬಳಕೆ ಹಾಗೂ ಪಕ್ಷದ ಆಂತರಿಕ ಗೊಂದಲಗಳಿಂದ ಸೋಲಾಗಿದೆ ಎಂಬ ವಾದ ಮಂಡಿಸಿದ್ದಾರೆ.
ಪಕ್ಷದ ಕಚೇರಿಯಲ್ಲಿ ರಾಜ್ಯ ಉಸ್ತುವಾರಿ ಕೆ.ಸಿ. ವೇಣುಗೋಪಾಲ್ ನೇತೃತ್ವದಲ್ಲಿ ಮೂರು ಗಂಟೆಗಳ ಕಾಲ ನಡೆದ ಸಭೆಯಲ್ಲಿ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಪಕ್ಷದ ಅಭ್ಯರ್ಥಿಗಳ ಸೋಲಿನ ಪರಾಮರ್ಶೆ ನಡೆಸಲಾಯಿತು. ಕೆಲವು ಪರಾಜಿತ ಅಭ್ಯರ್ಥಿಗಳು ಜೆಡಿಎಸ್‌ನೊಂದಿಗಿನ ಮೈತ್ರಿಯಿಂದಲೇ ಹೀನಾಯ ಸೋಲಿಗೆ ಕಾರಣ ಎಂದು ಆರೋಪಿಸಿದ್ದು, ಮೈತ್ರಿ ಮುಂದುವರಿದರೆ, ಕಾಂಗ್ರೆಸ್‌ಗೆ ಭವಿಷ್ಯವಿಲ್ಲ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.
ಮೈತ್ರಿಯಿಂದ ಕಾಂಗ್ರೆಸ್‌ಗೇ ನಷ್ಟ: ಸಭೆಯಲ್ಲಿ ಚಿಕ್ಕಬಳ್ಳಾಪುರ ಕ್ಷೇತ್ರದ ಪರಾಜಿತ ಅಭ್ಯರ್ಥಿ ಎಂ. ವೀರಪ್ಪ ಮೊಯ್ಲಿ ಮತ್ತು ಕೋಲಾರ ಅಭ್ಯರ್ಥಿ ಕೆ.ಎಚ್. ಮುನಿಯಪ್ಪತಮ್ಮ ಕ್ಷೇತ್ರಗಳಲ್ಲಿ ಪಕ್ಷ ವಿರೋಧಿ ಚಟುವಟಿಕೆ ನಡೆಸಿದವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ. ಜೆಡಿಎಸ್ ಮತಗಳು ಕಾಂಗ್ರೆಸ್‌ಗೆ ಬಂದಿಲ್ಲ. ಜೆಡಿಎಸ್ ಮತಗಳು ನಿರೀಕ್ಷಿತ ಮಟ್ಟದಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳಿಗೆ ಬಿದ್ದ್ದಿದ್ದರೆ ಈ ರೀತಿಯ ಹೀನಾಯ ಸೋಲು ಆಗುತ್ತಿರಲಿಲ್ಲ. ಸಮ್ಮಿಶ್ರ ಸರ್ಕಾರ ಮುಂದುವರಿದಷ್ಟು ಕಾಂಗ್ರೆಸ್‌ಗೆ ನಷ್ಟವಾಗುವುದು ಖಚಿತ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ ಎಂದು ತಿಳಿದು ಬಂದಿದೆ.
ಸಮ್ಮಿಶ್ರ ಸರ್ಕಾರ ಇಲ್ಲದಿದ್ದರೆ ಜೆಡಿಎಸ್ ಅಭ್ಯರ್ಥಿಗಳು ಕಣದಲ್ಲಿ ಇರುತ್ತಿದ್ದರು. ಇದರಿಂದ ಮತ ವಿಭಜನೆಯಾಗಿ ಕಾಂಗ್ರೆಸ್‌ಗೆ ಲಾಭವಾಗುತ್ತಿತ್ತು. ಮತ ವಿಭಜನೆಯಾದ ಸಂದರ್ಭದಲ್ಲಿ ಹಲವು ಬಾರಿ ಕಾಂಗ್ರೆಸ್ ಗೆಲುವು ಪಡೆದಿದೆ. 2014ರ ಲೋಕಸಭಾ ಚುನಾವಣೆಯಲ್ಲಿ ಕೋಲಾರ, ಚಿಕ್ಕಬಳ್ಳಾಪುರ, ಚಿತ್ರದುರ್ಗ, ರಾಯಚೂರು ಜಿಲ್ಲೆಗಳಲ್ಲಿ ಆ ಅಂಶ ಸಾಬೀತಾಗಿದೆ. ಮೈಸೂರಿನಲ್ಲಿ ಜೆಡಿಎಸ್ ಮತ ಕಾಂಗ್ರೆಸ್‌ಗೆ ಬಂದಿದ್ದರೆ ಗೆಲ್ಲಬಹುದಿತ್ತು. ಆದರೆ, ಆ ರೀತಿ ಆಗಲಿಲ್ಲ. ರಾಜ್ಯದ ಇಪ್ಪತೈದು ಕ್ಷೇತ್ರಗಳಲ್ಲಿ ಬಿಜೆಪಿ ಗೆಲ್ಲಲಿಲ್ಲ. ನಾವೇ ಅವರನ್ನ ಗೆಲ್ಲಿಸಿದಂತಾಗಿದೆ ಎಂದು ಅಸಮಾಧಾನ ಹೊರ ಹಾಕಿದ್ದಾರೆ ಎಂದು ತಿಳಿದು ಬಂದಿದೆ.
ಮಂಡ್ಯದಲ್ಲಿ ಕಾಂಗ್ರೆಸ್ ಮತಗಳು ಜೆಡಿಎಸ್‌ಗೆ ಹೋಗದಿರ ಬಹುದು. ಆದರೆ, ಹಾಸನದಲ್ಲಿ ಕಾಂಗ್ರೆಸ್ ನಾಯಕರು, ಕಾರ್ಯಕರ್ತರು ಜೆಡಿಎಸ್‌ಗೆ ಮತ ಚಲಾಯಿಸಿದ್ದಾರೆ. ತುಮಕೂರಿನಲ್ಲಿ ಕೇವಲ ಜೆಡಿಎಸ್ ಮತವಷ್ಟೇ ಬಂದಿದ್ದರೆ ದೇವೇಗೌಡರು ಒಂದು ಲಕ್ಷಕ್ಕೂ ಅಧಿಕ ಮತಗಳಿಂದ ಸೋಲು ಅನುಭವಿಸುತ್ತಿದ್ದರು. ಒಂದು ಸಮು ದಾಯದ ಮತ ಅಲ್ಲಿ ಬಾರದಿರಬಹುದು, ಆದರೆ, ಬೇರೆ ಸಮುದಾ ಯದ ಮತಗಳು ದೇವೇಗೌಡರಿಗೆ ಬಂದಿವೆ ಎಂಬ ಅಭಿಪ್ರಾಯ ಗಳನ್ನು ಪರಾಜಿತ ಅಭ್ಯರ್ಥಿಗಳು ವ್ಯಕ್ತಪಡಿಸಿದ್ದಾರೆ. ಹೀಗಾಗಿ ಸರ್ಕಾರ ಮುಂದುವರಿದಷ್ಟು ಜೆಡಿಎಸ್‌ಗೆ ಲಾಭವಾಗುತ್ತದೆ ಬಿಟ್ಟರೆ ಕಾಂಗ್ರೆಸ್‌ಗೆ ಲಾಭವಿಲ್ಲ ಎಂದು ವೀರಪ್ಪ ಮೊಯ್ಲಿ, ಕೆ.ಎಚ್. ಮುನಿಯಪ್ಪ, ಬಿ.ಎನ್. ಚಂದ್ರಪ್ಪ, ಬಿ. ವಿ ನಾಯಕ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ. ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಕೂಡ ಅವರ ಮಾತಿಗೆ ಧ್ವನಿಗೂಡಿಸಿದ್ದಾರೆ ಎಂದು ತಿಳಿದು ಬಂದಿದೆ.
ಸಭೆಗೆ ಕಲಬುರಗಿ ಅಭ್ಯರ್ಥಿ ಮಲ್ಲಿಕಾರ್ಜುನ ಖರ್ಗೆ, ಬೆಂಗಳೂರು ದಕ್ಷಿಣ ಕ್ಷೇತ್ರದ ಅಭ್ಯರ್ಥಿ ಬಿ.ಕೆ. ಹರಿಪ್ರಸಾದ್, ಬೆಂಗಳೂರು ಗ್ರಾಮಾಂತರ ಸಂಸದ ಡಿ.ಕೆ. ಸುರೇಶ್ ವೈಯಕ್ತಿಕ ಕಾರಣಗಳಿಂದ ಗೈರು ಹಾಜರಾಗಿದ್ದರು.
ಇವಿಎಂ ವಿರುದ್ಧ ಆಂದೋಲನಕ್ಕೆ ಮನವಿ: ಲೋಕಸಭೆ ಚುನಾ ವಣೆಯಲ್ಲಿ ಪಕ್ಷದ ಹೀನಾಯ ಸೋಲಿಗೆ ಇವಿಎಂ ದುರ್ಬಳಕೆ ಕಾರಣವಾಗಿದೆ. ಈ ಬಗ್ಗೆ ಕಾಂಗ್ರೆಸ್ ರಾಷ್ಟ್ರ ಮಟ್ಟದಲ್ಲಿ ಆಂದೋಲನ ನಡೆಸಬೇಕು ಎಂದು ಪರಾಜಿತ ಅಭ್ಯರ್ಥಿಗಳು ಪಕ್ಷದ ನಾಯಕರ ಮುಂದೆ ವಾದ ಮಂಡಸಿದ್ದಾರೆ. ವಿ.ಎಸ್. ಉಗ್ರಪ್ಪ, ವಿಜಯಾನಂದ ಕಾಶಪ್ಪನವರ್, ವಿನಯ್ ಕುಲಕರ್ಣಿ ಅವರು, ಬಿಜೆಪಿ ಇವಿಎಂಗಳನ್ನು ದುರ್ಬಳಕೆ ಮಾಡಿಕೊಂಡಿರುವುದರಿಂದಲೇ ರಾಜ್ಯದಲ್ಲಿ ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ಗೆಲುವು ಸಾಧಿಸಲು ಕಾರಣ ಎಂದು ವಾದ ಮಾಡಿದ್ದಾರೆ.
ಇಂಗ್ಲೆಂಡ್‌ನಲ್ಲಿ ಇವಿಎಂ ರದ್ದು ಮಾಡುವಂತೆ ನಡೆಸಿದ ಆಂದೋಲನದ ಮಾದರಿಯಲ್ಲಿ ದೇಶದಲ್ಲಿಯೂ ಆಂದೋಲನ ನಡೆಸಬೇಕು. ಆ ಮೂಲಕ ಇವಿಎಂ ಬದಲು ಬ್ಯಾಲೆಟ್ ಪೇಪರ್ ಬಳಕೆ ಜಾರಿಗೆ ತರಲು ಪ್ರಯತ್ನಿಸಬೇಕು ಎಂದು ಆಗ್ರಹಿಸಿದ್ದಾರೆ. ಚುನಾವಣೆಯಲ್ಲಿ ಮೋದಿ ವರ್ಚಸ್ಸು ಇರಬಹುದು. ಆದರೆ 303 ಸ್ಥಾನ ಗೆಲ್ಲುವಷ್ಟು ವರ್ಚಸ್ಸು ಇಲ್ಲ. ಒಂದೇ ಕ್ಷೇತ್ರ ಗೆಲ್ಲುವಷ್ಟು ಹೀನಾಯ ಸ್ಥಿತಿಯಲ್ಲಿ ಕಾಂಗ್ರೆಸ್ ಇಲ್ಲ. ಇದೆಲ್ಲ ನೋಡಿದರೆ ಇವಿಎಂ ಮೇಲೆ ಸಂಶಯ ಬರುತ್ತದೆ ಎಂಬ ಅನುಮಾನ ವ್ಯಕ್ತಪಡಿಸಿದ್ದಾರೆ.
ಲೋಕಸಭಾ ಚುನಾವಣೆ ಬೆನ್ನಲ್ಲೇ ನಡೆದ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಕಾಂಗ್ರೆಸ್ ಹೆಚ್ಚು ಸ್ಥಾನ ಗೆದ್ದಿದೆ. ಒಂದೇ ತಿಂಗಳಲ್ಲಿ ಮೋದಿ ಅಲೆ ಮಾಯವಾಯಿತಾ ಎಂದು ಪ್ರಶ್ನಿಸಿದ್ದಾರೆ. ಹೀಗಾಗಿ ಇವಿಎಂ ವಿರುದ್ಧ ರಾಷ್ಟ್ರ ಮಟ್ಟದಲ್ಲಿ ಆಂದೋಲನ ನಡೆಯಬೇಕು ಎಂದು ಆಗ್ರಹಿಸಿದ್ದಾರೆ ಎಂದು ತಿಳಿದು ಬಂದಿದೆ.