ಬೆಂಗಳೂರು: ಹೊಸ ಬಜೆಟ್ ಮಂಡಿಸಲು ಮುಂದಾಗಿರುವ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರನ್ನು ಸಮರ್ಥಿಸಿಕೊಂಡಿರುವ ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ಎಚ್.ಡಿ. ದೇವೇಗೌಡ, “ಸಮ್ಮಿಶ್ರ ಸರ್ಕಾರಕ್ಕೆ ಭಂಗಬಾರದಂತೆ ಪಕ್ಷವನ್ನು ಮುನ್ನಡೆಸುತ್ತೆವೆ’ ಎನ್ನುವ ಮೂಲಕ ಮಿತ್ರ ಪಕ್ಷ ಕಾಂಗ್ರೆಸ್‌ಗೆ ಟಾಂಗ್ ನೀಡಿದ್ದಾರೆ.
ಜೆಡಿಎಸ್ ರಾಜ್ಯ ಕಚೇರಿ ಜೆ.ಪಿ.ಭವನದಲ್ಲಿ ಮಂಗಳವಾರ ಪಕ್ಷದ ಹಿರಿಯ ಮುಖಂಡರ ಸಭೆಯಲ್ಲಿ ಪಾಲ್ಗೊಂಡ ಬಳಿಕ ಮಾತನಾಡಿದ ಅವರು, ಸಮ್ಮಿಶ್ರ ಸರ್ಕಾರಕ್ಕೆ ಯಾವುದೇ ಧಕ್ಕೆಯಾಗದಂತೆ ಜೆಡಿಎಸ್ ಪಕ್ಷವನ್ನು ಮುನ್ನಡೆಸುತ್ತೇವೆ. ಅದಕ್ಕೆ ಏನು ಬೇಕೋ ಅದನ್ನು ಮಾಡುತ್ತಿದ್ದೇವೆ. ಹೊಸ ಪಕ್ಷ ಅಧಿಕಾರಕ್ಕೆ ಬಂದಾಗ ಬಜೆಟ್ ಮಂಡಿಸುವುದು ಸಹಜ ಪ್ರಕ್ರಿಯೆ ಎನ್ನುವ ಮೂಲಕ ಮೈತ್ರಿ ಸರ್ಕಾರಕ್ಕೆ ನಮ್ಮಿಂದೇನೂ ತೊಂದರೆಯಾಗುವುದಿಲ್ಲ ಎಂಬುದನ್ನು ಹೇಳಿದರು.
ನನ್ನ ಅನುಭವ ಆಧರಿಸಿ ಹೇಳುವುದಾದರೆ, ನಾನು ಪ್ರಧಾನಿಯಾಗಿದ್ದಾಗ ಪಿ.ಚಿದಂಬರಂ ಅವರು ಕೇಂದ್ರ ಬಜೆಟ್ ಮಂಡಿಸಿದರು. ಆಗ ಅದನ್ನು ಕನಸಿನ ಬಜೆಟ್ (ಡ್ರೀಂ ಬಜೆಟ್) ಎಂದು ಬಣ್ಣಿಸಲಾಗಿತ್ತು. ನಂತರ ಪ್ರಧಾನಿ ಸ್ಥಾನಕ್ಕೆ ಬಂದ ಐ.ಕೆ.ಗುಜ್ರಾಲ್ ಅವರು ಅದೇ ಬಜೆಟ್ ಮುಂದುವರಿಸಿದರು. ಏಕೆಂದರೆ, ಅದು ಒಂದೇ ಸಮ್ಮಿಶ್ರ ಸರ್ಕಾರವಾಗಿತ್ತು. ಆದರೆ, ಹೊಸ ಸರ್ಕಾರ ಅದು ಸಮ್ಮಿಶ್ರವೇ ಆಗಲಿ, ಅಧಿಕಾರಕ್ಕೆ ಬಂದಾಗ ಬಜೆಟ್ ಮಂಡಿಸುವುದು ವಾಡಿಕೆ. ಹಿಂದೆ ಬಿಜೆಪಿ ಸರ್ಕಾರ ಹೋಗಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗ ಸಿದ್ದರಾಮಯ್ಯ ಅವರೂ ಹೊಸ ಬಜೆಟ್ ಮಂಡಿಸಿದ್ದರು. ಹಾಗೆಂದು ಬಜೆಟ್ ಮಂಡನೆ ವಿಚಾರದಲ್ಲಿ ಸಿದ್ದರಾಮಯ್ಯ ಹೇಳಿಕೆ ತಪ್ಪು ಎಂದು ಹೇಳುವುದಿಲ್ಲ. ಹಣಕಾಸು ವಿಚಾರದಲ್ಲಿ ಸಾಕಷ್ಟು ಅನುಭವ ಅವರಿಗಿದೆ ಎಂದು ಹೇಳಿ ಸುಮ್ಮನಾದರು.
ಮುಂದಿನ ಎಲ್ಲಾ ಚುನಾವಣೆಗಳಲ್ಲಿ ಕಾಂಗ್ರೆಸ್ ಜತೆ ಮೈತ್ರಿ ಮುಂದು ವರಿಸಲು ಈಗಾಗಲೇತೀರ್ಮಾನಿಸಲಾ ಗಿದೆಯಾದರೂ ಲೋಕಸಭೆಯಲ್ಲಿ ಎಷ್ಟು ಸೀಟು ಹಂಚಿಕೆ ಮಾಡಿಕೊಳ್ಳಲಾಗುವುದು ಎಂಬ ಬಗ್ಗೆ ಇನ್ನೂ ಚರ್ಚಿಸಿಲ್ಲ. ಅದಕ್ಕಿಂತ ಮುಂದೆ ಬರುವ ಸ್ಥಳೀಯ ಸಂಸ್ಥೆಗಳ ಚುನಾವಣೆ ಪಕ್ಷಕ್ಕೆ ಮುಖ್ಯವಾಗಿದ್ದು, ಆ ನಿಟ್ಟಿನಲ್ಲಿ ಪಕ್ಷ ಸಂಘಟನೆ ಬಗ್ಗೆ ಚರ್ಚಿಸಲಾಗಿದೆ ಎಂದು ತಿಳಿಸಿದರು.
ಸದ್ಯದಲ್ಲೇ ಪುರಸಭೆ, ನಗರಸಭೆ, ಪಟ್ಟಣ ಪಂಚಾಯ್ತಿ ಸೇರಿ ಅನೇಕ ಸ್ಥಳೀಯ ಸಂಸ್ಥೆಗಳ ಚುನಾವಣೆಗಳು ಬರಲಿವೆ. ವಿಧಾನಸಭೆ ಚುನಾವಣೆಯಲ್ಲಿ ಪಕ್ಷ ಎಲ್ಲಿ ಪೆಟ್ಟು ತಿಂದಿದೆ ಎಂಬುದನ್ನು ತಿಳಿದುಕೊಂಡು ಅಲ್ಲಿ ಪಕ್ಷ ಬಲವರ್ದನೆಗೆ ತೀರ್ಮಾನಿಸಿದ್ದೇವೆ. ಆದರೆ, ಈ ಸಂದರ್ಭದಲ್ಲಿ ಎಲ್ಲೂ ಮೈತ್ರಿ ಸರ್ಕಾರಕ್ಕೆ ಭಂಗವಾಗದಂತೆ ಕೆಲಸ ಮಾಡಲಾಗುವುದು ಎಂದು ಭರವಸೆ ನೀಡಿದರು.
ಕುಮಾರಸ್ವಾಮಿ ವಚನ ಭ್ರಷ್ಟ ಅಲ್ಲ: ಈ ಹಿಂದೆ ಬಿಜೆಪಿ ಜತೆ ಸೇರಿ 20-20 ಸರ್ಕಾರ ರಚಿಸಿದ ಅನುಭವ ಎಚ್.ಡಿ. ಕುಮಾರಸ್ವಾಮಿ ಅವರಿಗೆ ಇದೆ. 20 ತಿಂಗಳ ಅವಧಿಬಳಿಕ ಬಿಜೆಪಿಗೆ ಅಧಿಕಾರ ಬಿಟ್ಟುಕೊಡಲು ನಾವು ಸಿದಟಛಿರಿದ್ದರೂ ಪರಿಸ್ಥಿತಿ ಒತ್ತಡದಿಂದ ಮೈತ್ರಿ ಮುಂದುವರಿಯಲಿಲ್ಲ. ಆದರೆ, ಇದನ್ನೇ ನೆಪವಾಗಿಟ್ಟುಕೊಂಡು ಕುಮಾರಸ್ವಾಮಿ ಮೇಲೆ ವಚನ ಭ್ರಷ್ಟತೆಯ ಆರೋಪ
ಕೇಳಿಬಂದಿತ್ತು. ಆದರೆ, ಅವರು ವಚನ ಭ್ರಷ್ಟರಲ್ಲ. ಇದನ್ನು ಎಲ್ಲಿ ಬೇಕಾದರೂ ಸಾಬೀತುಪಡಿಸಲು ಸಿದಟಛಿರಿದ್ದೇವೆ ಎಂದು ದೇವೇಗೌಡರು ಹೇಳಿದರು. ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಮಂಡ್ಯ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿ ಸುವ ಬಗ್ಗೆ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ದೇವೇಗೌಡರು, ಎಲ್ಲವನ್ನೂ ನೀವೇ ನಿರ್ಧಾರ ಮಾಡ್ತಿದ್ದೀರಿ. ನಿಮಗೂ ಏನಾದರೂ ರುಚಿಯಾಗಿರುವುದು ಬೇಕಲ್ಲವೇ? ನಾನಂತೂ ಅದರ ಬಗ್ಗೆ ಇನ್ನೂ ಯೋಚಿಸಿಲ್ಲ ಎಂದು ಹಾಸ್ಯ ಚಟಾಕಿ ಹಾರಿಸಿದರು.