ಲಿಂಗಸುಗೂರು: ರೈತರ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ ಮುಖ್ಯಮಂತ್ರಿ ಕುಮಾರಸ್ವಾಮಿ ಹಾಗೂ ರಾಜ್ಯ ಮೈತ್ರಿ ಸರ್ಕಾರದ ವಿರುದ್ಧ ತಾಲೂಕು ಬಿಜೆಪಿ ಘಟಕದಿಂದ ಮಾಜಿ ಶಾಸಕ ಮಾನಪ್ಪ ವಜ್ಜಲ್ ನೇತೃತ್ವದಲ್ಲಿ ಬುಧವಾರ ಬಸ್ ನಿಲ್ದಾಣ ವೃತ್ತದಲ್ಲಿ ಪ್ರತಿಭಟನೆ ನಡೆಸಲಾಯಿತು.
ಈ ವೇಳೆ ಮಾತನಾಡಿದ ಮಾಜಿ ಶಾಸಕ ಮಾನಪ್ಪ ವಜ್ಜಲ್, ರೈತರ ಸಾಲ ಮನ್ನಾ ಎಂದು ಮೈತ್ರಿ ಸರ್ಕಾರ ಹೇಳುತ್ತಿದೆ. ಆದರೆ ಬ್ಯಾಂಕ್‌ನವರು ರೈತರಿಗೆ ನೋಟಿಸ್ ನೀಡುತ್ತಲೇ ಇದ್ದಾರೆ. ಸಾಲ ಮನ್ನಾ ನೆಪದಲ್ಲಿ ಮೈತ್ರಿ ಸರ್ಕಾರ ರೈತರಿಗೆ ಮೋಸ ಮಾಡಿದೆ ಎಂದು ಆರೋಪಿಸಿದರು.
ರಾಜ್ಯ ಸರ್ಕಾರ ರೈತರ ಜೀವನದ ಜತೆ ಚೆಲ್ಲಾಟ ಆಡುತ್ತಿದೆ. ಬರದಿಂದ ತತ್ತರಿಸುತ್ತಿರುವ ರೈತರ ಸಂಕಷ್ಟಕ್ಕೆ ನೆರವಾಗಬೇಕಾದ ಸಿಎಂ ಕುಮಾರಸ್ವಾಮಿ ಅವರು ರೈತರನ್ನು ಗುಂಡಾ, ರೈತ ಮಹಿಳೆ ಬಗ್ಗೆ ಅವಹೇಳಕಾರಿಯಾಗಿ ಮಾತುಗಳನ್ನಾಡಿ ಅವರಿಗೆ ಅವಮಾನ ಮಾಡಿದ್ದಾರೆ. ಕೂಡಲೇ ಮುಖ್ಯಮಂತ್ರಿ ಕುಮಾರಸ್ವಾಮಿ ಬಹಿರಂಗ ಕ್ಷಮೆ ಕೇಳಬೇಕು ಎಂದು ಆಗ್ರಹಿಸಿದರು.
ಕ್ಷೇತ್ರದ ಶಾಸಕರು ವಿಫಲ: ಸರ್ಕಾರ ತಾಲೂಕನ್ನು ಬರಪೀಡಿತ ಎಂದು ಘೋಷಿಸಿದೆ ವಿನಃ ಪರಿಹಾರಕ್ಕೆ ನಯಾಪೈಸೆ ನೀಡಿಲ್ಲ. ತಾಲೂಕಿನಲ್ಲಿ ಹಿಂಗಾರು ಹಾಗೂ ಮುಂಗಾರು ಸಂಪೂರ್ಣ ವಿಫಲವಾಗಿದೆ. ಈ ಬಗ್ಗೆ ಶಾಸಕರಿಗೆ ನಿಜವಾಗಿ ಕ್ಷೇತ್ರದ ಕಾಳಜಿಯಿದ್ದರೆ ಸರಕಾರದಿಂದ 500 ಕೋಟಿ ರೂ. ತಂದು ಬರ ನಿರ್ವಹಣೆ ಮಾಡಲಿ. ಆದರೆ ಶಾಸಕರಿಗೆ ಅವರಿಗೆ ಬರ ಎಂದರೆ ಏನೂ ಗೊತ್ತಿಲ್ಲ. ಅವರು ಅಧಿಕಾರಿಗಳು ಹಾಗೂ ಗುತ್ತಿಗೆದಾರರಿಂದ ಎಷ್ಟು ಕಮಿಷನ್ ಬರಬೇಕು ಎಂದು ಲೆಕ್ಕ ಹಾಕುವುದರಲ್ಲೇ ಕಾಲಹರಣ ಮಾಡುತ್ತಿದ್ದಾರೆ. ಕಮಿಷನ್ ಕೊಟ್ಟರೆ ಮಾತ್ರ ಕಾಮಗಾರಿಗೆ ಅಡಿಗಲ್ಲು ಹಾಕುತ್ತಾರೆ ಎಂದು ಆರೋಪಿಸಿದರು.
ತಾವು ಶಾಸಕರಾಗಿದ್ದಾಗ ಕ್ಷೇತ್ರಕ್ಕೆ ಸಾಕಷ್ಟು ಅನುದಾನ ತಂದಿದ್ದೇನೆ. ಕೆಲ ಕಾಮಗಾರಿ ಟೆಂಡರ್ ಹಂತದಲ್ಲಿದ್ದವು. ಅಂತಹ ಕಾಮಗಾರಿಗಳಿಗೆ ಈಗಿನ ಶಾಸಕರು ಈಗ ಅಡಿಗಲ್ಲು ಹಾಕುತ್ತಲೇ ಇದ್ದಾರೆ. ಆದರೆ ಹೊಸದಾಗಿ ಅನುದಾನವೇ ತಂದಿಲ್ಲ ಎಂದರು.
ಕ್ಷೇತ್ರದಲ್ಲಿ ಆಡಳಿತ ವ್ಯವಸ್ಥೆ ಸಂಪೂರ್ಣ ಕುಸಿದಿದೆ. ನಾನು ಶಾಸಕನಾಗಿದ್ದ ವೇಳೆ ಕಮಿಷನ್ ತೆಗೆದುಕೊಂಡಿದ್ದೇನೆಂದು ಈಗಿನ ಶಾಸಕರು ಆರೋಪಿಸಿದ್ದಾರೆ. ಇದಕ್ಕೆ ಅವರಲ್ಲಿ ದಾಖಲೆಗಳು ಇದ್ದರೆ ಬಿಡುಗಡೆಗೊಳಿಸಲಿ ಎಂದ ಅವರು, ಈಗಿನ ಶಾಸಕರು ಕಮಿಷನ್ ತೆಗೆದುಕೊಂಡ ಬಗ್ಗೆ ನನ್ನ ಹತ್ತಿರ ದಾಖಲೆಗಳು ಇವೆ ಎಂದರು.
ತಾಲೂಕು ಬಿಜೆಪಿ ಅಧ್ಯಕ್ಷ ವೀರನಗೌಡ ಲೆಕ್ಕಿಹಾಳ, ಮುಖಂಡರಾದ ಡಾ| ಶಿವಬಸಪ್ಪ, ಶಂಕರಗೌಡ ಅಮರಾವತಿ, ಗೋವಿಂದ ನಾಯಕ, ನಾರಾಯಣಪ್ಪ ನಾಯ್ಕ, ಅಮರಣ್ಣ ಸಕ್ರಿ, ವೀರಣ್ಣ ಹುರಕಡ್ಲಿ, ಮದನಮೋಹನ್, ಜಗನ್ನಾಥ ಕುಲಕರ್ಣಿ, ಶಿವಪ್ರಕಾಶ, ಚೆನ್ನಬಸವ ಹಿರೇಮಠ, ಶಶಿಕಾಂತ ಗಸ್ತಿ, ಪರಮೇಶ ಯಾದವ್ ಇತರರು ಇದ್ದರು.