ಬೆಂಗಳೂರು: ಜೆಡಿಎಸ್- ಕಾಂಗ್ರೆಸ್ ನಡುವೆ ಹೊಂದಾಣಿಕೆ ಕೊರತೆಯಿಂದಾಗಿ ಪ್ರಸಕ್ತ ರಾಜಕಾರಣದಲ್ಲಿ ಕೋಲಾಹಲದ ವಾತಾವರಣ ಸೃಷ್ಟಿಯಾಗಿದ್ದರೂ ಮುಖ್ಯಮಂತ್ರಿಗಳು ಎಲ್ಲ ಗೊಂದಲಕ್ಕೆ ಬಿಜೆಪಿ ಕಾರಣ ಎಂಬಂತೆ ಬಿಂಬಿಸಲು ಯತ್ನಿಸುವುದು ಖಂಡನೀಯ ಎಂದು ವಿಧಾನ ಪರಿಷತ್ ಸದಸ್ಯರಾದ ಬಿಜೆಪಿಯ ಎನ್.ರವಿಕುಮಾರ್ ಹೇಳಿದ್ದಾರೆ.
ಮೈತ್ರಿ ಸರ್ಕಾರ ಕೆಡವಲು ಬಿಜೆಪಿ ಪ್ರಯತ್ನ ನಡೆಸುತ್ತಿದೆ ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ನೀಡಿರುವ ಹೇಳಿಕೆಗೆ ಶುಕ್ರವಾರ ಪ್ರತಿಕ್ರಿಯೆ ನೀಡಿರುವ ರವಿಕುಮಾರ್, “ಆಪರೇಷನ್ ಕಮಲ’ದ ಮೂಲಕ ಶಾಸಕರನ್ನು ಸೆಳೆಯಲು ಬಿಜೆಪಿ ಪ್ರಯತ್ನಿಸುತ್ತಿದೆ ಎಂಬುದಾಗಿ ಮುಖ್ಯಮಂತ್ರಿಗಳು ನೀಡಿರುವ ಹೇಳಿಕೆ ಬೇಜವಾಬ್ದಾರಿತನದ ಪರಮಾವಧಿ. ಸಮ್ಮಿಶ್ರ ಸರ್ಕಾರದ ಸಮಸ್ಯೆಯನ್ನು ನಿಭಾಯಿಸುವ ಸಾಮರ್ಥಯವಿಲ್ಲದ ಅವರು ಬಿಜೆಪಿ ಮೇಲೆ ಗೂಬೆ ಕೂರಿಸುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ಕಿಡಿ ಕಾರಿದ್ದಾರೆ.
ಮುಖ್ಯಮಂತ್ರಿಗಳಿಗೆ ಖಚಿತ ಮಾಹಿತಿಯಿದ್ದರೆ ನೇರವಾಗಿ ಕ್ರಮ ಕೈಗೊಳ್ಳಬಹುದಾದಷ್ಟು ಉನ್ನತ ಸ್ಥಾನದಲ್ಲಿ ಅವರಿದ್ದಾರೆ. ಹಾಗಿದ್ದರೂ ಸಾಮಾನ್ಯ ವ್ಯಕ್ತಿಯಂತೆ ಬೇಜವಾಬ್ದಾರಿ ಹೇಳಿಕೆ ನೀಡುತ್ತಿದ್ದಾರೆ. ಇದು ಅವರ ಹತಾಶೆಯನ್ನು ತೋರಿಸುತ್ತದೆ. ಕಾಂಗ್ರೆಸ್ ಶಾಸಕರನ್ನು ನಿಭಾಯಿಸುವುದು ಮುಖ್ಯಮಂತ್ರಿಗಳಿಗೆ ಸವಾಲಿನ ಕೆಲಸವಾಗಿದ್ದು, ತಮ್ಮ ಪಕ್ಷದ ಶಾಸಕರ ಮೇಲೂ ನಿಯಂತ್ರಣ ಕಳೆದುಕೊಂಡಿರುವುದರ ಸೂಚನೆ ಇದು ಎಂದು ಪ್ರತಿಕ್ರಿಯಿಸಿದ್ದಾರೆ.
ಈ ರೀತಿಯ ಹೇಳಿಕೆ ನೀಡುವ ಮೂಲಕ ಮುಖ್ಯಮಂತ್ರಿಗಳು ತಾವು ಆಡಳಿತ ನಡೆಸಲು ಅಸಮರ್ಥ ಎಂಬುದು ಸ್ಪಷ್ಟಪಡಿಸಿದಂತಾಗಿದೆ. ಮುಖ್ಯಮಂತ್ರಿಯಾದ ಆರಂಭದಲ್ಲೇ ಕಣ್ಣೀರು ಹಾಕಿದ್ದ ಕುಮಾರಸ್ವಾಮಿಯವರು ಇದೀಗ ಸರ್ಕಾರದ ಮೇಲೆ ನಿಯಂತ್ರಣ ಕಳೆದುಕೊಂಡು ಬಿಜೆಪಿ ವಿರುದ್ಧ ಆರೋಪ ಮಾಡುವುದನ್ನೇ ಕಾಯಕ ಮಾಡಿಕೊಂಡಿದ್ದಾರೆ ಎಂದು ಟೀಕಿಸಿದ್ದಾರೆ.
ಸಚಿವ ಎಚ್.ಡಿ.ರೇವಣ್ಣ ಪುತ್ರ ಪ್ರಜ್ವಲ್ ರೇವಣ್ಣ ಅವರು ಜೆಡಿಎಸ್‌ನಲ್ಲಿ ಸೂಟ್‌ಕೇಸ್ ರಾಜಕೀಯ ನಡೆಯುತ್ತಿದೆ ಎಂದು ಈ ಹಿಂದೆ ಆರೋಪಿಸಿದ್ದರು. ಇದನ್ನು ಮುಖ್ಯಮಂತ್ರಿಗಳು ಮರೆತಂತಿದೆ. ಸೂಟ್‌ಕೇಸ್ ಪಕ್ಷ ಯಾವುದು ಎಂಬುದು ಜನತೆಗೆ ಗೊತ್ತಿದೆ. ಮುಖ್ಯಮಂತ್ರಿಗಳು ಜನರ ದಾರಿ ತಪ್ಪಿಸುವ ಹೇಳಿಕೆ ನೀಡುತ್ತಾ ರಾಜ್ಯದ ಆರೂವರೆ ಕೋಟಿ ಜನರಿಗೆ ದ್ರೋಹ ಬಗೆಯುತ್ತಿದ್ದಾರೆ. ಮಾನಸಿಕ ಹತೋಟಿ ಕಳೆದುಕೊಂಡಂತೆ ಬೇಜವಾಬ್ದಾರಿತನದಿಂದ ಮಾತನಾಡುವುದು ಮುಖ್ಯಮಂತ್ರಿಗಳಿಗೆ ಶೋಭೆ ತರುವುದಿಲ್ಲ. ಈ ರೀತಿಯ ಹೇಳಿಕೆ ನೀಡುವ ಮುಖ್ಯಮಂತ್ರಿಗಳ ವಿರುದ್ಧ ಬಿಜೆಪಿ ಬೀದಿಗಿಳಿದು ಹೋರಾಟ ನಡೆಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.