ಶಿರೂರ: ಮಹಾರುದ್ರಪ್ಪನ ಹಳ್ಳದಲ್ಲಿ ಜಮೆಯಾಗಿರುವ ಆಲಮಟ್ಟಿ ಜಲಾಶಯದ ಹಿನ್ನೀರನ್ನು ಶಿರೂರ ಗ್ರಾಮದ ಐತಿಹಾಸಿಕ ಕೆರೆಗಳಾದ ದೊಡ್ಡ ಕೆರೆ ಹಾಗೂ ಸಣ್ಣ ಕೆರೆಗೆ ಪ್ರಯೋಗಿಕವಾಗಿ ಹರಿಸಲಾಗುತ್ತಿದ್ದು, ಗ್ರಾಮಸ್ಥರು ಹಾಗೂ ಈ ಭಾಗದ ರೈತರು ಸಂತಸಗೊಂಡಿದ್ದಾರೆ.
ಆಲಮಟ್ಟಿ ಜಲಾಶಯ ಹಿನ್ನೀರು ಸಣ್ಣ ನೀರಾವರಿ ಇಲಾಖೆ ಮತ್ತು ಅಂತರ್ಜಲ ಅಭಿವೃದ್ಧಿ ಇಲಾಖೆ ಏತ ನೀರಾವರಿ ಯೋಜನೆಯಡಿ ಮಹಾರುದ್ರಪ್ಪನ ಹಳ್ಳದಲ್ಲಿ ನಿರ್ಮಾಣ ಮಾಡಿರುವ ಪಂಪ್‌ಹೌಸ್‌ನೊಂದಿಗೆ ಪೈಪ್‌ಲೈನ್ ಮೂಲಕ ಆಲಮಟ್ಟಿ ಜಲಾಶಯದ ಹಿನ್ನೀರನ್ನು ಶಿರೂರ ಕೆರೆಗಳಿಗೆ ಹರಿಸುವ ಯೋಜನೆ ರೂಪಿಸಲಾಗಿದೆ.
ಸಣ್ಣ ನೀರಾವರಿ ಇಲಾಖೆಗೆ ಒಳಪಟ್ಟ ದೊಡ್ಡ ಕೆರೆ 48.32 ಎಕರೆ ವಿಸ್ತೀರ್ಣ ಹೊಂದಿದೆ. ಸಣ್ಣ ಕೆರೆ 38.18 ಎಕರೆ ವಿಸ್ತೀರ್ಣವಾಗಿದೆ. ಈ ಕೆರೆಗೆ ನೀರು ತುಂಬಿಸುವ ಯೋಜನೆಯನ್ನು 2017, ಸೆಪ್ಟಂಬರ್‌ನಲ್ಲಿ ಜಾರಿಗೆ ತಂದಿದ್ದರೂ ಬರಿದಾದ ಕೆರೆಗಳು ಭರ್ತಿಯಾಗಲಿಲ್ಲ. ಹೀಗಾಗಿ ಯೋಜನೆ ಅನುಷ್ಠಾನ ಗ್ರಾಮದ ಜನರಿಗೆ ಸಂತೋಷವಾಯಿತು ಹೊರತು 2 ತಿಂಗಳು ಕೂಡಾ ನೀರು ನಿಲ್ಲಲಿಲ್ಲ. ನೀರು ಹರಿದು ಬರುವ ಪೈಪ್‌ಲೈನ್ ಸಣ್ಣದಾಗಿದ್ದರಿಂದ ಹೆಚ್ಚಿನ ನೀರು ಹರಿದು ಬರುತ್ತಿಲ್ಲ. ಈಗಾಗಲೇ ಮತ್ತೆ ಹಿನ್ನೀರು ಹರಿದು ಬರುತ್ತಿದ್ದು, ಇದು ಹಿನ್ನೀರು ಇಳಿಮುಖವಾಗುವವರೆಗೂ ನಿರಂತರ ಕೆರೆಗಳಿಗೆ ನೀರು ಹರಿಸಲು ಕ್ರಮ ಕೈಗೊಂಡರೆ ವರ್ಷವಿಡೀ ನೀರು ಸಂಗ್ರಹವಾಗುವುದರೊಂದಿಗೆ ಪಾತಾಳಕ್ಕೆ ಇಳಿದಿರುವ ಅಂತರ್ಜಲ ಅಭಿವೃದ್ಧಿಯಾಗಿ ಜನ-ಜಾನುವಾರುಗಳಿಗೆ ಅನುಕೂಲವಾಗುತ್ತದೆ. ಜತೆಗೆ ಅಂದಾಜು 60ಕ್ಕೂ ಹೆಚ್ಚು ಎಕರೆ ಕೃಷಿ ಭೂಮಿಗೆ ನೀರಾವರಿ ಸೌಲಭ್ಯ ದೊರೆಯಲಿದೆ ಎಂಬುದು ರೈತರ ವಿಶ್ವಾಸ.
ಮೊದಲು ಸಣ್ಣ ಕೆರೆಗೆ ನೀರು: ಅಂದಾಜು 8 ಕಿ.ಮೀ. ಅಧಿಕ ಇರುವ ಕಾರಿಹಳ್ಳದ ಆಲಮಟ್ಟಿ ಹಿನ್ನೀರಿನಿಂದ ಕೊಳವೆ ಪೈಪ್ ಮೂಲಕ ಸಣ್ಣ ಪ್ರಮಾಣದಲ್ಲಿ ಹರಿದು ಬರುವ ನೀರು ಸಣ್ಣ ಕೆರೆ (ಪಡಗೇರಿ)ಗೆ ಮೊದಲು ನೀರು ಹರಿಯುತ್ತಿದೆ. ಈ ಕೆರೆ ಭರ್ತಿಯಾಗಲು ಸುಮಾರು 2 ತಿಂಗಳಕ್ಕೂ ಹೆಚ್ಚು ದಿನಗಳು ಬೇಕಾಗಬಹುದು. ಇನ್ನು ಎರಡು ಕೆರೆಗಳು ತುಂಬಲು ಅಂದಾಜು 4 ತಿಂಗಳು ಸಮಯ ಬೇಕಾಗಬಹುದು ಎನ್ನಲಾಗಿದೆ.