Advertisement

ಇಂದಿನಿಂದ ಮೈಸೂರು-ಬೆಂಗಳೂರು ನಡುವೆ ವಿಮಾನಯಾನ ಆರಂಭ

08:10 AM Jun 07, 2019 | Team Udayavani |

ಮೈಸೂರು: ಬೆಂಗಳೂರು ಹೆದ್ದಾರಿಯಲ್ಲಿನ ಸಂಚಾರ ದಟ್ಟಣೆಯಿಂದಾಗಿ ಹೈರಾಣಾಗಿರುವ ಮೈಸೂರು – ಬೆಂಗಳೂರು ನಡುವೆ ಸಂಚರಿಸುವ ಪ್ರಯಾಣಿಕರಿಗೆ ಇದು ಸಂತಸದ ಸುದ್ದಿ.

Advertisement

ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರ ಪ್ರಾದೇಶಿಕ ಸಂಪರ್ಕ ಯೋಜನೆ ಉಡಾನ್‌-3ರಡಿ ಜೂನ್‌ 7ರಿಂದ ಮೈಸೂರು ವಿಮಾನ ನಿಲ್ದಾಣದಿಂದ 2ನೇ ವಿಮಾನ ಸೇವೆಗೆ ಚಾಲನೆ ನೀಡಲಿದ್ದು, ಈ ವಿಮಾನ ಮೈಸೂರು-ಬೆಂಗಳೂರು ನಡುವೆ ಸಂಚರಿಸಲಿದೆ. ಮೈಸೂರು -ಬೆಂಗಳೂರು ನಡುವಿನ ಪ್ರಯಾಣಕ್ಕೆ 1365 ರೂ.ಟಿಕೆಟ್ ದರ ನಿಗದಿಪಡಿಸಲಾಗಿದೆ.

ಉಡಾನ್‌ ಯೋಜನೆಯಡಿ ಈಗಾಗಲೇ ಮೈಸೂರು – ಚೆನ್ನೈ ನಡುವೆ ವಿಮಾನಯಾನ ಸೌಲಭ್ಯವಿದ್ದು, ಮೈಸೂರು – ಬೆಂಗಳೂರು ನಡುವಿನ 2ನೇ ವಿಮಾನಯಾನ ಸೌಲಭ್ಯಕ್ಕೆ ಜೂನ್‌ 7ರ ಬೆಳಗ್ಗೆ 11.15ಕ್ಕೆ ಮೈಸೂರು ವಿಮಾನ ನಿಲ್ದಾಣದಲ್ಲಿ ಚಾಲನೆ ದೊರೆಯಲಿದೆ.

ಉನ್ನತ ಶಿಕ್ಷಣ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ.ದೇವೇಗೌಡ ಉದ್ಘಾಟನೆ ಮಾಡುವರು. ಪ್ರವಾಸೋದ್ಯಮ ಸಚಿವ ಸಾ.ರಾ ಮಹೇಶ್‌, ಸಂಸದ ಪ್ರತಾಪ್‌ ಸಿಂಹ ಉಪಸ್ಥಿತರಿರುವರು.

ಉಪಸ್ಥಿತಿ: ಮೈಸೂರು ಮಹಾ ನಗರ ಪಾಲಿಕೆ ಮೇಯರ್‌ ಪುಷ್ಪಲತಾ ಜಗನ್ನಾಥ್‌, ಭಾರತೀಯ ವಿಮಾನಯಾನ ಸಚಿವಾಲಯದ ಕಾರ್ಯದರ್ಶಿ ಪ್ರದೀಪ್‌ ಸಿಂಗ್‌ ಖರೋಲಾ, ರಾಜ್ಯ ಪ್ರವಾಸೋದ್ಯಮ ಇಲಾಖೆ ಕಾರ್ಯದರ್ಶಿ ಟಿ.ಕೆ. ಅನಿಲ್ ಕುಮಾರ್‌, ಕೆಎಸ್‌ಟಿಡಿಸಿ ವ್ಯವಸ್ಥಾಪಕ ನಿರ್ದೇಶಕ ಕುಮಾರ್‌ಪುಷ್ಕರ್‌, ಜಿಲ್ಲಾಧಿಕಾರಿ ಅಭಿರಾಮ್‌ ಜಿ.ಶಂಕರ್‌, ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರದ ದಕ್ಷಿಣ ಕೇಂದ್ರದ ಪ್ರಾದೇಶಿಕ ಕಾರ್ಯನಿರ್ವಾಹಕ ನಿರ್ದೇಶಕ ಆರ್‌. ಮಾಧವನ್‌ ಭಾಗವಹಿಸಲಿದ್ದಾರೆ.

Advertisement

2015ರಲ್ಲಿ ದಸರಾ ಸಂದರ್ಭದಲ್ಲಿ ಮೈಸೂರಿಗೆ ಬಂದು ಹೋಗುವ ಪ್ರವಾಸಿಗರ ಅನುಕೂಲಕ್ಕಾಗಿ ಸೆಪ್ಟೆಂಬರ್‌ ನಿಂದ ನವೆಂಬರ್‌ವರೆಗೆ 3 ತಿಂಗಳ ಕಾಲ ಮೈಸೂರು – ಬೆಂಗಳೂರು ನಡುವೆ ವಿಮಾನಯಾನ ಸೌಲಭ್ಯ ಒದಗಿಸಲಾಗಿತ್ತು. 3 ತಿಂಗಳ ಹಾರಾಟದ ನಂತರ ಏರ್‌ ಇಂಡಿಯಾ ಸಂಸ್ಥೆ ವಿಮಾನ ಹಾರಾಟ ಸ್ಥಗಿತಗೊಳಿಸಿತ್ತು. 2018ರ ದಸರಾ ಸಂದರ್ಭದಲ್ಲಿ ಸರ್ಕಾರ ಮೈಸೂರು-ಬೆಂಗಳೂರು ನಡುವೆ 20 ದಿನ ಕಲ್ಪಿಸಿದ್ದ ವಿಮಾನಯಾನ ಸೌಲಭ್ಯಕ್ಕೆ ಜನರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿತ್ತು.

ಉಡಾನ್‌ ಯೋಜನೆಯಡಿ ಕಡಿಮೆ ದರದಲ್ಲಿ ಮೈಸೂರು – ಬೆಂಗಳೂರು ನಡುವೆ ವಿಮಾನಯಾನ ಸೌಲಭ್ಯ ಕಲ್ಪಿಸಿರುವುದರಿಂದ ಪ್ರವಾಸೋದ್ಯಮದ ಬೆಳವಣಿಗೆಗೆ ಅನುಕೂಲವಾಗಲಿದೆ. ಜೊತೆಗೆ ಮಧ್ಯಮ ವರ್ಗದ ಜನತೆಯೂ ವಿಮಾನಯಾನ ಮಾಡಬಹುದಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next