Advertisement
ಪಕ್ಷದ ಕಾರ್ಯಕರ್ತರನ್ನು ಸಂಘಟನೆ ಕಾರ್ಯಕ್ಕೆ ಉತ್ತೇಜಿಸಲು ರಾಜ್ಯ ಬಿಜೆಪಿ ನಾನಾ ಕಸರತ್ತು ನಡೆಸಿತ್ತು. ಈ ನಡುವೆ ಸಂಭವಿಸಿದ “ಏರ್‌ಸ್ಟ್ರೈಕ್’ ವೈಮಾನಿಕ ದಾಳಿ ಬಳಿಕ ಕಾರ್ಯಕರ್ತರು ಸಂಭ್ರಮಾಚರಣೆಯಲ್ಲಿ ತೊಡಗುವ ಮೂಲಕ ಪಕ್ಷ ಸಂಘಟನೆಗೆ ಮುಂದಾಗಿರುವುದು ಬಿಜೆಪಿಗೆ ಅನುಕೂಲಕರವಾಗಿ ಪರಿಣಮಿಸಿದೆ. ಜತೆಗೆ ಬಿಜೆಪಿಯೇತರರು, ತಟಸ್ಥರಾಗಿ ಉಳಿದವರು, ಸಾರ್ವಜನಿಕರು ಸಂಭ್ರಮಾಚರಣೆಯಲ್ಲಿ ಪಾಲ್ಗೊಂಡು ಬಿಜೆಪಿಯತ್ತ ವಾಲುತ್ತಿರುವ ಲಕ್ಷಣ ಕಾಣುತ್ತಿರುವುದು ಪಕ್ಷದ ಚುನಾವಣಾ ರಣೋತ್ಸಾಹ ಇಮ್ಮಡಿಗೊಳಿಸಿದೆ.
Related Articles
Advertisement
ಕಾರ್ಯಕರ್ತರಿಂದ ನಿರಾಸಕ್ತಿ: ಸರ್ಕಾರ ರಚನೆ ಪ್ರಯತ್ನ ದಲ್ಲೇ ತೊಡಗಿಸಿಕೊಂಡಿದ್ದ ರಾಜ್ಯ ನಾಯಕರೆಲ್ಲಾ ದಿಢೀರ್ ಲೋಕಸಭಾ ಚುನಾವಣೆ ಸಿದ್ಧತಾ ಕಾರ್ಯಗಳಲ್ಲಿ ಸಕ್ರಿಯರಾದರೂ ಕಾರ್ಯಕರ್ತರಿಂದ ನಿರೀಕ್ಷಿತ ಸ್ಪಂದನೆ ಸಿಗಲಿಲ್ಲ. ರಾಜ್ಯ ಬಿಜೆಪಿಯಲ್ಲಿನ ಬೆಳವಣಿಗೆಗಳು ಇದಕ್ಕೆ ಕಾರಣವಿರಬಹುದು. ಹಾಗಾಗಿ ಬಿಜೆಪಿ ವತಿಯಿಂದ ನಡೆದ ಕಾರ್ಯಕ್ರಮ, ಅಭಿಯಾನಗಳು ನಿರೀಕ್ಷಿತ ಯಶಸ್ಸು ಕಂಡಿರಲಿಲ್ಲ.
ಆರಂಭಿಕ ಹಿನ್ನಡೆ: ಬಿಜೆಪಿಯು “ನನ್ನ ಪರಿವಾರ- ಬಿಜೆಪಿ ಪರಿವಾರ’ ಅಭಿಯಾನವನ್ನು ಫೆಬ್ರವರಿಯಲ್ಲಿ ಹಮ್ಮಿಕೊಂಡಿತ್ತು. ಫೆ. 19- 20 ರಂದು ಎಲ್ಲ ಚುನಾಯಿತ ಪ್ರತಿನಿಧಿಗಳು ಒಳಗೊಂಡಂತೆ ಬೂತ್ ಮಟ್ಟದಲ್ಲಿ ಕನಿಷ್ಠ 25 ಮನೆ ಸಂಪರ್ಕ ಅಭಿಯಾನ ನಡೆಸಿ ಮನೆಗಳ ಮೇಲೆ ಧ್ವಜಾರೋಹಣ ನಡೆಸಿ, ಕರಪತ್ರ, ಸ್ಟಿಕ್ಕರ್ ಹಂಚುವ ಕಾರ್ಯಕ್ರಮ ಹಮ್ಮಿ ಕೊಂಡಿತ್ತು.ಆದರೆ ಕಾರ್ಯಕರ್ತರಿಂದ ನಿರೀಕ್ಷಿತ ಸ್ಪಂದನೆ ಸಿಕ್ಕಿರಲಿಲ್ಲ. ನಂತರ ನಡೆದ ಕಮಲ ಜ್ಯೋತಿ ಸಂಕಲ್ಪ ಕಾರ್ಯಕ್ರಮವೂ ನಿರೀಕ್ಷೆಯ ಮಟ್ಟ ತಲುಪಲಿಲ್ಲ ಎಂದು ರಾಜ್ಯ ನಾಯಕರೊಬ್ಬರು ಹೇಳಿದರು.
ಈ ನಡುವೆ ಉಗ್ರರ ಮೇಲೆ ಭಾರತೀಯ ವಾಯುಪಡೆಯ ವೈಮಾನಿಕ ದಾಳಿ, ಪಾಕ್ ವಶದಲ್ಲಿದ್ದ ವಿಂಗ್ ಕಮಾಂಡರ್ ಅಭಿನಂದನ್ ಸುರಕ್ಷಿತ ಬಿಡುಗಡೆ ಘಟನಾವಳಿ ಕಾರ್ಯಕರ್ತರಲ್ಲಿ ಉತ್ಸಾಹ ಮೂಡಿಸಿತು. ಅಂದರೆ ಮಾ. 2ರಂದು ರಾಜ್ಯದಲ್ಲಿ ನಡೆದ ಬಿಜೆಪಿ “ಕಮಲ ಸಂದೇಶ’ ಬೈಕ್ ರ್ಯಾಲಿ ನಿರೀಕ್ಷೆಗೂ ಮೀರಿ ಯಶಸ್ಸು ಕಂಡಿತ್ತು. 195 ವಿಧಾನಸಭಾ ಕ್ಷೇತ್ರಗಳಲ್ಲಿ 1.28 ಲಕ್ಷ ಬೈಕ್‌ಗಳಲ್ಲಿ ರ್ಯಾಲಿ ನಡೆಸಿ ಸಂಚಲನ ಮೂಡಿಸಿದ್ದು, ರಾಜ್ಯ ನಾಯಕರ ಸಂತಸಕ್ಕೆ ಕಾರಣವಾಗಿದೆ.
ಜನರಲ್ಲಿ ಸುಪ್ತವಾಗಿದ್ದ ದೇಶಭಕ್ತಿ ಕೆಲ ವಿಶೇಷ ಸಂದರ್ಭದಲ್ಲಿ ಜಾಗೃತವಾ ಗುತ್ತದೆ. ಭಾರತೀಯ ವಾಯುಪಡೆಯ ದಾಳಿ ಬಳಿಕ ಈ ರೀತಿಯ ವಾತಾವರಣ ಸೃಷ್ಟಿಯಾಗಿದೆ. ಹಾಗಾಗಿ ಬಿಜೆಪಿಯವರು ಮಾತ್ರವಲ್ಲದೇ ಬಿಜೆಪಿಯೇತರರು ಸಂಭ್ರಮಿಸಿ ಬೆಂಬಲ ವ್ಯಕ್ತಪಡಿಸುತ್ತಿ ದ್ದಾರೆ.– ಸಿ.ಟಿ. ರವಿ ರಾಜ್ಯ ಬಿಜೆಪಿ ಪ್ರ.ಕಾರ್ಯದರ್ಶಿ – ಎಂ.ಕೀರ್ತಿಪ್ರಸಾದ್