Advertisement

ಕಟಪಾಡಿ : ಹಠಾತ್‌ ಆಗಿ ತೆರೆದುಕೊಂಡ ಕಾರಿನ ಏರ್‌ ಬ್ಯಾಗ್‌ ; ಆತಂಕ ಸೃಷ್ಟಿ

10:00 AM Feb 03, 2020 | sudhir |

ಕಾಪು : ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಚಲಿಸುತ್ತಿದ್ದ ಕಾರಿನ ಏರ್‌ ಬ್ಯಾಗ್‌ ಹಠಾತ್‌ ಆಗಿ ತೆರೆದುಕೊಂಡ ಘಟನೆ ಕಟಪಾಡಿ ತೇಕಲತೋಟದ ಬಳಿ ರವಿವಾರ ಮಧ್ಯಾಹ್ನ ನಡೆದಿದೆ.

Advertisement

ಕಟಪಾಡಿ ಕೌಶಲ್‌ ಬ್ರಿಕ್ಸ್‌ ಹೋಲೋ ಬ್ಲಾಕ್‌ ಕಂಪೆನಿಯ ಮಾಲಕ ಶಿವಪ್ರಸಾದ್‌ ಅವರ ಬ್ರೀಝಾ ಕಾರು ತನ್ನ ಏರ್‌ ಬ್ಯಾಗ್‌ಗಳನ್ನು ಹಠಾತ್‌ ಆಗಿ ತೆರೆದುಕೊಂಡಿದ್ದು, ಅವರು ಪವಾಢಸಧೃಶ ರೀತಿಯಲ್ಲಿ ಯಾವುದೇ ಅಪಾಯಗಳಿಲ್ಲದೇ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಕಟಪಾಡಿ ಒಳ ರಸ್ತೆಯಿಂದ ತೇಕಲತೋಟದ ಬಳಿ ರಾಷ್ಟ್ರೀಯ ಹೆದ್ದಾರಿ 66ನ್ನು ಪ್ರವೇಶಿಸುತ್ತಿದ್ದಂತೆಯೇ ಸುಜುಕಿ ಬ್ರೀಝಾ ಕಾರಿನ ಮುಂಭಾಗದ ಎರಡೂ ಏರ್‌ ಬ್ಯಾಗ್‌ಗಳು ಹಠಾತ್‌ ಆಗಿ ಓಪನ್‌ ಆಗಿದ್ದವು. ಏರ್‌ ಬ್ಯಾಗ್‌ ತೆರೆದುಕೊಂಡ ಕೂಡಲೇ ಕಾರಿನೊಳಗೆ ಸಂಪೂರ್ಣ ಗ್ಯಾಸ್‌ ಮಿಶ್ರಿತ ಹೊಗೆ ಆವರಿಸಿಕೊಂಡಿದ್ದು ಹಠಾತ್‌ ಬೆಳವಣಿಗೆ ಶಿವಪ್ರಸಾದ್‌ ಅವರಲ್ಲಿ ಭಾರೀ ಆತಂಕಕ್ಕೆ ಕಾರಣವಾಯಿತು.

ಏರ್‌ ಬ್ಯಾಗ್‌ ತೆರೆದುಕೊಂಡ ಕೂಡಲೇ ಕಾರನ್ನು ಚಲಾಯಿಸಲು ಕಷ್ಟವಾಗಿದ್ದು ಕೂಡಲೇ ಕಾರನ್ನು ನಿಲ್ಲಿಸಿ ಪರಿಶೀಲಿಸಿದ‌ರು. ಬಳಿಕ ತನ್ನ ಸ್ನೇಹಿತರಿಗೆ ಮಾಹಿತಿ ನೀಡಿದರು. ಸ್ನೇಹಿತರು ಮತ್ತು ಸ್ಥಳೀಯ ಗ್ಯಾರೇಜ್‌ನವರು ಬಂದು ಕಾರನ್ನು ಪರಿಶೀಲನೆ ನಡೆಸಿದ್ದು , ಮುಂದಿನ ಕ್ರಮಕ್ಕಾಗಿ ಶೋ ರೂಮ್‌ಗೆ ಮಾಹಿತಿ ನೀಡಿದ್ದಾರೆ.

Advertisement

ಯಾವಾಗೆಲ್ಲಾ ಏರ್‌ ಬ್ಯಾಗ್‌ ತೆರೆದುಕೊಳ್ಳುತ್ತದೆ : ಸೀಟ್‌ ಬೆಲ್ಟ್ ಹಾಕಿಕೊಂಡು ವಾಹನ ಚಲಾಯಿಸುತ್ತಿದ್ದರೆ ಆಗ ಅಪಾಯಕಾರಿಯಾದ ಅಪಘಾತ ಸಂಭವಿಸಿದಾಗ, ಕಾರಿನ ಮುಂಭಾಗ ಇತರ ಯಾವುದೇ ವಾಹನಗಳಿಗೆ ಢಿಕ್ಕಿ ಹೊಡೆದಾಗ, ಕಾರು ಪಲ್ಟಿಯಾದಾಗ ಮತ್ತು ಏರ್‌ ಬ್ಯಾಗ್‌ಗೆ ಲಿಂಕ್‌ ಮಾಡಿಟ್ಟ ಸೆನ್ಸಾರ್‌ಗೆ ಪೆಟ್ಟಾದಾಗ ಏರ್‌ ಬ್ಯಾಗ್‌ ಓಪನ್‌ ಆಗುತ್ತದೆ. ಈ ಸಂದರ್ಭ ಕಾರಿನಲ್ಲಿದ್ದವರು ಹೊರಗೆ ಎಸೆಯಲ್ಪಡದಂತೆ ಮತ್ತು ಗುದ್ದದ ರಭಸಕ್ಕೆ ದೇಹಕ್ಕೆ ಪೆಟ್ಟಾಗದಂತೆ ಏರ್‌ ಬ್ಯಾಗ್‌ ರಕ್ಷಣೆ ನೀಡುತ್ತದೆ.

ಆತಂಕವೇನು ? : ರವಿವಾರ ಶಿವಪ್ರಸಾದ್‌ ಅವರು ಚಲಾಯಿಸುತ್ತಿದ್ದ ಕಾರಿನ ಏರ್‌ ಬ್ಯಾಗ್‌ ಹಠಾತ್‌ ಆಗಿ ತೆರೆದುಕೊಂಡಿದ್ದು, ಒಂದು ವೇಳೆ ಕಾರಿನಲ್ಲಿ ಹೆಚ್ಚಿನ ಜನರಿದ್ದರೆ ಭಾರೀ ಅಪಾಯವುಂಟಾಗುವ ಸಾಧ್ಯತೆಗಳಿದ್ದವು. ಜಂಕ್ಷನ್‌ ಪ್ರದೇಶವಾಗಿದ್ದರಿಂದ ಕಾರು ನಿಯಮಿತ ವೇಗದಲ್ಲಿ ಸಂಚರಿಸುತ್ತಿತ್ತು, ಹೆದ್ದಾರಿಯಲ್ಲೇನಾದರೂ ಈ ಪ್ರಮಾದ ಉಂಟಾಗುತ್ತಿದ್ದರೆ ಇನ್ನೊಂದು ವಾಹನಕ್ಕೆ ಢಿಕ್ಕಿ ಹೊಡೆದು, ಭಾರೀ ಸಾವು ನೋವಿಗೆ ಕಾರಣವಾಗುತ್ತಿತ್ತು.

ಕಟಪಾಡಿ ಒಳ ರಸ್ತೆಯಲ್ಲಿ ಮುಂದೆ ಬಂದು ರಾ.ಹೆ. 66ನ್ನು ಪ್ರವೇಶಿಸುತ್ತಿದ್ದಂತೆಯೇ ಹಠಾತ್‌ ಆಗಿ ಎರಡೂ ಏರ್‌ ಬ್ಯಾಗ್‌ಗಳು ತೆರೆದುಕೊಂಡವು. ಆ ಕ್ಷಣಕ್ಕೆ ಭಾರೀ ಆತಂಕಕ್ಕೆ ಕಾರಣವಾಗಿದ್ದು, ಕೂಡಲೇ ಕಾರನ್ನು ನಿಯಂತ್ರಣಕ್ಕೆ ತೆಗೆದುಕೊಂಡು ಹೆದ್ದಾರಿ ಬದಿಯಲ್ಲಿ ನಿಲ್ಲಿಸಿದ್ದೇನೆ. ಕಾರಿನಲ್ಲಿ ಸಂಚರಿಸುವವರ ರಕ್ಷಣೆಗಾಗಿ ಇರುವ ಏರ್‌ ಬ್ಯಾಗ್‌ ತನ್ನಷ್ಟಕ್ಕೇ ತಾನಾಗಿಯೇ ತೆರೆದುಕೊಂಡಿರುವುದರ ಬಗ್ಗೆ ಸುಜುಕಿ ಶೋ ರೂಮ್‌ಗೆ ಮಾಹಿತಿ ನೀಡಿದ್ದು, ಅವರು ಕಾರನ್ನು ಕೊಂಡೊಯ್ದಿದ್ದಾರೆ.
– ಶಿವಪ್ರಸಾದ್‌ ಕಟಪಾಡಿ

Advertisement

Udayavani is now on Telegram. Click here to join our channel and stay updated with the latest news.

Next