Advertisement

ಗ್ರಾಮೀಣಾಭಿವೃದ್ಧಿಯ ಸಂಕಲ್ಪ  ಸಾಕಾರವೇ ಗುರಿ

10:01 PM Jan 05, 2022 | Team Udayavani |

ಶಿವಮೊಗ್ಗ: ಜ.31ರಿಂದ ಪ್ರತಿಯೊಂದು ಗ್ರಾಮ ಪಂಚಾಯಿತಿಗೂ ಭೇಟಿ ನೀಡಿ, ಪ್ರಶ್ನಾವಳಿ ಸಿದ್ಧಪಡಿಸಿಕೊಂಡು ಏನಿಲ್ಲ, ಏನು ಅಗತ್ಯವಿದೆ ಎಂಬುದರ ಕುರಿತು ಮಾಹಿತಿ ಪಡೆಯುತ್ತೇನೆ ಎಂದು ಹೊಸದಾಗಿ ಆಯ್ಕೆಯಾಗಿರುವ ವಿಧಾನ ಪರಿಷತ್‌ ಸದಸ್ಯ ಡಿ.ಎಸ್‌. ಅರುಣ್‌ ಹೇಳಿದರು.

Advertisement

ಪ್ರಸ್‌ ಟ್ರಸ್ಟ್‌ ಆಯೋಜಿಸಿದ್ದ ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು. ನನ್ನ ಕ್ಷೇತ್ರದಲ್ಲಿ ಸುಮಾರು 362 ಗ್ರಾಮ ಪಂಚಾಯಿತಿಗಳು ಬರುತ್ತವೆ. ಪ್ರವಾಸದ ವೇಳೆ ಪ್ರತಿಯೊಂದು ಗ್ರಾಮ ಪಂಚಾಯಿತಿಗೆ ಒಂದು ಗಂಟೆ ಮೀಸಲಿಡುತ್ತೇನೆ. ಇದಕ್ಕಾಗಿ ಸಿದ್ಧತೆಗಳು ನಡೆದಿವೆ. ದಿನಕ್ಕೆ 12 ಗಂಟೆ ಕ್ಷೇತ್ರಕ್ಕಾಗಿ ದುಡಿಯುವೆ ಎಂದು ಹೇಳಿದ್ದೆ ಅದನ್ನು ಕಾರ್ಯಗತಗೊಳಿಸುವೆ ಎಂದರು.

ಗ್ರಾಮೀಣಾಭಿವೃದ್ಧಿಯ ನಿರೀಕ್ಷೆ ಇಟ್ಟುಕೊಂಡಿರುವ ನಾನು ಅದನ್ನು ಸಾಕಾರ ಮಾಡುವ ನಿಟ್ಟಿನತ್ತ ಸಂಕಲ್ಪ ಮಾಡುವೆ. ಗ್ರಾಮೀಣ ಪ್ರದೇಶದಲ್ಲಿ ಹಲವು ಸಮಸ್ಯೆಗಳಿವೆ ಎಂಬುದು ನಿಜ. ಪ್ರಮುಖವಾಗಿ ಗ್ರಾಮ ಪಂಚಾಯಿತಿಗಳನ್ನು ಗಟ್ಟಿಗೊಳಿಸಬೇಕಾಗಿದೆ. ಗ್ರಾಮೀಣ ಭಾಗದಲ್ಲಿ ಪ್ರಮುಖವಾಗಿ ನೆಟ್‌ವರ್ಕ್‌ ಸಮಸ್ಯೆ ಇದೆ. ಮತ್ತು ಗ್ರಾಮ ಪಂಚಾಯಿತಿಗಳು ಡಿಜಿಟಲ್‌ ಆಗಬೇಕಾಗಿದೆ.

ಆ ನಿಟ್ಟಿನತ್ತ ಪ್ರಮಾಣಿಕವಾಗಿ ಪ್ರಯತ್ನಿಸುವೆ. ಇದರಿಂದ ಕಚೇರಿಯ ಎಲ್ಲಾ ಕೆಲಸಗಳು ಸುಲಭವಾಗಿ ಆಗುತ್ತವೆ. ಕೇವಲ ಮೊಬೈಲ್‌ ಸೇವೆ ಸಿಕ್ಕರೆ ಸಾಲದು, ವೈ ಫೈ ಸೇವೆ ಶಕ್ತಿಯುತವಾಗಬೇಕಾಗಿದೆ. ಎಲ್ಲಾ ನೆಟ್‌ವರ್ಕ್‌ಗಳು ಸುಲಭವಾಗಿ ಮತ್ತು ಹೆಚ್ಚು ಪ್ರಸಾರಯುಕ್ತವಾಗಿ ಆದರೆ ಹೆಚ್ಚು ಅನುಕೂಲವಾಗುತ್ತದೆ. ಇದಕ್ಕೆ ಆದ್ಯತೆ ಕೊಡುವುದಾಗಿ ಹೇಳಿದರು. ಶೇ.50 ರಷ್ಟು ಡಿಜಿಟಲೀಕರಣ ಇದ್ದರೂ ಕೂಡ ಅಲ್ಲಿ ಸರಿಯಾದ ವ್ಯವಸ್ಥೆ ಇಲ್ಲ. ಗ್ರಾಮ ಪಂಚಾಯಿತಿಗಳ ಮೂಲಕವೇ ವಿವಿಧ ಬಗೆಯ ಪ್ರಮಾಣ ಪತ್ರಗಳು ಲಭ್ಯವಾದರೆ ಸಾರ್ವಜನಿಕರು ನಗರಕ್ಕೆ ಬರುವುದು ತಪ್ಪುತ್ತದೆ. ಸಮಯ ಉಳಿತಾಯವಾಗುತ್ತದೆ. ಕೆಲಸಗಳು ಬೇಗ ಆಗುತ್ತವೆ ಎಂದರು. ಗ್ರಾಮೀಣಾಭಿವೃದ್ಧಿಗಾಗಿ ವಿಧಾನ ಪರಿಷತ್‌ ಸದಸ್ಯನಾಗಿ ತಮಗಿರುವ ಅಧಿ ಕಾರ ವ್ಯಾಪ್ತಿಯಲ್ಲಿ ಜೊತೆಗೆ ಸರ್ಕಾರ ನಡೆಸುವ ಸಭೆಗಳನ್ನು ಬಳಸಿಕೊಂಡು ಗ್ರಾ.ಪಂ.ಗಳ ಅ ಧಿಕಾರಿಗಳು ಮತ್ತು ಸದಸ್ಯರೊಂದಿಗೆ ಚರ್ಚಿಸಿ ಸರ್ಕಾರದ ಅನುದಾನಗಳ ಬಿಡುಗಡೆಗೆ ಮತ್ತು ವಿಶೇಷ ಅನುದಾನಗಳ ಬಿಡುಗಡೆಗೆ ಪ್ರಯತ್ನಿಸಲಾಗುವುದು. ಇದಕ್ಕಾಗಿ ಪ್ರತಿ ಗ್ರಾ.ಪಂ.ಗಳಿಗೂ ಭೇಟಿ ನೀಡುತ್ತೇನೆ.

ಮೂಲಭೂತ ಸಮಸ್ಯೆಗಳಾದ ವಿದ್ಯುತ್‌, ನೀರು, ಕೆರೆ ಒತ್ತುವರಿ, ಕಂದಾಯ ಭೂಮಿಗಳ ಸಮಸ್ಯೆ, ಬಗರ್‌ಹುಕುಂ ಸಮಸ್ಯೆ ಇವುಗಳತ್ತ ಕೂಡ ಗಮನಹರಿಸಲಾಗುವುದು ಎಂದರು. ಪ್ರಾಸ್ತಾವಿಕವಾಗಿ ಮಾತನಾಡಿದ ಪ್ರಸ್‌ ಟ್ರಸ್ಟ್‌ ಅಧ್ಯಕ್ಷ ಎನ್‌. ಮಂಜುನಾಥ್‌, ಡಿ.ಎಸ್‌. ಅರುಣ್‌ ಅವರ ಕುಟುಂಬವೇ ಅತ್ಯಂತ ಸಜ್ಜನಿಕೆಯ ಕುಟುಂಬವಾಗಿದೆ. ಅವರ ತಂದೆ ಡಿ.ಎಚ್‌. ಶಂಕರಮೂರ್ತಿ ಅವರು ಹಲವು ರಾಜಕಾರಣಿಗಳಿಗೆ ಆಶ್ರಯ ನೀಡಿದವರು. ಅರುಣ್‌ ಅವರು ಈಗ ಎಂಎಲ್ಸಿ ಆಗಿದ್ದಾರೆ. ಅವರ ಮುಂದೆ ಸಾಕಷ್ಟು ಸವಾಲುಗಳಿವೆ. ಅವರು ಪ್ರೀತಿಯಿಂದಲೇ ತಮ್ಮ ಜವಾಬ್ದಾರಿಯನ್ನು ನಿರ್ವಹಿಸುತ್ತಾರೆ ಎಂಬ ನಂಬಿಕೆಯೂ ಇದೆ ಎಂದರು. ಮಾಧ್ಯಮ ಅಕಾಡೆಮಿ ಸದಸ್ಯ ಗೋಪಾಲ್‌ ಎಸ್‌. ಯಡಗೆರೆ ಉಪಸ್ಥಿತರಿದ್ದರು. ನಾಗರಾಜ್‌ ನೇರಿಗೆ ಸ್ವಾಗತಿಸಿದರು.

Advertisement

 

Advertisement

Udayavani is now on Telegram. Click here to join our channel and stay updated with the latest news.

Next