Advertisement

ಅವಳಿ ಕ್ಷೇತ್ರದ ಸಮಗ್ರ ಅಭಿವೃದಿಯೇ ಗುರಿ

04:42 PM Mar 20, 2022 | Team Udayavani |

ಹೊನ್ನಾಳಿ: ಚುನಾವಣೆಯಲ್ಲಿ ಮಾತ್ರ ರಾಜಕಾರಣ. ನಂತರ ಕ್ಷೇತ್ರದ ಸಮಗ್ರ ಅಭಿವೃದ್ಧಿ, ಜನರಿಗೆ ಸರ್ಕಾರಿ ಸೌಲಭ್ಯ ಒದಗಿಸುವುದು ಹಾಗೂ ಪಕ್ಷಾತೀತವಾಗಿ ಕ್ಷೇತ್ರದ ಜನತೆಯ ಸಮಸ್ಯೆಗಳಿಗೆ ಪರಿಹಾರ ಒದಗಿಸುವುದು ನನ್ನ ಗುರಿ ಎಂದು ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ. ರೇಣುಕಾಚಾರ್ಯ ಹೇಳಿದರು.

Advertisement

ನ್ಯಾಮತಿ ತಾಲೂಕು ಒಡೆಯರ ಹತ್ತೂರು ಗ್ರಾಮದಲ್ಲಿ ಶನಿವಾರ ‘ಜಿಲ್ಲಾಧಿಕಾರಿಗಳ ನಡೆ ಹಳ್ಳಿ ಕಡೆ’ ಕಾರ್ಯಕ್ರಮದಡಿ ಹಮ್ಮಿಕೊಂಡಿದ್ದ ಗ್ರಾಮ ವಾಸ್ತವ್ಯ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಬಿ.ಎಸ್‌. ಯಡಿಯೂರಪ್ಪನವರು ಮುಖ್ಯಮಂತ್ರಿಯಾಗಿದ್ದಾಗ ಅವಳಿ ತಾಲೂಕಿನಲ್ಲಿ ದಾಖಲೆಯ 55 ಜನಸ್ಪಂದನಾ ಕಾರ್ಯಕ್ರಮಗಳನ್ನು ಮಾಡಿ ಸುಮಾರು 10 ಸಾವಿರ ಫಲಾನುಭವಿಗಳಿಗೆ ಸರ್ಕಾರಿ ಸೌಲಭ್ಯಗಳನ್ನು ಒದಗಿಸಿದ ಕೀರ್ತಿ ನಮ್ಮದು. ಈಗ  ‘ಜಿಲ್ಲಾಧಿಕಾರಿಗಳ ನಡೆ ಹಳ್ಳಿಗಳ ಕಡೆ’ ಕಾರ್ಯಕ್ರಮದ ಮೂಲಕ ಆಡಳಿತ ವ್ಯವಸ್ಥೆಯನ್ನೇ ಗ್ರಾಮಗಳ ಮನೆಬಾಗಿಲಿಗೆ ತಂದು ಜನರ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲಾಗುತ್ತಿದೆ ಎಂದರು.

ನಾನು ಕೊಟ್ಟ ಮಾತಿಗೆ ತಪ್ಪುವವನಲ್ಲ. ಈ ಹಿಂದೆ ಈ ಗ್ರಾಮಕ್ಕೆ ಜೆ.ಎಚ್‌. ಪಟೇಲ್‌ ಅವರ ಪ್ರತಿಮೆ ಮಾಡಿಸಿಕೊಡುವುದಾಗಿ ಮಾತು ಕೊಟ್ಟಿದ್ದು ಈಡೇರಿಸುವಲ್ಲಿ ತಡವಾಗಿದೆ. ಶೀಘ್ರವಾಗಿ ಈಡೇರಿಸುವುದಾಗಿ ಭರವಸೆ ನೀಡಿದರು.

ಸಂಧ್ಯಾ ಸುರಕ್ಷಾ ಯೋಜನೆಯಡಿ 8, ಅಂಗವಿಕಲ ಪೋಷಣಾ ವೇತನ 2, ಮನಸ್ವಿನಿ ಯೋಜನೆ ವೇತನ 1, ಇಂದಿರಾ ಗಾಂಧಿ  ರಾಷ್ಟ್ರೀಯ ವೃದ್ಧಾಪ್ಯ ವೇತನ 1, ಪೌತಿ ಖಾತೆ ಅಂದೋಲನದ ಅರ್ಜಿಗಳು 6, ಕೋವಿಡ್‌ -19 ಸೋಂಕಿನಿಂದ ಮೃತಪಟ್ಟ ವಾರಸುದಾರರಿಗೆ ಪರಿಹಾರ ಮಂಜೂರಾತಿ ಪ್ರಮಾಣಪತ್ರಗಳು 40 ಸೇರಿದಂತೆ ಒಟ್ಟು 58 ಸರ್ಕಾರಿ ಸೌಲಭ್ಯಗಳ ಮಂಜೂರಾತಿ ಆದೇಶ ಪತ್ರಗಳನ್ನು ವಿತರಿಸಲಾಯಿತು ಹಾಗೂ ವಿವಿಧ ಸೌಲಭ್ಯಗಳಿಗಾಗಿ 112 ಅರ್ಜಿಗಳನ್ನು ಸ್ವೀಕರಿಸಲಾಯಿತು.

Advertisement

ಉಪವಿಭಾಗಾಧಿಕಾರಿ ತಿಮ್ಮಣ್ಣ ಹುಲುಮನಿ, ತಾ.ಪಂ ಇಒ ರಾಮಾ ಭೋವಿ ಮಾತನಾಡಿದರು. ಗ್ರಾಪಂ ಅಧ್ಯಕ್ಷ ನಾಗರಾಜ ನಾಯ್ಕ, ಉಪಾಧ್ಯಕ್ಷ ಪರಮೇಶ್‌ ನಾಯ್ಕ, ಸದಸ್ಯರು, ನ್ಯಾಮತಿ ತಹಶೀಲ್ದಾರ್‌ ರೇಣುಕಾ, ಉಪತಹಶೀಲ್ದಾರ್‌ ನ್ಯಾಮತಿ ನಾಗರಾಜ್‌ ಇದ್ದರು. ಗ್ರಾಮಲೆಕ್ಕಿಗ ಗಣೇಶ್‌ ನಿರೂಪಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next