Advertisement

ಆಂದೋಲನ ಸ್ವ ರೂಪ ಪಡೆದ ರೈತ ಹೋರಾಟ

07:26 PM Jun 11, 2021 | Team Udayavani |

ಕಲಬುರಗಿ: ಕೇಂದ್ರ ಸರ್ಕಾರದ ಮೂರು ಕೃಷಿ ಕಾಯ್ದೆಗಳನ್ನು ವಿರೋಧಿಸಿ ದೆಹಲಿಯ ಗಡಿಗಳಲ್ಲಿ ನಡೆಯುತ್ತಿರುವ ಹೋರಾಟವು ಬರೀ ರೈತ ಹೋರಾಟವಾಗಿಲ್ಲ. ಬದಲಾಗಿ ಸಾಮಾಜಿಕ ಆಂದೋಲನದ ಸ್ವರೂಪ ಪಡೆದಿದೆ ಎಂದು ದೆಹಲಿಯ ಜವಾಹರಲಾಲ್‌ ನೆಹರೂ ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಸಂಸ್ಥೆಯ ನಿವೃತ್ತ ನಿರ್ದೇಶಕ, ಚಿಂತಕ ಪ್ರೊ| ಪುರುಷೋತ್ತಮ ಬಿಳಿಮಲೆ ಹೇಳಿದರು.

Advertisement

ದೇಶದ ಪ್ರಸಕ್ತ ರೈತ ಹೋರಾಟದ ಕುರಿತು ರೈತ ಕೃಷಿ ಕಾರ್ಮಿಕರ ಸಂಘಟನೆ ಆಯೋಜಿಸಿದ್ದ ಆನ್‌ಲೈನ್‌ ಸಂವಾದದಲ್ಲಿ ಮಾತನಾಡಿದ ಅವರು, ಉತ್ತರ ಭಾರತದ ವಿವಿಧ ರಾಜ್ಯಗಳ ಸಹಸ್ರಾರು ರೈತರು ಹಲವು ತಿಂಗಳಿಂದ ಕಾಯ್ದೆಗಳ ರದ್ದತಿಗಾಗಿ ಒತ್ತಾಯಿಸಿ ಧರಣಿ ಕುಳಿತಿದ್ದಾರೆ. ಅನ್ನದಾತರ ಬವಣೆಗಳ ಬಗ್ಗೆ ಕಿಂಚಿತ್ತೂ ಚಿಂತೆ ಮಾಡದ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ತನ್ನ “ಐಟಿ ಸೆಲ್‌’ ಬಳಸಿ ರೈತ ಹೋರಾಟ ಅವಮಾನಗೊಳಿಸುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಬಿಜೆಪಿಯ ಅಂಗ ಸಂಸ್ಥೆಗಳೂ ರೈತರನ್ನು ಅಲ್ಲಿಂದ ತೆರವುಗೊಳಿಸಲು ಹಲವು ಬಗೆಯ ಪ್ರಯತ್ನ ನಡೆಸಿವೆ.

ಆದರೆ, ಕಾಯ್ದೆ ರದ್ದುಗೊಂಡ ಬಳಿಕವಷ್ಟೇ ಅಲ್ಲಿಂದ ತೆರಳುವುದಾಗಿ ರೈತರು ಪಟ್ಟು ಹಿಡಿದಿದ್ದಾರೆ. ಸ್ವಾತಂತ್ರÂ ಹೋರಾಟದ ಬಳಿಕ ಇಷ್ಟೊಂದು ದೀರ್ಘ‌ಕಾಲೀನ ಸಮರಶೀಲ ಹೋರಾಟ ನಾನು ಕಂಡಿಲ್ಲ ಎಂದರು. ರಾಜ್ಯ ಪಟ್ಟಿಯಲ್ಲಿರುವ ಕೃಷಿಯನ್ನು ಕೇಂದ್ರ ಸರ್ಕಾರ ಬಲವಂತವಾಗಿ ಕಿತ್ತುಕೊಂಡು ಕೃಷಿ ಕಾಯ್ದೆಗಳನ್ನು ಜಾರಿಗೊಳಿಸುವ ದುಸ್ಸಾಹಸ ಪ್ರದರ್ಶಿಸಿರುವುದು ಆತಂಕಕಾರಿ. ಕೇಂದ್ರದ ಇಂತಹ ಕೆಟ್ಟ ಪರಂಪರೆಯನ್ನು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಮಾತ್ರ ದಿಟ್ಟವಾಗಿ ಪ್ರಶ್ನಿಸುತ್ತಿದ್ದಾರೆ. ಬಿಜೆಪಿ ಸರ್ಕಾರ ಇರುವ ಕರ್ನಾಟಕ, ಉತ್ತರ ಪ್ರದೇಶ, ಮಧ್ಯಪ್ರದೇಶ, ಗೋವಾದಂತಹ ರಾಜ್ಯಗಳು ಈ ಬಗ್ಗೆ ಧ್ವನಿಯನ್ನೇ ಎತ್ತುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು. ಉತ್ತರ ಕರ್ನಾಟಕದ ಜ್ವಲಂತ ಸಮಸ್ಯೆಯಾದ ಮಹದಾಯಿ ವಿವಾದವನ್ನು ಕೇಂದ್ರ ಸರ್ಕಾರ ತಕ್ಷಣ ಬಗೆಹರಿಸಬಹುದಿತ್ತು.

ಕೇಂದ್ರ ಮತ್ತು ಕರ್ನಾಟಕ ಹಾಗೂ ಗೋವಾದಲ್ಲಿ ಬಿಜೆಪಿ ಸರ್ಕಾರವೇ ಇದೆ. ಆದರೂ ಏಕೆ ಬಗೆಹರಿಯುತ್ತಿಲ್ಲ. ಈ ಉದಾಸೀನವೇಕೆ? ಎಂದು ಪ್ರಶ್ನಿಸಿದರು. ಹಿರಿಯ ಪತ್ರಕರ್ತ, ಅಂಕಣಕಾರ ಡಿ.ಉಮಾಪತಿ ಮಾತನಾಡಿ, ಕೃಷಿಯಲ್ಲಿ ಮೊದಲಿನಿಂದಲೂ ಮಹಿಳೆಯ ಪಾತ್ರ ದೊಡ್ಡದು. ಎತ್ತು ಖರೀದಿಸಲು ಶಕ್ತಿ ಇಲ್ಲದ ಉತ್ತರ ಪ್ರದೇಶ ಹಾಗೂ ಬಿಹಾರದಂತಹ ಹಿಂದುಳಿದ ರಾಜ್ಯಗಳಲ್ಲಿ ಎತ್ತಿನ ಬದಲು ನೆಲ ಉತ್ತಲು ನೊಗಕ್ಕೆ ಹೆಗಲು ಕೊಡುವವರು ಮಹಿಳೆಯರೇ ಆಗಿದ್ದಾರೆ. ಅನಾದಿಕಾಲದ ಬೇಟೆಯ ಸಂದರ್ಭದಲ್ಲಿಯೂ ಪುರುಷ ಬಿಲ್ಲು, ಬಾಣವನ್ನು ಹೊತ್ತು ಮುನ್ನಡೆದರೆ, ಆತನ ಪತ್ನಿ ಮಕ್ಕಳು, ಬಿಡಾರ ಹೂಡಲು ಬೇಕಾದ ಸರಂಜಾಮುಗಳು, ಮತ್ತಿತರ ಪರಿಕರಗಳ ಭಾರ ಹೊತ್ತು ನಡೆಯಬೇಕಿತ್ತು.

ಈ ಶೋಷಣೆಗೆ ಮುಕ್ತಿ ಈಗಲೂ ಸಿಕ್ಕಿಲ್ಲ. ಇಂದಿಗೂ ಆಸ್ತಿಯಲ್ಲಿ ಮಹಿಳೆಗೆ ಎಷ್ಟು ಪಾಲು ಸಿಗುತ್ತಿದೆ ಎಂಬುದನ್ನು ಯೋಚಿಸಬೇಕು ಎಂದರು. ರೈತ ಕೃಷಿ ಕಾರ್ಮಿಕ ಸಂಘಟನೆಯ ರಾಜ್ಯ ಕಾರ್ಯದರ್ಶಿ ಎಚ್‌.ವಿ. ದಿವಾಕರ ಮಾತನಾಡಿ, ಸಂಘಟನೆಯು ದೇಶದ 21 ರಾಜ್ಯಗಳು ಮತ್ತು ಕರ್ನಾಟಕದ 15ಕ್ಕೂ ಅಧಿ ಕ ಜಿಲ್ಲೆಗಳಲ್ಲಿ ಸಕ್ರಿಯವಾಗಿದೆ. ಮೂರು ಕೃಷಿ ಕಾಯ್ದೆಗಳು ವಾಪಸಾಗುವವರೆಗೂ ಕಿಸಾನ್‌ ಸಂಯುಕ್ತ ಮೋರ್ಚಾದ ಭಾಗವಾಗಿರುವ ಆರ್‌ಕೆಎಸ್‌ ಹಿಂದೆ ಸರಿಯುವುದಿಲ್ಲ ಎಂದು ಘೋಷಿಸಿದರು. ಆರ್‌ಕೆಎಸ್‌ ಮುಖಂಡ ಎಂ. ಶಶಿಧರ್‌ ಕಾರ್ಯಕ್ರಮ ನಿರ್ವಹಣೆ ಮಾಡಿದರು.

Advertisement

 

Advertisement

Udayavani is now on Telegram. Click here to join our channel and stay updated with the latest news.

Next