Advertisement

ಗೆಳೆಯರ ಸಲಹೆ ಬದುಕು ಬೆಳೆಸಿತು

01:00 AM Feb 01, 2019 | Team Udayavani |

ಸುಳ್ಯ: ಎಲ್ಲರಿಗೂ ಗೆಳೆಯರಿರುತ್ತಾರೆ. ಅವರಲ್ಲಿ ಅತ್ಯಾಪ್ತರು ಕೆಲವರು ಮಾತ್ರ. ಒಳಿತಿನತ್ತ ಬೆರಳು ತೋರಿ ಬದುಕಿನ ದಾರಿಯೇ ಧನಾತ್ಮಕವಾಗಿ ಬದಲಾಗುವುದಕ್ಕೆ ಕಾರಣರಾಗುವವರು ಬೆರಳೆಣಿಕೆಯಷ್ಟು ಮಂದಿ. ಅಂಥದ್ದಕ್ಕೆ ಇಲ್ಲೊಂದು ಯೋಗ್ಯ ಉದಾಹರಣೆ ಇದೆ. ದೋಸ್ತಿಗಳು ನೀಡಿದ ಸಲಹೆಯಂತೆ ಮುನ್ನಡೆದ ಯುವಕ ಈಗ ಭಾರತೀಯ ಸೇನೆ ಸೇರಿ ದೇಶಸೇವೆಯಲ್ಲಿ ತೊಡಗಿಸಿಕೊಂಡಿದ್ದಾರೆ.

Advertisement

ಇದು ಸುಳ್ಯ ತಾಲೂಕಿನ ಗುತ್ತಿಗಾರಿನ ಪೂರ್ಣೇಶ್‌ ಎಸ್‌.ಆರ್‌. ಅವರ ವೃತ್ತಾಂತ. ಅವರು ಸೇವ ಕುಮಾರ್‌ ಆರ್‌. ಮತ್ತು ಸರೋಜಿನಿ ಎಸ್‌.ಆರ್‌. ದಂಪತಿಯ ಪುತ್ರ. 1990ರಲ್ಲಿ ಜನಿಸಿದ ಪೂರ್ಣೇಶ್‌ಗೆಬಾಲ್ಯದಿಂದಲೇ ಸೇನೆ ಎಂದರೆ ಆಸಕ್ತಿ, ಕುತೂಹಲ. ಮಿಲಿಟರಿ ಸೇರಬೇಕು, ದೇಶ ಸೇವೆ ಮಾಡಬೇಕು ಎನ್ನುವ ಕನಸನ್ನು ಆಗಲೇ ಕಾಣಲಾರಂಭಿಸಿದ್ದರು.

ಪೂರ್ಣೇಶ್‌ ಸ್ಥಳೀಯ ಕರಿಕೆ ಮತ್ತು ದೇವಚಳ್ಳದಲ್ಲಿ ಪ್ರಾಥಮಿಕ, ಪ್ರೌಢ ವಿದ್ಯಾಭ್ಯಾಸ ಪೂರೈಸಿದ ಮೇಲೆ ಸುಬ್ರಹ್ಮಣ್ಯ ಎಸ್‌ಎಸ್‌ಪಿಯು ಕಾಲೇಜಿನಲ್ಲಿ ಪಿಯು ಶಿಕ್ಷಣ ಪಡೆದರು. ಹಳ್ಳಿಭಾಗದ ಬಹುತೇಕ ಕುಟುಂಬಗಳಂತೆ ಅವರಿಗೂ ಹಣಕಾಸು ಸಂಕಷ್ಟಗಳಿದ್ದವು. ಆದಾಯ ಹೊಂದಿಸುವುದಕ್ಕೆ ಪೂರ್ಣೇಶ್‌ ಸ್ವಲ್ಪ ಸಮಯ ಚಾಲಕನಾಗಿ ದುಡಿದಿದ್ದರು. ಆಮೇಲೆ ಸುಳ್ಯದ ಕೆವಿಜಿ ಶಿಕ್ಷಣ ಸಂಸ್ಥೆಯಲ್ಲಿ ಐಟಿಐಗೆ ಸೇರಿದರು. ಶಿಕ್ಷಣ ಪೂರೈಸಿ ತಾಂತ್ರಿಕ ವಿಭಾಗದಲ್ಲಿ ಕೆಲಸ ಮಾಡಬೇಕೆಂದು ಬಯಸಿದ್ದರೂ ಮನಸ್ಸಿನೊಳಗಿದ್ದ ದೇಶ ಸೇವೆಯ ಬಯಕೆ ಅದಕ್ಕಿಂತ ಬಲವಾಗಿತ್ತು.

ದಾರಿ ತೋರಿದ ಗೆಳೆಯರು

ಪೂರ್ಣೇಶ್‌ ತನ್ನ ಸ್ನೇಹಿತರ ಬಳಿ ಆಗಾಗ ಸೈನಿಕನಾಗುವ ಆಸೆಯನ್ನು ಹೇಳಿಕೊಳ್ಳುತ್ತಿದ್ದುದಿತ್ತು. ಅವರು ಅದಕ್ಕೆ ತಣ್ಣೀರೆರಚಲಿಲ್ಲ. ಬದಲಾಗಿ ಸಲಹೆ ಸೂಚನೆ ನೀಡುತ್ತ ಹುರಿ ದುಂಬಿಸುತ್ತಿದ್ದರು.

Advertisement

ಸ್ನೇಹಿತರ ಒತ್ತಾಸೆಯ ಬಲದಲ್ಲಿ ಮುನ್ನಡೆದ ಪೂರ್ಣೇಶ್‌ ಪ್ರಯತ್ನ ಮುಂದುವರಿಸಿದರು. 2011ರಲ್ಲಿ ಹಾಸನದಲ್ಲಿ ನಡೆದ ಸೇನಾ ನೇಮಕಾತಿ ರ್ಯಾಲಿಯಲ್ಲಿ ಭಾಗವಹಿಸಿ ಭಾರತೀಯ ಭೂಸೇನೆಯ 11ನೇ ಬೆಟಾಲಿಯನ್‌ಗೆ ಸೈನಿಕನಾಗಿ ಸೇರ್ಪಡೆಗೊಂಡರು. ಬಳಿಕ ತಮಿಳುನಾಡು ವೆಲ್ಲಿಂಗ್ಟನ್‌ನ ಊಟಿಯಲ್ಲಿ ತರಬೇತಿ ಪಡೆದರು. ಸಿಪಾಯಿಯಾಗಿ ಸೇನೆಗೆ ನಿಯೋಜನೆಗೊಂಡ ಮೇಲೆ ಜಮ್ಮು ಕಾಶ್ಮೀರದ ಉರಿ ಸೆಕ್ಟರ್‌ ಮತ್ತು ಹಿಮಾಚಲ ಪ್ರದೇಶಗಳಲ್ಲಿ ತಲಾ ಎರಡು ವರ್ಷ ಸೇವೆ ಸಲ್ಲಿಸಿ ಮತ್ತೆ ಉರಿಗೆ ನಿಯೋಜನೆಗೊಂಡರು. ಅಲ್ಲಿ ಮೂರು ವರ್ಷಗಳ ಸೇವೆ. ಮದ್ರಾಸ್‌ ರೆಜಿಮೆಂಟ್‌ನ ಸಿಪಾಯಿಯಾಗಿರುವ ಪೂರ್ಣೇಶ್‌ ಈಗ ಅಸ್ಸಾಂನ ಸಿಲ್ಚಾರ್‌ನಲ್ಲಿ ಕರ್ತವ್ಯದಲ್ಲಿದ್ದಾರೆ.

ಮಗನ ಬಗ್ಗೆ ಗೌರವ

ಮಗ ಸೈನಿಕನಾಗಿ ದೇಶ ಸೇವೆ ಮಾಡುತ್ತಿರುವುದರ ಬಗ್ಗೆ ಹೆಮ್ಮೆ ಇದೆ. ಬಾಲ್ಯದಿಂದಲೂ ಆತನಲ್ಲಿ ಸೈನ್ಯದ ಕುರಿತು ತುಡಿತವಿತ್ತು. ಮಗ ಸೈನಿಕ ಎನ್ನಲು ನಮಗೂ ಹೆಮ್ಮೆ ಆಗುತ್ತಿದೆ.

-ಸೇವಕುಮಾರ್‌ ನಾರ್ಕೋಡು, ಪೂರ್ಣೇಶ್‌ ತಂದೆ

-ಬಾಲಕೃಷ್ಣ ಭೀಮಗುಳಿ

Advertisement

Udayavani is now on Telegram. Click here to join our channel and stay updated with the latest news.

Next