ಹೊಳೆಗೆ ಕಟ್ಟ ಕಟ್ಟಿ, ಯಥೇತ್ಛವಾಗಿ ನೀರು ಸಂಗ್ರಹಿಸಿದೆ.
Advertisement
ಕಾಪೆಜಾಲು ಕಟ್ಟಕುದ್ಮಾರು, ಕಾಯಿಮಣ, ಚಾರ್ವಾಕ ಗ್ರಾಮಗಳ ಮೂಲಕ ಬೈತ್ತಡ್ಕ ಹೊಳೆ ಹರಿಯುತ್ತಿದೆ. ಕುದ್ಮಾರು ಹಾಗೂ ಚಾರ್ವಾಕ ಗ್ರಾಮದ ಗಡಿ ಭಾಗ ಕಾಪೆಜಾಲು ಎಂಬಲ್ಲಿ ಈ ಹೊಳೆಗೆ ಅಡ್ಡಲಾಗಿ ಬೃಹತ್ ಕಟ್ಟವೊಂದನ್ನು ಊರವರೇ ನಿರ್ಮಿಸಿ, ಕುಮಾರಧಾರಾ ನದಿಗೆ ಸೇರುವ ನೀರನ್ನು ತಡೆಹಿಡಿದು ಭೂಮಿಯಲ್ಲಿ ಇಂಗುವಂತೆ ಮಾಡಿದ್ದಾರೆ. 15 ಮೀ. ಅಗಲದಲ್ಲಿರುವ ಈ ಹೊಳೆಗೆ 5 ಮೀಟರ್ ಎತ್ತರದ ಮಣ್ಣಿನ ಕಟ್ಟ ರಚಿಸಿ ನೀರಾವರಿ ಇಲಾಖೆಗೂ ಮಾರ್ಗದರ್ಶನವಾಗುವ ರೀತಿಯಲ್ಲಿ ಕೆಲಸ ನಿರ್ವಹಿಸಿದ್ದಾರೆ. ಹೊಳೆಯ ಮರಳಲ್ಲಿ ಮಣ್ಣಿನ ಕಟ್ಟ ನಿರ್ಮಿಸುವುದು ಕಷ್ಟ ಎಂಬುದನ್ನರಿತು, ಬೇಸಿಗೆಯಲ್ಲೇ ಕಟ್ಟ ನಿರ್ಮಾಣ ಮಾಡುವ ಸ್ಥಳದ ಮರಳು ತೆಗೆದು ಪಾಯ ನಿರ್ಮಿಸಲಾಗಿದೆ. ಆ ಪಾಯಕ್ಕೆ ಹೊರಗಡೆಯಿಂದ ಮಣ್ಣು ತಂದು ತುಂಬಿಸಲಾಗಿದೆ. ನವೆಂಬರ್ ತಿಂಗಳಲ್ಲಿ ನೀರಿನ ಹರಿವು ಕಡಿಮೆಯಾಗುತ್ತಿದ್ದಂತೆ ಜೆಸಿಬಿ ಬಳಸಿ ಟಿಪ್ಪರ್‌ನಲ್ಲಿ ಮಣ್ಣು ತಂದು ಬೃಹತ್ ಕಟ್ಟ ನಿರ್ಮಿಸಲಾಗಿದ್ದು, ಇದಕ್ಕಾಗಿ ಅಂದಾಜು 30 ಸಾವಿರ ರೂ. ವೆಚ್ಚ ತಗಲಿದೆ.
ಹೊಳೆಗೆ ಅಡ್ಡಲಾಗಿ ಕಟ್ಟ ಮಾಡಿದಲ್ಲಿ ನೀರು ಇಂಗಿಸುವುದರೊಂದಿಗೆ ಭೂಮಿಯ ಮೇಲ್ಭಾಗವನ್ನು ತಂಪಾಗಿರಿಸಬಹುದು. ಜಲ ಸಂರಕ್ಷಣೆಗೆ ಇದೊಂದು ಸೂಕ್ತ ಉಪಾಯವೆಂಬುದನ್ನು ಅರಿತು ಒಟ್ಟೆಂಡ ಸುಂದರ ಪೂಜಾರಿ ಅವರು ಸ್ಥಳೀಯ ಆಪ್ತರಲ್ಲಿ ಚರ್ಚಿಸಿದರು. ತಮ್ಮ ಯೋಚನೆ ಕಾರ್ಯಗತಗೊಂಡು ಯೋಜನೆಯಾಯಿತು. ಸ್ಥಳೀಯರೆಲ್ಲರೂ ಕೆಲಸದಲ್ಲಿ ತೊಡಗಿಸಿಕೊಂಡರು. ಆರ್ಥಿಕವಾಗಿ ಶಕ್ತರಲ್ಲದಿದ್ದರೂ ತಮ್ಮ ಕೈಲಾದ ಸೇವೆ ಮಾಡಿದರು. ಡೊಂಬಯ್ಯ ನಲಿಕೆ ಕಾಪೆಜಾಲು, ಸುಬ್ಬ ಕಾಪೆಜಾಲು, ಸುರೇಶ ಕಾಪೆಜಾಲು, ಕರಿಯಪ್ಪ, ಇಬ್ರಾಹಿಂ ಕಾಪೆಜಾಲು, ಮಹಮ್ಮದ್ ಕಾಪೆಜಾಲು, ಮಾಯಿಲ, ಲೋಕಯ್ಯ, ಮನೋಜ್ ಕುಂಬಾರ, ಬಾಬು ಕುಂಬಾರ ಕೆಳಗಿನಕೇರಿ, ರಾಧಾಕೃಷ್ಣ ಕೆಳಗಿನಕೇರಿ, ಜನಾರ್ದನ ಕೆಳಗಿನಕೇರಿ ಮೊದಲಾದವರು ಕೈಜೋಡಿಸಿದರು. ಮೋನಪ್ಪ ಉಳವ, ಆಲಿ ಕುಂಞಿ, ವಸಂತ ಬಿ.ಆರ್., ಪ್ರವೀಣ್ ಕುಂಟ್ಯಾನ, ಪೂವಪ್ಪ ಅಂಗಡಿ, ವಿಶ್ವನಾಥ ಉಳವ, ಶೇಷಪ್ಪ ಕೊಪ್ಪ ಧನ ಸಹಾಯ ನೀಡಿ ಸಹಕರಿಸಿದವರು. ಜಾಸ್ತಿ ನೀರು ಹೊರಕ್ಕೆ
ನೀರು ಜಾಸ್ತಿಯಾಗಿ ಮಣ್ಣಿನ ಕಟ್ಟಕ್ಕೆ ಅಪಾಯ ಆಗದಿರಲಿ ಎಂದು ಪ್ರತ್ಯೇಕವಾಗಿ ಒಂದು ತೋಡು (ಬದು) ನಿರ್ಮಿಸಲಾಗಿದೆ. ಹೆಚ್ಚುವರಿ ನೀರನ್ನು ಅದರ ಮೂಲಕ ಹೊರ ಹಾಕಲಾಗುತ್ತಿದೆ. ನೀರಾವರಿ ಯೋಜನೆಗಳಿಗೆ ಸಾವಿರಾರು ಕೋಟಿ ರೂ. ವ್ಯಯ ಮಾಡುವ ಸರಕಾರ ಇಂತಹ ಕಾರ್ಯಕ್ಕೆ ನೆರವು ನೀಡಬೇಕು. ಅಂದಾಗ ಮಣ್ಣಿನ ಕಟ್ಟದ ಬದಲು ಕಾಂಕ್ರೀಟ್ ಕಟ್ಟ ಅಥವಾ ಕಿಂಡಿ ಅಣೆಕಟ್ಟು ನಿರ್ಮಿಸಿ, ಶಾಶ್ವತವಾಗಿ ನೀರು ನಿಲ್ಲುವಂತೆ ಮಾಡಲು ಸಾಧ್ಯವಿದೆ. ಅಕ್ಟೋಬರ್ ತಿಂಗಳಿನಿಂದ ಫೆಬ್ರವರಿವರೆಗೆ ನೀರಿನ ಬವಣೆ ನಿವಾರಿಸಬಹುದು ಎಂದು ಫಲಾನುಭವಿಗಳು ಹೇಳಿದ್ದಾರೆ.
Related Articles
ಕಟ್ಟ ನಿರ್ಮಾಣದೊಂದಿಗೆ ಕಾಪೆಜಾಲು ಎಂಬಲ್ಲಿಂದ ಮಾರ್ಕಾಜೆ ತನಕ 3 ಕಿ.ಮೀ. ದೂರದ ವರೆಗೆ 4-5 ಮೀಟರ್ ಎತ್ತರದಲ್ಲಿ ಹೊಳೆ ನೀರು ನಿಂತಿದೆ. ಹೊಳೆ ಸುತ್ತಮುತ್ತಲಿನ ಕೆರೆ, ಬಾವಿಗಳಲ್ಲಿ ನೀರಿನ ಮಟ್ಟ ವೃದ್ಧಿಸಿದೆ. ಹೊಳೆ ಸಮೀಪದ ತೆಂಗು, ಅಡಿಕೆ ತೋಟ ಮತ್ತು ಗದ್ದೆಗಳಿಗೆ ಇಲ್ಲಿಂದ ನೀರು ಪೂರೈಸಲಾಗುತ್ತಿದೆ. ಕುಡಿಯುವ ನೀರಿಗೆ ತ್ರಾಸಪಡುವ ಈ ಭಾಗದ ಜನರು ಇದೇ ನೀರನ್ನು ಬಳಸುತ್ತಿದ್ದಾರೆ. ಹೊಳೆಯ ಒಂದು ಭಾಗದ ಕುದ್ಮಾರು, ಕಾಯಿಮಣ ಗ್ರಾಮದ ಹಾಗೂ ಇನ್ನೊಂದು ಭಾಗದಲ್ಲಿರುವ ಚಾರ್ವಾಕ ಗ್ರಾಮದ ನೂರಾರು ಕುಟುಂಬಗಳಿಗೆ ಅನುಕೂಲವಾಗಿದೆ.
Advertisement
ಚಿಕ್ಕಪ್ಪನೇ ಪ್ರೇರಣೆನನ್ನ ಚಿಕ್ಕಪ್ಪ ಅಣ್ಣಿ ಪೂಜಾರಿ ಅವರು ನಮ್ಮ ಮನೆ ಸಮೀಪದ ಹೊಳೆಗೆ ಕಟ್ಟ ನಿರ್ಮಿಸಿ, ಗದ್ದೆಗೆ ನೀರು ಹೋಗುವಂತೆ ಮಾಡಿದ್ದರು. ಇದನ್ನು ಏಕೆ ಮುಂದುವರಿಸಬಾರದು ಎಂಬ ಯೋಚನೆ ಹೊಳೆದು ಹೊಳೆಗೆ ಕಟ್ಟ ಕಟ್ಟಲು ಮುಂದಾಗಿದ್ದೇವೆ. ಜಲ ಸಂರಕ್ಷಣೆ ಕುರಿತು ನಿಜವಾದ ಕಾಳಜಿಯಿದ್ದಲ್ಲಿ ಇಂತಹ ಕಾರ್ಯಗಳನ್ನು ಮಾಡಬಹುದು. ನಮ್ಮ ಈ ಸಣ್ಣ ಪ್ರಯತ್ನದಿಂದ ಯುವಕರು ಪ್ರೇರಣೆಗೊಂಡು ಜೀವಜಲ ಉಳಿಸುವ ಕಾರ್ಯ ಮಾಡಲಿ ಎಂಬುದೇ ನಮ್ಮ
ಆಶಯ.
– ಸುಂದರ ಪೂಜಾರಿ, ಒಟ್ಟೆಂಡ ಪ್ರಾಯೋಗಿಕ ಪ್ರಯತ್ನ
ಇದೊಂದು ಪ್ರಾಯೋಗಿಕ ಪ್ರಯತ್ನ. ಕಟ್ಟ ನಿರ್ಮಾಣಗೊಂಡು ಸ್ಥಳೀಯರಿಗೆ ಸಾಕಷ್ಟು ಪ್ರಯೋಜನವಾಗಿದೆ. ಅನೇಕರು
ಆರ್ಥಿಕ ಸಹಾಯ ನೀಡಿ ನಮ್ಮನ್ನು ಪ್ರೋತ್ಸಾಹಿಸಿದ್ದಾರೆ. ಕಾಂಕ್ರೀಟ್ ಕಟ್ಟ ನಿರ್ಮಾಣವಾಗುತ್ತಿದ್ದಲ್ಲಿ ಶಾಶ್ವತವಾದ
ಯೋಜನೆಯಾಗಿರುತ್ತಿತ್ತು. ಸರಕಾರ ಹೊಳೆಗಳಿಗೆ ಕಿಂಡಿ ಅಣೆಕಟ್ಟು ನಿರ್ಮಾಣ ಮಾಡಲು ಹಣ ಒದಗಿಸಿಕೊಟ್ಟು
ನೀರಿನ ರಕ್ಷಣೆ ಮಾಡಲು ಸಹಕರಿಸಲಿ.
– ಡೊಂಬಯ್ಯ, ಕಾಪೆಜಾಲು ಪ್ರವೀಣ ಚೆನ್ನಾವರ