Advertisement

BJP: ನೂರು ದಿನದಲ್ಲಿ ದಿಕ್ಕು ತಪ್ಪಿದ ಕಾಂಗ್ರೆಸ್‌ ಸರಕಾರದ ಆಡಳಿತ

11:11 PM Aug 29, 2023 | Team Udayavani |

ಬೆಂಗಳೂರು: ನೂರು ದಿನ ಪೂರೈಸಿದ ಸಂಭ್ರಮದಲ್ಲಿರುವ ಸರಕಾರ, ಗೃಹಲಕ್ಷ್ಮಿ ಯೋಜನೆಯ ಜಾರಿಗೆ ಸಕಲ ಸಿದ್ಧತೆ ಮಾಡಿಕೊಂಡಿದೆ. ಇದರ ಬೆನ್ನಲ್ಲೇ ಕಾಂಗ್ರೆಸ್‌ ಆಡಳಿತದ ವಿರುದ್ಧ ಬಿಜೆಪಿ ನಾಯಕರು ದೋಷಾರೋಪ ಪಟ್ಟಿ ಬಿಡುಗಡೆ ಮಾಡಿದ್ದಾರೆ.

Advertisement

ಮಂಗಳವಾರ ಬೆಂಗಳೂರಿನಲ್ಲಿ ಜಂಟಿ ಸುದ್ದಿಗೋಷ್ಠಿ ನಡೆಸಿದ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ ಕುಮಾರ್‌ ಕಟೀಲು ಹಾಗೂ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ, “ಕೈ ಕೊಟ್ಟ ಯೋಜನೆಗಳು; ಹಳಿ ತಪ್ಪಿದ ಆಡಳಿತ” ಎಂಬ 50 ಪುಟಗಳ ಹೊತ್ತಗೆ ಬಿಡುಗಡೆ ಮಾಡಿದರಲ್ಲದೆ, ನೂರು ದಿನದಲ್ಲಿ ಈ ಸರಕಾರದ ಆಡಳಿತ ದಿಕ್ಕು ತಪ್ಪಿದೆ ಎಂದು ವಿಶ್ಲೇಷಿಸಿದರು.

ಚುನಾವಣ ಪೂರ್ವದಲ್ಲಿ ಘೋಷಿಸಿದ್ದ 5 ಗ್ಯಾರಂಟಿಗಳನ್ನು ಸರಿಯಾಗಿ ಜಾರಿಗೆ ತಾರದೆ ಕೊಟ್ಟ ಮಾತಿಗೆ ತಪ್ಪಿ ನಡೆದಿರುವ ಸರಕಾರ, ಗ್ಯಾರಂಟಿಗಳನ್ನು ಜಾರಿಗೊಳಿಸುವುದರಲ್ಲೇ ಮುಳುಗಿ ಅಭಿವೃದ್ಧಿಗೆ ಹಿನ್ನಡೆಯುಂಟು ಮಾಡಿದೆ. ರೈತ ವಿರೋಧಿ ನೀತಿಗಳನ್ನು ಅನುಸರಿಸುತ್ತಿದೆ. ಕಾನೂನು ಸುವ್ಯವಸ್ಥೆ ಹದಗೆಟ್ಟಿದ್ದು, ಮಾಧ್ಯಮಗಳನ್ನು ಬೆದರಿಸುವ ದಮನಕಾರಿ ಆಡಳಿತ ನೀಡುತ್ತಿದೆ. ಹೂಡಿಕೆದಾರರು ರಾಜ್ಯಕ್ಕೆ ಬರಲು ಹಿಂಜರಿಯುತ್ತಿದ್ದಾರೆ. ಈ ಸರಕಾರದಲ್ಲಿ ವರ್ಗಾವಣೆ ಸುಗ್ಗಿ ನಡೆಯುತ್ತಿದೆ. ಬರಗಾಲ ಬಂದರೂ, ವಿದ್ಯುತ್‌ ಕೊರತೆ ಎದುರಾಗಿದ್ದರೂ, ಕಾವೇರಿ ವಿಚಾರವನ್ನು ವಿವಾದ ಆಗುವವರೆಗೆ ಎಚ್ಚರವನ್ನೇ ವಹಿಸಲಿಲ್ಲ ಎಂದು ಆರೋಪಿಸಿದರು.

ಜನರ ನಂಬಿಕೆಗೆ ದ್ರೋಹ: ನಳಿನ್‌
ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ ಕುಮಾರ್‌ ಕಟೀಲು ಮಾತನಾಡಿ, ಸಿದ್ದರಾಮಯ್ಯ ನೇತೃತ್ವದ ಸರಕಾರ ಅಧಿಕಾರಕ್ಕೆ ಬಂದ ಬಳಿಕ 100 ದಿನಗಳಲ್ಲಿ ನೂರಾರು ತಪ್ಪುಗಳನ್ನು ಮಾಡಿದೆ. ಗ್ಯಾರಂಟಿ ಯೋಜನೆಗಳಿಗೆ ಮಾನದಂಡಗಳನ್ನು ವಿಧಿಸಿ ಕೊಟ್ಟ ಮಾತು ತಪ್ಪಿದೆ ಎಂದರು.

ಇಬ್ಬರು ಸಚಿವರ ವಿರುದ್ಧ ಭ್ರಷ್ಟಾಚಾರದ ಆರೋಪ ಬಂದಾಗ ಅವರ ರಾಜೀನಾಮೆ ಪಡೆಯುವುದರಲ್ಲೂ ವಿಫ‌ಲವಾಗಿದೆ. ನಮ್ಮ ಆಡಳಿತ ಇದ್ಧಾಗ, ಯಡಿಯೂರಪ್ಪ, ಬೊಮ್ಮಾಯಿಯವರು ಮುಖ್ಯಮಂತ್ರಿ ಆಗಿದ್ಧಾಗ ಗರಿಷ್ಠ ಬಂಡವಾಳ ಹೂಡಿಕೆ ಬರುತ್ತಿತ್ತು. ಇವತ್ತು ವಿದ್ಯುತ್‌ ಅಭಾವ, ಅತೀಹೆಚ್ಚು ದರದಿಂದ ಹೂಡಿಕೆದಾರರು ವಾಪಸ್‌ ಹೋಗುತ್ತಿದ್ಧಾರೆ. ಒಂದೆಡೆ ವಿದ್ಯುತ್‌ ಉಚಿತವೆಂದು ಘೋಷಿಸಿ ಅಘೋಷಿತ ವಿದ್ಯುತ್‌ ಕಡಿತ ಮಾಡುತ್ತಿದ್ಧಾರೆ. ರೈತ ಸಮ್ಮಾನ್‌ ಯೋಜನೆಯಡಿ ಕೇಂದ್ರದ 6 ಸಾವಿರ ರೂ. ಜತೆಗೆ ಯಡಿಯೂರಪ್ಪ-ಬೊಮ್ಮಾಯಿ ಸರಕಾರಗಳು 4 ಸಾವಿರ ನೀಡುತ್ತಿದ್ದವು. ಅದನ್ನು ಈ ಸರಕಾರ ರದ್ದುಪಡಿಸಿದೆ. ಸಿಎಂ ಕಚೇರಿ ಭ್ರಷ್ಟಾಚಾರದ ಬಗ್ಗೆ ಅವರ ಶಾಸಕರೇ ಹೇಳುತ್ತಿ¨ªಾರೆ ಎಂದರು.

Advertisement

ದಿಕ್ಕು ತಪ್ಪಿದ ಆಡಳಿತ
ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಮಾತನಾಡಿ, ಈ ಸರಕಾರದಲ್ಲಿ ಮುಂದಿನ 5 ವರ್ಷಗಳ ದಿಕ್ಸೂಚಿ ಏನು ಎಂಬುದು ಈ ವೇಳೆಗೆ ಗೊತ್ತಾಗಬೇಕಿತ್ತು. ಕೋವಿಡ್‌ ಕಾಲದಲ್ಲಿ 14 ಸಾವಿರ ಕೋಟಿ ರೂ. ಕೊರತೆ ಇದ್ದದ್ದನ್ನು ನಮ್ಮ ಅವಧಿಯ ಕೊನೆಯ ಬಜೆಟ್‌ ಮಂಡಿಸಿದಾಗ ಉಳಿತಾಯ ಬಜೆಟ್‌ಗೆ ತಂದು ನಿಲ್ಲಿಸಿದ್ದೆವು. ಈ ಸರಕಾರ 8 ಸಾವಿರ ಕೊಟಿ ರೂ. ಸಾಲ ಮತ್ತು 35 ಸಾವಿರ ಕೋಟಿ ರೂ. ತೆರಿಗೆ ಹೆಚ್ಚುವರಿಯಾಗಿ ಹಾಕಿದೆ. 12 ಸಾವಿರ ಕೋಟಿ ರೂ.ಗಳ ಕೊರತೆ ಬಜೆಟ್‌ ಮಂಡಿಸಿದೆ. ಸರಕಾರಿ ನೌಕರರಿಗೆ ವೇತನ ವಿಳಂಬವಾಗುತ್ತಿದೆ. ಇಷ್ಟು ದಿನವಾದರೂ 1 ಕಿ.ಮೀ. ರಸ್ತೆಯನ್ನೂ ಈ ಸರಕಾರ ನಿರ್ಮಿಸಿಲ್ಲ. ಬರಗಾಲ ಬಂದಿದ್ದರೂ ರೈತರಿಗೆ ನೆರವು ನೀಡುತ್ತಿಲ್ಲ. ಬಿತ್ತನೆ ಮಾಡಿ ಕಾಯ್ದುಕೊಂಡಿರುವ ರೈತರಿಗೆ ಸಕಾಲದಲ್ಲಿ ಸಾಲ ಸಿಗುತ್ತಿಲ್ಲ. ವಸೂಲಾತಿ ಮಾತ್ರ ನಡೆಯುತ್ತಿದೆ. ನಾಲ್ಕೂ ದಿಕ್ಕಿನಿಂದ ನೋಡಿದರೆ ಈ ಸರಕಾರ ವಿಫ‌ಲವಾಗಿದೆ, ಗೊಂದಲಗಳಿಂದ ಕೂಡಿದೆ ಎಂದರು.
ಮಾಜಿ ಸಚಿವ ಗೋವಿಂದ ಕಾರಜೋಳ, ರಾಜ್ಯ ಮುಖ್ಯ ವಕ್ತಾರ ಎಂ.ಜಿ. ಮಹೇಶ್‌ ಉಪಸ್ಥಿತರಿದ್ದರು.

ಹರಾಜು ಮೂಲಕ ವರ್ಗಾವಣೆ
ಮುಂಗಾರಿನ ಈ ಅವಧಿಯಲ್ಲಿ ರಾಗಿ, ಭತ್ತ, ಜೋಳದ ಸುಗ್ಗಿ ನಡೆಯಬೇಕಿತ್ತು. ಆದರೆ, ಈ ಸರಕಾರದಲ್ಲಿ ವರ್ಗಾವಣೆಯ ಸುಗ್ಗಿ ಜೋರಾಗಿದೆ. ಕೃಷಿ, ಲೋಕೋಪಯೋಗಿ ಸೇರಿ ಹಲವು ಇಲಾಖೆಗಳಲ್ಲಿ ಭ್ರಷ್ಟಾಚಾರ ಹೆಚ್ಚಾಗಿದೆ. ಇದಕ್ಕಾಗಿ ಮಂತ್ರಿಗಳ ಮಧ್ಯೆ ಪೈಪೋಟಿಯೂ ಇದೆ. ಬೆಂಗಳೂರು ಗ್ರಾಮಾಂತರ ಡಿಸಿ, ಎಸಿ ಹುದ್ದೆಗಳು ಹರಾಜಿನ ಮೂಲಕ ವರ್ಗಾವಣೆ ಆಗುತ್ತಿದೆ. ಎಸಿ ಹುದ್ದೆಗೆ 13.5 ಕೋಟಿ ರೂ. ನಿಗದಿಯಾಗಿದೆಯಂತೆ. ಇವರ ಭ್ರಷ್ಟಾಚಾರದ ವಿರುದ್ಧ ರಾಜ್ಯಪಾಲರಿಗೆ ದೂರು ಕೊಟ್ಟವರು, ಬಿ.ಆರ್‌. ಪಾಟೀಲರು ಬರೆದ ಪತ್ರವನ್ನು ಜನರ ಮುಂದಿಟ್ಟ ಮಾಧ್ಯಮದವರನ್ನೇ ತನಿಖೆ ಮಾಡುತ್ತಿದೆ ಎಂದು ಬಸವರಾಜ ಬೊಮ್ಮಾಯಿ ಆಕ್ರೋಶ ವ್ಯಕ್ತಪಡಿಸಿದರು.

ಕೈ ಕೊಟ್ಟ ಯೋಜನೆಗಳು; ಹಳಿ ತಪ್ಪಿದ ಆಡಳಿತ…
ಕಿಸಾನ್‌ ಸಮ್ಮಾನ್‌, ರೈತ ವಿದ್ಯಾನಿಧಿಯಂತಹ ಯೋಜನೆಗಳನ್ನು ನಿಲ್ಲಿಸಿದೆ.
 ದಲಿತ ಮಕ್ಕಳ ಹಾಸ್ಟೆಲ್‌ ನಿರ್ಮಾಣ ಇತ್ಯಾದಿಗೆ ಕೊಟ್ಟಿದ್ದ ಹಣ ಕಿತ್ತುಕೊಂಡಿದೆ
 ಎಸ್‌ಸಿಎಸ್‌ಪಿ, ಎಸ್‌ಟಿಪಿ ಯೋಜನೆಯ 11 ಸಾವಿರ ಕೋಟಿ ರೂ.ಗಳನ್ನು ಗ್ಯಾರಂಟಿಗಾಗಿ ಖರ್ಚು ಮಾಡಲಾಗುತ್ತಿದೆ
 ಷರತ್ತು ವಿಧಿಸಿ ಗ್ಯಾರಂಟಿಗಳನ್ನು ಸರಿಯಾಗಿ ಜಾರಿ ಮಾಡದೆ ಕೊಟ್ಟ ಮಾತಿಗೆ ತಪ್ಪಿ ನಡೆಯುತ್ತಿರುವ ಸರಕಾರ
 ಇಬ್ಬರ ಸಚಿವರ ವಿರುದ್ಧ ಭ್ರಷ್ಟಾಚಾರದ ಆರೋಪ ಕೇಳಿಬಂದರೂ ಯಾವುದೇ ಕ್ರಮ ಕೈಗೊಳ್ಳಲಿಲ್ಲ
 ಸಾಮಾಜಿಕ ಜಾಲತಾಣದಲ್ಲಿ ಸರಕಾರವನ್ನು ಪ್ರಶ್ನಿಸಿದವರ ಮೇಲೆಯೇ ಕೇಸು, ಮಾಧ್ಯಮಗಳ ಮೇಲೆ ದಮನಕಾರಿ ನೀತಿ ಅನುಸರಣೆ
 ವರ್ಗಾವಣೆಯ ಸುಗ್ಗಿ, ನೀರು, ವಿದ್ಯುತ್‌ಗೆ ಬರ, ಸಾಲು-ಸಾಲು ರೈತರ ಆತ್ಮಹತ್ಯೆ, ಕಲುಷಿತ ನೀರು ಸೇವನೆಯಿಂದ ಪ್ರಾಣ ಕಳೆದುಕೊಂಡ ಅಮಾಯಕರು
 ಕಾವೇರಿ ಜಲವಿವಾದ ನಿರ್ವಹಣೆಯಲ್ಲಿ ವಿಫ‌ಲ, ದಿಕ್ಕು ತಪ್ಪಿದ ಆಡಳಿತದಿಂದ ಆರ್ಥಿಕ ಅಭಿವೃದ್ಧಿ ಕುಸಿತ
 ಜೈನಮುನಿ ಹತ್ಯೆ, ಹಿಂದು ಕಾರ್ಯಕರ್ತರ ಹತ್ಯೆ, ದ್ವೇಷದ ಆಡಳಿತ, ಮಹಿಳಾ ಶೌಚಾಲಯದಲ್ಲಿ ಕೆಮರಾ ಇಟ್ಟವರಿಗೆ ರಕ್ಷಣೆ
 ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ವೈಫ‌ಲ್ಯ, ರಾಜ್ಯಕ್ಕೆ ಬರಲು ಹೂಡಿಕೆದಾರರ ಹಿಂದೇಟು

Advertisement

Udayavani is now on Telegram. Click here to join our channel and stay updated with the latest news.

Next