ಬೆಂಗಳೂರು: ಕಳೆದ ವಾರ ಬಿಡುಗಡೆಯಾದ ‘ಸೂಜಿದಾರ’ ಚಿತ್ರದಲ್ಲಿ ತಮ್ಮ ಪಾತ್ರವನ್ನು ಸರಿಯಾಗಿ ಬಿಂಬಿಸಿಲ್ಲ, ಅಲ್ಲದೇ ತಮ್ಮ ಜತೆ ಚರ್ಚಿಸದೆ ನಿರ್ದೇಶಕರು ಕಥೆಯನ್ನು ತಿರುಚಿದ್ದಾರೆ ಎನ್ನುವ ನಟಿ ಹರಿಪ್ರಿಯಾ ಆರೋಪಕ್ಕೆ ಸಂಬಂಧಿಸಿದಂತೆ, ಇದೀಗ ಸೂಜಿದಾರ ಚಿತ್ರತಂಡ ಹರಿಪ್ರಿಯಾ ವಿರುದ್ಧ ವಾಣಿಜ್ಯ ಮಂಡಳಿಗೆ ದೂರು ನೀಡಿದೆ.
ಇನ್ನು ದೂರಿನ ಬಗ್ಗೆ ಪ್ರತಿಕ್ರಿಯಿಸಿರುವ ವಾಣಿಜ್ಯ ಮಂಡಳಿ ಪದಾಧಿಕಾರಿ ಭಾ.ಮಾ.ಹರೀಶ್, ‘ಒಂದೆರಡು ದಿನಗಳಲ್ಲಿ ಈ ಬಗ್ಗೆ ಹರಿಪ್ರಿಯಾ ಅವರಿಂದಲೂ ಸ್ಪಷ್ಟನೆ ಪಡೆದು ಮುಂದಿನ ನಿರ್ಧಾರಕ್ಕೆ ಬರಲಾಗುವುದು’ ಎಂದಿದ್ದಾರೆ.
ಹರಿಪ್ರಿಯಾ ವಿರುದ್ಧ ಗುಡುಗಿದ ಸಹನಟಿ: ‘ಸೂಜಿದಾರ’ ಚಿತ್ರದ ಸಹನಟಿ ಚೈತ್ರಾ ಕೂಡ ಹರಿಪ್ರಿಯಾ ವಿರುದ್ಧ ಹರಿಹಾಯ್ದಿದ್ದಾರೆ. ‘ವರ ಮಹಾಲಕ್ಷ್ಮೀ ಹಬ್ಬದ ವೇಳೆ ಹರಿಪ್ರಿಯಾ ಅವರಿದ್ದ ಚಿತ್ರದ ಮೊದಲ ಪೋಸ್ಟರ್ ಬಿಡುಗಡೆ ಮಾಡಿದಾಗ ಸಾಕಷ್ಟು ಸದ್ದು ಮಾಡಿತ್ತು. ಬಳಿಕ ಇಡೀ ಚಿತ್ರತಂಡದ ಪಾತ್ರಧಾರಿಗಳಿರೋ ಹೊಸ ಪೋಸ್ಟರ್ ರಿಲೀಸ್ ಮಾಡಲಾಯಿತು. ಈ ವೇಳೆ ಹರಿಪ್ರಿಯಾ ತಾಯಿಗೆ ಸ್ವಲ್ಪ ಇರಿಸುಮುರಿಸಾದ ಕಾರಣ ನನ್ನ ಮಗಳ ಸಮನಾಗಿ ನಿಲ್ಲೋಕೆ ಅವರೆಲ್ಲ ಯಾರು ಅನ್ನೋ ಮಾತುಗಳು ಕೇಳಿ ಬಂದಿದ್ದವು. ಅವರಿಗೆ ಪೋಸ್ಟರ್‌ನಲ್ಲಿ ಹರಿಪ್ರಿಯಾ ಒಬ್ಬರೇ ಇರಬೇಕೆಂಬ ಆಸೆಯಿತ್ತು. ಆದರೆ ಆಗಿದ್ದೇ ಬೇರೆ. ನಂತರ ನಾನು ಪ್ರಸ್ ಮೀಟ್‌ಗೆ ಬರಬೇಕಾದ್ರೆ ಚೈತ್ರಾ ಯಾವುದೇ ಕಾರಣಕ್ಕೂ ಬರಬಾರದು ಅಂತಾ ದುರಹಂಕಾರದಿಂದ ಮಾತನಾಡಿದ್ದಾರೆ. ಚಿತ್ರ ಬಿಡುಗಡೆ ನಂತರ ಹರಿಪ್ರಿಯಾ ಅವರ ಪಾತ್ರದಷ್ಟೇ ನನ್ನ ಪಾತ್ರಕ್ಕೂ ಮೆಚ್ಚುಗೆ ವ್ಯಕ್ತವಾಗುತ್ತಿದೆ. ನನ್ನ ಮೇಲಿನ ಕೋಪದಿಂದಾಗಿಯೇ ಈ ರೀತಿ ಆರೋಪ ಮಾಡಿದ್ದಾರೆ. ಹೀರೋಯಿನ್ ಆಗಿ ಈ ಥರ ನೆಗಟಿವ್ ಕಮೆಂಟ್ ಮಾಡಿದ್ರೆ ಹೇಗೆ? ಇದರಿಂದಾಗಿ ಇಡೀ ಚಿತ್ರ ಹಾಗೂ ಚಿತ್ರತಂಡಕ್ಕೂ ಭಾರೀ ನಷ್ಟ ಆಗಿದೆ. ಕೂಡಲೇ ಹರಿಪ್ರಿಯಾ ಕ್ಷಮೆ ಕೇಳಿ, ಚಿತ್ರತಂಡಕ್ಕೇ ಆಗಿರುವ ನಷ್ಟವನ್ನು ಭರಿಸಬೇಕಿ,’ ಎಂದು ಆಗ್ರಹಿಸಿದ್ದಾರೆ.
ಗರಂ ಆದ ನಿರ್ದೇಶಕ ಮೌನೇಶ್ ಬಡಿಗೇರ್
Advertisement
‘ಸೂಜಿದಾರ’ ಚಿತ್ರ ತೆರೆಕಂಡ ಮೂರೇ ದಿನಕ್ಕೆ ಇಂಥ ಆರೋಪ ಮಾಡುವುದು ಸರಿಯಲ್ಲ. ಇನ್ನು ಕಥೆಯನ್ನು ತಮಗೆ ಹೇಳದೇ ತಿರುಚಿದ್ದಾರೆ ಎಂಬ ಆರೋಪ ಸುಳ್ಳು. ಅವರು ಹೇಳಿದಂತೆ ಚಿತ್ರದ ಯಾವುದೇ ದೃಶ್ಯಗಳನ್ನೂ ತಿರುಚಿಲ್ಲ. ಈ ಬಗ್ಗೆ ವಿಚಾರಿಸಲು ಹರಿಪ್ರಿಯಾ ಅವರಿಗೆ ಕರೆ ಮಾಡಿದರೂ ಕಾಲ್ ರಿಸೀವ್ ಮಾಡುತ್ತಿಲ್ಲ. ಅಲ್ಲದೇ ಅವರ ಹೇಳಿಕೆಯಿಂದಾಗಿ ಮೂರು ದಿನಗಳಿಂದ ಚಿತ್ರದ ಕಲೆಕ್ಷನ್ ಕೂಡ ಕಡಿಮೆಯಾಗಿದೆ. ಅನಗತ್ಯವಾಗಿ ನಮ್ಮ ಮೇಲೆ ಆರೋಪ ಮಾಡುತ್ತಿದ್ದು, ಇಂತಹ ಹೇಳಿಕೆ ನೀಡಿರುವ ಹರಿಪ್ರಿಯಾ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು’ ಎಂದು ದೂರಿನಲ್ಲಿ ಮನವಿ ಮಾಡಲಾಗಿದೆ.
Related Articles
Advertisement
‘ಸೂಜಿದಾರ’ ಚಿತ್ರಕ್ಕೆ ಸಂಬಂಧಿಸಿದಂತೆ ನಟಿ ಹರಿಪ್ರಿಯಾ ನೀಡಿರುವ ಹೇಳಿಕೆಗೆ ನಿರ್ದೇಶಕ ಮೌನೇಶ್ ಬಡಿಗೇರ್ ಗರಂ ಆಗಿದ್ದಾರೆ. ‘ಚಿತ್ರದ ಶೂಟಿಂಗ್‌ಗೂ ಮೊದಲೇ ಹರಿಪ್ರಿಯಾ ಸೇರಿದಂತೆ ಚಿತ್ರದ ಪ್ರತಿಯೊಬ್ಬ ಕಲಾವಿದರಿಗೂ ಚಿತ್ರದ ಸಂಪೂರ್ಣ ಕಥೆ ಹೇಳಿ, ಸ್ಕ್ರಿಪ್ಟ್ ಕೂಡ ಕೊಡಲಾಗಿತ್ತು. ಆಗ ಎಲ್ಲವೂ ಸರಿಯಾಗಿದೆ ಎಂದಿದ್ದ ಹರಿಪ್ರಿಯಾ, ಈಗ ಇಲ್ಲಸಲ್ಲದ ವಿಷಯಕ್ಕೆ ಅಹಂನಿಂದ ಹೇಳಿಕೆ ನೀಡುತ್ತಿರುವುದು ಸರಿಯಲ್ಲ. ಮೊದಲಿನಿಂದಲೂ ಸಿನಿಮಾ ಪ್ರಮೋಷನ್‌ಗೂ ಸರಿಯಾಗಿ ಬಾರದವರು ಇದೀಗ ಇಡೀ ಚಿತ್ರತಂಡ ಹಾಗೂ ಕಲಾವಿದರಿಗೆ, ನಿರ್ದೇಶಕನಿಗೆ ಅವಮಾನ ಮಾಡುವ ರೀತಿಯಲ್ಲಿ ಅಸಂಬದ್ಧ ಹೇಳಿಕೆ ನೀಡಿದ್ದಾರೆ’ ಎಂದಿರುವ ಮೌನೇಶ್ ಬಡಿಗೇರ್, ‘ನಾವು ಅವರ ಪಾತ್ರ ತಿರುಚಿಲ್ಲ. ಬೇರೆ ಪಾತ್ರಗಳು ಹೈಲೈಟ್ ಆಗಿರೋದನ್ನು ಕಂಡು ಮತ್ಸರದಿಂದ ಈ ರೀತಿ ಮಾತನಾಡುತ್ತಿದ್ದಾರೆ. ಇದರಿಂದಾಗಿ ಕಲೆಕ್ಷನ್ ಡಲ್ ಆಗಿದ್ದು, ನಿರ್ಮಾ ಪಕರಿಗೆ ನಷ್ಟವಾಗುತ್ತಿದೆ’ ಎಂದು ಕಿಡಿಕಾರಿದ್ದಾರೆ.