Advertisement

ನೀರು ಬಳಕೆದಾರರ ಸಹಕಾರಿ ಸಂಘಗಳ ಪುನಶ್ಚೇತನಕ್ಕಿಲ್ಲ  ಕ್ರಮ

10:26 AM May 11, 2017 | |

ಹುಬ್ಬಳ್ಳಿ: ನೀರಿನ ಕೊರತೆ ನೀಗಿಸಲು ಪಾತಾಳಗಂಗೆ ಬಳಕೆ ಬಗ್ಗೆ ಬಿಸಿಯೇರಿದ ಚರ್ಚೆ ನಡೆಯುತ್ತಿದೆ. ಆದರೆ, ಇದ್ದ ನೀರಿನ ಸಂಗ್ರಹ, ಮಿತ ಹಾಗೂ ಸದ್ಬಳಕೆಗೆ ಪೂರಕವಾಗುವ ನೀರು ಬಳಕೆದಾರರ ಸಹಕಾರಿ ಸಂಘಗಳ ಬಗ್ಗೆ ಸರ್ಕಾರ ನಿರ್ಲಕ್ಷ್ಯ ವಹಿಸಿದೆ. ಸಂಘಗಳ ಪುನಾರಚನೆ ಹಾಗೂ ಪುನಶ್ಚೇತನ ಕುರಿತ ತಜ್ಞರ ವರದಿ ಕಳೆದ ಎರಡೂವರೆ ವರ್ಷಗಳಿಂದ ಧೂಳು ತಿನ್ನುತ್ತಿದೆ.

Advertisement

ವಿಶ್ವಬ್ಯಾಂಕ್‌ ಆಕ್ಷೇಪ-ಒತ್ತಡದ ಹಿನ್ನೆಲೆಯಲ್ಲಿ ಎಸ್‌.ಎಂ. ಕೃಷ್ಣ  ನೇತೃತ್ವದ ಸರ್ಕಾರ ಕೃಷಿಗೆ ನೀರಿನ ಸದ್ಬಳಕೆಗೆ ರಾಜ್ಯಾದ್ಯಂತ ನೀರು ಬಳಕೆದಾರರ ಸಂಘಗಳನ್ನು ರಚಿಸಿತ್ತು. ಸಂಘಗಳಿಗೆ ರಾಜಕೀಯ ಸೋಂಕು ತಗುಲಿ ಹಾಗೂ ಆರ್ಥಿಕ ನೆರವು ಕೊರತೆಯಿಂದ ಬಹುತೇಕ ಸಂಘಗಳು ಕಣ್ಣು ಮುಚ್ಚಿದವು. ಅಳಿದುಳಿದ ಸಂಘಗಳು ಇದ್ದೂ ಇಲ್ಲದ ಸ್ಥಿತಿಯಲ್ಲಿವೆ. ಸಂಘಗಳ ಪುನಾರಚನೆ, ಪುನಶ್ಚೇತನ ಕೂಗು ಹೆಚ್ಚುತ್ತಿದೆ.

ದೇಶದಲ್ಲಿ ಸುಮಾರು 1,123 ಬಿಲಿಯನ್‌ ಘನ ಮೀಟರ್‌ನಷ್ಟು ನೀರು ಲಭ್ಯವಿದೆ. ಲಭ್ಯತೆ ನೀರಿನಲ್ಲಿ ಶೇ.70-80ರಷ್ಟು ನೀರು ಕೃಷಿಗೆ ಬಳಕೆಯಾದರೆ, ಶೇ.20ರಷ್ಟು ನೀರು ಮನೆಬಳಕೆ, ವಿದ್ಯುತ್‌, ಉದ್ಯಮ, ಸಾರಿಗೆ ಇತ್ಯಾದಿಗೆ ಬಳಕೆ ಆಗುತ್ತಿದೆ. ಕೃಷಿ ಬಳಕೆ ನೀರಿನಲ್ಲಿ  ಕೇವಲ ಶೇ.30-35ರಷ್ಟು ಮಾತ್ರ ಬೆಳೆಗಳಿಗೆ ತಲುಪುತ್ತಿದ್ದು,  ಶೇ. 70ರಷ್ಟು ನೀರು ಪೋಲಾಗುತ್ತಿದೆ ಎಂಬುದು ಜಲತಜ್ಞರ ಅಭಿಮತ.

ಬೇಕಿದೆ ಸಹಭಾಗಿತ್ವದ ಜಾಗೃತಿ: ರೈತರ ಪಾಲುದಾರಿಕೆ ನೀರಾವರಿ ನಿರ್ವಹಣೆ ಪದ್ಧತಿಯನ್ನು ಮೆಕ್ಸಿಕೋ, ಫಿಲಿಪೈನ್ಸ್‌, ಅಮೆರಿಕ ಇನ್ನಿತರ ಕಡೆಗಳಲ್ಲಿ ಅನುಸರಿಸಲಾಗುತ್ತಿದೆ. 1980ರಿಂದೀಚೆಗೆ ದೇಶದಲ್ಲಿ ರೈತರ ಪಾಲುದಾರಿಕೆ ನೀರಾವರಿ ನಿರ್ವಹಣೆ ಪದ್ಧತಿ ಹೆಚ್ಚು ಪ್ರಚಾರ ಪಡೆದುಕೊಳ್ಳತೊಡಗಿತ್ತು. 1985ರಲ್ಲಿ ರಾಜ್ಯದಲ್ಲೂ ಸಂಘ ಆರಂಭಗೊಂಡಿತ್ತು.

ನೀರಾವರಿ ಯೋಜನೆಗಳಿಗಾಗಿ ಸಾವಿರಾರು ಕೋಟಿ ರೂ.ಗಳ ನೆರವು ನೀಡಲಾಗುತ್ತದೆ. ಆದರೆ ನೀರಿನ ನಿರ್ವಹಣೆ, ಸದ್ಬಳಕೆಗೆ ರೈತರ ಪಾಲುದಾರಿಕೆಗೆ ಇಲ್ಲವಾಗುತ್ತಿದೆ ಎಂಬ ವಿಶ್ವಬ್ಯಾಂಕ್‌ನ ಆಕ್ಷೇಪದಿಂದಾಗಿ ಎಸ್‌.ಎಂ.ಕೃಷ್ಣ  ನೇತೃತ್ವದ ಸರ್ಕಾರದಲ್ಲಿ ಜಲಸಂಪನ್ಮೂಲ ಸಚಿವರಾಗಿದ್ದ ಎಚ್‌.ಕೆ.ಪಾಟೀಲರು, ಕರ್ನಾಟಕ ನೀರಾವರಿ ಕಾಯ್ದೆ 2003ರ ಅಡಿಯಲ್ಲಿ ನೀರು ಬಳಕೆದಾರರ ಸಹಕಾರಿ ಸಂಘಗಳನ್ನು ಸ್ಥಾಪನೆಗೆ ಕ್ರಮ ಕೈಗೊಂಡು, 1960ರ ಕರ್ನಾಟಕ ಸಂಘಗಳ ಸಹಕಾರಿ ಕಾಯ್ದೆಯಡಿ ಸಂಘಗಳನ್ನು ನೋಂದಾಯಿಸಲಾಗಿತ್ತು.

Advertisement

ನೀರು ಬಳಕೆದಾರರ ಸಂಘ, ಆಯಾ ಅಚ್ಚುಕಟ್ಟು ಅಭಿವೃದ್ಧಿ ಪ್ರಾಧಿಕಾರ (ಕಾಡಾ), ಕೆಬಿಜೆಎನ್‌ಎಲ್‌ ಉಸ್ತುವಾರಿ ಜವಾಬ್ದಾರಿ ಇತ್ತು. ನೀರು ಬಳಕೆದಾರ ಸಂಘಕ್ಕೆ ನೀಡುವ ನೀರಿಗೆ ಇಂತಿಷ್ಟು ಹಣ ನಿಗದಿ ಪಡಿಸಲಾಗುತ್ತಿತ್ತು. ರೈತರಿಂದ ಹಣ ಸಂಗ್ರಹಣೆ ಮಾಡಬೇಕಾಗಿತ್ತು. ನೀರು ಸಂಗ್ರಹ, ಸರಬರಾಜು, ವಾರಾಬಂದಿ ಇನ್ನಿತರ ರೀತಿಯಲ್ಲಿ ನೀರು ಹಂಚಿಕೆ, ಕಾಲುವೆಗಳ ಸುಸ್ಥಿತಿ ಇನ್ನಿತರ ಕಾರಣಕ್ಕೆ 11 ಸದಸ್ಯರನ್ನೊಳಗೊಂಡ ಸಂಘದ ನಿರ್ದೇಶಕ ಮಂಡಳಿಗಳನ್ನು ರಚಿಸಲು ಅದರಲ್ಲಿ ಕಡ್ಡಾಯವಾಗಿ ಒಬ್ಬರು ಕಾಲುವೆ ಕೊನೆಯ ಭಾಗದ ರೈತರು, ಪರಿಶಿಷ್ಟ ಜಾತಿ/ಪಂಗಡದ ಒಬ್ಬರು, ಇತರೇ ಹಿಂದುಳಿದ ವರ್ಗ ಹಾಗೂ ಮಹಿಳೆಯರು ತಲಾ ಇಬ್ಬರು ಇರಬೇಕಾಗಿದೆ. ಒಂದು ಸಂಘದಲ್ಲಿ ಸಾಮಾನ್ಯವಾಗಿ 500ರಿಂದ 1,000 ಹೆಕ್ಟೇರ್‌ ನೀರಾವರಿ ಪ್ರದೇಶ ಹೊಂದಿರಬೇಕೆಂದು ಯೋಜಿಸಲಾಗಿತ್ತು.

ಕಾಲುವೆ ದುರಸ್ತಿಗಾಗಿ ಒಂದು ಬಾರಿ ಅನುದಾನ ಅಡಿಯಲ್ಲಿ ಸರ್ಕಾರ ಒಂದು ಸಂಘಕ್ಕೆ 5ಲಕ್ಷ ರೂ.ಗಳನ್ನು ನೀಡಲು ನಿರ್ಧರಿಸಿತ್ತು. ಸಂಘಗಳೇ ದುರಸ್ತಿ ಕಾರ್ಯ ಕೈಗೊಳ್ಳಬಹುದಾಗಿತ್ತು. ಕಾಲುವೆ ಸ್ಥಿತಿಗತಿ ಕುರಿತಾಗಿ ಸಂಘ ಹಾಗೂ ಅಧಿಕಾರಿಗಳ ಜಂಟಿ ಸಮೀಕ್ಷೆ ಕೈಗೊಳ್ಳಬೇಕಾಗಿತ್ತು. ರಾಜ್ಯದಲ್ಲಿ ಯಾದಗಿರಿ ಜಿಲ್ಲೆ ಸುರಪುರ ತಾಲೂಕಿನಲ್ಲಿ ಜಂಟಿ ಸಮೀಕ್ಷೆ ಆಗಿದ್ದು ಬಿಟ್ಟರೆ ಬೇರೆ ಕಡೆ ಆಗಿರಲಿಲ್ಲ. ಇತ್ತೀಚೆಗೆ ಧಾರವಾಡ ಕೃವಿವಿಯ ಡಾ| ಆರ್‌.ಎಸ್‌.ಪೋದ್ದಾರ ಅವರ ಇಚ್ಚಾಶಕ್ತಿಯ ಫ‌ಲವಾಗಿ ಆಲಮಟ್ಟಿ ಎಡದಂಡೆ ನಾಲೆಯಲ್ಲಿ ಜಂಟಿ ಸಮೀಕ್ಷೆ ಆಗಿದೆ.

ಧೂಳು ತಿನ್ನುತ್ತಿದೆ ವರದಿ
ಜಲಸಂಪನ್ಮೂಲ ಸಚಿವ ಎಂ.ಬಿ.ಪಾಟೀಲರು ನೀರಿನ ಸದ್ಬಳಕೆ, ನಿರ್ವಹಣೆ ಹಾಗೂ ಸವಳು-ಜವಳು ತಡೆ ನಿಟ್ಟಿನಲ್ಲಿ ಅಧ್ಯಯನ ನಡೆಸಿ ವರದಿ ನೀಡುವಂತೆ ಎಂ.ಶಿವಸ್ವಾಮಿ ನೇತೃತ್ವದಲ್ಲಿ ಏಳು ಸದಸ್ಯರಿದ್ದ ತಜ್ಞರ ಸಮಿತಿ ರಚನೆ ಮಾಡಿದ್ದರು. ವಿವಿಧ ರಾಜ್ಯಗಳಿಗೆ ಭೇಟಿ ನೀಡಿದ್ದ ತಂಡ ನೀರು ಸಂಗ್ರಹ, ನಿರ್ವಹಣೆ, ಹಂಚಿಕೆ ಕುರಿತಾಗಿ ಅಧ್ಯಯನ ನಡೆಸಿ 2014ರ ಸೆಪ್ಟಂಬರ್‌ನಲ್ಲಿ ವರದಿ ಸಲ್ಲಿಸಿತ್ತು. ಮುಖ್ಯಮಂತ್ರಿ ಹಾಗೂ ಜಲಸಂಪನ್ಮೂಲ ಸಚಿವರು ಆದಷ್ಟು ಶೀಘ್ರ ಕ್ರಮದ ಭರವಸೆ ನೀಡಿದ್ದರೂ ಇಂದಿಗೂ ಯಾವುದೇ ಕ್ರಮ ಆಗಿಲ್ಲ.

– ಅಮರೇಗೌಡ ಗೋನವಾರ

Advertisement

Udayavani is now on Telegram. Click here to join our channel and stay updated with the latest news.

Next