ಬೆಂಗಳೂರು: “ಕರಾವಳಿ ಭಾಗದಲ್ಲಿ ಅಕ್ರಮವಾಗಿ ಗೋ ಸಾಗಣೆ ನಡೆಯುತ್ತಿದ್ದು, ಉಡುಪಿ ಹಾಗೂ ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಹಟ್ಟಿಗೆ ನುಗ್ಗಿ ದನ-ಕರುಗಳನ್ನು ಹಗ್ಗ ಕಡಿದು ಎತ್ತಾಕಿಕೊಂಡು ಹೋಗುವ ಕೃತ್ಯಗಳು ನಡೆಯುತ್ತಿವೆ’ ಎಂದು ಉಡುಪಿ-ಚಿಕ್ಕಮಗಳೂರು ಸಂಸದೆ ಶೋಭಾ ಕರಂದ್ಲಾಜೆ ಆರೋಪಿಸಿದ್ದಾರೆ.
ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, “ರಾಜ್ಯದಲ್ಲಿ ಗೋಹತ್ಯೆ ನಿಷೇಧ ಕಾಯ್ದೆ ಜಾರಿಗೊಳಿಸಬೇಕು. ಗೋ ರಕ್ಷಣೆಗಾಗಿಯೇ ಪ್ರತ್ಯೇಕ ನಿಗಾ ಪಡೆ ರಚಿಸಿ ಸಹಾಯವಾಣಿ ಕೇಂದ್ರ ತೆರೆಯಬೇಕು’ ಎಂದು ಆಗ್ರಹಿಸಿದರು.
ಉಡುಪಿ ಜಿಲ್ಲೆಯ ಬೈಂದೂರಿನಲ್ಲಿ ಎರಡು ಮನೆಯ ಹಟ್ಟಿಗಳಿಗೆ ನುಗ್ಗಿ ದನ-ಕರುಗಳನ್ನು ಹಗ್ಗ ಕಡಿದು ಎತ್ತಾಕಿಕೊಂಡು ಹೋಗಿದ್ದಾರೆ. ಮಂಗಳೂರಿನ ಜೋಕಟ್ಟೆಯಲ್ಲಿ 20 ಹಸುಗಳನ್ನು ಅಕ್ರಮ ಸಾಗಣೆ ಮಾಡುತ್ತಿದ್ದರು. ಪೊಲೀಸರಿಗೆ ದೂರು ಕೊಟ್ಟರೂ ಪಂಚಾಯಿತಿ ಅಧ್ಯಕ್ಷ ಹಾಗೂ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ದನ ಸಾಕಲು ಅನುಮತಿ ಪಡೆಯಲಾಗಿದೆ ಎಂದು ಪತ್ರ ಬರೆದುಕೊಟ್ಟಿದ್ದಾರೆ.
ಅಕ್ರಮ ಗೋವು ಸಾಗಣೆ ಹಾಗೂ ಗೋ ಕಳ್ಳರ ಬೆನ್ನಿಗೆ ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ.ಖಾದರ್ ಅವರೇ ನಿಂತಿದ್ದಾರೆ ಎಂದು ಗಂಭೀರ ಆರೋಪ ಮಾಡಿದರು. ಕರಾವಳಿ ಭಾಗದಲ್ಲಿ ತಲ್ವಾರ್ ಹಿಡಿದು ರಾತ್ರಿ ವೇಳೆ ಹಸುಗಳನ್ನು ಹಟ್ಟಿಗಳಿಂದಲೇ ಕಳ್ಳತನ ಮಾಡಲಾಗುತ್ತಿದೆ.
ಪುತ್ತೂರು, ಬಂಟ್ವಾಳ, ವಿಟ್ಲ, ಬೈಂದೂರು, ಕುಂದಾಪುರದಲ್ಲಿ ಅಕ್ರಮವಾಗಿ ಸಾಗಾಟ ಮಾಡುತ್ತಿದ್ದರೂ ರಾಜ್ಯ ಸರ್ಕಾರ ಮತ್ತು ಜಿಲ್ಲಾಡಳಿತ ಕಣ್ಣು ಮುಚ್ಚಿ ಕುಳಿತಿದೆ. ನಮ್ಮ ಸರ್ಕಾರ ಇದ್ದಾಗ ಗೋ ರಕ್ಷಣೆ ವಿಧೇಯಕ ತರಲು ಯತ್ನಿಸಿದೆವು. ಕಾಂಗ್ರೆಸ್ ವಿರೋಧ ವ್ಯಕ್ತ ಮಾಡಿತು, ರಾಜ್ಯಪಾಲರೂ ವಿಧೇಯಕ ತಿರಸ್ಕರಿಸಿದರು. ಆ ಮೂಲಕ ಆಗ ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯ ಆವರು ರಾಜ್ಯದ ಗೋಸಂತತಿಗೆ ಮಾರಕ ಎಂಬ ಬಿರುದು ಪಡೆದುಕೊಂಡರು ಎಂದು ಆಕ್ರೋಶ ವ್ಯಕ್ತಪಡಿಸಿದರು.
ಮುಖ್ಯಮಂತ್ರಿಯವರ ಗ್ರಾಮ ವಾಸ್ತವ್ಯದಿಂದ ಏನು ಪ್ರಯೋಜನ ? ಸಮಸ್ಯೆ ಇರುವ ಗ್ರಾಮಗಳಿಗೆ ಹೋಗುತ್ತಿಲ್ಲ. ನಿಮಗೆ ಆಡಳಿತ ನಡೆಸಲು ಆಗಲ್ಲ ಎಂದರೆ ಬಿಟ್ಟು ಹೋಗಿ. ದೇವಾಲಯ ಸುತ್ತುವುದು ಬಿಟ್ಟು ಗೋ ರಕ್ಷಣೆಗೆ ಮುಂದಾಗಿ. ಮುಖ್ಯಮಂತ್ರಿ, ಮಂತ್ರಿಯಾದವರು ಅಧಿಕಾರಿಗಳನ್ನು ಬಿಗಿಯಾಗಿಟ್ಟು ಕೆಲಸ ಮಾಡಬೇಕು. ಆದರೆ, ಇವರಿಗೆ ಆಡಳಿತದಲ್ಲಿ ಬಿಗಿಯೇ ಇಲ್ಲ.
-ಶೋಭಾ ಕರಂದ್ಲಾಜೆ, ಸಂಸದೆ