ಭೋಪಾಲ: ಮಧ್ಯಪ್ರದೇಶದ ಕುಗ್ರಾಮ ದೇವಾಸ್‌ನ ಆಶಾರಾಮ್ ಚೌಧರಿ ಪ್ರಥಮ ಪ್ರಯತ್ನದಲ್ಲೇ ಏಮ್ಸ್ ಪ್ರವೇಶ ಪರೀಕ್ಷೆಯಲ್ಲಿ ಉತ್ತೀರ್ಣನಾಗಿದ್ದು, 141ನೇ ರ್‍ಯಾಂಕ್ ಗಳಿಸಿ ದ್ದಾನೆ. ಇದೀಗ ಈತನ ಸಾಧನೆಗೆ ದೇಶಾದ್ಯಂತ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಎಂಬಿಬಿಎಸ್ ಮುಗಿಸಿ ನ್ಯೂರೋಸರ್ಜರಿಯಲ್ಲಿ ಎಂಎಸ್ ಮಾಡುವ ಹಂಬಲವನ್ನು ಆಶಾರಾಮ್ ವ್ಯಕ್ತಪಡಿಸಿದ್ದು, ಈತನ ಶಿಕ್ಷಣ ವೆಚ್ಚನ್ನು ಭರಿಸುವುದಾಗಿ ಮಧ್ಯ ಪ್ರದೇಶ ಸರಕಾರ ಹೇಳಿದೆ. ಆಶಾರಾಮ್ ಸಾಧನೆಗೆ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಕೂಡ ಮೆಚ್ಚುಗೆ ವ್ಯಕ್ತಪಡಿಸಿದ್ದು, ಪ್ರಥಮ ಪ್ರಯತ್ನದಲ್ಲೇ ಏಮ್ಸ್ ಪ್ರವೇಶ ಪರೀಕ್ಷೆ ಪಾಸಾಗಿದ್ದಕ್ಕೆ ಅಭಿನಂದನೆ ಸಲ್ಲಿಸಿ ಪತ್ರ ಬರೆದಿದ್ದಾರೆ. ಇನ್ನು ಮಧ್ಯಪ್ರದೇಶ ಸರಕಾರದ ಪರವಾಗಿ ಆರಂಭಿಕ ನೆರವಿನ ರೂಪದಲ್ಲಿ 25 ಸಾವಿರ ರೂ. ಚೆಕ್ ನೀಡಿದ್ದಾರೆ. ಸರ್ಕಾರಿ ಶಾಲೆಯಲ್ಲೇ ಓದಿದ ಆಶಾರಾಮ್, ಗ್ರಾಮದ ವೈದ್ಯರೇ ಈ ಸಾಧನೆಗೆ ಸ್ಫೂರ್ತಿ ಎಂದಿದ್ದಾರೆ. ಜೋಧ್‌ಪುರದ ಕಾಲೇಜಿನಲ್ಲಿ ಆಶಾರಾಮ್‌ಗೆ ಸೀಟ್ ಸಿಕ್ಕಿದೆ.