ಬೆಂಗಳೂರು: ಬಿಎಂಟಿಸಿ ಬಸ್ ತಗುಲಿದಕ್ಕೆ ಸಿನಿಮೀಯ ಶೈಲಿಯಲ್ಲಿ ಆ ಬಸ್ ಹಿಂಬಾಲಿಸಿ ಚಾಲಕನ ಮೇಲೆ ಹಲ್ಲೆ ಮಾಡಿದ ಬೈಕ್ ಸವಾರನನ್ನು ಪ್ರಯಾಣಿಕರ ಸಹಾಯದಿಂದ ಹಿಡಿದು ಬ್ಯಾಟರಾಯಪುರ ಪೊಲೀಸರಿಗೆ ಒಪ್ಪಿಸಿರುವ ಘಟನೆ ನಡೆದಿದೆ.
ಮಲ್ಲೇಶ್ವರ ನಿವಾಸಿ ಕಮಲ್ ಸಿಂಗ್(36) ಬಂಧಿತ ಸವಾರ. ನ.10ರಂದು ರಾತ್ರಿ ಸುಮಾರು 8 ಗಂಟೆಗೆ ಹಳೇಗುಡ್ಡದಹಳ್ಳಿ ಸಿಗ್ನಲ್ ಬಳಿ ಬಿಎಂಟಿಸಿ ಘಟಕ-16ರ ಬಸ್ (ಕೆಎ 57 ಎಫ್ 4034) ಹತ್ತಿ ಚಾಲಕ ಮುರ್ತುಜಾ ಇಮಾಮ್ ಸಾಬ್ ಮೇಲೆ ಏಕಾಏಕಿ ಹಲ್ಲೆ ಮಾಡಿದ್ದ. ಈ ಸಂಬಂಧ ಚಾಲಕ ಮುರ್ತಾಜಾ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದರು.
ಏನಿದು ಘಟನೆ?
ಬಿಎಂಟಿಸಿ ಘಟಕ-16ರ ಚಾಲಕ ಮುರ್ತುಜಾ ಇಮಾಮ್ ಸಾಬ್ ಭಾನುವಾರ ಜಯನಗರ ಟಿಟಿಎಂಸಿ ಬಸ್ ನಿಲ್ದಾಣ ಟು ವಿಜಯನಗರ ಟಿಟಿಎಂಸಿ ಮಾರ್ಗದ ಬಸ್ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು. ಮಲ್ಲೇಶ್ವರ ಕಡೆಯಿಂದ ಮೈಸೂರು ರಸ್ತೆ ಕಡೆಗೆ ಹೋಗುವಾಗ ಮಲ್ಲೇಶ್ವರ ರಸ್ತೆಯಲ್ಲಿ ಕಮಲ್ ಸಿಂಗ್ ಬರುತ್ತಿದ್ದ ದ್ವಿಚಕ್ರ ವಾಹನಕ್ಕೆ ಬಿಎಂಟಿಸಿ ಬಸ್ ತಗುಲಿದೆ ಎಂದು ಹೇಳಲಾಗಿದೆ.
ಅದರಿಂದ ಕೋಪಗೊಂಡ ಆರೋಪಿ, ಮಲ್ಲೇಶ್ವರದಿಂದ ಬಸ್ ಅನ್ನು ಸಿನಿಮೀಯ ರೀತಿಯಲ್ಲಿ ಹಿಂಬಾಲಿಸಿದ್ದಾನೆ. ಹಳೇ ಗುಡ್ಡದಹಳ್ಳಿ ಸಿಗ್ನಲ್ನಲ್ಲಿ ಬಸ್ ನಿಂತ ಕೂಡಲೇ ದ್ವಿಚಕ್ರ ವಾಹನ ರಸ್ತೆ ಬದಿ ನಿಲ್ಲಿಸಿ ಬಸ್ ಹತ್ತಿದ ಕಮಲ್ ಸಿಂಗ್, ಏಕಾಏಕಿ ಚಾಲಕ ಮುರ್ತುಜಾ ಇಮಾಮ್ ಸಾಬ್ಗ ಅವಾಚ್ಯ ಶಬ್ಧಗಳಿಂದ ನಿಂದಿಸಿ, ಹಲ್ಲೆ ಮಾಡಿದ್ದಾನೆ. ಕೂಡಲೇ ಎಚ್ಚೆತ್ತ ಬಸ್ ಚಾಲಕ ಮುರ್ತುಜಾ, ಎಲ್ಲಾ ಬಾಗಿಲುಗಳನ್ನು ಮುಚ್ಚಿದ್ದಾರೆ. ಬಳಿಕ ಪ್ರಯಾಣಿಕರ ಸಹಾಯದಿಂದ ಕಮಲ್ ಸಿಂಗ್ ಅನ್ನು ಹಿಡಿದು ಬ್ಯಾಟರಾಯನಪುರ ಪೊಲೀಸರಿಗೆ ಒಪ್ಪಿಸಲಾಗಿದೆ.
ಹಲ್ಲೆಯಿಂದ ಗಾಯಗೊಂಡಿದ್ದ ಬಸ್ ಚಾಲಕ ಮುರ್ತುಜಾ ಇಮಾಮ್ ಸಾಬ್ನನ್ನು ಬಿಎಂಟಿಸಿಯ ಸಾರಥಿ ವಾಹನದಲ್ಲಿ ವಿಕ್ಟೋರಿಯಾ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಪಡೆದುಕೊಂಡು ಬಿಡುಗಡೆಯಾಗಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದರು. ಈ ಸಂಬಂಧ ಬ್ಯಾಟರಾಯನಪುರ ಠಾಣೆ ಪೊಲೀಸರು ಪ್ರಕರಣ ದಾಖಲಾಗಿದೆ.