ಬೆಂಗಳೂರು: ವಿದೇಶಗಳಿಂದ ಅಕ್ರಮವಾಗಿ ಆಹಾರ ಪದಾರ್ಥಗಳನ್ನು ಆಮದು ಮಾಡಿಕೊಂಡು ಭಾರ ತೀಯ ಆಹಾರ ಸುರಕ್ಷತೆ ಹಾಗೂ ಗುಣಮಟ್ಟ ಪ್ರಾಧಿಕಾರ (ಎಫ್ಎಸ್‌ಎಸ್‌ಎಐ)ದ ಸ್ಟಿಕ್ಕರ್‌ಗಳನ್ನು ಅಂಟಿಸಿಕೊಂಡು ನಗರದ ಸೂಪರ್ ಮಾರ್ಕೆಟ್ ಹಾಗೂ ಮಾಲ್‌ಗಳಿಗೆ ಪೂರೈಸುತ್ತಿದ್ದ ಆರೋಪಿಯನ್ನು ಸಿಸಿಬಿಯ ಆರ್ಥಿಕ ಅಪರಾಧ ದಳ ಅಧಿಕಾರಿಗಳು ಬಂಧಿಸಿದ್ದಾರೆ.
ಸುಧಾಮನಗರ ನಿವಾಸಿ ನರೇಂದ್ರ ಸಿಂಗ್(45) ಬಂಧಿತ. ಆರೋಪಿಯಿಂದ 1 ಕೋಟಿ ರೂ. ಮೌಲ್ಯದ ವಿದೇಶಿ ಕಂಪನಿಗಳ ಚಾಕೊಲೇಟ್ ಹಾಗೂ ಇತರೆ ಪದಾರ್ಥಗಳನ್ನು ಜಪ್ತಿ ಮಾಡಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಬಿ.ದಯಾನಂದ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.
ರಾಜಸ್ಥಾನ ಮೂಲದ ಆರೋಪಿ ಹತ್ತಾರು ವರ್ಷಗಳ ಹಿಂದೆಯೇ ಬೆಂಗಳೂರಿಗೆ ಬಂದಿದ್ದು, ಸುಧಾಮನಗರದಲ್ಲಿ ವಾಸವಾಗಿದ್ದಾನೆ. ಇಲ್ಲಿಯೇ ಉಗ್ರಾಣ ವೊಂದನ್ನು ನಿರ್ಮಿಸಿಕೊಂಡು, ವಿದೇಶಗಳಿಂದ ಹಡಗಿನಲ್ಲಿ ಮುಂಬೈಗೆ ಅಕ್ರಮವಾಗಿ ಬರುವ ಚಾಕೊಲೇಟ್, ಬಿಸ್ಕೆಟ್, ತಂಪುಪಾನೀಯಗಳು ಹಾಗೂ ಇತರೆ ವಸ್ತುಗಳನ್ನು ಅಕ್ರಮವಾಗಿ ಖರೀದಿ ಸು ತ್ತಿದ್ದ. ಬಳಿಕ ಅವುಗಳಿಗೆ ಎಫ್ಎಸ್‌ಎಸ್‌ಎಐ ಸ್ಟಿಕ್ಕರ್ ಗಳನ್ನು ಅಂಟಿಸಿ ನಗರದ ಸೂಪರ್ ಮಾರ್ಕೆಟ್ ಮತ್ತು ಮಾಲ್‌ಗಳಿಗೆ ಸರಬರಾಜು ಮಾಡಿ ಹಣ ಸಂಪಾದನೆ ಮಾಡುತ್ತಿದ್ದ. ಈ ಖಚಿತ ಮಾಹಿತಿ ಮೇರೆಗೆ ಕಾರ್ಯಾಚರಣೆ ನಡೆಸಿ ಆರೋಪಿ ಬಂಧಿಸಲಾಗಿದೆ ಎಂದರು.
ಕಳೆದ ಐದಾರು ವರ್ಷಗಳಿಂದ ಆರೋಪಿಯು ಈ ದಂಧೆಯಲ್ಲಿ ಸಕ್ರಿಯನಾಗಿದ್ದ. ಚಾಕೊಲೇಟ್, ಬಿಸ್ಕೆಟ್ ಹಾಗೂ ತಂಪುಪಾನೀಯ ಸೇರಿ ಇತರ ಆಹಾರ ಪದಾರ್ಥಗಳನ್ನು ವಿದೇಶದಿಂದ ನಗರಕ್ಕೆ ತರಿಸಿಕೊಳ್ಳಲು ವಾಮಮಾರ್ಗ ಅನುಸರಿಸಿದ್ದ ಆರೋಪಿ ಯಾವುದೇ ರೀತಿಯ ಸುಂಕ ಪಾವತಿಸದಿರುವುದು ಕಂಡುಬಂದಿದೆ. ಗೋದಾಮಿನಲ್ಲಿ ಶೇಖರಿಸಲಾದ ಆಹಾರ ಪದಾರ್ಥಗಳ ಮೇಲೆ ಎಫ್ಎಸ್‌ಎಸ್‌ಎಐ ಸ್ಟಿಕ್ಕರ್ ಗಳನ್ನು ಅಂಟಿಸಿ ನಗರದ ಸೂಪರ್ ಮಾರ್ಕೆಟ್ ಹಾಗೂ ಮಾಲ್‌ಗಳಿಗೆ ದುಬಾರಿ ಬೆಲೆಗಳಿಗೆ ಮಾರಾಟ ಮಾಡಿ ಅಕ್ರಮವಾಗಿ ಹಣ ಸಂಪಾದನೆ ಮಾಡುತ್ತಿದ್ದ ಎಂಬುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ ಎಂದು ಸಿಸಿಬಿ ಪೊಲೀಸರು ಮಾಹಿತಿ ನೀಡಿದರು.
ಸಿಸಿಬಿಯ ಆರ್ಥಿಕ ಅಪರಾಧ ವಿಭಾಗದ ಇನ್‌ಸ್ಪೆಕ್ಟರ್ ಸಂತೋಷ್ ರಾಮ್ ನೇತೃತ್ವದಲ್ಲಿ ಕಾರ್ಯಾಚರಣೆ ನಡೆದಿದೆ.