ಬೆಂಗಳೂರು: ಮನೆಯಲ್ಲೇ ಮಾದಕ ವಸ್ತು ಕೆಟಾಮಿನ್ ತಯಾರಿಸಿ ವಿದೇಶಗಳಿಗೆ ಮಾರಾಟ ಮಾಡುತ್ತಿದ್ದ ಆರೋಪ ಪ್ರಕರಣದಲ್ಲಿ ಬಂಧನಕ್ಕೊಳಗಾಗಿರುವ ಆರೋಪಿ ಶಿವರಾಜ್ ಅರಸ್‌ನನ್ನು ಮಾದಕ ವಸ್ತು ನಿಯಂತ್ರಣ ದಳದ (ಎನ್‌ಸಿಬಿ) ಅಧಿಕಾರಿಗಳು ಹೆಚ್ಚಿನ ವಿಚಾರಣೆಗಾಗಿ ಆರು ದಿನಗಳ ಕಾಲ ವಶಕ್ಕೆ ಪಡೆದುಕೊಂಡಿದ್ದಾರೆ.
ಏ.30ರಿಂದ ಮೇ 2ರವರೆಗೆ ವಿಶೇಷ ಕಾರ್ಯಾಚರಣೆ ನಡೆಸಿದ್ದ ಎನ್‌ಸಿಬಿ ಅಧಿಕಾರಿಗಳು ಕೆಂಗೇರಿಯ ಶಿವರಾಜ್ ಅರಸ್ ಹಾಗೂ ಚೆನ್ನೈನ ಕಣ್ಣನ್‌ನನ್ನು ಬಂಧಿಸಿದ್ದರು. ಈ ವೇಳೆ ಶಿವರಾಜ್ ಅರಸ್ ಕೆಂಗೇರಿಯಲ್ಲಿರುವ ತನ್ನ ಮನೆಯಲ್ಲೇ ಕೆಟಾಮಿನ್ ತಯಾರು ಮಾಡುತ್ತಿದ್ದ ವಿಚಾರ ಬೆಳಕಿಗೆ ಬಂದಿತ್ತು.
ಈ ಹಿನ್ನೆಲೆಯಲ್ಲಿ ಆರೋಪಿಯನ್ನು ಕೋರ್ಟ್‌ಗೆ ಹಾಜರು ಪಡಿಸಿದ ತನಿಖಾಧಿಕಾರಿಗಳು ಹೆಚ್ಚಿನ ವಿಚಾರಣೆ ವಶಕ್ಕೆ ನೀಡುವಂತೆ ಮನವಿ ಮಾಡಿದ್ದರು. ಎನ್‌ಸಿಬಿ ಅಧಿಕಾರಿಗಳ ಮನವಿ ಪುರಸ್ಕರಿಸಿದ 33ನೇ ಸಿಸಿಎಚ್ ನ್ಯಾಯಾಲಯದ ನ್ಯಾಯಾಧೀಶರು ಆರೋಪಿಯನ್ನು ಆರು ದಿನಗಳ ಕಾಲ ಎನ್‌ಸಿಬಿ ವಶಕ್ಕೆ ನೀಡಿ ಆದೇಶಿಸಿದ್ದಾರೆ.
ಬೀಗ ಮುದ್ರೆ: ಆರೋಪಿ ಶಿವರಾಜ್ ಅರಸ್ ಮನೆಯ ನೆಲಮಳಿಗೆಯಲ್ಲಿದ್ದ ರಹಸ್ಯ ಲ್ಯಾಬ್ ಮೇಲೆ ದಾಳಿ ನಡೆಸಿದ್ದ ಎನ್‌ಸಿಬಿ ಅಧಿಕಾರಿಗಳು ಮಾದಕ ವಸ್ತು ಕೆಟಾಮಿನ್ ಹಾಗೂ ಅದನ್ನು ತಯಾರು ಮಾಡಲು ಸಂಗ್ರಹಿಸಿಕೊಂಡಿದ್ದ ರಾಸಾಯನಿಕ ಪದಾರ್ಥಗಳು ಹಾಗೂ ಯಂತ್ರೋಪಕರಣಗಳನ್ನು ವಶಕ್ಕೆ ಪಡೆದುಕೊಂಡಿದ್ದರು.
ಇದೀಗ ಇಡೀ ಮನೆಗೆ “ಬೀಗ ಮುದ್ರೆ’ ಹಾಕಿರುವ ತನಿಖಾಧಿಕಾರಿಗಳು, ಆರೋಪಿಯ ಕೆಂಗೇರಿ ಮತ್ತು ಯಲಹಂಕದ ಮನೆಯಲ್ಲಿ ವಶಕ್ಕೆ ಪಡೆದುಕೊಂಡಿರುವ ಅಕ್ರಮ ದಂಧೆಗೆ ಸಂಬಂಧಿಸಿದ ದಾಖಲೆಗಳು, ಹಣಕಾಸು ವಹಿವಾಟಿನ ದಾಖಲೆಗಳ ಕುರಿತು ತನಿಖೆ ಮುಂದುವರಿಸಲಾಗಿದೆ ಎಂದು ಎನ್‌ಸಿಬಿ ಅಧಿಕಾರಿಗಳು ತಿಳಿಸಿದ್ದಾರೆ.