ನವದೆಹಲಿ: ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರ ಜೀವನದ ಕುರಿತು ಮಾಜಿ ಆಪ್ತ ಸಲಹೆಗಾರ ಸಂಜಯ್ ಬರು ಬರೆದಿರುವ “ದಿ ಆ್ಯಕ್ಸಿಡೆಂಟಲ್ ಪ್ರೈಮ್ ಮಿನಿಸ್ಟರ್” ಪುಸ್ತಕದ ಕಥೆ ಸಿನಿಮಾವಾಗುತ್ತಿರುವುದು ಎಲ್ಲರಿಗೂ ತಿಳಿದ ವಿಷಯ. ಏತನ್ಮಧ್ಯೆ ಸಿನಿಮಾದ ನಿರ್ದೇಶಕ ವಿಜಯ್ ರತ್ನಾಕರ್ ಗುಟ್ಟೆಯನ್ನು ಸುಮಾರು 34 ಕೋಟಿ ರೂಪಾಯಿಯಷ್ಟು ಜಿಎಸ್ ಟಿ ವಂಚಿಸಿರುವ ಪ್ರಕರಣದಲ್ಲಿ ಬಂಧಿಸಲಾಗಿದೆ ಎಂದು ದ ಇಂಡಿಯನ್ ಎಕ್ಸ್ ಪ್ರೆಸ್ ವರದಿ ಮಾಡಿದೆ.
ಕೋರ್ಟ್ ದಾಖಲೆಯ ಪ್ರಕಾರ, ವಿಜಯ್ ಗುಟ್ಟೆಯ ವಿಆರ್ ಜಿ ಡಿಜಿಟಲ್ ಕಾರ್ಪೋರೇಶನ್ ನಕಲಿ ಬೆಲೆಪಟ್ಟಿ ಕಳುಹಿಸಿ 2017ರ ಜುಲೈನಿಂದ ಸುಮಾರು 28 ಕೋಟಿ ರೂಪಾಯಿಯಷ್ಟು ರಿಫಂಡ್ ಮಾಡಲು ಆದಾಯ ತೆರಿಗೆ ಇಲಾಖೆಗೆ ಮನವಿ ಮಾಡಿತ್ತು.
ಆ್ಯನಿಮೇಷನ್ ಹಾಗೂ ಮ್ಯಾನ್ ಪವರ್ ಸರ್ವಿಸ್ ಅನ್ನು ಹೋರಿಜಾನ್ ಔಟ್ ಸೋರ್ಸ್ ಸೋಲ್ಯೂಷನ್ಸ್ ಪ್ರೈ ಲಿಮಿಟೆಡ್ ಮೂಲಕ ಪಡೆದುಕೊಳ್ಳಲಾಗಿದೆ ಎಂದು ವಿಆರ್ ಜಿ ಡಿಜಿಟಲ್ ಕಂಪನಿ ಹೇಳಿಕೊಂಡಿತ್ತು. ಆದರೆ ಹೋರಿಜಾನ್ ಕಂಪನಿ ವ್ಯವಹಾರವನ್ನು ಜಿಎಸ್ ಟಿ ತಂಡ ಪರಿಶೀಲನೆ ನಡೆಸಿದಾಗ ಬರೋಬ್ಬರಿ 170 ಕೋಟಿಗೂ ಹೆಚ್ಚು ವಂಚನೆ ನಡೆಸಿರುವುದು ಬೆಳಕಿಗೆ ಬಂದಿತ್ತು.
ವಿಆರ್ ಜಿ ಡಿಜಿಟಲ್ ಕಾರ್ಪೋರೇಶನ್ ಪ್ರೈ ಲಿ. ನಕಲಿ ದರಪಟ್ಟಿ ಸೃಷ್ಟಿಸಿ ಸುಮಾರು 34 ಕೋಟಿ ಜಿಎಸ್ ಟಿ ವಂಚಿಸಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ. ಈ ನಿಟ್ಟಿನಲ್ಲಿ ವಿಜಯ್ ಗುಟ್ಟೆ ಮೇಲೆ ಸಿಜಿಎಸ್ ಟಿ ಕಾಯ್ದೆ ಸೆಕ್ಷನ್ 132(1)(ಸಿ) ಅನ್ವಯ ದೂರು ದಾಖಲಿಸಲಾಗಿದೆ ಎಂದು ವರದಿ ವಿವರಿಸಿದೆ.
ಬಂಧನಕ್ಕೊಳಗಾಗಿದ್ದ ದ ಆ್ಯಕ್ಸಿಡೆಂಟಲ್ ಪ್ರೈಮ್ ಮಿನಿಸ್ಟರ್ ಸಿನಿಮಾದ ನಿರ್ದೇಶಕ ವಿಜಯ್ ಗುಟ್ಟೆಯನ್ನು ಮುಂಬೈ ಕೋರ್ಟ್ ಗೆ ಹಾಜರುಪಡಿಸಲಾಗಿದ್ದು, ಆಗಸ್ಟ್ 14ರವರೆಗೆ ನ್ಯಾಯಾಂಗ ಬಂಧನ ವಿಧಿಸಿದೆ.
ವಿಜಯ್ ಗುಟ್ಟೆ ಈಗಾಗಲೇ ಮೂರು ಸಿನಿಮಾಗಳನ್ನು ನಿರ್ದೇಶಿಸಿದ್ದು, ದ ಆ್ಯಕ್ಸಿಡೆಂಟಲ್ ಪ್ರೈಮ್ ಮಿನಿಸ್ಟರ್ ಬಹುನಿರೀಕ್ಷಿತ ಚಿತ್ರವಾಗಿದೆ. ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಪಾತ್ರದಲ್ಲಿ ಅನುಪಮ್ ಖೇರ್, ಸಿಂಗ್ ಮಾಧ್ಯಮ ಸಲಹೆಗಾರ ಬರು ಪಾತ್ರದಲ್ಲಿ ಅಕ್ಷಯ್ ಕುಮಾರ್ ನಟಿಸಲಿದ್ದಾರೆ. ಈ ಸಿನಿಮಾ ಡಿಸೆಂಬರ್ ನಲ್ಲಿ ಬಿಡುಗಡೆಯಾಗುವುದಾಗಿ ತಿಳಿಸಲಾಗಿತ್ತು.