ಉಡುಪಿ: ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿರುವ ಹಿರಿಯಡಕ ಬೊಮ್ಮಾರಬೆಟ್ಟಿನ ಹೃತಿಕ್ ಶೆಟ್ಟಿ(19) ಕಳೆದೊಂದು ವರ್ಷದಿಂದ ನರಕಯಾತನೆ ಅನುಭವಿಸುತ್ತಿದ್ದಾರೆ. ತಾಯಿಯೊಂದಿಗೆ ವಾಸವಾಗಿರುವ ಹೃತಿಕ್ ಈಗ ಆಸ್ಪತ್ರೆಯಲ್ಲಿ ಹಾಸಿಗೆ ಬಿಟ್ಟು ಏಳಲಾಗದ ಸ್ಥಿತಿಯಲ್ಲಿದ್ದು ಕಂಗಾಲಾಗಿದ್ದಾರೆ.
ಮೂಲತಃ ಬೊಮ್ಮರಬೆಟ್ಟಿನವರಾದ ಸುಂದರ ಶೆಟ್ಟಿ ಮತ್ತು ಸುನೀತಾ ಶೆಟ್ಟಿ ಅವರು ತಮ್ಮ ಮಗ ಹೃತಿಕ್ ಶೆಟ್ಟಿ ಜತೆ ಹಲವು ವರ್ಷಗಳಿಂದ ಮುಂಬಯಿಯಲ್ಲೇ ನೆಲೆಸಿದ್ದರು. ಕೆಲವು ವರ್ಷಗಳ ಹಿಂದೆ ಸುಂದರ ಶೆಟ್ಟಿ ಮೃತಪಟ್ಟರು.
ಹೃತಿಕ್ ಮತ್ತು ತಾಯಿ ಹೊಟೇಲುಗಳಲ್ಲಿ ಕೆಲಸ ಮಾಡಿ ಜೀವನ ಸಾಗಿಸುತ್ತಿದ್ದರು. ಒಮ್ಮೆ ಅಪಘಾತದಿಂದಾಗಿ ಹೃತಿಕ್ ಶೆಟ್ಟಿ ಬೆನ್ನು, ಸೊಂಟ ಮತ್ತು ಕಾಲಿನ ಸಂಪೂರ್ಣ ಬಲ ಕಳೆದುಕೊಂಡರು. ಬಡತನದ ಕಾರಣದಿಂದ ಸರಿಯಾದ ಚಿಕಿತ್ಸೆ ಪಡೆಯಲು ಸಾಧ್ಯವಾಗಲಿಲ್ಲ. ಆರೋಗ್ಯ ಸ್ಥಿತಿ ಮತ್ತೆ ಉಲ್ಬಣಗೊಂಡಿತು.
ಕುಟುಂಬದ ಅಸಹಾಯಕ ಸ್ಥಿತಿ ಕಂಡು ಮುಂಬೈನ ಕೆಲವು ಸ್ಥಳೀಯ ನಿವಾಸಿಗಳು ಆ್ಯಂಬುಲೆನ್ಸ್ ಮಾಡಿಸಿ ಉಡುಪಿಗೆ ಇಬ್ಬರನ್ನು ಕೂಡ ಕಳುಹಿಸಿಕೊಟ್ಟಿದ್ದಾರೆ. ಉಡುಪಿ ಅಜ್ಜರಕಾಡು ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಹೃತಿಕ್ ಶೆಟ್ಟಿ ಅವರನ್ನು ವೈದ್ಯರ ಸಲಹೆಯಂತೆ ಮಂಗಳೂರು ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ಸರಕಾರದ ಯೋಜನೆಗಳಲ್ಲಿ ಉಚಿತ ಚಿಕಿತ್ಸೆ ಪಡೆಯಲು ಬೇಕಾದ ಯಾವ ದಾಖಲೆಗಳೂ ಇವರ ಬಳಿ ಇಲ್ಲ. ಬ್ಯಾಂಕ್ ಖಾತೆಯಾಗಲಿ ಮೊಬೈಲ್ ಆಗಲಿ ಇವರ ಬಳಿ ಇಲ್ಲ. ಈ ಕುಟುಂಬವೀಗ ಸಾರ್ವಜನಿಕರ ನೆರವು ಕೋರಿದೆ.
ಸಂಘ ಸಂಸ್ಥೆಗಳು, ದಾನಿಗಳು ವೆನ್‌ಲಾಕ್ ಆಸ್ಪತ್ರೆಯನ್ನು ಅಥವಾ ರೋಗಿಗೆ ನೆರವಾಗುತ್ತಿರುವ ದಿವಾಕರ ಶೆಟ್ಟಿ ಅವರನ್ನು (9987038322) ಸಂಪರ್ಕಿಸಬಹುದು ಎಂದು ಸಮಾಜಸೇವಕ ವಿಶು ಶೆಟ್ಟಿ ಅಂಬಲಪಾಡಿ ಅವರು ಮನವಿ ಮಾಡಿದ್ದಾರೆ.