Advertisement
ಆಂಧ್ರ ಪ್ರದೇಶದ ವೈ.ಎಸ್. ಜಗನ್ ಮೋಹನ್ ರೆಡ್ಡಿ ನೇತೃತ್ವದ ಸರಕಾರ ವಿಧಾನ ಪರಿಷತ್ತನ್ನು ರದ್ದುಪಡಿಸಲು ಕೈಗೊಂಡಿರುವ ತರಾತುರಿಯ ತೀರ್ಮಾನ ಆಶ್ಚರ್ಯವುಂಟುಮಾಡಿರಬಹುದು. ಆದರೆ ಜಗನ್ ಮೋಹನ್ ರೆಡ್ಡಿಯ ಕಾರ್ಯಶೈಲಿಯನ್ನು ಹತ್ತಿರದಿಂದ ಬಲ್ಲವರು ಹೇಳುವಂತೆ ಇದು ನಿರೀಕ್ಷಿತ ನಡೆಯೇ ಆಗಿತ್ತು. 58 ಸದಸ್ಯ ಬಲದ ಪರಿಷತ್‌ನಲ್ಲಿ ವೈ.ಎಸ್.ಆರ್.ಕಾಂಗ್ರೆಸ್‌ನ ಸದಸ್ಯರಿರುವುದು ಬರೀ 9 ಮಂದಿ ಮಾತ್ರ. ಇದು ತನ್ನ ಹಾದಿಗೆ ಇರುವ ದೊಡ್ಡ ಅಡ್ಡಿ ಎಂದು ಜಗನ್ ಮೋಹನ್ ರೆಡ್ಡಿ ಭಾವಿಸಿರಬಹುದು. ಹೀಗಾಗಿ ವಿಧಾನ ಪರಿಷತ್ತನ್ನು ಇಲ್ಲದಂತೆ ಮಾಡುವ ಮೂಲಕ ಈ ಅಡ್ಡಿಯನ್ನು ನಿವಾರಿಸಿಕೊಂಡಿದ್ದಾರೆ. ಆದರೆ ಒಟ್ಟಾರೆ ಪ್ರಜಾತಂತ್ರದ ಹಿತದೃಷ್ಟಿಯಿಂದ ಹೇಳುವುದಾದರೆ ಇದು ಹಿಮ್ಮುಖ ನಡಿಗೆಯ ತೀರ್ಮಾನ.
Related Articles
Advertisement
ವಿಧಾನ ಪರಿಷತ್ ಅಥವಾ ಮೇಲ್ಮನೆಗೆ ಹಿಂದೆ ಇರುವಷ್ಟು ಮಹತ್ವ ಈಗ ಇಲ್ಲ ಎನ್ನುವುದು ನಿಜ. ಅದೀಗ ಸೋತವರಿಗೆ ಆಶ್ರಯ ಕಲ್ಪಿಸುವ ಆಶ್ರಯತಾಣವಾಗಿದೆ. ದುಡ್ಡಿನ ಥೈಲಿ ಇರುವವರ, ಸಿನೇಮಾದವರ, ಕ್ರೀಡಾಪಟುಗಳ ರಾಜಕೀಯ ಕಾಂಕ್ಷೆಗಳನ್ನು ಈಡೇರಿಸಿಕೊಳ್ಳುವ ಮನೆಯಾಗಿದೆ. ಅಂತೆಯೇ ಹಿಂಬಾಗಿಲಿನ ರಾಜಕೀಯ ಮಾಡುವವರಿಗೆ ವೇದಿಕೆಯಾಗಿ ಬದಲಾಗಿದೆ ಎನ್ನುವ ಆರೋಪಗಳೆಲ್ಲ ನಿಜವೇ. ಅಧಿಕಾರಕ್ಕಾಗಿ ಮೇಲಾಟ ನಡೆಸುವ ನಾಯಕರು ಮತ್ತು ರಾಜಕೀಯ ಪಕ್ಷಗಳಿಂದಾಗಿ ಮೇಲ್ಮನೆಯ ಘನತೆಗೆ ಸಾಕಷ್ಟು ಹಾನಿಯಾಗಿದೆ.
ಆದರೆ ಇದೇ ಮೇಲ್ಮನೆಗಳು ಒಂದು ಕಾಲದಲ್ಲಿ ಚಿಂತಕರ ಕೂಟವಾಗಿತ್ತು. ಘಟಾನುಘಟಿ ನಾಯಕರು ಇಲ್ಲಿದ್ದರು. ಸಮಾಜದಲ್ಲಿರುವ ಘನವೇತ್ತರ ಅನುಭವವನ್ನು ರಾಷ್ಟ್ರ ನಿರ್ಮಾಣದಲ್ಲಿ ಬಳಸಿಕೊಳ್ಳಲು ಇರುವ ಮಾಧ್ಯಮವಾಗಿತ್ತು ಮೇಲ್ಮನೆ. ಹಿರಿಯರ ಮನೆ ಎನ್ನುವುದು ಇದಕ್ಕಿರುವ ಇನ್ನೊಂದು ಹೆಸರು. ಇದು ವಯಸ್ಸಿನ ಹಿರಿತನ ಮಾತ್ರವಲ್ಲ ಅನುಭವದ, ಚಿಂತನೆಗಳ ಹಿರಿತನವೂ ಹೌದು. ಕೆಲವೊಮ್ಮೆ ಮುತ್ಸದ್ದಿಗಳನ್ನು ಸಕ್ರಿಯ ರಾಜಕೀಯಕ್ಕೆ ಕರೆತರುವ ಹಾದಿಯೂ ಮೇಲ್ಮನೆಯೇ. ಇದಕ್ಕೊಂದು ಉತ್ತಮ ಉದಾಹರಣೆ ಮಾಜಿ ಪ್ರಧಾನಿ ಮನಮೋಹನ್ ಸಿಂಗ್. ಹತ್ತು ವರ್ಷ ಮೇಲ್ಮನೆಯ ಸದಸ್ಯರಾಗಿಯೇ ಮನ್‌ಮೋಹನ್ ಸಿಂಗ್ ಪ್ರಧಾನಿ ಹುದ್ದೆಯನ್ನು ನಿಭಾಯಿಸಿದ್ದರು. ಪ್ರಸ್ತುತ ಉತ್ತರ ಪ್ರದೇಶದ ಮುಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿ ಇಬ್ಬರೂ ಮೇಲ್ಮನೆ ಸದಸ್ಯರು. ಮೇಲ್ಮನೆಯ ಸದಸ್ಯರು ಜನರಿಂದ ನೇರವಾಗಿ ಆಯ್ಕೆಯಾಗಿ ಬರುವುದಿಲ್ಲವಾದರೂ ಕೆಳಮನೆಯ ಸದಸ್ಯರಿಗಿರುವ ಎಲ್ಲ ಅಲ್ಲದಿದ್ದರೂ ಅನೇಕ ಅಧಿಕಾರಗಳು ಅವರಿಗೂ ಇರುತ್ತವೆ.
ಆಡಳಿತ ಪಕ್ಷವೇ ಮೇಲ್ಮನೆಯಲ್ಲೂ ಬಹುಮತವನ್ನು ಹೊಂದಿದ್ದರೆ ಯಾವ ಸಮಸ್ಯೆಯೂ ಆಗುವುದಿಲ್ಲ. ಆದರೆ ಆಂಧ್ರದಂತೆ ಮೇಲ್ಮನೆಯಲ್ಲಿ ಬಹುಮತ ಇಲ್ಲ ಎಂದಾದರೆ ಸರಕಾರಕ್ಕೆ ನಿರೀಕ್ಷಿತ ರೀತಿಯಲ್ಲಿ ಆಡಳಿತ ನಡೆಸಲು ಸಾಧ್ಯವಾಗುವುದಿಲ್ಲ. ಆದರೆ ಹಾಗೆಂದು ನೆಗಡಿಯಾಗುತ್ತದೆ ಎಂದು ಮೂಗನ್ನು ಕೊಯ್ದುಕೊಳ್ಳುವುದು ಸಮುಚಿತ ಕ್ರಮವಲ್ಲ. ಜಗನ್ ಮೋಹನ್ ಸರಕಾರ ಮಾಡಿರುವುದು ಮಾತ್ರ ಇದನ್ನೇ.