Advertisement

ಎಬಿಡಿ ಯೋಜನೆಗೆ ಆಯ್ಕೆಯಾದರೂ ಒಳಚರಂಡಿ ಸಮಸ್ಯೆ ಬಗೆಹರಿದಿಲ್ಲ!

12:47 AM Oct 14, 2019 | Team Udayavani |

ಮಹಾನಗರ: ಮಂಗಳೂರು ನಗರದ ಸ್ಮಾರ್ಟ್‌ ಸಿಟಿ ಎಬಿಡಿ (ಏರಿಯಾ ಬೇಸ್ಡ್ ಡೆವಲಪ್‌ಮೆಂಟ್‌) ಯೋಜನೆಗೆ ಆಯ್ಕೆಯಾದ ಪ್ರಮುಖ ವಾರ್ಡ್‌ಗಳ ಪೈಕಿ ಮಂಗಳಾದೇವಿ ವಾರ್ಡ್‌ ಕೂಡ ಒಂದು. ಇತಿಹಾಸ ಪ್ರಸಿದ್ಧ ಮಂಗಳಾದೇವಿ ದೇವಸ್ಥಾನ ಒಂದೆಡೆಯಾದರೆ, ಸಿಎಸ್‌ಐ ಕಾಂತಿ ಚರ್ಚ್‌ ಮತ್ತೂಂದೆಡೆ ಇದೆ. ರಾಮಕೃಷ್ಣ ಮಠ ಕೂಡ ಇದೇ ವಾರ್ಡ್‌ನಲ್ಲಿದ್ದು, ಸುಮಾರು 2.50 ಕಿ.ಮೀ. ವ್ಯಾಪ್ತಿಯ ಹೊಂದಿರುವ ಮಂಗಳೂರು ಮಹಾನಗರ ಪಾಲಿಕೆಯ 56ನೇ ವಾರ್ಡ್‌ ಇದಾಗಿದೆ.

Advertisement

ಈ ವಾರ್ಡ್‌ನಲ್ಲಿ ಐದು ವರ್ಷಗಳಲ್ಲಿ ಸುಮಾರು 6 ಕೋ.ರೂ. ಪಾಲಿಕೆ ಅನುದಾನದಲ್ಲಿ ವಿವಿಧ ಅಬಿವೃದ್ಧಿ ಕೆಲಸಗಳು ನಡೆದಿವೆ. ಈ ವಾರ್ಡ್‌ನ ಪ್ರಮುಖ ರಸ್ತೆಗಳು ಕಾಂಕ್ರೀಟ್‌ ಮಾಡಲಾಗಿದ್ದು ಕೆಲವೊಂದು ಒಳರಸ್ತೆಗಳಿಗೆ ಕೆಲ ತಿಂಗಳ ಹಿಂದೆಯಷ್ಟೇ ಡಾಮರೀಕರಣ ಆಗಿದೆ.

ಈ ವಾರ್ಡ್‌ನಲ್ಲಿ ಪಾಳುಬಿದ್ದಿದ್ದ ಎರಡು ಪಾರ್ಕ್‌ ಗಳಿಗೆ ಕೆಲ ವರ್ಷಗಳ ಹಿಂದೆ ಕಾಯಕಲ್ಪ ಸಿಕ್ಕಿದೆ. ಜಪ್ಪು ಪಾರ್ಕ್‌ನ್ನು ಸುಮಾರು 15 ಲ.ರೂ. ವೆಚ್ಚದಲ್ಲಿ ಮತ್ತು ಮಂಗಳಾನಗರದಲ್ಲಿದ್ದ ಪಾರ್ಕ್‌ನ್ನು ಸುಮಾರು 12 ಲಕ್ಷ ರೂ. ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾಗಿದೆ. ಸದ್ಯ ಸಾರ್ವಜನಿಕರು ಈ ಪಾರ್ಕ್‌ನಲ್ಲಿ ವಿಹರಿಸುತ್ತಿದ್ದಾರೆ.

ಈ ವಾರ್ಡ್‌ನಲ್ಲಿ ಒಳಚರಂಡಿ ವ್ಯವಸ್ಥೆಯ ಸಮಸ್ಯೆ ಇದ್ದು, ಜೋರಾಗಿ ಮಳೆ ಸುರಿದರೆ ಕೆಲವೊಂದು ತಗ್ಗು ಪ್ರದೇಶಗಳಿಗೆ ಕೃತಕ ನೆರೆ ಆವರಿಸುತ್ತದೆ. ಅದರಲ್ಲಿಯೂ ಮಂಕಿಸ್ಟಾಂಡ್‌, ಶಾಂತಾ ಆಳ್ವ ಕಂಪೌಂಡ್‌, ಅಮರ್‌ ಆಳ್ವ ರಸ್ತೆಯ ಸುತ್ತಮುತ್ತಲಿನ ತಗ್ಗು ಪ್ರದೇಶಗಳು ನೆರೆಗೆ ತುತ್ತಾಗುತ್ತವೆ. ತೋಡು ನೀರು ಕಲುಷಿತಗೊಂಡಿದ್ದು, ಸಮರ್ಪಕವಾಗಿ ಹೂಳೆತ್ತಬೇಕಿದೆ. ಅಲ್ಲದೆ, ಅಕ್ಕಪಕ್ಕದಲ್ಲಿ ಮನೆಗಳಿದ್ದು, ತಡೆಗೋಡೆ ನಿರ್ಮಾಣ ಮಾಡಬೇಕಿದೆ.

ಎಮ್ಮೆಕೆರೆ ಬಳಿ ಇರುವ ಆಚಾರಿಹಿತ್ಲು ಕಂಪೌಂಡ್‌ನ‌ ಪರಿಶಿಷ್ಟ ಜಾತಿ ಕಾಲನಿಯಲ್ಲಿ ರಾಜ್ಯ ಸರಕಾರದ 50 ಲಕ್ಷ ರೂ. ಎಸ್‌ಸಿ/ ಎಸ್‌ಟಿ ನಿಧಿಯಿಂದ ಸಮುದಾಯ ಭವನದ ಅಭಿವೃದ್ಧಿ ಮಾಡಲಾಗಿದ್ದು, ಇದರಿಂದಾಗಿ ಸಾರ್ವಜನಿಕರಿಗೆ ಅನುಕೂಲವಾಗಿದೆ. ಇನ್ನು, ವಾರ್ಡ್‌ನ ಜಪ್ಪು ಪಾರ್ಕ್‌, ಜಪ್ಪು ಭಾರತ್‌ ಮೈದಾನ ಮತ್ತು ಮಂಗಳಾನಗರದಲ್ಲಿ ಅಂಗನವಾಡಿ ಇದ್ದು, ವಾರ್ಡ್‌ನಲ್ಲಿ ಯಾವುದೇ ಸರಕಾರಿ ಶಾಲೆಗಳಿಲ್ಲ.

Advertisement

ಸ್ಥಳೀಯರೊಬ್ಬರು “ಸುದಿನ”ಕ್ಕೆ ಪ್ರತಿಕ್ರಿಯಿಸಿ ಮಂಗಳಾದೇವಿ ದೇವಸ್ಥಾನ ಪರಿಸರದಲ್ಲಿ ವಾಹನ ನಿಲುಗಡೆಗೆ ಸಮರ್ಪಕ ವ್ಯವಸ್ಥೆ ಇಲ್ಲ. ಅಡ್ಡಾದಿಡ್ಡಿಯಾಗಿ ವಾಹನ ನಿಲ್ಲಿಸಲಾಗುತ್ತದೆ.ಇಲ್ಲಿನ ಬಸ್‌ ನಿಲ್ದಾಣವನ್ನು ಸ್ವಲ್ಪ ಮುಂದುಗಡೆಗೆ ವಿಸ್ತರಿಸಬೇಕು’ ಎನ್ನುತ್ತಾರೆ.

ಬೇಡಿಕೆಗಳು
ವಾರ್ಡ್‌ನಲ್ಲಿ ವ್ಯವಸ್ಥಿತ ಒಳಚರಂಡಿ ವ್ಯವಸ್ಥೆ ಆಗಬೇಕಿದೆ. ಅಲ್ಲದೆ, ತಡೆಗೋಡೆ ನಿರ್ಮಾಣವಾಗಬೇಕಿದೆ. ಸ್ಮಾರ್ಟ್‌ಸಿಟಿ ಎಬಿಡಿ (ಏರಿಯಾ ಬೇಸ್ಡ್ ಡೆವಲಪ್‌ಮೆಂಟ್‌) ಯೋಜನೆಯಲ್ಲಿ ಒಳಚರಂಡಿ ವ್ಯವಸ್ಥೆ ಮೇಲ್ದರ್ಜೆಗೇರಲಿದ್ದು, ಮಳೆಗಾಲ ಮುಗಿದ ಕೂಡಲೇ ಕಾಮಗಾರಿ ಆರಂಭಗೊಳ್ಳಬೇಕಿದೆ. ವಾರ್ಡ್‌ನ ಕೆಲವು ಭಾಗಗಳಲ್ಲಿ ಬೇಸಗೆ ಸಮಯ ನೀರಿನ ಸಮಸ್ಯೆ ಇದ್ದು, ದಿನದ 24 ಗಂಟೆ ನೀರು ಸರಬರಾಜು ವ್ಯವಸ್ಥೆ ಇರಬೇಕು ಎನ್ನುವುದು ಸಾರ್ವಜನಿಕರ ಪ್ರಮುಖ ಬೇಡಿಕೆಗಳು.

ಪ್ರಮುಖ ಕಾಮಗಾರಿ
-ಸುಭಾಷ್‌ನಗರ-ಮಂಗಳಾದೇವಿ ದೇವಸ್ಥಾನ ರಸ್ತೆ ಕಾಂಕ್ರೀಟಿಕರಣ
– ಶಿವನಗರ ಬಡಾವಣೆ ಮುಖ್ಯ ರಸ್ತೆ ಕಾಂಕ್ರೀಟಿಕರಣ, ಒಳರಸ್ತೆ ಡಾಮರೀಕರಣ
– ಮಂಗಳಾನಗರ ರಸ್ತೆ ಡಾಮರೀಕರಣ
– ಸುಭಾಷ್‌ನಗರ ಒಳಚರಂಡಿ ವ್ಯವಸ್ಥೆ ಮೇಲ್ದರ್ಜೆಗೆ
– ಪರಿಶಿಷ್ಟ ಜಾತಿ ಕಾಲನಿ, ಶಾಂತಾ ಆಳ್ವ ಕಾಂಪೌಂಡ್‌ ರಸ್ತೆ ಡಾಮರೀಕರಣ, ಒಳಚರಂಡಿ ವ್ಯವಸ್ಥೆ ಕಾಮಗಾರಿ
– ಶಾಂತಾ ಆಳ್ವ ಕಾಂಪೌಂಡ್‌ ಪ್ರದೇಶದಲ್ಲಿ ಸಮುದಾಯ ಭವನ ರಚನೆ
– ಮಂಗಳಾದೇವಿ ಬಸ್‌ ನಿಲ್ದಾಣಕ್ಕೆ ವಾರ್ಡ್‌ ನಲ್ಲಿ 2 ಎಕ್ರೆ ಜಾಗ ನಿಗಧಿ ಮಾಡಿದ್ದು, ಹೊಸ ತಂಗುದಾಣ, ವಾಣಿಜ್ಯ ಸಂಕೀರ್ಣಕ್ಕೆ ಪ್ರಸ್ತಾವ ಸಲ್ಲಿಸಲಾಗಿದೆ.

ಮಂಗಳಾದೇವಿ ವಾರ್ಡ್‌
ಭೌಗೋಳಿಕ ವ್ಯಾಪ್ತಿ¤: ಪಾಂಡೇಶ್ವರ ಕಟ್ಟೆ ಎದುರು ಭಾಗ, ಅಮೃತ್‌ ನಗರ, ಎಮ್ಮೆಕೆರೆ ಮೈದಾನದ ಎದುರು ಭಾಗ, ಭಾಗಶಃ ಸುಭಾಷ್‌ ನಗರ, ಮಂಗಳಾದೇವಿ ಮುಖ್ಯರಸ್ತೆ, ಶಿವನಗರ, ಮಂಕಿಸ್ಟಾಂಡ್‌, ಮಂಗಳಾನಗರ ಸಹಿತ ಸುಮಾರು 2.50 ಕಿ.ಮೀ. ವ್ಯಾಪ್ತಿ

ಒಳಚರಂಡಿ ಅಭಿವೃದ್ಧಿಗೆ ಕ್ರಮ
ನನ್ನ ಐದು ವರ್ಷಗಳ ಅವಧಿಯಲ್ಲಿ ವಾರ್ಡ್‌ನ ಬಹುತೇಕ ಅಭಿವೃದ್ಧಿಯಾಗಿದೆ. ಒಳಚರಂಡಿ ವ್ಯವಸ್ಥೆಯ ಮತ್ತಷ್ಟು ವ್ಯವಸ್ಥಿತ ಕೆಲಸಗಳು ಬಾಕಿ ಇವೆ. ಈಗಾಗಲೇ ಎಬಿಡಿ ಯೋಜನೆಯಲ್ಲಿ ಒಳಚರಂಡಿ ಮೇಲ್ದರ್ಜೆಗೇರಿಸಲು ಟೆಂಡರ್‌ ಕರೆಯಲಾಗಿದೆ. ಸದ್ಯದಲ್ಲೇ ಕಾಮಗಾರಿ ಕೂಡ ಆರಂಭವಾಗಲಿದೆ.
-ಪ್ರೇಮಾನಂದ ಶೆಟ್ಟಿ, ನಿಕಟಪೂರ್ವ ಕಾರ್ಪೊರೇಟರ್‌

ಸುದಿನ ನೋಟ
ಈ ವಾರ್ಡ್‌ನಲ್ಲಿ ಸುತ್ತಾಡಿದಾಗ ಅಭಿವೃದ್ಧಿ ಕಾಮಗಾರಿಗಳು ನಡೆದಿರುವುದು ಗಮನಕ್ಕೆ ಬರುತ್ತದೆ. ಆದರೆ ಅಲ್ಲಲ್ಲಿ ಒಳ ಚರಂಡಿ ಸಮಸ್ಯೆ ಕಾಣಬಹುದು. ಮಂಗಳೂರು ನಗರದ ಸ್ಮಾರ್ಟ್‌ ಸಿಟಿ ಎಬಿಡಿ ಯೋಜನೆಗೆ ಆಯ್ಕೆಯಾಗಿರುವ ಈ ವಾರ್ಡ್‌ನಲ್ಲಿ ತಡೆ ಗೋಡೆ ನಿರ್ಮಾಣ, ನೀರಿನ ಸಮಸ್ಯೆ ನಿವಾರಣೆಯಾಗಬೇಕಿದೆ.

Advertisement

Udayavani is now on Telegram. Click here to join our channel and stay updated with the latest news.

Next