Advertisement

ಆಧಾರ್‌ ನೋಂದಣಿ ಕೇಂದ್ರ ತೆರೆಯಲು ಆಗ್ರಹ

03:48 PM Jun 14, 2019 | Suhan S |

ಶಿಡ್ಲಘಟ್ಟ: ನಗರದಲ್ಲಿ ಆಧಾರ್‌ ಕಾರ್ಡ್‌ ನೋಂದಣಿ ಕೇಂದ್ರ ಒಂದೇ ಇದ್ದು ಜನ ಸಾಮಾನ್ಯರು ಪರದಾಡುವಂತಾಗಿದ್ದು, ಕೂಡಲೆ ಒಂದೆರೆಡು ಆಧಾರ್‌ ಕೇಂದ್ರಗಳನ್ನು ತೆರೆಯಬೇಕೆಂದು ಆಗ್ರಹಿಸಿ ಕನ್ನಡಪರ ಸಂಘಟನೆಗಳ ಕಾರ್ಯಕರ್ತರು ನಗರದಲ್ಲಿ ಪ್ರತಿಭಟನೆ ನಡೆಸಿ ತಹಶೀಲ್ದಾರ್‌ ಕಚೇರಿಯಲ್ಲಿ ಮನವಿ ಸಲ್ಲಿಸಿದರು.

Advertisement

ಕನ್ನಡ ರಕ್ಷಣಾ ವೇದಿಕೆ ಸ್ವಾಭಿಮಾನಿ ಬಣ, ಕರವೇ ಶಿವರಾಮೇಗೌಡ ಬಣ ಹಾಗೂ ಕರ್ನಾಟಕ ಜನಸೈನ್ಯದ ಕಾರ್ಯಕರ್ತರು ನಗರದ ಸಾರಿಗೆ ಬಸ್‌ ನಿಲ್ದಾಣದಿಂದ ತಾಲೂಕು ಕಚೇರಿವರೆಗೂ ಪ್ರತಿಭಟನಾ ಮೆರವಣಿಗೆ ನಡೆಸಿ ನಂತರ ತಾಲೂಕು ಕಚೇರಿಗೆ ಮುತ್ತಿಗೆ ಹಾಕಿದರು.

3 ತಿಂಗಳು ಕಾಯಬೇಕು: ನಗರದಲ್ಲಿ ಪ್ರಗತಿ ಕೃಷ್ಣ ಗ್ರಾಮೀಣ ಬ್ಯಾಂಕ್‌ನಲ್ಲಿ ಮಾತ್ರ ಆಧಾರ್‌ ನೋಂದಣಿ ಮಾಡುತ್ತಿದ್ದು, ಇದರಿಂದ ನಾಗರಿಕರಿಗೆ ತೊಂದರೆಯಾಗಿದೆ. ಆಧಾರ್‌ ತೆಗೆಯುವುದು, ತಿದ್ದುಪಡಿ ಮಾಡಿಕೊಡುವುದು ಸೇರಿ ಯಾವುದಕ್ಕೂ 3 ತಿಂಗಳು ಬಿಟ್ಟು ಟೋಕನ್‌ ಕೊಡಲಾಗುತ್ತದೆ. ಹೊಸ ಕಾರ್ಡು ಪಡೆಯಲು ತಿದ್ದುಪಡಿ ಮಾಡಲು 3 ತಿಂಗಳು ಕಾಯಬೇಕು ಎಂದರು.

ಪ್ರತಿಭಟನೆ ಉದ್ದೇಶಿಸಿ ಕರವೇ ತಾಲೂಕು ಅಧ್ಯಕ್ಷ ಶ್ರೀಧರ್‌ ಮಾತನಾಡಿ, ಯಾವುದೆ ಇಲಾಖೆಯ ಸೌಲಭ್ಯ ಪಡೆದುಕೊಳ್ಳಲು ಆಧಾರ್‌ ಕಾರ್ಡ್‌ ಅಗತ್ಯವಾಗಿದೆ. ಬ್ಯಾಂಕುಗಳಲ್ಲಿ ಆಧಾರ್‌ ಇಲ್ಲದೇ ಹಣದ ವಹಿವಾಟು ನಡೆಯಲ್ಲ.

ವಿಜಯಪುರಕ್ಕೆ ಹೋಗಬೇಕು: ಆಧಾರ್‌ನಲ್ಲಿ ಹೆಸರು, ವಿಳಾಸ, ವಯಸ್ಸು ಇನ್ನಿತರೆ ಸ್ವಲ್ಪ ತಪ್ಪಿದ್ದರೂ ಅನೇಕ ಸಮಸ್ಯೆಗಳು ಎದುರಾಗುತ್ತವೆ. ಪಟ್ಟಣದಲ್ಲಿ ಆಧಾರ್‌ ನೋಂದಣಿ ಕೇಂದ್ರ ಆರಂಭಿಸಿ ನಾಗರಿಕರಿಗೆ ಅನುಕೂಲ ಕಲ್ಪಿಸಬೇಕೆಂದು ಒತ್ತಾಯಿಸಿದರು.

Advertisement

ಶಿಡ್ಲಘಟ್ಟ ನಗರದಲ್ಲಿ ಏಕೈಕ ಆಧಾರ್‌ ನೋಂದಣಿ ಕೇಂದ್ರವಿರುವುದರಿಂದ ನಾಗರಿಕರು ತುರ್ತಾಗಿ ಕಾರ್ಡ್‌ ಬೇಕಾದವರು, ತಿದ್ದುಪಡಿ ಮಾಡಿಸಿಕೊಳ್ಳಬೇಕಾದವರು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ವಿಜಯಪುರಕ್ಕೆ ಹೋಗಿ ಅಲ್ಲಿ 500-600 ರೂ.ಹಣ ಕೊಟ್ಟು ದಿನಪೂರ್ತಿ ಕಾದು ಮಾಡಿಸಿಕೊಂಡು ಬರುತ್ತಿದ್ದಾರೆ ಎಂದರು.

ನಾಗರಿಕರಿಗೆ ಅನುಕೂಲ ಕಲ್ಪಿಸಿ: ಕೂಲಿ ನಾಲಿ ಮಾಡಿ ಬದುಕುವ ಜನರು ದಿನಗಟ್ಟಲೇ ಕಾದು ಹಣ ಕೊಟ್ಟು ಕಾರ್ಡ್‌ ಮಾಡಿಸಿಕೊಳ್ಳುವ ಸಂಕಷ್ಟ ತಪ್ಪಿಸಲು ತಾಲೂಕು ಆಡಳಿತದಿಂದ ಇಲ್ಲಿ ಒಂದೆರಡು ಆಧಾರ್‌ ತಿದ್ದುಪಡಿ ಕೇಂದ್ರಗಳನ್ನು ತೆರೆದು ಅನುಕೂಲ ಕಲ್ಪಿಸಬೇಕೆಂದು ಮನವಿ ಸಲ್ಲಿಸಿದರು. ತಹಶೀಲ್ದಾರರ ಅನುಪಸ್ಥಿತಿಯಲ್ಲಿ ಕಂದಾಯ ನಿರೀಕ್ಷಕ ವಿಶ್ವನಾಥ್‌ ಮನವಿ ಸ್ವೀಕರಿಸಿದರು. ಕರವೇ ಶಿವರಾಮೇಗೌಡ ಬಣದ ಜಿಲ್ಲಾಧ್ಯಕ್ಷ ಮಂಜುನಾಥ್‌, ಕರವೇ ಸ್ವಾಭಿಮಾನಿ ಬಣದ ತಾಲೂಕು ಅಧ್ಯಕ್ಷ ಕೆ.ಎ.ಮಂಜುನಾಥ್‌, ಗಂಗಾಧರ್‌, ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ನಗರ ಘಟಕದ ಅಧ್ಯಕ್ಷ ಮುನಿರಾಜು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next