Advertisement
ಡಿಜಿಟಲ್ ರೂಪದಲ್ಲಿ ಕ್ಯಾಶ್ ಲೆಸ್ ಪಾವತಿ ಮಾಡ ಬಯಸುವವರು ಕಾರ್ಡ್, ಮೊಬೈಲ್ ಫೋನ್, ಇಂಟರ್ನೆಟ್ ಸಂಪರ್ಕ, ಪಾಸ್‌ವರ್ಡ್, ಪಿನ್ ನಂಬರ್ ಇತ್ಯಾದಿ ಹಲವಾರು ಪರಿಕರಗಳನ್ನು ಇಟ್ಟುಕೊಳ್ಳುವುದು ಸರ್ವೇ ಸಾಮಾನ್ಯ. ಅವೆಲ್ಲವನ್ನೂ ರೂಢಿ ಮಾಡಿ ಇಟ್ಟುಕೊಳ್ಳುವುದು, ಕಳೆದುಹೋಗದಂತೆ ಕಾಪಿಟ್ಟುಕೊಳ್ಳುವುದು ಪಿನ್ ನಂಬರ್ ಪಾಸ್ ವರ್ಡುಗಳನ್ನು ಮರೆಯದಂತೆ ನೆನಪಿಟ್ಟುಕೊಳ್ಳುವುದು ಇವೆಲ್ಲಾ ಒಂದು ಕಿರಿಕಿರಿ ಸಂಗತಿಯೆಂಬುದಾಗಿ ಬಹಳಷ್ಟು ಜನ ತಿಳಿದುಕೊಳ್ಳುತ್ತಾರೆ. ಒಂದು ರೀತಿಯಲ್ಲಿ ನೋಡುವುದಾದರೆ ಅದು ಸರಿಯಾದ ಮಾತು. ಬಹಳಷ್ಟು ಎಚ್ಚರದಿಂದ ಅವೆಲ್ಲವನ್ನೂ ಮೈಗೂಡಿಸಿಕೊಂಡು ಹಣಕಾಸಿನ ಕಾರ್ಯ ನಿರ್ವಹಿಸುವುದು ತುಸು ಕಷ್ಟಕರವೇ ಸರಿ.
ಆಧಾರ್ ಪೇ ಎಂಬ ಹೆಸರಿನೊಂದಿಗೆ ಮಾರುಕಟ್ಟೆಯಲ್ಲಿ ಕಾಣಿಸಿಕೊಳ್ಳಲಿರುವ ಈ ಪಾವತಿ ಸೌಲಭ್ಯಕ್ಕೆ ಬೇಕಾಗಿರುವುದು ನಿಮ್ಮ ಆಧಾರ ನಂಬರ್ ಮತ್ತು ನಿಮ್ಮ ಹೆಬ್ಬೆಟ್ಟು ಮಾತ್ರ! ಬೇರಾವ ವಿಚಾರವೂ ಅಗತ್ಯವೇ ಇಲ್ಲ. ಇದರಷ್ಟು ಸುಲಭವಾದ ಪಾವತಿ ಪದ್ಧತಿ ಭರತಖಂಡದಲ್ಲಿ ಇದುವರೆಗೆ ಬಂದದ್ದಿಲ್ಲ.
Related Articles
ಅಧಾರ್ ಪೇ ಸೌಲಭ್ಯವನ್ನು ಉಪಯೋಗಿಸಿಕೊಳ್ಳಬೇಕಾದರೆ ಮೊತ್ತ ಮೊದಲನೆಯದಾಗಿ ನಿಮ್ಮ ಬ್ಯಾಂಕ್ ಖಾತೆಯ ನಂಬರನ್ನು ಆಧಾರ್ ಸಂಖ್ಯೆಯೊಂದಿಗೆ ಜೋಡಿಸಿಕೊಳ್ಳಬೇಕು.
Advertisement
ಈ ಕೆಲಸವನ್ನು ಅದಕ್ಕಾಗಿ ನಿಗದಿಪಡಿಸಿರುವ ಅಧಾರ್ – ಬ್ಯಾಂಕ್ ಖಾತೆಯನ್ನು ಲಿಂಕ್ ಮಾಡುವ ಫಾರ್¾ ತುಂಬಿ ಬ್ಯಾಂಕ್ ಖಾತೆಯಲ್ಲಿ ನೀಡಬಹುದು. ಅಥವಾ ಸುಲಭವಾಗಿ ಆಗಬೇಕೆಂದರೆ ಇಂಟರ್ನೆಟ್ ಬ್ಯಾಂಕಿಂಗ್ ಮೂಲಕ ನಿಮ್ಮ ಬ್ಯಾಂಕ್ ಖಾತೆಯನ್ನು ಪ್ರವೇಶಿಸಿ ಅಲ್ಲಿ ಕೂಡ ಆಧಾರ್ ಸಂಖ್ಯೆಯನ್ನು ನೋಂದಣಿ ಮಾಡಿಸಿಕೊಳ್ಳಬಹುದು. ಈ ರೀತಿ ಆಫ್-ಲೈನ್ ಆಗಲಿ ಆನ್- ಲೈನ್ ಆಗಲಿ ಆಧಾರ್ ಕಾರ್ಡ್ ಹಾಗೂ ಬ್ಯಾಂಕ್ ಖಾತೆಯನ್ನು ಲಿಂಕ್ ಮಾಡುವುದು ಪ್ರಪ್ರಥಮ ಅಗತ್ಯ. ಹಾಗೆ ಮಾಡದಿದ್ದಲ್ಲಿ ಆಧಾರ್ ಆಧಾರಿತ ಪೇಸೌಲಭ್ಯವನ್ನು ಉಪಯೋಗಿಸುವಂತಿಲ್ಲ.
ಪಾವತಿ ಹೇಗೆ?ಅಂಗಡಿ ಮಳಿಗೆಗಳಲ್ಲಿ ವ್ಯವಹಾರ ನಡೆಸಿದ ಬಳಿಕ ಆಧಾರ್ ಪೇ ಮೂಲಕ ಪಾವತಿ ಮಾಡುವುದು ಹೇಗೆ ಎನ್ನುವುದು ಮುಂದಿನ ಪ್ರಶ್ನೆ. ಈ ಕಾರಣಕ್ಕಾಗಿಯೇ ಅಂಗಡಿಯ ಮಾಲಕರ ಬಳಿ ಒಂದು ಮೊಬೈಲ್ ಆಧಾರಿತ ಬೆರಳಚ್ಚು ಸ್ವೀಕರಿಸುವ ಯಂತ್ರವಿರುತ್ತದೆ. ಈ ಯಂತ್ರ ಸುಮಾರು 2,000 ರೂ.ಗೆ ಮಾರುಕಟ್ಟೆಯಲ್ಲಿ ಲಭ್ಯವಾಗಲಿದೆ. ಆದಷ್ಟು ಶೀಘ್ರದಲ್ಲಿಯೇ ಈ ಯಂತ್ರ ಸರ್ವೇ ಸಾಮಾನ್ಯವಾಗಿ ಎಲಾ ಅಂಗಡಿಗಳಲ್ಲಿ ಕಾಣಿಸಿಕೊಳ್ಳಬಹುದು. ಇದು ಆಧಾರ್ ಪೇಗಾಗಿಯೇ ವಿಶೇಷವಾಗಿ ತಯಾರಿಸಿದ ಬೆರಳಚ್ಚು ಸ್ವೀಕರಿಸುವ ಯಂತ್ರ. ಅಂಗಡಿಯಾತ ಈ ಯಂತ್ರಕ್ಕೆ ಅಗತ್ಯವಿರುವ ತಂತ್ರಾಂಶವನ್ನು ಒಂದು ಸಾರಿ ಡೌನೊÉàಡ್ ಮಾಡಿಕೊಂಡು ತನ್ನ ಆಧಾರ್ ನಂಬರ್ ಹಾಗೂ ಬ್ಯಾಂಕ್ ಖಾತೆಯನ್ನು ಲಿಂಕ್ ಮಾಡಿ ವ್ಯವಹಾರಕ್ಕೆ ಸಿದ್ಧರಾಗಿ ಇಟ್ಟಿರುತ್ತಾರೆ. ವ್ಯವಹಾರ ಮುಗಿಸಿ ಪಾವತಿ ಕೌಂಟರಿಗೆ ಬಂದು ಬಿಲ್ ತಯಾರಿ ಮಾಡಿದ ಬಳಿಕ ನೀವು ನಿಮ್ಮ ಆಧಾರ್ ನಂಬರನ್ನು ಮಾಲೀಕರಿಗೆ ತಿಳಿಸಬೇಕು. ಆಧಾರ್ ನಂಬರನ್ನು ಆ ಮೆಶೀನಿನಲ್ಲಿ ನಮೂದಿಸಿದ ಕೂಡಲೇ ಆ ಆಧಾರ್ ನಂಬರಿಗೆ ಲಿಂಕ್ ಆಗಿರುವ ಬ್ಯಾಂಕ್ ಖಾತೆಯ ನಂಬರ್ ಅಲ್ಲಿ ಕಾಣಿಸಿಕೊಳ್ಳುತ್ತದೆ. ಅದನ್ನು ದೃಢೀಕರಿಸಿದ ಬಳೀಕ ನೀವು ಪಾವತಿ ಮಾಡಬೇಕಾದ ಮೊತ್ತವನ್ನು ಅಲ್ಲಿ ನಮೂದಿಸಿ ನಿಮ್ಮ ಹೆಬ್ಬೆಟ್ಟನ್ನು ಆ ಮೆಶೀನಿನಲ್ಲಿ ಒತ್ತಬೇಕು. ಮೆಶೀನು ನಿಮ್ಮ ಹೆಬ್ಬೆಟ್ಟಿನ ಗುರುತನ್ನು ಓದಿ ಅದನ್ನು ಅಧಾರ್ ಖಾತೆಯಲ್ಲಿರುವ ಹೆಬ್ಬೆಟ್ಟಿನ ಗುರುತಿನೊಂದಿಗೆ ತಾಳೆ ನೋಡಿ ನಿಮ್ಮ ಗುರುತನ್ನು ದೃಢೀಕರಿಸಿಕೊಳ್ಳುತ್ತದೆ. ನಿಮ್ಮ ಖಾತೆಯಿಂದ ದುಡ್ಡು ಆಂಗಡಿಯವರ ಖಾತೆಗೆ ಹೋಗುತ್ತದೆ. ಇಲ್ಲಿ ಬರೇ ಆಧಾರ್ ಸಂಖ್ಯೆ ಹಾಗೂ ಹೆಬ್ಬೆಟ್ಟಿನ ಉಪಯೋಗ ನಡೆಯುತ್ತದೆ. ಅದು ಬಿಟ್ಟು ಬೇರೆ ಯಾವ ಕಾಡ್…, ಪಿನ್, ಪಾಸ್ವರ್ಡ್, ಇಂಟರ್ನೆಟ್ ಇತ್ಯಾದಿ ವಿಚಾರಗಳ ಅಗತ್ಯವೇ ಇರುವುದಿಲ್ಲ. ಅಷ್ಟೊಂದು ಸುಲಭ ಈ ಆಧಾರ್ ಪೇ. ಎಇಪಿಎಸ್ ಮತ್ತು ಮೈಕ್ರೋ ಎಟಿಎಂ ಮೇಲೆ ವಿವರಿಸಿದ ಎಇಪಿಎಸ್ ಅಥವಾ ಆಧಾರ್ ಬೇಸ್ಡ್ ಪೇಮೆಂಟ್ ಸಿಸ್ಟಂ ಅನ್ನು ಅಂಗಡಿ ಮಾಲ್‌ಗಳ ಹೊರತಾಗಿಯೂ ಬೇರೊಂದು ರೀತಿಯಲ್ಲಿಯೂ ಬಳಸಲು ಬರುತ್ತದೆ. ಅದು ಮೈಕ್ರೋ ಎಟಿಎಂಗಳ ಮೂಲಕವೂ ಸಾಧ್ಯ. ಬ್ಯಾಂಕುಗಳು ಹಲವಾರು ಎಡೆಗಳಲ್ಲಿ ಎಟಿಎಂಗಳನ್ನು ಸ್ಥಾಪನೆ ಮಾಡಿ ಅದರ ಮೂಲಕ ದುಡ್ಡು ಪಾವತಿ ಮಾಡುತ್ತಿರುವುದು ನಮಗೆಲ್ಲಾ ತಿಳಿದ ವಿಚಾರವಾಗಿದೆ. ಆದರೆ ಅದರ ಬದಲಾಗಿ ಹಳ್ಳಿಗಳಲ್ಲಿ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಜನರ ಉಪಕಾರಕ್ಕಾಗಿ ಮೈಕ್ರೋ ಎಟಿಎಂ ಯಂತ್ರಗಳನ್ನು ಉಪಯೋಗಕ್ಕೆ ತಂದಿದ್ದಾರೆ. ಈ ಮೈಕ್ರೋ ಎಟಿಎಂಗಳು ಚಿಕ್ಕದಾಗಿರುತ್ತವೆ. ಕೈಯಲ್ಲಿಯೇ ಹಿಡಕೊಂಡು ಆಚೀಚೆ ನಡೆದಾಡಬಹುದಾದಷ್ಟು ಚಿಕ್ಕದಿರುತ್ತವೆ. ಇದರಲ್ಲಿರುವ ಮುಖ್ಯ ವ್ಯತ್ಯಾಸವೇನೆಂದರೆ ಇದು ಎಟಿಎಂ ಮೆಶೀನುಗಳಂತೆ ಹೊಟ್ಟೆಯೊಳಗೆ ಕ್ಯಾಶ್ ಇಟ್ಟುಕೊಂಡು ಕಾರ್ಡ್ ಉಜ್ಜಿದಾಗ ವಾಂತಿ ಮಾಡಿಕೊಳ್ಳುವುದಿಲ್ಲ. ಈ ಮೈಕ್ರೋ ಎಟಿಎಂ ಮೆಶೀನುಗಳನ್ನು ಬ್ಯಾಂಕಿಂಗ್ ಕರೆಸ್ಪಾಂಡೆಂಟ್ ಎಂದು ಕರೆಯಲ್ಪಡುವ ವ್ಯಕ್ತಿಗಳ ಕೈಯಲ್ಲಿ ನೀಡಿರುತ್ತಾರೆ. ವ್ಯವಹಾರ ಮೆಶೀನಿನ ಮೂಲಕ ನಡೆದರೂ ಕ್ಯಾಶ್ ವ್ಯವಹಾರ ಏನಿದ್ದರೂ ಈ ಕರೆಸ್ಪಾಂಡೆಂಟ್ ಕೈಯಲ್ಲಿಯೇ ನಡೆಯುತ್ತದೆ. ಈ ಮೈಕ್ರೋ ಎಟಿಎಂ ಮೆಶೀನುಗಳು ಸಹ ಆಧಾರ್ ನಂಬರ್ ಮತ್ತು ಹೆಬ್ಬೆಟ್ಟಿನ ಉಪಯೋಗಗಳೊಂದಿಗೆ ನಡೆಯುತ್ತದೆ. ಮೈಕ್ರೋ ಎಟಿಎಂ
ಸದ್ಯಕ್ಕೆ ಮೈಕ್ರೋ ಎಟಿಎಂಗಳ ಮೂಲಕ ಈ ಕೆಳಗಿನ ಸೇವೆಗಳು ಸಾಧ್ಯ1ಬ್ಯಾಲನ್ಸ್ ತಿಳಿದುಕೊಳ್ಳುವುದು: ಒಬ್ಟಾತ ಬ್ಯಾಂಕಿಂಗ್ ಕರೆಸ್ಪಾಂಡೆಂಟ್ ಬಳಿ ಹೋಗಿ ಆತ ಹೊಂದಿರುವ ಒಂದು ಮೈಕ್ರೋ ಎಟಿಎಂನಲ್ಲಿ ನಿಮ್ಮ ಆಧಾರ್ ನಂಬರ್ ನಮೂದಿಸಬೇಕು. ಆಮೇಲೆ ಎಟಿಎಂ ಯಂತ್ರದಲ್ಲಿ ಇರುವಂತೆಯೇ ಆಯ್ಕೆಗಳ ಸ್ಕ್ರೀನು ತೆರೆದುಕೊಳ್ಳುತ್ತದೆ. ಅಲ್ಲಿ ನೀವು ನಿಮ್ಮ ಖಾತೆಯ ಬ್ಯಾಲನ್ಸ್ ವಿಚಾರಣೆಯ ಆಯ್ಕೆಯನ್ನು ನಮೂದಿಸಬೇಕು. ಮೆಶೀನಿನಲ್ಲಿರುವ ಸ್ಕ್ಯಾನರ್‌ನಲ್ಲಿ ನಿಮ್ಮ ಹೆಬ್ಬೆಟ್ಟನ್ನು ಮೆಶೀನಿನಲ್ಲಿ ಒತ್ತುವ ಮೂಲಕ ನಿಮ್ಮ ಗುರುತನ್ನು ದೃಢೀಕರಿಸಿಕೊಳ್ಳಬೇಕು. 2 ಕ್ಯಾಶ್ ಡೆಪಾಸಿಟ್/ಹಿಂಪಡೆತ: ಮೇಲೆ ತಿಳಿಸಿದಂತೆ ನಿಮ್ಮಆಧಾರ್ ನಂಬರ್ ಮೂಲಕ ನಿಮ್ಮ ಖಾತೆಯ ಒಳಹೊಕ್ಕು ನಗದು ಮೊತ್ತವನ್ನು ನಿಮ್ಮ ಖಾತೆಗೆ ಹಾಕಬಹುದು ಅಥವಾ ನಿಮ್ಮ ಖಾತೆಯಿಂದ ಹಿಂಪಡೆಯಬಹುದು. ಆದರೆ ನಗರ ಪ್ರದೇಶದಲ್ಲಿ ಕಾಣಸಿಗುವ ದೊಡ್ಡ ಗಾತ್ರದ ಎಟಿಎಂ ಮೆಶೀನಿನಂತೆ ಅದು ನಗದನ್ನು ಕಕ್ಕುವುದಿಲ್ಲ; ಅಥವಾ ಕ್ಯಾಶ್ ಡೆಪಾಸಿಟ್ ಮೆಶೀನಿನಂತೆ ಅದು ನಗದನ್ನು ನುಂಗುವುದೂ ಇಲ್ಲ. ಇಲ್ಲಿ ನಗದು ವ್ಯವಹಾರದ ವಿವರಗಳನ್ನು ಮಾತ್ರ ಮೈಕ್ರೋ ಎಟಿಎಂನಲ್ಲಿ ನಮೂದಿಸಲಾಗುತ್ತದೆ. ನಗದು ಡೆಪಾಸಿಟ್ ಹಾಗೂ ಹಿಂಪಡೆತವನ್ನು ಬ್ಯಾಂಕಿಂಗ್ ಕರೆಸ್ಪಾಂಡೆಂಟ್ ಕೈಯಲ್ಲಿಯೇ ಮಾಡಬೇಕಾಗುತ್ತದೆ.
3 ಆಧಾರ್-ಟು-ಆಧಾರ್ ಹಣ ವರ್ಗಾವಣೆ: ಆಧಾರ್ ಆಧಾರಿತ ನಿಮ್ಮ ಖಾತೆಯಿಂದ ಆಧಾರ್ ಆಧಾರಿತ ಇನ್ನೊಬ್ಬರ ಖಾತೆಗೆ ಹಣ ವರ್ಗಾವಣೆ ಕೂಡಾ ಈ ಮೈಕ್ರೋ ಎಟಿಎಂಗಳಲ್ಲಿ ಸಾಧ್ಯ. ಮೈಕ್ರೋ ಎಟಿಎಂನಲ್ಲಿ ನಿಮ್ಮ ಆಧಾರ್ ನಮೂದಿಸಿದ ಬಳಿಕ ಹಣ ವರ್ಗಾವಣೆಯ ಆಯ್ಕೆಯನ್ನು ಒತ್ತಬೇಕು. ಬಳಿಕ ಯಾರ ಖಾತೆಗೆ ಹಣ ವರ್ಗಾವಣೆಯಾಗಬೇಕೋ ಆತನ ಆಧಾರ್ ನಂಬರ್ ಹಾಗೂ ಮೊತ್ತ ನಮೂದಿಸಿ ಹಣ ವರ್ಗಾವಣಾ ಕೋರಿಕೆಯನ್ನು ಹೆಬ್ಬೆಟ್ಟಿನ ಮೂಲಕ ದೃಢೀಕರಿಸಿಕೊಳ್ಳಬೇಕು. ಈ ರೀತಿ ಆಧಾರ್ ಸಂಖ್ಯೆ ಬಳಸಿ ನಿಮ್ಮ ಖಾತೆಯಿಂದ ಇನ್ನೊಂದು ಖಾತೆಗೆ ವರ್ಗಾವಣೆ ಸಾಧ್ಯ. ಈ ರೀತಿ ಆಧಾರ್ ನಂಬರ್ ಹಣಕಾಸಿನ ವ್ಯವಹಾರದಲ್ಲಿ ದಾಪುಗಾಲು ಇಡುತ್ತಾ ಪ್ರಗತಿಯನ್ನು ಸಾಧಿಸಿದೆ. ಈ ದೇಶದ 125 ಕೋಟಿ ಜನರ ಪೈಕಿ 109 ಕೋಟಿ ಜನರ ಬಳಿ ಆಧಾರ್ ನಂಬರ್ ಈಗಾಗಲೇ ಇದೆ. ಉಳಿದವರಿಗೂ ಆಧಾರ್ ನೀಡುವ ಪ್ರಯತ್ನ ನಡೆಯುತ್ತಿದೆ. ಸುಮಾರು 40 ಕೋಟಿ ಜನರು ಈಗಾಗಲೇ ತಮ್ಮ ಬಾಂಕ್ ಖಾತೆಯನ್ನು ಆಧಾರ್ ನಂಬರಿಗೆ ಲಿಂಕ್ ಮಾಡಿಕೊಂಡಿ
ದ್ದಾರೆ ಎಂದು ಸರಕಾರದ ಅಂಕಿ ಅಂಶಗಳು ತಿಳಿಸುತ್ತವೆ. ನೆನಪಿನಲ್ಲಿ ಆಧಾರ್ ನಂಬರ್ ಇಟ್ಟುಕೊಂಡು ಕೈಯಲ್ಲಿ ಹೆಬ್ಬೆಟ್ಟು ಇಟ್ಟುಕೊಂಡು ಹಣಕಾಸಿನ ವ್ಯವಹಾರ ನಡೆಸುವುದು ಅತಿ ಸುಲಭ. ಯಾವುದೇ ಶುಲ್ಕವಿಲ್ಲದೆ, ಯಾವುದೇ ಕಾರ್ಡ್, ಪಿನ್, ಇಂಟರ್ನೆಟ್ ಇತ್ಯಾದಿಗಳ ಅಗತ್ಯವಿಲ್ಲದೆ ಕೇವಲ ನಮ್ಮ ದೈವದತ್ತ ದೇಹವನ್ನು ಮಾತ್ರ ಉಪಯೋಗಿಸಿಕೊಂಡು ನಡೆಸುವ ಆಧಾರ್ ಆಧಾರಿತ ಪಾವತಿ ವ್ಯವಸ್ಥೆ ಹಣಕಾಸಿನ ಭವಿಷ್ಯದತ್ತ ಒಂದು ಉತ್ತಮ ಹೆಜ್ಜೆ. ಹೆಬ್ಬೆಟ್ಟಿನಿಂದ ಆರಂಭಗೊಂಡ ನಮ್ಮ ಹಣಕಾಸಿನ ವ್ಯವಹಾರ ಕೊನೆಗೂ ಹೆಬ್ಬೆಟ್ಟಿಗೇ ಇಳಿದದ್ದು ಒಂದು ತಮಾಷೆಯಾದರೂ ಭವಿಷ್ಯದ ವಾಸ್ತವ. ಹೆಬ್ಬೆಟ್ಟಿನಷ್ಟು ಭದ್ರವಾದ ಗುರುತು ಬೇರೊಂದಿಲ್ಲ! – ಜಯದೇವ ಪ್ರಸಾದ ಮೊಳೆಯಾರ