Advertisement
ಇಂತಹ ಹಲವು ಹೆದರಿಕೆ, ಪ್ರಶ್ನೆಗಳ ನಡುವೆ ಬುಧವಾರ 85ನೇ ಸಾಹಿತ್ಯ ಸಮ್ಮೇಳನ ಶುರುವಾಯಿತು. ಆಶಯ ಭಾಷಣ ಮಾಡುವಾಗ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಮನು ಬಳಿಗಾರ್, ಅಂದಾಜು ಒಂದೂವರೆ ಲಕ್ಷ ಜನ ಇಲ್ಲಿಗೆ ಆಗಮಿಸಿದ್ದಾರೆ ಎಂದು ಪ್ರಕಟಿಸಿದರು. ಅಲ್ಲಿಗೆ ಎಲ್ಲ ಆತಂಕಗಳಿಗೂ ತೆರೆಬಿತ್ತು. ನಾಳೆ ನಮ್ಮ ಶಕ್ತಿ ತೋರಿಸ್ತೀವಿ ಅಂದವರ ಶಕ್ತಿ ನಿನ್ನೆಗೆ ಮುಗಿದುಹೋಗಿದೆ ಎನ್ನುವುದು ಖಚಿತವಾಯಿತು!
Related Articles
Advertisement
ಚೊಕ್ಕವಾಗಿ ಮಾತನಾಡಿದ ಮುಖ್ಯಮಂತ್ರಿ, ತಮ್ಮ ಪಾತ್ರ ಮುಗಿದ ನಂತರ ಮರಳಿ ಬೆಂಗಳೂರಿಗೆ ಹಾರಿದರು. ಇಲ್ಲಿ ನಿರೀಕ್ಷೆಗೆ ಮೀರಿದ ಸಮಯಪಾಲನೆ ಆಗಿದೆ ಎನ್ನುವುದನ್ನು ಗಮನಿಸಬೇಕು. ಅಷ್ಟೊಂದು ಒತ್ತಡಗಳ ನಡುವೆಯೇ ಯಡಿಯೂರಪ್ಪನವರು ಅದಕ್ಕೆ ಅನುವು ಮಾಡಿಕೊಟ್ಟರು.
ಅನ್ನಪೂರ್ಣೆ ಸದಾಪೂರ್ಣೆ: ಯಾವಾಗಲೂ ಜ್ಞಾನ, ಶಕ್ತಿಯಿಂದ ತುಂಬಿಕೊಂಡಿರುವ ಅನ್ನಪೂರ್ಣೆ ಬುಧವಾರ ತನ್ನ ಭೌತಿಕ ಸ್ವರೂಪದಲ್ಲಿ ವಿಜೃಂಭಿಸಿದಳು. ಭೋಜನಮಂದಿರಕ್ಕೆ ಜನ ನುಗ್ಗಿಬಂದರು. ಬೆಳಗ್ಗೆ 60,000 ಮಂದಿ ಉಪಾಹಾರ ಸ್ವೀಕರಿಸಿದರೆ, ಮಧ್ಯಾಹ್ನ 80,000 ಮಂದಿ ಊಟ ಮಾಡಿದರು.
ಪ್ರತಿ ವ್ಯಕ್ತಿಯ ಶರೀರದಲ್ಲಿ ಜೀರ್ಣಶಕ್ತಿಯ ರೂಪದಲ್ಲಿ ಅಡಗಿ ಕುಳಿತಿರುವ ವೈಶ್ವಾನರ (ಅಗ್ನಿಯ ಒಂದು ರೂಪ) ತನ್ನ ಬಾಹುಗಳನ್ನು ವಿಸ್ತರಿಸಿಕೊಂಡು ಆಹುತಿಗಳನ್ನು ಅಪರಿಮಿತ ಪ್ರಮಾಣದಲ್ಲಿ ಸ್ವೀಕರಿಸಿ ಸಂತೃಪ್ತಗೊಂಡ. ಯಜ್ಞಕುಂಡದಲ್ಲಿ ಹವ್ಯವಾಹನನೆಂದು ಕಾಣಿಸಿಕೊಳ್ಳುವ ಆತ, ಅನ್ನಪೂರ್ಣೆಯ ಕುಂಡದಲ್ಲಿ ವೈಶ್ವಾನರನಾದ.
ಸಮ್ಮೇಳನದ ಯಶಸ್ಸು ಎಂದರೆ ಅದು ಧನಾತ್ಮಕ ವಿಷಯಗಳಿಂದ ಮಾತ್ರವಲ್ಲ, ಋಣಾತ್ಮಕ ಸಂಗತಿ ಗಳಿಂದಲೂ ಸಾಬೀತಾಗುತ್ತದೆ! ಬೃಹತ್ ಸಂಘಟನೆ ನಡೆಯುವ ಕಡೆ ಬೃಹತ್ತಾದ ಸಮಸ್ಯೆ ಸಾಮಾನ್ಯ. 1 ಲಕ್ಷವನ್ನೂ ಮೀರಿದ ಜನರಿಗೆ ಶೌಚಾಲಯದ ವ್ಯವಸ್ಥೆ ಮಾಡುವುದಾದರೂ ಹೇಗೆ? ಆದರೂ ಸಂಘಟಕರು ಅದನ್ನು ಶಕ್ತಿಮೀರಿ ಮಾಡಿದ್ದರು. ಆದರೆ ಅದರ ನಿರ್ವಹಣೆ ಮಾತ್ರ ಬಹಳ ಕಷ್ಟವಾಗಿತ್ತು.
ಶೌಚಾಲಯದೊಳಕ್ಕೆ ನೀರು ಒಯ್ಯುವುದು ಒಂದು ತಾಪತ್ರಯವಾದರೆ, ಆ ಗಲೀಜನ್ನು ತಡೆದುಕೊಳ್ಳುವುದು ಇನ್ನೊಂದು ತಾಪತ್ರಯ. ನಿಜಕ್ಕೂ ವ್ಯವಸ್ಥೆಯೊಂದು ಕೈಮೀರುತ್ತಿದೆ, ಜನಶಕ್ತಿಯನ್ನು ತಡೆಯಲು ಸಾಧ್ಯವಾಗುತ್ತಿಲ್ಲ ಅನಿಸಿದರೆ, ಅಲ್ಲಿಗೆ ಜನರು ಬರುತ್ತಿದ್ದಾರೆ, ಅವರು ಸ್ಪಂದಿಸುತ್ತಿದ್ದಾರೆ ಅನ್ನುವುದೇ ಅರ್ಥ. ಇನ್ನೊಂದು ಕಡೆ ಆಹಾರ ವಿತರಣೆಗೆ ಬಳಸಿದ ಅಡಕೆ ಹಾಳೆಗಳನ್ನು ದೊಡ್ಡದೊಂದು ಗುಂಡಿಗೆ ಹಾಕಿ,
ಅದಕ್ಕೆ ಉಳಿದ ಆಹಾರಪದಾರ್ಥವನ್ನು ಸೇರಿಸಿದ್ದು ಕಂಡುಬಂತು. ಜನರು ಎಷ್ಟು ತಿಂದಿರಬಹುದು, ಎಷ್ಟನ್ನು ಎಸೆದಿರಬಹುದು ಎಂದು ನೀವೇ ಊಹಿಸಿಕೊಳ್ಳಿ. ಕನ್ನಡಿಗ, ಸಾಧುಂಗೆ ಸಾಧು, ಮಾಧುರ್ಯಂಗೆ ಮಾಧುರ್ಯಂ, ಬಾಧಿಪ್ಪ ಕಲಿಗೆ ಕಲಿಯುಗ ವಿಪರೀತನ್, ಮಾಧವನೀತಂ ಪೆರನಲ್ಲ ಎಂದು ಕಪ್ಪೆ ಆರಭಟ್ಟನ ಶಾಸನದಲ್ಲಿ ಹೇಳಲಾಗಿದೆ. ಎಲ್ಲ ಆತಂಕಗಳನ್ನು ಮೀರಿ, ಸಮ್ಮೇಳನವನ್ನು ಗೆಲ್ಲಿಸಿದ ಕನ್ನಡಿಗನ ಇಚ್ಛಾಶಕ್ತಿಯನ್ನು ನೋಡಿದಾಗ ಈ ಮಾತನ್ನು ಒಪ್ಪಿಕೊಳ್ಳದೇ ಬೇರೆ ವಿಧಿಯಿಲ್ಲ.
32 ವರ್ಷಗಳ ನಂತರ ಕಲಬುರಗಿಯಲ್ಲಿ ಅಖೀಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯುತ್ತಿದೆ. ಆದರೆ, ಈ ಭಾಗದ ಸಾಹಿತಿಗಳಿಗೆ ವೇದಿಕೆಯಲ್ಲಿ ಹೆಚ್ಚಿನ ಆದ್ಯತೆ ಸಿಕ್ಕಿಲ್ಲ. ಜತೆಗೆ, ಈ ಭಾಗದ ಜನರ ಸಮಸ್ಯೆಗಳಿಗೆ ಗೋಷ್ಠಿಗಳು ಧ್ವನಿಯಾಗಿಲ್ಲ. ಇದು ಬೇಸರ ಮೂಡಿಸುವ ಸಂಗತಿಯಾಗಿದೆ.-ಭಾಗ್ಯ ಆರ್. ಶಹಾಬಜಾರ್ ಕನ್ನಡ ಸಾಹಿತ್ಯ ಸಮ್ಮೇಳನ ತೊಗರಿ ಕಣಜದಲ್ಲಿ ನಡೆಯುತ್ತಿರುವುದು ಸಂತಸ ತಂದಿದೆ. ಎಲ್ಲಕ್ಕಿಂತ ಮಿಗಿಲಾಗಿ ಇಲ್ಲಿನ ಕಲಾವಿದರಿಗೆ ಹೆಚ್ಚಿನ ಮಾನ್ಯತೆ ಸಿಕ್ಕಿದೆ. ಇಂತಹ ಸಮ್ಮೇಳನಗಳು ಗಡಿಭಾಗಗಳಲ್ಲಿ ಪ್ರತಿ 5 ವರ್ಷಕ್ಕೆ ನಡೆದರೆ ಚೆಂದ.
-ಗೀತಾ, ದೇವಿನಗರ್ ಸಾಹಿತ್ಯ ಸಮ್ಮೇಳನ ನಾಡು, ನುಡಿಯ ಕುರಿತ ಹಲವು ಸಮಸ್ಯೆಗಳಿಗೆ ವೇದಿಕೆಯಾಗಿದೆ. ಭಾಷಾ ಸಂವಹನ ಕುರಿತ ಚರ್ಚೆ ಗಳಿಗೆ ಮುನ್ನುಡಿ ಬರೆಯಲಿದೆ. ಈ ಹಿನ್ನೆಲೆಯಲ್ಲಿ ಬೆಂಗಳೂರಿ ನಿಂದ ಕನ್ನಡ ಅಕ್ಷರ ಜಾತ್ರೆ ಕಣ್ತುಂಬಿಕೊಳ್ಳಲು ಬಂದಿರುವೆ.
-ಸಿ. ಹೇಮಾ ಶಿಶಿರಾ ಅಖೀಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ವಿಶಾಲ ಕರ್ನಾಟಕದ ಮನೋಭೂಮಿಕೆ ಆಗಿದೆ. ಕನ್ನಡಿಗರೆಲ್ಲರೂ ಒಂದಾಗಿ ಬಾಳುವ ಸಂದೇಶ ಸಾರುತ್ತದೆ. ಇಂತಹ ಸಮ್ಮೇಳನಗಳಲ್ಲಿ ಭಾಗವಹಿಸುವುದೇ ಪುಣ್ಯ.
-ನೀಲಾವರ ಸುರೇಂದ್ರ ಅಡಿಗ * ಪೃಥ್ವಿಜಿತ್ ಕೆ.