ಬೆಂಗಳೂರು: ರಾಜೀವ್‌ಗಾಂಧಿ ವಸತಿ ಯೋಜನೆಯಡಿ ಹಿಂದಿನ ಸರ್ಕಾರ ನೀಡಿದ್ದ ಮನೆಗಳ ಪೈಕಿ ಸುಮಾರು 68 ಸಾವಿರ ಮನೆಗಳು “ಲಾಕ್’ ಆಗಿವೆ. ಅಂದರೆ, ಯೋಜನೆ ಫಲಾನುಭವಿಗಳಿದ್ದರೂ ಅವರಿಗೆ ಮನೆ ನಿರ್ಮಾಣಕ್ಕೆ ಹಣ ಮಂಜೂರು ಆಗುತ್ತಿಲ್ಲ.
ಇದರಿಂದ ತೊಂದರೆಗೊಳಗಾಗಿರುವ ಫಲಾನುಭವಿಗಳ ನೆರವಿಗೆ ವಸತಿ ಇಲಾಖೆ ಬಂದಿದ್ದು, ಒಂದು ತಿಂಗಳೊಳಗೆ ಮನೆ ನಿರ್ಮಾಣ ಆರಂಭಿಸಿರುವ ಬಗ್ಗೆ ಜಿಪಿಎಸ್ ಮೂಲಕ ವೆಬ್‌ಸೈಟ್‌ಗೆ ಅಪ್‌ಲೋಡ್ ಮಾಡಿದರೆ ಅಂಥವರ ಮನೆ ಮಂಜೂರಾತಿಗೆ ಆಗಿರುವ “ಲಾಕ್’ ಓಪನ್ ಮಾಡಿ ಹಣ ಬಿಡುಗಡೆ ಮಾಡಲಾಗುವುದು. ಈ ಬಗ್ಗೆ ಶೀಘ್ರದಲ್ಲೇ ದಿನಾಂಕ ಪ್ರಕಟಿಸಲಾಗುವುದು ಎಂದು ನಗರಾಭಿವೃದ್ಧಿ ಮತ್ತು ವಸತಿ ಸಚಿವ ಯು.ಟಿ.ಖಾದರ್ ಹೇಳಿದ್ದಾರೆ.
ರಾಜೀವ್‌ಗಾಂಧಿ ವಸತಿ ಯೋಜನೆಯಡಿ ಹಿಂದಿನ ಸರ್ಕಾರ ಲಕ್ಷಾಂತರ ಮನೆಗಳನ್ನು ವಿತರಿಸಿತ್ತು. ನಿಯಮದಂತೆ ಯೋಜನೆ ಮಂಜೂರಾಗಿ ಮೂರು ತಿಂಗಳೊಳಗೆ ಫಲಾನುಭವಿಗಳು ಮನೆ ನಿರ್ಮಾಣ ಆರಂಭಿಸಬೇಕಿತ್ತು. ಆದರೆ, ಸುಮಾರು 68 ಸಾವಿರ ಫಲಾನುಭವಿಗಳು ಮನೆ ನಿರ್ಮಾಣ ಆರಂಭಿಸದ ಕಾರಣ ಅಂತಹ ಫಲಾನುಭವಿಗಳನ್ನು ಲಾಕ್ ಮಾಡಲಾಗಿತ್ತು. ಇದರಿಂದಾಗಿ ಮನೆ ನಿರ್ಮಾಣ ಆರಂಭಿಸಿ ಮಾಹಿತಿ ಅಪ್‌ಲೋಡ್ ಮಾಡಿದಾಗ ನಿಮ್ಮ ಮಂಜೂರಾತಿ ಬ್ಲಾಕ್ ಆಗಿದೆ ಎಂಬ ಮಾಹಿತಿ ಲಭ್ಯವಾಗುತ್ತಿದೆ. ಇದರಿಂದ ಫಲಾನುಭವಿಗಳು ತೊಂದರೆಗೊಳಗಾಗಿದ್ದು, ಅವರಿಗೆ ನ್ಯಾಯ ಒದಗಿಸಲು ಸರ್ಕಾರ ಈ ಕ್ರಮ ಕೈಗೊಳ್ಳುತ್ತಿದೆ ಎಂದರು.
ನಿಜವಾಗಿ ಆಗಿದ್ದೇನು?:
ಹಿಂದಿನ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ರಾಜೀವ್ ಗಾಂಧಿ ವಸತಿ ಯೋಜನೆಯಡಿ ಮನೆಗಳು ಮಂಜೂರಾಗಿದ್ದು, ಸುಮಾರು 68 ಸಾವಿರ ಮಂದಿ ಮನೆ ನಿರ್ಮಾಣ ಆರಂಭಿಸಿರಲಿಲ್ಲ. ಈ ಮಧ್ಯೆ ಕೆಲವರು ರಾಜೀವ್ ಗಾಂಧಿ ವಸತಿ ಯೋಜನೆಯಡಿ ಮನೆ ಮಂಜೂರಾದ ಫಲಾನುಭವಿಗಳು ಮನೆ ನಿರ್ಮಿಸಿಕೊಂಡಿಲ್ಲ. ಹೀಗಾಗಿ ಆ ಮನೆಗಳನ್ನು ನಮಗೆ ಕೊಡಿ ಎಂದು ಇಲಾಖೆಗೆ ಬೆನ್ನುಬಿದ್ದಿದ್ದರು. ಅಷ್ಟರಲ್ಲಿ ವಿಧಾನಸಭೆ ಚುನಾವಣೆಯೂ ಸಮೀಪಿಸಿದ್ದರಿಂದ ಕೇಳಿದವರಿಗೆ ತುರ್ತಾಗಿ ಮನೆಗಳನ್ನು ಕೊಡಬೇಕು ಎಂಬ ಕಾರಣಕ್ಕೆ ಮನೆ ನಿರ್ಮಾಣ ಮಾಡದ ಫಲಾನುಭವಿಗಳನ್ನು ಲಾಕ್ ಮಾಡಿ ಆ ಮನೆಗಳನ್ನು ಬೇರೆಯವರಿಗೆ ಹಂಚಿಕೆ ಮಾಡಲಾಗಿತ್ತು.
ನಿಯಮಾವಳಿ ಪ್ರಕಾರ ಮಂಜೂರಾದ ಮನೆಗಳನ್ನು ರದ್ದುಗೊಳಿಸುವ ಮುನ್ನ ಫಲಾನುಭವಿಗೆ ನೋಟಿಸ್ ಜಾರಿ ಮಾಡಿ ವಿವರಣೆ ಕೇಳಬೇಕು. ಆದರೆ, ಆ ಯಾವುದೇ ಪ್ರಕ್ರಿಯೆ ನಡೆಸದೆ, ಮನೆಗಳನ್ನು ರದ್ದೂ ಮಾಡದೆ ಕೇವಲ ಲಾಕ್ ಮಾಡಲಾಗಿದೆ. ಆರಂಭದಲ್ಲಿ ಚುನಾವಣೆ ಘೋಷಣೆಯಾಗಿದ್ದರಿಂದ ಈ ರೀತಿ ಆಗಿರಬಹುದು ಎಂದು ಫಲಾನುಭವಿಗಳು ಬಾವಿಸಿದ್ದರು. ಚುನಾವಣೆ ಮುಗಿದು ಹೊಸ ಸರ್ಕಾರ ಅಧಿಕಾರಕ್ಕೆ ಬಂದ ಮೇಲೂ ಸಮಸ್ಯೆ ಸರಿಹೋಗದ ಕಾರಣ ಸಂಬಂಧಿಸಿದವರನ್ನು ವಿಚಾರಿಸಿದಾಗ ಪರಿಸ್ಥಿತಿ ಗೊತ್ತಾಯಿತು. ಹೀಗಾಗಿ ಸಮಸ್ಯೆ ಸರಿಪಡಿಸುವಂತೆ ಹೊಸ ಸರ್ಕಾರಕ್ಕೆ ಮನವಿ ಮಾಡಿಕೊಂಡಿದ್ದರು.