ಬೆಂಗಳೂರು: ರಾಜ್ಯ ಸರ್ಕಾರಿ ನೌಕರರಿಗೆ ಪ್ರತಿ ತಿಂಗಳ ನಾಲ್ಕನೇ ಶನಿವಾರವನ್ನು ಸಾರ್ವತ್ರಿಕ ರಜೆಯಾಗಿ ಘೋಷಿಸಿದ ಸರ್ಕಾರ ತಕ್ಷಣದಿಂದಲೇ ಜಾರಿಗೊಳಿಸಿರುವ ಹಿನ್ನೆಲೆಯಲ್ಲಿ ಈ ತಿಂಗಳ ನಾಲ್ಕನೇ ಶನಿವಾರವಾದ ಜೂ. 22ರಂದು ಸರ್ಕಾರಿ ನೌಕರರಿಗೆ ಸಾರ್ವತ್ರಿಕ ರಜೆ ಇರಲಿದೆ.
ಆರನೇ ವೇತನ ಆಯೋಗದ ಶಿಫಾರಸಿನಂತೆ ತಿಂಗಳ ನಾಲ್ಕನೇ ಶನಿವಾರವೂ ಸರ್ಕಾರಿ ನೌಕರರಿಗೆ ರಜೆ ನೀಡಲು ಇತ್ತೀಚೆಗೆ ನಡೆದ ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗಿತ್ತು. ಬಳಿಕ ತಕ್ಷಣದಿಂದಲೇ ಜಾರಿಗೊಳಿಸಿ ಆದೇಶ ಹೊರಡಿಸಿರುವ ಹಿನ್ನೆಲೆಯಲ್ಲಿ ಮೊದಲ ಬಾರಿಗೆ ನಾಲ್ಕನೇ ಶನಿವಾರವಾದ ಜೂ.22ರಿಂದಲೇ ಸಾರ್ವತ್ರಿಕ ರಜೆ ಜಾರಿಯಾಗಲಿದೆ.
ರಾಜ್ಯ ಸರ್ಕಾರಿ ನೌಕರರಿಗೆ ಪ್ರತಿ ತಿಂಗಳ ನಾಲ್ಕನೇ ಶನಿವಾರ ಸಾರ್ವತ್ರಿಕ ರಜೆ ಘೋಷಿಸಲಾಗಿದೆ. ಆದರೆ, ಈ ತಿಂಗಳು ಅದು ರಾಜ್ಯದ ಅಧೀನ ನ್ಯಾಯಾಲಯಗಳಿಗೆ ಅನ್ವಯವಾಗುವುದಿಲ್ಲ. ಹಾಗಾಗಿ, ಜೂ.22 (ಶನಿವಾರ) ಎಲ್ಲ ಅಧೀನ ನ್ಯಾಯಾಲಯಗಳು ಎಂದಿನಂತೆ ಕಾರ್ಯನಿರ್ವಹಿಸಲಿವೆ.
ಸರ್ಕಾರಿ ನೌಕರರಿಗೆ 4ನೇ ಶನಿವಾರ ರಜೆ ಘೋಷಿಸಿದ ಬಳಿಕ ತೀರ್ಮಾನ ತೆಗೆದುಕೊಳ್ಳಲು ಬಹಳ ಕಡಿಮೆ ಸಮಯ ಇತ್ತು. ಮೇಲಾಗಿ, ಈ ಬಗ್ಗೆ ಹೈಕೋರ್ಟ್‌ನ ಪೂರ್ಣ ಪೀಠದಲ್ಲಿ ನಿರ್ಧಾರ ತೆಗೆದುಕೊಳ್ಳಬೇಕಾಗಿದೆ. ಅಲ್ಲದೇ ಶನಿವಾರದ ವ್ಯಾಜ್ಯಗಳು ಈಗಾಗಲೇ ವಿಚಾರಣೆಗೆ ನಿಗದಿಯಾಗಿವೆ. ಹಾಗಾಗಿ ಈ ಶನಿವಾರ (ಜೂ.22) ಅಧೀನ ನ್ಯಾಯಾಲಯಗಳಿಗೆ ರಜೆ ಘೋಷಿಸಲು ಸಾಧ್ಯವಾಗಿಲ್ಲ.
ಜೂ.26ರಂದು ಹೈಕೋರ್ಟ್ ಪೂರ್ಣ ಪೀಠದ ಸಭೆ ನಿಗದಿಯಾಗಿದ್ದು, ಅದರಲ್ಲಿ ನಿರ್ಧಾರ ತೆಗೆದುಕೊಂಡ ಬಳಿಕ ಜುಲೈ ತಿಂಗಳಿಂದ 4ನೇ ಶನಿವಾರದ ರಜೆ ಎಲ್ಲ ಅಧೀನ ನ್ಯಾಯಾಲಯಗಳಿಗೂ ಅನ್ವಯವಾಗಲಿದೆ.
ಈ ಕುರಿತು ಬೆಂಗಳೂರು ವಕೀಲರ ಸಂಘಧ ಅಧ್ಯಕ್ಷ ಎ.ಪಿ. ರಂಗನಾಥ್ ನೇತೃತ್ವದ ನಿಯೋಗ ಮುಖ್ಯ ನ್ಯಾಯಮೂರ್ತಿ ಎ.ಎಸ್. ಓಕ್, ಹಿರಿಯ ನ್ಯಾಯಮೂರ್ತಿಗಳಾದ ಎಲ್. ನಾರಾಯಣಸ್ವಾಮಿ, ರವಿ ಮಳಿಮಠ ಹಾಗೂ ಬಿ.ವಿ. ನಾಗರತ್ನ ಅವರನ್ನು ಭೇಟಿ ಮಾಡಿ ಮನವಿ ಮಾಡಿದರು ಎಂದು ವಕೀಲರ ಸಂಘ ಹೇಳಿದೆ.