ಜಮ್ಮು: ಪ್ರಸಕ್ತ ಸಾಲಿನ ಅಮರನಾಥ ಯಾತ್ರೆಗೆ ಭಾನುವಾರ ಬೆಳಗ್ಗೆ ಚಾಲನೆ ದೊರಕಿದೆ. ವ್ಯಾಪಕ ಭದ್ರತೆಯ ನಡುವೆ ಮೊದಲ ತಂಡ ಗುಹಾಂತರ ದೇಗುಲಕ್ಕೆ ಪ್ರಯಾಣ ಆರಂಭಿಸಿದೆ.
45 ದಿನಗಳ ಕಾಲ ನಡೆಯುವ ಪವಿತ್ರ ಯಾತ್ರೆ ಅಗಸ್ಟ್ 15 ರ ಶ್ರಾವಣ ಪೂರ್ಣಿಮೆಯವರೆಗೆ ನಡೆಯಲಿದೆ.3,888 ಮೀಟರ್ ಎತ್ತರದಲ್ಲಿರುವ ಹಿಮ ಲಿಂಗದ ದರ್ಶನಕ್ಕಾಗಿ ಸಕಲ ವ್ಯವಸ್ಥೆಗಳನ್ನು ಮಾಡಿಕೊಳ್ಳಲಾಗಿದೆ. ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಈಗಾಗಲೆ ಕಾಶ್ಮೀರಕ್ಕೆ ತೆರಳಿ ಭದ್ರತಾ ಪರಿಶೀಲನೆ ನಡೆಸಿದ್ದಾರೆ.
ಬಾಲ್‌ತಾಲ್ ಬೇಸ್ ಕ್ಯಾಂಪ್‌ನಿಂದ 1,051 ಮಂದಿ ಯಾತ್ರಿಕರು, ಪಹಲ್‌ಗಾಮ್ ಬೇಸ್ ಕ್ಯಾಂಪ್‌ನಿಂದ 1,183 ಮಂದಿ ಯಾತ್ರೆ ಆರಂಭಿಸಿದ್ದಾರೆ. ಯಾತ್ರಿಗಳ ಪೈಕಿ 333 ಮಹಿಳೆಯರು, 45 ಸಾಧುಗಳು ಮತ್ತು 17 ಮಕ್ಕಳು ಸೇರಿದ್ದಾರೆ.
ಭಾನುವಾರ 3 ಗಂಟೆಯ ವರೆಗೆ ಜಮ್ಮು-ಶ್ರೀನಗರ ಹೆದ್ದಾರಿಯಲ್ಲಿ ಏಕಮುಕ ಸಂಚಾರಕ್ಕೆ ಮಾತ್ರ ಅವಕಾಶ ನೀಡಲಾಗಿದೆ. ಯಾತ್ರಿಕರು ಜವಹಾರ್ ಗುಹೆಯನ್ನು ದಾಟಿದ ಬಳಿಕ ಬೇರೆ ವಾಹನಗಳ ಸಂಚಾರಕ್ಕೆ ಅವಕಾಶ ಮಾಡಿ ಕೊಡಲಾಗುತ್ತಿದೆ.
ಯಾತ್ರಿಕರ ಸಂಪೂರ್ಣ ಭದ್ರತೆಗಾಗಿ 60 ಸಾವಿರ ಭದ್ರತಾ ಪಡೆಗಳನ್ನು ನಿಯೋಜಿಸಲಾಗಿದೆ.