Advertisement
ಇಲ್ಲಿನ ಮೂರುಸಾವಿರಮಠದ ಮಹಾದ್ವಾರದ ಮುಂಭಾಗದಲ್ಲಿ ರವಿವಾರ ನಡೆದ ಬಹಿರಂಗ ಸಭೆಯಲ್ಲಿ ಮಾತನಾಡಿದ ಅವರು, ಕತೃì ಗದ್ದುಗೆ ಮೇಲೆ ಪ್ರಮಾಣ ಮಾಡಿ ಹೇಳುತ್ತೇನೆ ನಾನು ಹೇಳುವ ವಿಚಾರಗಳೆಲ್ಲ ಸತ್ಯವಾಗಿದ್ದು, ಮಠದ ಆಸ್ತಿ-ಅಂತಸ್ತಿನ ಆಸೆಯಿಂದ ಉತ್ತರಾಧಿಕಾರಿಯಾಗಲು ಬಂದಿಲ್ಲ. ಮಠ ಸಂಕಷ್ಟದಲ್ಲಿದ್ದ ಸಂದರ್ಭದಲ್ಲಿ ನನ್ನಿಂದ ನೆರವು ಪಡೆದು ಮಠದ ಉತ್ತರಾಧಿಕಾರಿಯಾಗಬೇಕೆಂದು ಶ್ರೀಮಠದ ಜಗದ್ಗುರುಗಳು ಹಾಗೂ ಉನ್ನತ ಸಮಿತಿಯವರ ಒತ್ತಾಯಕ್ಕೆ ಒಲ್ಲದ ಮನಸ್ಸಿನಿಂದಲೇ ಒಪ್ಪಿಕೊಂಡಿದ್ದೆ. ನಂತರದಲ್ಲಿ ತಮ್ಮನ್ನು ಉತ್ತರಾಧಿಕಾರಿ ಮಾಡಲು ಸಾಧ್ಯವಿಲ್ಲವೆಂದು, ತಮ್ಮ ವಿರುದ್ಧ ಇಲ್ಲಸಲ್ಲದ ಆರೋಪ ಮಾಡುವ ಮೂಲಕ ನನ್ನ ಚಾರಿತ್ರ್ಯ ಹರಣ ಮಾಡಿದ್ದರಿಂದ ಈ ಸತ್ಯದರ್ಶನ ಸಭೆ ಕರೆದಿದ್ದೇನೆ ಎಂದರು.
Related Articles
Advertisement
ಆಣೆ ಮಾಡಿದ್ದಕ್ಕೆ ಒಪ್ಪಿಕೊಂಡೆ: ಮಠ ಸಾಮಾಜಿಕ, ಆರ್ಥಿಕ ಹಾಗೂ ಶೈಕ್ಷಣಿಕವಾಗಿ ಅವನತಿಗೊಂಡಾಗ ಇನ್ನೊಬ್ಬ ಶ್ರೀಗಳ ಉತ್ತರಾಧಿಕಾರಿ ಗೊಂದಲ ಬಗೆಹರಿಸಲು ಭಕ್ತರಿಂದ ನೆರವು ಪಡೆದು 1 ಕೋಟಿ ರೂ. ನೀಡಿದ್ದೆ. 2009ರಲ್ಲಿ ಒಮ್ಮೆ ಉತ್ತರಾಧಿಕಾರಿ ನೇಮಕ ಕುರಿತು ನನ್ನ ಗೌರವ ಕುಂದಿಸುವ ಕೆಲಸ ನಡೆಯಿತು. 2014ರಲ್ಲಿ ಗುರುಸಿದ್ಧ ರಾಜಯೋಗೀಂದ್ರ ಶ್ರೀಗಳು, ವಿಧಾನ ಪರಿಷತ್ತು ಸದಸ್ಯ ಬಸವರಾಜ ಹೊರಟ್ಟಿ ಅವರ ತೋಟಕ್ಕೆ ನನ್ನನ್ನು ಕರೆದು ಮನವೊಲಿಸುವ ಕೆಲಸ ಮಾಡಿದ್ದರು. ನಂತರ ಜಗದೀಶ ಶೆಟ್ಟರ ಕೂಡ ನೀವೇ ಉತ್ತರಾಧಿಕಾರಿಯಾಗಬೇಕೆಂದು ಹೇಳಿದ್ದರು. ಇಷ್ಟೆಲ್ಲಾ ಹೇಳಿದರೂ ಒಪ್ಪಿಕೊಂಡಿರಲಿಲ್ಲ. ಆದರೆ ಶ್ರೀಗಳು ಕುಮಾರೇಶ್ವರ ಹಾಗೂ ಗುರುಸಿದ್ದೇಶ್ವರ ಶ್ರೀಗಳ ಮೇಲೆ ಆಣೆ ಮಾಡಿದ್ದಕ್ಕೆ ನಾನು ಒಪ್ಪಿಕೊಂಡಿದ್ದೇನೆ ಎಂದರು.
ಮುಳ್ಳೊಳ್ಳಿ, ಬೊಮ್ಮನಹಳ್ಳಿ, ಮಂಟೂರು ಹಾಗೂ ಅಗಡಿ ಶ್ರೀಗಳು, ಮಾಜಿ ಶಾಸಕರಾದ ಜಿ.ಎಸ್. ಗಡ್ಡದೇವರಮಠ, ಶಿವಾನಂದ ಅಂಬಡಗಟ್ಟಿ, ಜಿಪಂ ಉಪಾಧ್ಯಕ್ಷ ಶಿವಾನಂದ ಕರಿಗಾರ, ಬಸವರಾಜ ದಿಂಡೂರು, ಶಂಕರ ಬಾಳಿಕಾಯಿ, ಗುರುರಾಜ ಹುಣಸಿಮರದ, ಪ್ರಕಾಶ ಬೆಂಡಿಗೇರಿ, ಅಜ್ಜಪ್ಪ ಹೊರಕೇರಿ, ಶಿವಾನಂದ ಮುತ್ತಣ್ಣವರ, ಶೇಖಣ್ಣ ಬೆಂಡಿಗೇರಿ ಇನ್ನಿತರರಿದ್ದರು.
ನೆಹರು ಮೈದಾನದಿಂದ ಪಾದಯಾತ್ರೆಯಲ್ಲಿ ಆಗಮನ ಬಹಿರಂಗ ಸಭೆಗೂ ಮೊದಲು ನೂರಾರು ಭಕ್ತರೊಂದಿಗೆ ಇಲ್ಲಿನ ನೆಹರು ಮೈದಾನದಿಂದ ಮೂರುಸಾವಿರಮಠದವರಿಗೆ ದಿಂಗಾಲೇಶ್ವರ ಶ್ರೀಗಳ ನೇತೃತ್ವದಲ್ಲಿ ಪಾದಯಾತ್ರೆ ನಡೆಯಿತು. ಡಾ| ಬಿ.ಆರ್. ಅಂಬೇಡ್ಕರ್, ಬಸವೇಶ್ವರ ಮೂರ್ತಿ, ಸರ್ ಸಿದ್ದಪ್ಪ ಕಂಬಳಿ, ಸಂಗೊಳ್ಳಿ ರಾಯಣ್ಣ ಹಾಗೂ ಕಿತ್ತೂರು ಚನ್ನಮ್ಮ ಪ್ರತಿಮೆಗಳಿಗೆ ಮಾಲಾರ್ಪಣೆ ಮಾಡಿ, ನಂತರ ಮೂರುಸಾವಿರಮಠಕ್ಕೆ ಆಗಮಿಸಲಾಯಿತು.
ಪೊಲೀಸರ ಸರ್ಪಗಾವಲು : ಸಾವಿರಾರು ಸಂಖ್ಯೆಯಲ್ಲಿ ದಿಂಗಾಲೇಶ್ವರ ಶ್ರೀಗಳ ನೇತೃತ್ವದಲ್ಲಿ ಹಮ್ಮಿಕೊಂಡಿದ್ದ ಸತ್ಯದರ್ಶನ ಸಭೆಯನ್ನು ಮಠದೊಳಗೆ ನಡೆಸಲು ಪೊಲೀಸರು ಅನುಮತಿ ನೀಡಿರಲಿಲ್ಲ. ಪರಿಣಾಮ ಮುಖ್ಯದ್ವಾರದ ಮುಂಭಾಗದ ರಸ್ತೆಯಲ್ಲೇ ಬಹಿರಂಗ ಸಭೆ ಮಾಡಿ ಮುಕ್ತಾಯಗೊಳಿಸಿದರು. ನಂತರ ದಿಂಗಾಲೇಶ್ವರ ಸ್ವಾಮೀಜಿ ಹಾಗೂ ಭಕ್ತರಿಗೆ ಗದ್ದುಗೆ ದರ್ಶನ ಮಾಡಲು ಅವಕಾಶ ಕಲ್ಪಿಸಿದ್ದರು. ಮಠದೊಳಗೆ ಯಾರಿಗೂ ಅವಕಾಶ ನೀಡಲಿಲ್ಲ. ಮಠದ ಮುಖ್ಯದ್ವಾರದಿಂದ ಮಠದ ಆವರಣದೊಳಗೆ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಿ ಗದ್ದುಗೆ ದರ್ಶನಕ್ಕಾಗಿ ಪ್ರತ್ಯೇಕ ಬ್ಯಾರಿಕೇಡ್ ವ್ಯವಸ್ಥೆ ಕಲ್ಪಿಸಲಾಗಿತ್ತು.
ಸಭೆ ಬಳಿಕ ಕಸ ಗುಡಿಸಿದ ದಿಂಗಾಲೇಶ್ವರ ಸ್ವಾಮೀಜಿ: ಮೂರುಸಾವಿರ ಮಠದ ಉತ್ತರಾಧಿಕಾರಿ ವಿವಾದ ಸಂಬಂಧ ಸತ್ಯದರ್ಶನ ಕಾರ್ಯಕ್ರಮ ಹಮ್ಮಿಕೊಂಡಿದ್ದ ಬಾಲೇಹೊಸೂರು ದಿಂಗಾಲೇಶ್ವರ ಸ್ವಾಮೀಜಿ, ಸಭೆ ನಂತರ ಕಸ ಗುಡಿಸಿ ಸ್ವತ್ಛಗೊಳಿಸಿದರು. ಸಭೆ ಮುಕ್ತಾಯ ಬಳಿಕ ಆಗಮಿಸಿದ್ದ ಭಕ್ತರಿಗೆ ಊಟದ ವ್ಯವಸ್ಥೆ ಕಲ್ಪಿಸಲಾಗಿತ್ತು. ಗದಗ, ಹಾವೇರಿ, ಕೊಪ್ಪಳ, ಧಾರವಾಡ ಸೇರಿದಂತೆ ವಿವಿಧೆಡೆಯಿಂದ ಆಗಮಿಸಿದ್ದ ನೂರಾರು ಭಕ್ತರು ಊಟ ಮಾಡಿ ಎಲ್ಲೆಂದರಲ್ಲಿ ತಟ್ಟೆಗಳನ್ನು ಎಸೆದು ಹೋಗಿದ್ದರು. ಇದನ್ನು ನೋಡಿದ ದಿಂಗಾಲೇಶ್ವರ ಸ್ವಾಮೀಜಿ ಹಾಗೂ ಕೆಲ ಭಕ್ತರು ಸ್ವತಃ ಕಸಬರಿಗೆ ಹಿಡಿದು ಎಲ್ಲವನ್ನೂ ಸ್ವಚ್ಛಗೊಳಿಸಿದರು.