Advertisement

ಪ್ರಧಾನಿ ಸಂಕಲ್ಪದ ‘ಜಲಶಕ್ತಿ’ಗೆ ರಾಜ್ಯದ 18 ಜಿಲ್ಲೆಗಳು ಆಯ್ಕೆ

02:17 AM Jul 19, 2019 | Team Udayavani |

ಮಂಗಳೂರು: ದೇಶದ 255 ಜಿಲ್ಲೆಗಳಲ್ಲಿ ಜಲವರ್ಧನ ಚಟುವಟಿಕೆಗಳನ್ನು ಕೇಂದ್ರ ಸರಕಾರ ಹಮ್ಮಿಕೊಂಡಿದ್ದು, ರಾಜ್ಯದ 18 ಜಿಲ್ಲೆಗಳು ಮಹತ್ವದ ‘ಜಲಶಕ್ತಿ’ ಅಭಿಯಾನಕ್ಕೆ ಆಯ್ಕೆಯಾಗಿವೆ.

Advertisement

ತೀವ್ರ ಜಲಾಭಾವ ಎದುರಿಸುತ್ತಿರುವ ದೇಶದ ಹಲವು ಜಿಲ್ಲೆಗಳನ್ನು ಗುರುತಿಸಿ, ಆ ಜಿಲ್ಲೆಗಳ ಆಯ್ದ ಬ್ಲಾಕ್‌ಗಳಲ್ಲಿ ಜಲಸಂರಕ್ಷಣೆ ಚಟುವಟಿಕೆಗಳನ್ನು ಕೈಗೊಳ್ಳುವುದು ಪ್ರಧಾನಿ ಮೋದಿ ಅವರ ಸಂಕಲ್ಪದ ‘ಜಲಶಕ್ತಿ’ ಆಂದೋಲನದ ಗುರಿ.

ಅಭಿಯಾನದಡಿ ಆಯ್ಕೆಯಾದ ರಾಜ್ಯದ 18ಜಿಲ್ಲೆಗಳಿಗೂ ಕೇಂದ್ರ ಸರಕಾರದ ಜಂಟಿ ಕಾರ್ಯದರ್ಶಿ, ಹೆಚ್ಚುವರಿ ಕಾರ್ಯದರ್ಶಿ ದರ್ಜೆಯ ಐಎಎಸ್‌ ಅಧಿಕಾರಿಗಳ ಉಸ್ತು ವಾರಿಯ ಸಮಿತಿ ರಚಿಸಲಾಗಿದೆ. ಕೇಂದ್ರ ಜಲಶಕ್ತಿ ಇಲಾಖೆ, ಅಭಿವೃದ್ಧಿ, ಬಾಹ್ಯಾಕಾಶ, ರಕ್ಷಣೆ, ಪೆಟ್ರೋಲಿಯಂ, ಉನ್ನತ ಶಿಕ್ಷಣ, ಮಾಹಿತಿ ತಂತ್ರಜ್ಞಾನ, ಪರಿಸರ, ಕೃಷಿ, ಕೈಗಾರಿಕೆ ಸಹಿತ ವಿವಿಧ ಇಲಾಖೆಗಳಿಂದ ಈ ಅಧಿಕಾರಿಗಳನ್ನು ನಿಯೋಜಿಸಲಾಗಿದೆ.

ಆಯ್ಕೆಯಾದ ಜಿಲ್ಲೆಗಳಲ್ಲಿ ಐಎಎಸ್‌ ಅಧಿಕಾರಿಯ ಅಧ್ಯಕ್ಷತೆ ಮತ್ತು ಜಿಲ್ಲಾಧಿಕಾರಿಗಳ ಸಂಚಾಲಕತ್ವದಲ್ಲಿ ಇಲಾಖೆ ಮಟ್ಟದ ಸಮನ್ವಯ ಸಮಿತಿ ರಚಿಸಲಾಗುತ್ತದೆ.

ಹೀಗಿರುತ್ತದೆ ‘ಜಲಶಕ್ತಿ’ ಯೋಜನೆ
ಆಯ್ಕೆಯಾದ ಜಿಲ್ಲೆಯಲ್ಲಿ ಜಲಸಂರಕ್ಷಣೆ ಮತ್ತು ಮಳೆನೀರು ಕೊಯ್ಲು, ಜಲಮೂಲಗಳ ಪುನರುತ್ಥಾನ ಮತ್ತು ನವೀಕರಣಕ್ಕೆ ಆದ್ಯತೆ ನೀಡಲಾಗುತ್ತದೆ. ಕೊಳವೆಬಾವಿಗಳ ಮರುಪೂರಣ, ಇಂಗುಗುಂಡಿಗಳ ರಚನೆ ಮತ್ತು ನೀರಾವರಿ ದಕ್ಷತೆ ಹೆಚ್ಚಳ ಮಾಡಲಾಗುತ್ತದೆ. ಜತೆಗೆ ಜಲಮೂಲಗಳ ನವೀಕರಣ, ಸಂರಕ್ಷಣೆ, ವ್ಯಾಪಕ ವೃಕ್ಷಾಂದೋಲನ ಕೂಡ ಕೈಗೊಳ್ಳಲಾಗುತ್ತದೆ. ಈ ಎಲ್ಲ ಚಟುವಟಿಕೆಗಳನ್ನು ನೈಋತ್ಯ ಮತ್ತು ಈಶಾನ್ಯ ಮಾರುತ ಚುರುಕಾಗಿರುವ ಪ್ರದೇಶಗಳಿಗೆ ತಕ್ಕ ಹಾಗೆ ಎರಡು ಹಂತಗಳಲ್ಲಿ (ಜು.1-ಸೆ.15 ಮತ್ತು ಅ.1-ನ.30)ಕೈಗೊಳ್ಳಲಾಗುತ್ತದೆ.

Advertisement

ಯಾಕಾಗಿ ‘ಜಲಶಕ್ತಿ’?
ಸದ್ಯ ದೇಶ ಹಿಂದೆಂದೂ ಕಂಡರಿಯದ ಜಲ ಸಂಕಟ ವನ್ನು ಎದುರಿಸುತ್ತಿದ್ದು, ಮಳೆಗಾಲದಲ್ಲಿಯೂ ಜನರು ನೀರಿಗಾಗಿ ಪರದಾಡುವಂತಾಗಿದೆ. ನದಿ-ಹಳ್ಳಗಳಂಥ ಜಲಮೂಲಗಳು ಅತಿಬೇಗನೆ ಬರಿದಾಗುತ್ತಿದ್ದು, ಅಂತರ್ಜಲ ಮಟ್ಟ ಅತ್ಯಂತ ಅಪಾಯಕಾರಿ ರೀತಿಯಲ್ಲಿ ಕುಸಿಯುತ್ತಿದೆ. ಪಾರಂಪರಿಕ ಜಲಮೂಲಗಳಾದ ಬಾವಿ, ಕೆರೆ, ಪುಷ್ಕರಿಣಿ ಇತ್ಯಾದಿಗಳ ಬಗ್ಗೆ ಜನತೆ ತೋರಿದ ನಿರ್ಲಕ್ಷ್ಯದಿಂದ ಅವು ಕೂಡ ಅವಸಾನದ ಅಂಚಿನಲ್ಲಿವೆ. 2023ರ ಹೊತ್ತಿಗೆ ದೇಶದ ನೀರಿನ ಬೇಡಿಕೆ ದ್ವಿಗುಣಗೊಳ್ಳುವ ನಿರೀಕ್ಷೆ ಇದೆ. ಇದನ್ನು ಸಂಪೂರ್ಣ ಮನಗಂಡಿರುವ ಪ್ರಧಾನಿ ಮೋದಿ ಜಲಸಂರಕ್ಷಣೆ ಮತ್ತು ಜಲಮರುಪೂರಣದ ರಾಷ್ಟ್ರೀಯ ಜಲಶಕ್ತಿ ಅಭಿಯಾನಕ್ಕೆ ಕರೆ ನೀಡಿದ್ದಾರೆ.

ಜಲಶಕ್ತಿಗೆ ಆಯ್ಕೆಯಾದ ಜಿಲ್ಲೆಗಳು

ಬಾಗಲಕೋಟೆ, ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಬೆಳಗಾವಿ, ಬಳ್ಳಾರಿ, ಚಾಮರಾಜನಗರ,ಚಿಕ್ಕಬಳ್ಳಾಪುರ, ಚಿಕ್ಕಮಗಳೂರು, ಚಿತ್ರದುರ್ಗ, ದಾವಣಗೆರೆ, ಗದಗ, ಹಾಸನ, ಹಾವೇರಿ, ಕೋಲಾರ, ಕೊಪ್ಪಳ, ರಾಮನಗರ, ತುಮಕೂರು, ವಿಜಯಪುರ. ಸದ್ಯ ಜಲಶಕ್ತಿ ಅಭಿಯಾನದಡಿ ದಕ್ಷಿಣ ಕನ್ನಡ, ಉಡುಪಿ ಜಿಲ್ಲೆ ಆಯ್ಕೆಯಾಗಿಲ್ಲ. ಆದರೂ ಜಲವರ್ಧನೆ ಸಂಬಂಧಿತ ಕಾರ್ಯಕ್ರಮಗಳು ಈ ಎರಡೂ ಜಿಲ್ಲೆಗಳಲ್ಲಿ ನಡೆಯುತ್ತಿವೆ.

ಕಾಸರಗೋಡಿಗೆ ‘ಜಲಶಕ್ತಿ’

ಕೇರಳದಲ್ಲಿ ಎರಡು ಜಿಲ್ಲೆಗಳನ್ನು ಮಾತ್ರ ಅಭಿಯಾನದಡಿ ಆಯ್ಕೆ ಮಾಡಲಾಗಿದ್ದು, ಕಾಸರ ಗೋಡು ಸೇರಿದೆ. ಇನ್ನೊಂದು ಪಾಲಕ್ಕಾಡ್‌. ಕೇಂದ್ರದಪ್ರತಿನಿಧಿಯಾಗಿ ಅಶೋಕ್‌ ಕುಮಾರ್‌ ಸಿಂಗ್‌ ಮತ್ತುವಾಣಿಜ್ಯ ಸಚಿವಾಲಯದ ಇಂದು ಸಿ. ನಾಯರ್‌ ಕಾಸರಗೋಡಿಗೆ ಆಗಮಿಸಿ, ಜಿಲ್ಲಾಧಿಕಾರಿ-ಜಿ.ಪಂ. ಪ್ರಮುಖರ ಜತೆಗೆ ಚರ್ಚೆ ನಡೆಸಿದ್ದಾರೆ.

-ದಿನೇಶ್‌ ಇರಾ

 

Advertisement

Udayavani is now on Telegram. Click here to join our channel and stay updated with the latest news.

Next