ನವದೆಹಲಿ: ಹದಿನಾರರ ಹರೆಯದ ಪ್ರತಿಭಾನ್ವಿತ ಶೂಟರ್ ಸೌರಭ್ ಚೌಧರಿ ಐಎಸ್‌ಎಸ್‌ಎಫ್ ವಿಶ್ವಕಪ್ ಶೂಟಿಂಗ್ ಸ್ಪರ್ಧೆಯಲ್ಲಿ ವಿಶ್ವದಾಖಲೆ ಯೊಂದಿಗೆ ಚಿನ್ನಕ್ಕೆ ಗುರಿ ಇರಿಸಿದ್ದಾರೆ. ಜತೆಗೆ ಮುಂಬರುವ ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಸ್ಪರ್ಧಿಸುವ ಅವಕಾಶವನ್ನೂ ಸಂಪಾದಿಸಿದ್ದಾರೆ.
ಭಾನುವಾರ ನಡೆದ ಪುರುಷರ 10 ಮೀ. ಏರ್‌ಪಿಸ್ತೂಲ್ ಸ್ಪರ್ಧೆಯಲ್ಲಿ ಸೌರಭ್ ಚೌಧರಿ 245 ಅಂಕಗಳೊಂದಿಗೆ ಬಂಗಾರದಿಂದ ಸಿಂಗಾರ ಗೊಂಡರು.ಸರ್ಬಿಯಾದ ದಮಿರ್ ಮಿಕೆಕ್ ಬೆಳ್ಳಿ (239.3) ಮತ್ತು ಚೀನದ ವೀ ಪಾಂಗ್ ಕಂಚಿನ ಪದಕ ಗೆದ್ದರು (215.2). ಕಾಮನ್ವೆಲ್ತ್ ಗೇಮ್ಸ್, ಏಷ್ಯನ್ ಗೇಮ್ಸ್ ಹಾಗೂ ಯುತ್ ಗೇಮ್ಸ್ ಬಂಗಾರ ಪದಕ ವಿಜೇತ ಸೌರಭ್ ಚೌಧರಿ ವಿಶ್ವಕಪ್‌ನಲ್ಲೂ ಸ್ವರ್ಣ ಸಾಧಕನೆನಿಸಿದರು.
ಅವರು ಗಳಿಸಿದ 245 ಅಂಕ ನೂತನ ವಿಶ್ವದಾಖಲೆಯಾಗಿದೆ. ಅರ್ಹತಾ ಸುತ್ತಿನಿಂದಲೇ ಪ್ರಾಬಲ್ಯ ಮೆರೆಯುತ್ತ ಬಂದ ಸೌರಭ್, ಸರ್ವಾಧಿಕ 587 ಅಂಕಗಳೊಂದಿಗೆ ಫೈನಲ್‌ಗೆ ಲಗ್ಗೆ ಇರಿಸಿದ್ದರು. ಆದರೆ ಭಾರತದ ಮತ್ತಿಬ್ಬರು ಸ್ಪರ್ಧಿಗಳಾದ ಅಭಿಷೇಕ್ ವರ್ಮ (576) ಮತ್ತು ರವೀಂದರ್ ಸಿಂಗ್ (576) ಫೈನಲ್ ಪ್ರವೇಶಿಸುವಲ್ಲಿ ವಿಫಲರಾದರು.ಸೌರಭ್ ಕಳೆದ ವರ್ಷ ಜರ್ಮನಿಯಲ್ಲಿ ನಡೆದ ಜೂನಿಯರ್ ವಿಶ್ವಕಪ್‌ನಲ್ಲೂ ಚಿನ್ನದ ಪದಕ ಜಯಿಸಿದ್ದರು.
ಒಲಿಂಪಿಕ್ಸ್ ಅರ್ಹತೆ: ಸೌರಭ್ ಚೌಧರಿ 2020ರ ಟೋಕಿಯೊ ಒಲಿಂಪಿಕ್ಸ್‌ಗೆ ಅರ್ಹತೆ ಪಡೆದ ಭಾರತದ 3ನೇ ಶೂಟರ್ ಎನಿಸಿದರು. ಉಳಿದಿ ಬ್ಬರೆಂದರೆ ಅಪೂರ್ವಿ ಚಾಂಡೇಲ ಮತ್ತು ಅಂಜುಮ್ ಮೌದ್ಗಿಲ್. ಇವರಲ್ಲಿ ಅಪೂರ್ವಿ ಶನಿವಾರ ವಿಶ್ವದಾಖಲೆಯೊಂದಿಗೆ ಚಿನ್ನದ ಪದಕ ಜಯಿಸಿದ್ದರು.
ಪುರುಷರ 10 ಮೀ. ಏರ್ ಪಿಸ್ತೂಲ್ ಸ್ಪರ್ಧೆಯಲ್ಲಿ ಒಟ್ಟು 2 ಒಲಿಂಪಿಕ್ಸ್ ಕೋಟಾಗಳಿದ್ದು, ಇನ್ನೊಂದು ಬೆಳ್ಳಿ ಪದಕ ಗೆದ್ದ ದಮಿರ್ ಮಿಕೆಕ್ ಪಾಲಾಗಿದೆ. 50 ಮೀ. ರೈಫಲ್: ಭಾರತ ವಿಫಲ: ಪುರುಷರ 50
ಮೀ. ರೈಫಲ್ 3 ಪೊಸಿಶನ್ ಸ್ಪರ್ಧೆಯಲ್ಲಿ ಭಾರತ ಫೈನಲ್ ಪ್ರವೇಶಿಸುವಲ್ಲಿ ವಿಫಲವಾಯಿತು. ಅರ್ಹತಾ ಸುತ್ತಿನಲ್ಲಿ ಪಾರುಲ್ ಕುಮಾರ್ 22ನೇ, ಸಂಜೀವ್ ರಜಪೂತ್ 25ನೇ ಸ್ಥಾನ ದೊಂದಿಗೆ ಸ್ಪರ್ಧೆ ಮುಗಿಸಿದರು.