Advertisement

ಜಿಲ್ಲಾ ಬೋರ್ಡ್‌ನಿಂದ ಆರಂಭವಾದ ಮೈನ್‌ ಶಾಲೆಗೀಗ 150ನೇ ವರ್ಷದ ಸಂಭ್ರಮ

10:06 AM Nov 07, 2019 | Team Udayavani |

19ನೆಯ ಶತಮಾನದ ಉತ್ತರಾರ್ಧದಲ್ಲಿ ಬ್ರಿಟಿಷ್‌ ಆಡಳಿತದಡಿ, ಊರ ಹಿರಿಯರ ಮುತುವರ್ಜಿಯಲ್ಲಿ ಸ್ಥಾಪನೆಗೊಂಡು ಈಗಲೂ ವಿದ್ಯೆಯ ಬೆಳಕನ್ನು ಪಸರಿಸುತ್ತಿರುವ ಹಲವು ಸರಕಾರಿ ಶಾಲೆಗಳು ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿವೆ. ಈಗಿನ ಆಂಗ್ಲ ಮಾಧ್ಯಮ ಶಿಕ್ಷಣದ ಆಕರ್ಷಣೆಯ ನಡುವೆ ಈ ಶಾಲೆಗಳು ಸುತ್ತಮುತ್ತಲಿನ ಊರುಗಳಿಗೆ ಅಕ್ಷರಶಃ ಜ್ಞಾನ ದೇಗುಲಗಳೇ ಆಗಿವೆ. ಕರ್ನಾಟಕ ರಾಜ್ಯೋತ್ಸವ ಸಂದರ್ಭದಲ್ಲಿ ಇಂತಹ ಶತಮಾನದ ಹಿರಿಮೆಯ ಕನ್ನಡ ಮಾಧ್ಯಮ ಸರಕಾರಿ ಶಾಲೆಗಳನ್ನು ಗುರುತಿಸಿ ಪರಿಚಯಿಸುವ ಪ್ರಯತ್ನ ನಮ್ಮದು.

Advertisement

1869 ಶಾಲೆ ಆರಂಭ
44 ಸೆಂಟ್ಸ್‌ ಜಾಗದಲ್ಲಿ ಮೈನ್‌ ಶಾಲೆ ಆರಂಭ

ಮೂಡುಬಿದಿರೆ: ಸುಮಾರು 150 ವರ್ಷಗಳ ಹಿಂದಿನ ಕಥೆ. ಮೂಡುಬಿದಿರೆ ಹೋಬಳಿಯ ಸುತ್ತಮತ್ತ 10-12 ಕಿ.ಮೀ. ವ್ಯಾಪ್ತಿಯ ಯಾವುದೇ ಶಾಲೆಗಳ ಇರದಿರುವುದನ್ನು ಮನಗಂಡು 1869ರಲ್ಲಿ ಜಿಲ್ಲಾ ಬೋರ್ಡ್‌ನ 44 ಸೆಂಟ್ಸ್‌ ಜಾಗದಲ್ಲಿ ಮೈನ್‌ ಶಾಲೆಯನ್ನು ಆರಂಭಿಸಲಾಯಿತು.

ಮೈನ್‌ ಶಾಲೆಯೂ ಎಲಿಮೆಂಟರಿ, ಹೈಯರ್‌ ಎಲಿಮೆಂಟರಿ, ಮತ್ತೆ ಎಲಿಮೆಂಟರಿ, ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ಜತೆಗೆ 2010-11ರಲ್ಲಿ ಉನ್ನತೀಕರಿಸಿದ ಶಾಲೆ ಮತ್ತು 2012ರಲ್ಲಿ 6ರಿಂದ 8ರ ವರೆಗೆ ಆಂಗ್ಲ ಮಾಧ್ಯಮವನ್ನೂ ಆರಂಭಿಸುವ ಮೂಲಕ ಹಲವಾರು ರೀತಿಯಲ್ಲಿ ಮಾರ್ಪಾಡು ಕಂಡಿದೆ. ಮೊದಲಿಗೆ 1ರಿಂದ 8 ತರಗತಿಯವರೆಗೆ ಇದ್ದರೂ ಸಹ ಶಿಕ್ಷಣ ವ್ಯವಸ್ಥೆ ಇರಲಿಲ್ಲ. ಶಾಲೆಯ ಉತ್ತರ ಭಾಗದ ಕಟ್ಟಡದಲ್ಲಿ ಬಾಲಕಿಯರಿಗೆ ಪ್ರತ್ಯೇಕವಾಗಿ ತರಗತಿಗಳು ನಡೆಯುತ್ತಿದ್ದವು. ಮುಂದೆ ಮಕ್ಕಳ ಸಂಖ್ಯೆಯೂ ವೃದ್ಧಿಯಾದ ಪರಿಣಾಮ ಸಹ ಶಿಕ್ಷಣವನ್ನು ಕೂಡ ಆರಂಭಿಸಲಾಯಿತು.

ಮೂಡುಬಿದಿರೆ ಸಾಂಸ್ಕೃತಿಕ ಕೇಂದ್ರ
ಮೂಡುಬಿದಿರೆಯ ಸರಸ್ವತೀ ಸೇವಾ ಸಂಘದ ನಾಡಹಬ್ಬ, ಯಕ್ಷಗಾನ ತಾಳಮದ್ದಳೆ, ನಾಟಕ, ಸಂಗೀತ, ಸಾರ್ವಜನಿಕ ಶ್ರೀ ಗಣೇಶೋತ್ಸವ ನಡೆಯುವುದು ಮೈನ್‌ ಶಾಲೆಯ ಅಂಗಳದಲ್ಲಿ.

Advertisement

ಸ್ಥಾಪಕ ಮುಖ್ಯೋಪಾಧ್ಯಾಯರಾರು?
ಶಾಲೆಯ ಸ್ಥಾಪಕ ಮುಖ್ಯೋಪಾಧ್ಯಾಯರ ಯಾರು ಅಂತ ತಿಳಿದು ಬಂದಿಲ್ಲ. ಆದರೆ 1934-35ರಲ್ಲಿ ಪುತ್ತಿಗೆ ಪದ್ಮಯ್ಯ ಶೆಟ್ಟಿ ಮುಖ್ಯೋಪಾಧ್ಯಾಯರಾಗಿದ್ದರು. ಅನಂತರ ಕೊಡೇìಲ್‌ ರಾಮರಾವ್‌, ಶಿವರಾಮ ಜೋಗಿ, ಜಲಜಾ ಬಾೖ, ಸೀತಾರಾಮ ಶೆಟ್ಟಿ, ಹೂವಯ್ಯ ಶೆಟ್ಟಿಗಾರ್‌, ಸದಾಶಿವ ಶೆಟ್ಟಿ, ತ್ರಿವಿಕ್ರಮ ರಾವ್‌, ಎಂ. ರಾಮ, ಜಗತ್ಪಾಲ ಜೈನಿ, ಹರಿಯಪ್ಪ ಭಟ್‌, ಮೀರಾ ಭಾç ವಾಸುದೇವ ರಾವ್‌, ಲಕ್ಷ್ಮೀ ಭಾç, ರಾಜೀವಿ, ಅಪ್ಪಯ್ಯ ನಾಯ್ಕ , ಶೀನ ನಾಯ್ಕ ಅವರು ಮುಖ್ಯೋಪಾಧ್ಯಾಯರಾಗಿದ್ದರು.
ಪ್ರಸ್ತುತವಾಗಿ ಅನುಸೂಯಾ ಮುಖ್ಯೋಪಾಧ್ಯಾಯರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

ಪ್ರಸ್ತುತ 150 ವಿದ್ಯಾರ್ಥಿಗಳು
ಪ್ರಸ್ತುತವಾಗಿ ಶಾಲೆಯಲ್ಲಿ 7ಶಿಕ್ಷಕರು, 150 ವಿದ್ಯಾರ್ಥಿಗಳು ವಿಧ್ಯಾಬ್ಯಾಸ ಪಡೆಯುತ್ತಿದ್ದಾರೆ. ಶಾಲೆಯಲ್ಲಿ ಶೌಚಾಲಯ, ಕುಡಿಯುವ ನೀರು ಪೂರೈಕೆ, ಕಂಪ್ಯೂಟರ್‌, ವಿಜ್ಞಾನ ಪ್ರಯೋಗಾಲಯ ಸಹಿತ ಮೊದಲಾದ ಆವಶ್ಯಕ ಸೌಕರ್ಯಗಳನ್ನು ಕಾಣಬಹುದು.

ಜಿಲ್ಲಾ ಮಟ್ಟದಲ್ಲಿ 11ನೇ ಸ್ಥಾನ
1971ರಲ್ಲಿ ಮೈನ್‌ ಶಾಲೆ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಾಗಿ ಮಾರ್ಪಾಡಾಯಿತು. ಅನುಕ್ರಮವಾಗಿ 6ನೇ ಮತ್ತು 7ನೇ ತರಗತಿಗಳು ಪ್ರಾರಂಭವಾದವು. 1972ರ ಜಿಲ್ಲಾ ಮಟ್ಟದ ಪಬ್ಲಿಕ್‌ ಪರೀಕ್ಷೆಯಲ್ಲಿ ಶಾಲಾ ಮೊದಲ ಬ್ಯಾಚಿನಲ್ಲಿದ್ದ ಶಾಲಾ ಮುಖ್ಯಮಂತ್ರಿ ಜಿಲ್ಲೆಗೆ 11ನೇ ಸ್ಥಾನ ಗಳಿಸಿ ಶಾಲೆಗೊಂದು ಘನತೆ ಬಂದಿತ್ತು.

ಪ್ರಶಸ್ತಿ, ಪುರಸ್ಕಾರ
2010-11ರ ಸಾಲಿನಲ್ಲಿ ರಘುವೀರ ಶೆಣೈ ಅಧ್ಯಕ್ಷರಾಗಿದ್ದ ಶಾಲಾಭಿವೃದ್ದಿ ಮತ್ತು ಮೇಲುಸ್ತುವಾರಿ ಸಮಿತಿಗೆ ರಾಜ್ಯಮಟ್ಟದ ಪ್ರಶಸ್ತಿ ಲಭಿಸಿತ್ತು. ಮುಖ್ಯೋಪಾಧ್ಯಾಯರಾಗಿದ್ದ ಶೀನಾ ನಾಯ್ಕ ಅವರಿಗೆ ಜಿಲ್ಲಾ ಉತ್ತಮ ಶಿಕ್ಷಕ ಪ್ರಶಸ್ತಿ ಲಭಿಸಿದೆ. ಮಂಗಳೂರು ಕೆ.ಎಂ.ಸಿ.ಯಲ್ಲಿ ಪ್ರಸಿದ್ಧ ಹೃದ್ರೋಗ ತಜ್ಞ ಡಾ| ಪದ್ಮನಾಭ ಕಾಮತ್‌, ಗಾಯಕ, ಮುಂಬಯಿ ನಿವಾಸಿ ಪ್ರಕಾಶ್‌ ಕುಡ್ವ, ಸಿನಿಮಾ ನಟ ಸುರೇಶ್‌ ಅಂಚನ್‌, ಪ್ರಶಸ್ತಿ ಪುರಸ್ಕೃತ ಸರಕಾರಿ ವೈದ್ಯ ಡಾ| ಎಂ. ಆರ್‌. ದುರ್ಗಾಪ್ರಸಾದ್‌ ಇವರು ಮೈನ್‌ ಶಾಲೆಯ ಹಳೆ ವಿದ್ಯಾರ್ಥಿಗಳು.

150ರ ವರ್ಷಗಳ ಗಡಿ ತಲುಪಿದ ನಮ್ಮ ಮೈನ್‌ಶಾಲೆಯಲ್ಲಿ ಹೆಚ್ಚಿನೆಲ್ಲ ಸೌಕರ್ಯಗಳಿವೆ. ಶಿಕ್ಷಕರು, ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ, ಹೆತ್ತವರು, ಹಳೆ ವಿದ್ಯಾರ್ಥಿಗಳು ಹಾಗೂ ವಿದ್ಯಾಭಿಮಾನಿಗಳ ಸಹಕಾರದಿಂದ ಶಾಲೆ ಪ್ರಗತಿಪಥದಲ್ಲಿ ಮುಂದುವರಿಯುತ್ತಿದೆ.
– ಅನುಸೂಯಾ, ಮುಖ್ಯೋಪಾಧ್ಯಾಯರು.

ಮೈನ್‌ ಶಾಲೆಯಲ್ಲಿ ಬಂಗಬೆಟ್ಟು ಸೀತಾರಾಮ ಶೆಟ್ಟಿ ಅವರು ಮುಖ್ಯೋಪಾಧ್ಯಾಯರಾಗಿದ್ದ ಕಾಲದಲ್ಲಿ ಓದಿದ ನನಗೆ ಮೈನ್‌ ಶಾಲೆಯಲ್ಲಿ ಒಳ್ಳೆಯ ಶಿಕ್ಷಣ ಸಿಕ್ಕಿದೆ. ಉತ್ತಮ ಶಿಕ್ಷಕರಿದ್ದರು. ನಮ್ಮ ಮನೆಯವರೆಲ್ಲರೂ ಇದೇ ಶಾಲೆಯಲ್ಲಿ ಕಲಿತವರು.
ನಾರಾಯಣ ಪಿ.ಎಂ., ಹಳೆಯ ವಿದ್ಯಾರ್ಥಿ

 ಧನಂಜಯ ಮೂಡುಬಿದಿರೆ

Advertisement

Udayavani is now on Telegram. Click here to join our channel and stay updated with the latest news.

Next