Advertisement

Heavy Rain ಮಳೆಗಾಲದ ವಾತಾವರಣ; ಪೂರ್ವ ಮುಂಗಾರು ಚುರುಕು

12:43 AM May 21, 2024 | Team Udayavani |

ಕರಾವಳಿ ಮತ್ತು ಕೊಡಗು ಜಿಲ್ಲೆಯಾದ್ಯಂತ ಸೋಮವಾರ ಮೋಡಕವಿದ ವಾತಾವರಣದೊಂದಿಗೆ ಉತ್ತಮ ಮಳೆಯಾಗಿದೆ. ಬಂಗಾಲ ಕೊಲ್ಲಿಯಲ್ಲಿ ಕಡಿಮೆ ಒತ್ತಡ ಪ್ರದೇಶ ನಿರ್ಮಾಣವಾಗುವ ಸಾಧ್ಯತೆ ಇರುವುದರಿಂದ ಆಕಾಶದಲ್ಲಿ ಮೋಡದ ಚಲನೆಗಳು ಜೋರಾಗಿವೆ. ಆಗಾಗ್ಗೆ ದಟ್ಟ ಮೋಡಗಳು ಉಂಟಾಗುತ್ತಿದ್ದು, ಪೂರ್ವ ಮುಂಗಾರು ಮಳೆ ಚುರುಕಾಗುವ ಲಕ್ಷಣಗಳು ಕಾಣಿಸುತ್ತಿವೆ.

Advertisement

ಮಂಗಳೂರು/ಉಡುಪಿ/ಕಾಸರಗೋಡು/ ಮಡಿಕೇರಿ: ದಕ್ಷಿಣ ಕನ್ನಡ, ಉಡುಪಿ, ಕಾಸರಗೋಡು ಮತ್ತು ಕೊಡಗು ಜಿಲ್ಲೆಗಳಲ್ಲಿ ಸೋಮವಾರ ಮುಂಜಾನೆಯೇ ಮಳೆಯಾಗಿದ್ದು, ಬಿಟ್ಟು ಬಿಟ್ಟು ಮಳೆ ಸುರಿದಿದೆ. ಸಂಜೆ ಬಳಿಕ ಹನಿ, ಸಾಮಾನ್ಯ ಮಳೆ ಮತ್ತೆ ನಿರಂತವಾಗಿ ಸುರಿದಿದೆ. ಬಿಸಿಲ ಬೇಗೆಯಿಂದ ಬಳಲಿದ್ದ ಜನರಿಗೆ ಮಳೆ ತಂಪಿನ ಅನುಭವ ನೀಡಿದೆ. ಬೆಳ್ತಂಗಡಿ ತಾಲೂಕಿನಲ್ಲಿ ಹಗಲಿಡೀ ಮೋಡ ಕವಿದಿದ್ದು, ಸಂಜೆಯಾಗುತ್ತಲೇ ಸಾಧಾರಣ ಮಳೆಯಾಗಿದೆ.

ಮೀನುಗಾರರಿಗೆ ಎಚ್ಚರಿಕೆ
ಮಂಗಳವಾರ ಕರಾವಳಿಯ ಬಹುತೇಕ ಕಡೆಗಳಲ್ಲಿ ಗುಡುಗು ಸಹಿತ ಭಾರೀ ಮಳೆಯಿಂದ ಅತಿ ಭಾರೀ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. “ಎಲ್ಲೋ ಅಲರ್ಟ್‌’ ಅಲರ್ಟ್‌ ಘೋಷಿಸಲಾಗಿದೆ. ಮೇ 23ರ ವರೆಗೆ ಕರ್ನಾಟಕ ಕರಾವಳಿಯಲ್ಲಿ ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಎಚ್ಚರಿಕೆ ನೀಡಲಾಗಿದೆ.

ತಾಪಮಾನ ಇಳಿಕೆ
ಮಳೆಯಿಂದಾಗಿ ತಾಪಮಾನದಲ್ಲಿ ತೀವ್ರ ಇಳಿಕೆಯಾಗಿದ್ದು, ಮಂಗಳೂರಿನಲ್ಲಿ ದಿನದ ಗರಿಷ್ಠ ತಾಪಮಾನ ಸಾಮಾನ್ಯಕ್ಕಿಂತ 2.6 ಡಿ.ಸೆ.ನಷ್ಟು ಕಡಿಮೆಯಾಗಿದ್ದು, 30.8 ಡಿ.ಸೆ. ದಾಖಲಾಗಿದೆ. ಕನಿಷ್ಠ ತಾಪಮಾನ 24.6 ಡಿ.ಸೆ. ದಾಖಲಾಗಿದೆ. ಗರಿಷ್ಠ ತಾಪಮಾನ 2-4 ಡಿಗ್ರಿ ಸೆಲ್ಸಿಯಸ್‌ ಕಡಿಮೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ವಾಹನ ದಟ್ಟಣೆ: ಸಂಜೆ ಸುರಿದ ಮಳೆಯ ವೇಳೆ ನಗರದ ವಿವಿಧೆಡೆ ವಾಹನ ದಟ್ಟಣೆ ಉಂಟಾಯಿತು. ನಗರದ ಕೊಟ್ಟಾರ ಕ್ರಾಸ್‌-ಕುಂಟಿಕಾನ ರಸ್ತೆಯಲ್ಲಿ ಸುಮಾರು 45 ನಿಮಿಷ ಬ್ಲಾಕ್‌ ಉಂಟಾಗಿ ವಾಹನ ಸವಾರರು ಸಂಕಷ್ಟ ಅನುಭವಿಸುವಂತಾಯಿತು.

Advertisement

ಉಡುಪಿ: ಹಲವೆಡೆ ಉತ್ತಮ ಮಳೆ
ಉಡುಪಿ: ಜಿಲ್ಲೆಯಲ್ಲಿ ರವಿವಾರ ತಡರಾತ್ರಿ ಸೋಮವಾರ ಸಂಜೆ ಹಲವೆಡೆ ಧಾರಾಕಾರ ಮಳೆ ಸುರಿದಿದೆ. ನಗರ, ಗ್ರಾಮಾಂತರ ಭಾಗದಲ್ಲಿ ಗುಡುಗು, ಮಿಂಚು ಸಹಿತ ಸೋಮವಾರ ತಡರಾತ್ರಿವರೆಗೂ ನಿರಂತರ ಮಳೆಯಾಗಿದೆ.
ಕುಂದಾಪುರ, ಬೈಂದೂರು, ಸಿದ್ದಾಪುರ, ಬಿದ್ಕಲ್‌ಕಟ್ಟೆ, ಮೊಳಹಳ್ಳಿ, ಹುಣ್ಸೆಮಕ್ಕಿ, ತೆಕ್ಕಟ್ಟೆ, ಕುಂಭಾಶಿ, ಬೇಳೂರು, ಕೊರ್ಗಿ, ಹೆಸ್ಕತ್ತೂರು, ಹೆಬ್ರಿ, ಕಾರ್ಕಳ, ಕಾಪು, ಶಿರ್ವ, ಪಡುಬಿದ್ರಿ, ಉಡುಪಿ, ಮಣಿಪಾಲ, ಮಲ್ಪೆ, ಬ್ರಹ್ಮಾವರ, ಕೋಟ, ಅಜೆಕಾರು ಭಾಗದಲ್ಲಿ ಸೋಮವಾರ ಬೆಳಗ್ಗೆ ಮತ್ತು ಮಧ್ಯಾಹ್ನ ಬಿಸಿಲು ಮೋಡ ಕವಿದ ವಾತಾವರಣದ ನಡುವೆ ಬಿಟ್ಟುಬಿಟ್ಟು ಮಳೆ ಸುರಿದಿದ್ದು, ಸಂಜೆ ಅನಂತರ ಗುಡುಗು ಸಹಿತ ನಿರಂತರ ಮಳೆಯಾಗಿದೆ.

ತೆಕ್ಕಟ್ಟೆ, ಕೋಟೇಶ್ವರ, ಬಸ್ರೂರು ಮೊದಲಾದೆಡೆ ಸಾಧಾರಣ ಮಳೆಯಾಗಿದೆ.

ಮರ ಬಿದ್ದು ಮನೆಗೆ ಹಾನಿ
ಕುತ್ಪಾಡಿಯಲ್ಲಿ ನೀತಾ ಶೆಟ್ಟಿ ಅವರ ಮನೆಗೆ ಮರ ಬಿದ್ದು ಹಾನಿಯಾಗಿದೆ. ವಿದ್ಯುತ್‌ ಕಂಬ ಮತ್ತು ಲೈನ್‌ಗಳಿಗೂ ಹಾನಿಯಾಗಿದ್ದು, ಹಲವೆಡೆ ವಿದ್ಯುತ್‌ ಸಂಪರ್ಕ ವ್ಯತ್ಯಯ ಉಂಟಾಗಿತ್ತು.

ಕಳೆದ ಎರಡು ದಿನಗಳಿಂದ ಉತ್ತಮ ಮಳೆಯಿಂದ ನಗರ, ಗ್ರಾಮಾಂತರ ಭಾಗದ ಬೋರ್‌ವೆಲ್‌, ತೆರೆದ ಬಾವಿಗಳಲ್ಲಿ ನೀರಿನ ಮಟ್ಟ ಸುಧಾರಣೆ ಕಂಡಿದೆ. ನಗರಕ್ಕೆ ನೀರು ಪೂರೈಸುವ ಸ್ವರ್ಣಾ ನದಿಯಲ್ಲಿ ಒಳಹರಿವು ಇನ್ನೂ ಆರಂಭಗೊಂಡಿಲ್ಲ.

ಸುಳ್ಯ: ಹಲವರಿಗೆ ಸಿಡಿಲಿನ “ಶಾಕ್‌’!
ಸುಳ್ಯ/ಕಡಬ: ಸುಳ್ಯ ಮತ್ತು ಕಡಬ ತಾಲೂಕುಗಳಲ್ಲಿ ರವಿವಾರ ರಾತ್ರಿ ಭಾರೀ ಸದ್ದಿನ ಸಿಡಿಲು ಕಾಣಿಸಿಕೊಂಡಿದ್ದು, ಆಗ ಪೇಟೆಯಲ್ಲಿದ್ದ ಹಲವು ಮಂದಿಗೆ ವಿದ್ಯುತ್‌ ಶಾಕ್‌ ಹೊಡೆದ ಅನುಭವ ಆಗಿರುವುದಾಗಿ ತಿಳಿಸಿದ್ದಾರೆ. ಒಂದಿಬ್ಬರು ಅಸ್ವಸ್ಥರಾದ ಘಟನೆಯೂ ಸಂಭವಿಸಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ.

ತಾಲೂಕಿನಲ್ಲಿ ಸೋಮವಾರ ಬೆಳಗ್ಗಿನಿಂದಲೇ ಮೋಡ ಕವಿದ ವಾತಾವರಣ ಇದ್ದು, ಸಂಜೆಯಾಗುತ್ತಿದ್ದಂತೆ ಸುಳ್ಯ ನಗರ, ಸಂಪಾಜೆ, ಮಂಡೆಕೋಲು, ಕೊಲ್ಲಮೊಗ್ರು, ಬೆಳ್ಳಾರೆ, ನಿಂತಿಕಲ್ಲು, ಪಂಜ, ಗುತ್ತಿಗಾರು, ಜಾಲೂÕರು, ಸುಬ್ರಹ್ಮಣ್ಯ, ಐನೆಕಿದು, ಕೈಕಂಬ, ಕುಲ್ಕುಂದ, ಬಳ್ಪ ಪರಿಸರದ ವಿವಿಧೆಡೆ ವಿವಿಧೆಡೆ ಸಾಧಾರಣ ಮಳೆಯಾಗಿದೆ.

ಮೂಡುಬಿದಿರೆಯಲ್ಲಿ ಭಾರೀ ಮಳೆ
ಮೂಡುಬಿದಿರೆ: ಮೂಡುಬಿದಿರೆ ಪರಿಸರದಲ್ಲಿ ಸೋಮವಾರ ಗುಡುಗು ಸಿಡಿಲು ಸಹಿತ ಜೋರಾಗಿ ಮಳೆ ಸುರಿಯಿತು.

ಸಂಜೆ ಆರಂಭವಾದ ಬಿರುಸಿನ ಮಳೆ ರಾತ್ರಿ ವರೆಗೂ ಮುಂದುವರಿಯಿತು. ಪೇಟೆಯಲ್ಲಿ ಪ್ರಮುಖವಾಗಿ ಆಳ್ವಾಸ್‌ ರಸ್ತೆಯಲ್ಲಿ ಮಳೆ ನೀರು ರಸ್ತೆಯಲ್ಲಿಯೇ ಹರಿದು ಜನ, ವಾಹನಗಳ ಓಡಾಟಕ್ಕೆ ಸಮಸ್ಯೆಯಾಯಿತು.

ಕಾಸರಗೋಡು ಜಿಲ್ಲೆಯಾದ್ಯಂತ ಮಳೆ
ಕಾಸರಗೋಡು: ಜಿಲ್ಲೆಯಾದ್ಯಂತ ಸೋಮವಾರ ಉತ್ತಮ ಮಳೆಯಾಗಿದೆ. ಅಪರಾಹ್ನ 3ಕ್ಕೆ ಆರಂಭವಾದ ಬಿರುಸಿನ ಮಳೆ ರಾತ್ರಿಯ ವರೆಗೂ ಎಡೆಬಿಡದೆ ಸುರಿಯಿತು.

ಬಿರುಸಿನ ಗಾಳಿ ಬೀಸುವ ಸಾಧ್ಯತೆಯ ಹಿನ್ನೆಲೆಯಲ್ಲಿ ಮುಂದಿನ ಸೂಚನೆ ಬರುವ ತನಕ ಸಮುದ್ರದಲ್ಲಿ ಮೀನುಗಾರಿಕೆಗೆ ತೆರಳದಂತೆ ಜಿಲ್ಲಾಧಿಕಾರಿ ಕೆ. ಇಂಬುಶೇಖರ್‌ ಮುನ್ನೆಚ್ಚರಿಕೆ ನೀಡಿದ್ದಾರೆ.

ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ನಡೆಯುತ್ತಿರುವುದರಿಂದ ಅಲ್ಲಲ್ಲಿ ರಸ್ತೆಯಲ್ಲಿ ನೀರು ತುಂಬಿಕೊಂಡು ವಾಹನ ಸಂಚಾರ ಹಾಗೂ ಪಾದಚಾರಿಗಳ ಸಂಚಾರಕ್ಕೆ ಸಮಸ್ಯೆಯಾಯಿತು.

Advertisement

Udayavani is now on Telegram. Click here to join our channel and stay updated with the latest news.

Next