ಹೈದರಾಬಾದ್: ಸಣ್ಣ ವಯಸ್ಸಿನ ಹೆಣ್ಣುಮಕ್ಕಳನ್ನು ಹಲವು ಕಾರಣಗಳಿಗೆ ಅಪ್ರಾಪ್ತ ವಯಸ್ಸಿಗೇ ಮದುವೆ ಮಾಡಿಕೊಡುವ ಪಿಡುಗು ದೇಶದಲ್ಲಿ ಈಗಲೂ ಇದೆ. ಆದರೆ ಆಂಧ್ರಪ್ರದೇಶದ ಗ್ರಾಮವೊಂದರಲ್ಲಿ 13 ವರ್ಷದ ಬಾಲಕನಿಗೆ ತನಗಿಂತ 10 ವರ್ಷ ದೊಡ್ಡವಳಾದ ಯುವತಿಯೊಂದಿಗೆ ಮದುವೆ ಮಾಡಿಸಲಾಗಿದೆ. ಅಮ್ಮನ ಆಸೆ ಈಡೇರಿಸಲೆಂದು ಬಾಲಕ ಮದುವೆಗೆ ಒಪ್ಪಿಕೊಂಡಿದ್ದಾನೆ.
ಈ ಘಟನೆ ಕಳೆದ ತಿಂಗಳೇ ನಡೆದಿದೆ. ಬಾಲಕನ ತಾಯಿಗೆ ತೀವ್ರ ಸ್ವರೂಪದ ಅನಾರೋಗ್ಯವಿದ್ದ ಕಾರಣ ಮನೆ ನಿಭಾಯಿಸಿ ಕೊಂಡು ಹೋಗಲು ಒಬ್ಬ ಮಹಿಳೆಯ ಅಗತ್ಯವಿತ್ತು. ಹೀಗಾಗಿ, ಕರ್ನಾಟಕದ ಬಳ್ಳಾರಿ ಮೂಲದ 23 ವರ್ಷದ ಯುವತಿಯೊಂದಿಗೆ 13 ವರ್ಷದ ಬಾಲಕನಿಗೆ ವಿವಾಹ ಮಾಡಿಕೊಡಲಾಗಿದೆ.
ವಧು ಎ.27ರಂದೇ ಮದುವೆಯಾಗಿ ಬಾಲಕನ ಮನೆಗೆ ಬಂದಾಗಿದೆ. ಈ ಮದುವೆಗೆ ಸಂಬಂಧಿಸಿದ ಫೋಟೋಗಳು ವೈರಲ್ ಆದ ಬಳಿಕವಷ್ಟೇ ವಿಷಯ ಬೆಳಕಿಗೆ ಬಂದಿದೆ. ಜಿಲ್ಲಾ ಮಹಿಳಾ ಅಭಿವೃದ್ಧಿ ಮತ್ತು ಮಕ್ಕಳ ಕಲ್ಯಾಣ ಅಧಿಕಾರಿ ಮತ್ತು ತಹಶೀಲ್ದಾರು ಸೇರಿ ಸರಕಾರಿ ಅಧಿಕಾರಿಗಳ ತಂಡವು ಅವರ ಮನೆಗೆ ಧಾವಿಸುವಷ್ಟರಲ್ಲಿ, ವಧು, ವರರ ಕುಟುಂಬಗಳೆರಡೂ ತಲೆಮರೆಸಿಕೊಂಡಿವೆ. ಮಗಳನ್ನು ಸಮ್ಮತಿಯಿಂದಲೇ ಮದುವೆ ಮಾಡಿಕೊಟ್ಟಿದ್ದಾಗಿ ಯವತಿಯು ತಿಳಿಸಿದ್ದಾರೆ. ಎ.23ರಿಂದ ಎ. 27ರ ವರೆಗೆ ಮದುವೆ ಶಾಸ್ತ್ರಗಳು ನಡೆದಿವೆ.
ಆದರೆ, ಕಾನೂನು ಪ್ರಕಾರ ಈ ಮದುವೆ ಸಿಂಧುವಲ್ಲದ ಕಾರಣ, 2 ದಿನಗಳೊಳಗೆ ಯುವತಿಯನ್ನು ಜಿಲ್ಲಾಡಳಿತಕ್ಕೆ ಒಪ್ಪಿಸಬೇಕು. ಇಲ್ಲದಿದ್ದರೆ ದೂರು ದಾಖಲಿಸುತ್ತೇವೆ ಎಂದು ತಹಶೀಲ್ದಾರರು ಎಚ್ಚರಿಕೆ ನೀಡಿದ್ದಾರೆ. ಆದರೆ, ಹುಡುಗನ ಮನೆಯವರ ಮೊಬೈಲ್ ಮಾತ್ರ ಸ್ವಿಚ್x ಆಫ್ ಆಗಿದೆ.