ಕಲಬುರಗಿ: ಸಂಪುಟ ವಿಸ್ತರಣೆಯಲ್ಲಿ ಯಡಿಯೂರಪ್ಪಗೆ ಸ್ವಾತಂತ್ರ್ಯವಿಲ್ಲ. ಸಚಿವ ಸಂಪುಟ ಅಸಮತೋಲನದಿಂದ ಕೂಡಿದೆ. ಇದು ಸರ್ಕಾರದಲ್ಲಿ ಅಸಮಾಧಾನಕ್ಕೆ ಕಾರಣವಾಗುತ್ತದೆ ಎಂದು ಮಾಜಿ ಸಿಎಂ, ವಿಪಕ್ಷ ನಾಯಕ ಸಿದ್ದರಾಮಯ್ಯ ಟೀಕಿಸಿದ್ದಾರೆ.
ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿ, ಯಡಿಯೂರಪ್ಪ ಅಸಮರ್ಥ ಮುಖ್ಯಮಂತ್ರಿ. ಸಂಪುಟ ವಿಸ್ತರಣೆ, ಖಾತೆ ಹಂಚಿಕೆ ಬಗ್ಗೆ ಹೈಕಮಾಂಡ್ ಕೇಳಿಯೇ ನಿರ್ಧರಿಸಬೇಕಾದ ಇಕ್ಕಟ್ಟಿನಲ್ಲಿ ಸಿಲುಕಿದ್ದಾರೆ. 13 ಜಿಲ್ಲೆಗಳಿಗೆ ಸಚಿವ ಸ್ಥಾನದ ಪ್ರಾತಿನಿಧ್ಯ ಸಿಕ್ಕಿಲ್ಲ. ಸಂಪುಟದಲ್ಲಿ ಸಾಮಾಜಿಕ ನ್ಯಾಯವೂ ಇಲ್ಲ ಎಂದರು.
ಇದೇ ವೇಳೆ, ಕೆಪಿಸಿಸಿ ಅಧ್ಯಕ್ಷರ ಆಯ್ಕೆ ಬಗ್ಗೆ ಪ್ರತಿಕ್ರಿಯಿಸಿ, ದೆಹಲಿ ಚುನಾವಣೆ ಹಿನ್ನೆಲೆಯಲ್ಲಿ ಕೆಪಿಸಿಸಿ ಅಧ್ಯಕ್ಷರ ಆಯ್ಕೆ ವಿಳಂಬವಾಗಿದೆ. ಅಧ್ಯಕ್ಷರ ನೇಮಕದಲ್ಲಿ ನಮ್ಮಲ್ಲಿ ಯಾವುದೇ ಭಿನ್ನಾಭಿಪ್ರಾಯಗಳಿಲ್ಲ. ನಮ್ಮ ಅಭಿಪ್ರಾಯವನ್ನು ಹೈಕಮಾಂಡ್‌ಗೆ ತಿಳಿಸಿದ್ದೇವೆ. ಆಯ್ಕೆ ದಿನಾಂಕವನ್ನು ನಾವು ನಿಗದಿ ಮಾಡುವುದಕ್ಕೆ ಆಗುವುದಿಲ್ಲ. ಅಧ್ಯಕ್ಷರ ನೇಮಕ ಹೈಕಮಾಂಡ್‌ಗೆ ಬಿಟ್ಟಿದ್ದು ಎಂದರು.
ಬಡ್ತಿ ಮೀಸಲಾತಿ, ಆಯಾ ರಾಜ್ಯಗಳ ವಿವೇಚನೆಗೆ ಬಿಟ್ಟಿದ್ದು ಎಂದು ಸುಪ್ರೀಂಕೋರ್ಟ್ ಹೇಳಿದೆಯೇ ಹೊರತು ಬಡ್ತಿ ಮೀಸಲಾತಿ ಕೊಡಬೇಡಿ ಎಂದು ಹೇಳಿಲ್ಲ. ಎಲ್ಲೂ ನಮ್ಮ ಕಾನೂನನ್ನು ಸ್ಟ್ರಕ್ ಡೌನ್ ಮಾಡಿಲ್ಲ. ನಾವು ಮಾಡಿದ ಕಾನೂನು ಹಾಗೆಯೇ ಇದೆ. ಮೀಸಲಾತಿಯನ್ನು ತೆಗೆದು ಹಾಕಲಾಗಿಲ್ಲ. ಸುಪ್ರೀಂ ಆದೇಶವನ್ನು ಪೂರ್ತಿಯಾಗಿ ಓದಬೇಕಾಗುತ್ತದೆ.
– ಸಿದ್ದರಾಮಯ್ಯ, ಮಾಜಿ ಸಿಎಂ