Advertisement

127 ವರ್ಷ ಕಂಡ ಎಡಪದವು ದ.ಕ.ಜಿ.ಪಂ. ಮಾದರಿ ಹಿರಿಯ ಪ್ರಾಥಮಿಕ ಶಾಲೆ

09:54 AM Nov 28, 2019 | Team Udayavani |

19ನೇಯ ಶತಮಾನದ ಉತ್ತರಾರ್ಧದಲ್ಲಿ ಬ್ರಿಟಿಷ್‌ ಆಡಳಿತದಡಿ, ಊರ ಹಿರಿಯರ ಮುತುವರ್ಜಿಯಲ್ಲಿ ಸ್ಥಾಪನೆಗೊಂಡು ಈಗಲೂ ವಿದ್ಯೆಯ ಬೆಳಕನ್ನು ಪಸರಿಸುತ್ತಿರುವ ಹಲವು ಸರಕಾರಿ ಶಾಲೆಗಳು ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿವೆ. ಈಗಿನ ಆಂಗ್ಲ ಮಾಧ್ಯಮ ಶಿಕ್ಷಣದ ಆಕರ್ಷಣೆಯ ನಡುವೆ ಈ ಶಾಲೆಗಳು ಸುತ್ತಮುತ್ತಲಿನ ಊರುಗಳಿಗೆ ಅಕ್ಷರಶಃ ಜ್ಞಾನ ದೇಗುಲಗಳೇ ಆಗಿವೆ. ಶತಮಾನದ ಹಿರಿಮೆಯ ಕನ್ನಡ ಮಾಧ್ಯಮ ಸರಕಾರಿ ಶಾಲೆಗಳನ್ನು ಗುರುತಿಸಿ ಪರಿಚಯಿಸುವ ಪ್ರಯತ್ನ ನಮ್ಮದು.

Advertisement

1892 ಶಾಲೆ ಆರಂಭ
ಹುಲ್ಲಿನ ಚಾವಣಿಯಲ್ಲಿ ಶಾಲೆ ಆರಂಭ

ಕೈಕಂಬ: ಎಡಪದವಿನ ದ.ಕ.ಜಿ.ಪಂ. ಮಾದರಿ ಹಿರಿಯ ಪ್ರಾಥಮಿಕ ಶಾಲೆಯನ್ನು ಮಿಜಾರುಗುತ್ತು ಮನೆತನದ ಧೂಮ ಆಳ್ವ ಅವರು 1892ರಲ್ಲಿ ಆರಂಭಿಸಿದರು.
ಹುಲ್ಲಿನ ಚಾವಣಿಯಲ್ಲಿ ಆರಂಭಗೊಂಡ ಈ ಶಾಲೆಯಲ್ಲಿ ಸುಮಾರು 20 ವಿದ್ಯಾರ್ಥಿಗಳು ವಿದ್ಯಾಭ್ಯಾಸ ಪಡೆಯುತ್ತಿದ್ದರು.

ಈ ಶಾಲೆ ಇಂದಿಗೂ ಬೆಳ್ಳೆಚ್ಚಾರು ಶಾಲೆ ಎಂದೇ ಪ್ರಸಿದ್ಧಿ ಪಡೆದಿದೆ. ದೇಶಪ್ರೇಮ, ಸಜ್ಜನಿಕೆ, ಮಾನವೀಯ ಮೌಲ್ಯಗಳನ್ನು ವಿದ್ಯಾರ್ಥಿ ಜೀವನದಲ್ಲಿ ಮಕ್ಕಳಲ್ಲಿ ಬೆಳೆಸಬೇಕು ಎಂಬ ಉದ್ದೇಶದಿಂದ ಈ ಶಾಲೆ ಸ್ಥಾಪನೆಯಾಗಿತ್ತು. ಮಹಾಲಿಂಗ ಶೆಟ್ಟಿ ಅವರು ಈ ಶಾಲೆಯ ಪ್ರಥಮ ಮುಖ್ಯೋಪಾಧ್ಯಾಯರು. 1953ರಲ್ಲಿ ಸರಕಾರಿ ಹಿರಿಯ ಪ್ರಾಥಮಿಕ ಈ ಶಾಲೆಯಾಗಿ ಮಾರ್ಪಾಡುಗೊಂಡಿತ್ತು. ಆಗ 160 ಮಕ್ಕಳ ಸಂಖ್ಯೆಯಾಗಿತ್ತು.

ಎರಡು ಗ್ರಾಮಗಳಿಗೆ ಒಂದೇ ಶಾಲೆ
ಎರಡು ಗ್ರಾಮದ ವ್ಯಾಪ್ತಿಯಲ್ಲಿ ಈ ಶಾಲೆ ಇರುವುದು ಒಂದು ವಿಶೇಷತೆ. ಬಡಗ ಎಡಪದವು ಹಾಗೂ ತೆಂಕ ಮಿಜಾರು ಗ್ರಾಮದ ವ್ಯಾಪ್ತಿಯಲ್ಲಿ ಈ ಶಾಲೆ ಇದೆ. ಒಟ್ಟು 1.95 ಎಕ್ರೆ ಜಾಗದಲ್ಲಿ ಈ ಶಾಲೆ ಇದೆ. ವಿಶಾಲ ಮೈದಾನವನ್ನು ಹೊಂದಿದೆ.

Advertisement

1992ರಲ್ಲಿ ಶಾಲೆಯು ಶತಮಾನೋತ್ಸವವನ್ನು ಆಚರಿಸಿಕೊಂಡಿದ್ದು ಇದರ ಸವಿ ನೆನೆಪಿಗಾಗಿ ಕಟ್ಟಡವನ್ನು ಕೂಡ ನಿರ್ಮಿಸಲಾಗಿದೆ. ಅನಂತರ ದ.ಕ.ಜಿ.ಪಂ. ಮಾದರಿ ಹಿರಿಯ ಪ್ರಾಥಮಿಕ ಶಾಲೆಯಾಗಿ ಮಾರ್ಪಾಡಾಯಿತು. ಒಂದು ಕಾಲದಲ್ಲಿ 800ಕ್ಕಿಂತ ಅಧಿಕ ವಿದ್ಯಾರ್ಥಿಗಳು ಇಲ್ಲಿ ವಿದ್ಯಾಭ್ಯಾಸ ಪಡೆಯುತ್ತಿದ್ದರು. 1991-92ರಲ್ಲಿ ಈ ಶಾಲೆಯಲ್ಲಿ 14 ಶಿಕ್ಷಕರು ಇದ್ದು 650 ಮಕ್ಕಳು ವಿದ್ಯಾರ್ಜನೆಗೈದ್ದಿದ್ದರು. ಪ್ರಸ್ತುತವಾಗಿ ಒಂದರಿಂದ 7 ತರಗತಿಗಳಿದ್ದು 4 ಶಿಕ್ಷಕರು 87 ಮಕ್ಕಳು ವಿದ್ಯಾಭ್ಯಾಸ ಪಡೆಯುತ್ತಿದ್ದಾರೆ. ಈ ಶಾಲೆ 5 ಕಟ್ಟಡವನ್ನು ಹೊಂದಿದೆ. ಶಾಲೆಯಲ್ಲಿ ಮಳೆ ನೀರು ಕೊಯ್ಲುನ್ನು ಅಳವಡಿಸಲಾಗಿದೆ. ಮಕ್ಕಳಿಗೆ ಬಿಸಿಯೂಟ ಹಾಗೂ ಶಾಲಾ ಅವರಣದೊಳಗೆ ಅಂಗನವಾಡಿ ಕೇಂದ್ರ ಇದೆ.

ತೆಂಕ ಮಿಜಾರು ಹಾಗೂ ಬಡಗ ಎಡಪದವು, ಎಡಪದವು,ದಡ್ಡಿ, ಅಶ್ವತ್ಥ‌ಪುರ,ಇರುವೈಲು, ಉರ್ಕಿ ಪದವು, ತೋಡಾರು, ಕೊಂಪದವು ಪ್ರದೇಶಗಳಿಂದ ಈ ಶಾಲೆಗೆ ವಿದ್ಯಾರ್ಥಿಗಳು ಬರುತ್ತಿದ್ದರು. ಆರಂಭದಲ್ಲಿ ಈ ಪ್ರದೇಶದಲ್ಲಿ ಎರಡೇ ಶಾಲೆಗಳಿದ್ದು ಈಗ 6 ಶಾಲೆಗಳಿವೆ. ಶಾಲಾ ಶತಮಾನೋತ್ಸವದ ನೆನಪಿಗೆ ಶತಮಾನೋತ್ಸವ ಸಮಿತಿಯ ಅಧ್ಯಕ್ಷ ಮಿಜಾರುಗುತ್ತು ಆನಂದ ಆಳ್ವ ನೇತೃತ್ವದಲ್ಲಿ ಶಾಲೆಗೆ ಹೊಸ ಕಟ್ಟಡವನ್ನು ನಿರ್ಮಿಸಲಾಗಿದೆ. 27ವರ್ಷಗಳಿಂದ ಶಾಲಾ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಸದಾಶಿವ ಗೌಡ ಹಾಗೂ ಕಾರ್ಯದರ್ಶಿ ರಾಮಣ್ಣ ಶೆಟ್ಟಿ ಅವರ ನೇತೃತ್ವದಲ್ಲಿ ಶಾಲಾ ಬೆಳವಣಿಗೆಗೆ ಎಸ್‌ಡಿಎಂಸಿ ಜತೆ ಸಹಕಾರ ನೀಡುತ್ತಿದೆ.

ಮುಖ್ಯ ಶಿಕ್ಷಕರಾಗಿ ರಾಮ ರಾವ್‌, ಭಾಸ್ಕರ ನಾೖಕ್‌, ಎಂ. ಭೀಮಪ್ಪ, ಸಿಂತಿಯಾ ಜ್ಯೂಲಿಯೆಟ್‌ ಪ್ಯಾಸ್‌ ಮುಂತಾದವರು ಸೇವೆ ಸಲ್ಲಿಸಿದ್ದಾರೆ. ಗಣಪತಿ ಮಾಸ್ಟ್ರು, ಚಂದ್ರಕಲಾ ಟೀಚರ್‌, ಶಾರದಾ ಟೀಚರ್‌, ಕೃಷ್ಣ ಕಾರಂತ ಮಾಸ್ತರು, ರಾಮಗೌಡ ಮೊದಲಾದವರು ಶಿಕ್ಷಕರಾಗಿ ಗಣನೀಯ ಸೇವೆ ಸಲ್ಲಿಸಿದ್ದಾರೆ.

ಸಾಧಕ ಹಳೆ ವಿದ್ಯಾರ್ಥಿಗಳು
ಆಳ್ವಾಸ ಶಿಕ್ಷಣ ಸಂಸ್ಥೆಯ ಡಾ| ಮೋಹನ್‌ ಆಳ್ವ, ವಿಜ್ಞಾನಿ ಮಿಜಾರ್‌ ಕನಕಬೆಟ್ಟು ಶ್ರೀಧರ್‌, ಡಾ| ದುರ್ಗಾಪ್ರಸಾದ್‌ ಎಂ.ಆರ್‌., ಡಾ| ಗುರುರಾಜ್‌ ತಂತ್ರಿ, ಸಿಎ ಉಮೇಶ್‌ ರಾವ್‌ ಮಿಜಾರ್‌, ರಾಜ್‌ ರೋಡ್ರಿಗಸ್‌, ಉದ್ಯಮಿ ಮಿಜಾರ್‌ ರತ್ನಾಕರ ಶೆಟ್ಟಿ, ಅಬ್ದುಲ್‌ ಖಾದರ್‌, ಯಕ್ಷಗಾನ ಕಲಾವಿದ ಮಿಜಾರು ತಿಮ್ಮಪ್ಪ ,ಡಾ| ಮಯ್ಯಪ್ಪ, ಡಾ|ಅಬ್ದುಲ್‌ ರೆಹಮಾನ್‌ಮೊದಲಾದವರು ಇಲ್ಲಿನ ಸಾಧಕ ಹಳೆವಿದ್ಯಾರ್ಥಿಗಳು.

ಮಿಜಾರು ಗುತ್ತು ಮನೆ ತನದವರು ಇಂದಿಗೂ ಈ ಶಾಲೆಯ ಆವಶ್ಯಕತೆಗೆ ಸ್ಪಂದಿಸಿ, ಸಹಾಯ ಮಾಡುತ್ತಿದ್ದಾರೆ. ಶಾಲೆಗೆ ಸುಸಜ್ಜಿತ ಕಟ್ಟಡದ ಅಗತ್ಯವಿದೆ. ಶಾಲಾಗೆ ಅವರಣ ಗೋಡೆ ಅಗತ್ಯವಿದೆ.
-ಪದ್ಮಾವತಿ ಎನ್‌, ಶಾಲಾ ಮುಖ್ಯೋಪಾಧ್ಯಾಯಿನಿ.

ನನ್ನ ಅಣ್ಣ,ಅಕ್ಕ ಎಲ್ಲರೂ ಅಲ್ಲಿ ಕಲಿತು ಒಳ್ಳೆಯ ಹುದ್ದೆಯಲ್ಲಿ ಇರಲು ಹಾಗೂ ಸಾಧನೆಗೆ ಆ ಶಾಲೆಯ ಪ್ರಾಥಮಿಕ ಶಿಕ್ಷಣ ಕಾರಣವಾಗಿದೆ. ಸಾಂಸ್ಕೃತಿಕ, ಕ್ರೀಡಾ ಕ್ಷೇತ್ರ ಹಾಗೂ ವಿವಿಧ ಕ್ಷೇತ್ರದಲ್ಲಿ ಮನೋಧರ್ಮ ಬೆಳೆಯಲು ಸಾಧ್ಯವಾಯಿತು.
-ಡಾ| ಮೋಹನ್‌ ಆಳ್ವ, ಹಳೆ ವಿದ್ಯಾರ್ಥಿ

-ಸುಬ್ರಾಯ ನಾಯಕ್‌ ಎಕ್ಕಾರು

Advertisement

Udayavani is now on Telegram. Click here to join our channel and stay updated with the latest news.

Next