Advertisement

ಹಳೆಮನೆಯ ಮಾಳಿಗೆಯಲ್ಲಿ ಆರಂಭವಾದ ಶಾಲೆಗೀಗ 110ರ ಸಂಭ್ರಮ

09:51 AM Nov 29, 2019 | mahesh |

19ನೇಯ ಶತಮಾನದ ಉತ್ತರಾರ್ಧದಲ್ಲಿ ಬ್ರಿಟಿಷ್‌ ಆಡಳಿತದಡಿ, ಊರ ಹಿರಿಯರ ಮುತುವರ್ಜಿಯಲ್ಲಿ ಸ್ಥಾಪನೆಗೊಂಡು ಈಗಲೂ ವಿದ್ಯೆಯ ಬೆಳಕನ್ನು ಪಸರಿಸುತ್ತಿರುವ ಹಲವು ಸರಕಾರಿ ಶಾಲೆಗಳು ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿವೆ. ಈಗಿನ ಆಂಗ್ಲ ಮಾಧ್ಯಮ ಶಿಕ್ಷಣದ ಆಕರ್ಷಣೆಯ ನಡುವೆ ಈ ಶಾಲೆಗಳು ಸುತ್ತಮುತ್ತಲಿನ ಊರುಗಳಿಗೆ ಅಕ್ಷರಶಃ ಜ್ಞಾನ ದೇಗುಲಗಳೇ ಆಗಿವೆ. ಶತಮಾನದ ಹಿರಿಮೆಯ ಕನ್ನಡ ಮಾಧ್ಯಮ ಸರಕಾರಿ ಶಾಲೆಗಳನ್ನು ಗುರುತಿಸಿ ಪರಿಚಯಿಸುವ ಪ್ರಯತ್ನ ನಮ್ಮದು.

Advertisement

1910 12 ಶಾಲೆ ಆರಂಭ
ಶಾಲೆಯ ಅಭಿವೃದ್ಧಿಗೆ ಎನ್‌.ಎಸ್‌. ಜೈನಿ ಅವರ ಸೇವೆ ಸ್ಮರಣೀಯ

ಮೂಡುಬಿದಿರೆ: ನೆಲ್ಲಿಕಾರಿನ ಹಳೆ ಮನೆಯ ಮಾಳಿಗೆಯಲ್ಲಿ ಅವಿಭಜಿತ ಕುಟುಂಬದ ಮಕ್ಕಳಿಗೆ ಶಿಕ್ಷಣ ನೀಡಲೆಂದು 1910-12ರಲ್ಲಿ ನೆಲ್ಲಿಕಾರು ಹಳೆಮನೆ ಶ್ರೀವರ್ಮ ಶೆಟ್ಟಿ (ಮುಂದೆ ಎನ್‌.ಎಸ್‌. ಜೈನಿ ಎಂದು ಹೆಸರು ಬದಲಾಯಿಸಿಕೊಂಡವರು) ಶಾಲೆಯನ್ನು ಆರಂಭಿಸಿದರು. ಇದೇ ಶಾಲೆ ಮುಂದೆ ನೆಲ್ಲಿಕಾರಿನಲ್ಲಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಾಗಿ ವಿದ್ಯಾರ್ಥಿಗಳ ಶಿಕ್ಷಣಕ್ಕೆ ನೆಲೆಮನೆಯಾಯಿತು. ಶ್ರೀವರ್ಮ ಶೆಟ್ಟಿ ಅವರು ಈ ಶಾಲೆಯ ಪ್ರಥಮ ಮುಖ್ಯೋಪಾಧ್ಯಾಯರಾಗಿ ಸೇವೆ ಸಲ್ಲಿಸಿ, ಶಾಲೆಯನ್ನು ಸರಕಾರಿ ಶಾಲೆಯನ್ನಾಗಿಸಲು ಅಹರ್ನಿಶಿ ಪ್ರಯತ್ನಿಸಿದವರು.

ಬೋರ್ಡ್‌ ಹೈಯರ್‌ ಎಲಿಮೆಂಟರಿ ಶಾಲೆ
ಆರಂಭದಲ್ಲಿ ವಿಶಾಲ ಹಜಾರದ ಮಣ್ಣಿನ ಗೋಡೆಯ ಕಟ್ಟಡದಲ್ಲಿ ನೆಲೆಕಂಡಿದ್ದ ಈ ಶಾಲೆಯು ಬಳಿಕ 1934ರ ವೇಳೆಗೆ ಬಸದಿಯದ್ದೇ ಜಾಗಕ್ಕೆ ಸ್ಥಳಾಂತರಿಸಲ್ಪಟ್ಟಿತು. 1955ರಲ್ಲಿ ಕಮ್ಯೂನಿಟಿ ಪ್ರಾಜೆಕ್ಟ್ ಹಾಗೂ ಊರವರ ಸಹಾಯದಿಂದ ಹೊಸ ಕಟ್ಟಡವನ್ನು ಹೊಂದಿ, 1957ರಲ್ಲಿ ನೆಲ್ಲಿಕಾರು ಬೋರ್ಡ್‌ ಹೈಯರ್‌ ಎಲಿಮೆಂಟರಿ ಶಾಲೆಯಾಗಿ ಮೇಲ್ದರ್ಜೆಗೇರಿತು. ಆಗ 3 ಅಧ್ಯಾಪಕರು, ಓರ್ವ ಅಧ್ಯಾಪಕಿ ಬೋಧಿಸುತ್ತಿದ್ದು 170 ವಿದ್ಯಾರ್ಥಿಗಳಿದ್ದರು.

ಈ ಶಾಲೆಗೆ ಬಸದಿ ಹೆಸರಿನಲ್ಲಿ ಒಂದು ಎಕ್ರೆ ಜಾಗವಿದ್ದು ಎನ್‌.ಎಸ್‌. ಜೈನಿ ಅವರ ಪ್ರಯತ್ನದಿಂದ ಲಭಿಸಿದ ಒಂದು ಎಕ್ರೆ ಸರಕಾರಿ ಜಾಗದಲ್ಲಿ ಶಾಲಾ ಮೈದಾನವಿದೆ.

Advertisement

ಮುಂದೆ ಮುಖ್ಯೋಪಾಧ್ಯಾಯರಾಗಿ ವಿಟ್ಟಲ್‌ ಪೈ, ನೇಮಿರಾಜ ಪೂವಣಿ, ವಿಟ್ಟಲ ಕಾಮತ್‌, ವಾಸುದೇವ ಭಟ್ಟ, ಮಂಜಪ್ಪ, ಆದಿರಾಜ ಬಂಗ, ನರಸಿಂಹ ಶೆಟ್ಟಿ, ನಾಗರಾಜ ಪೂವಣಿ, ಪಿಜಿನ ಪೂಜಾರಿ, ಶಿವರಾಮ ಶೆಟ್ಟಿ, ಆದಿರಾಜ ಬಂಗ, ಜರ್ಮಿಯಸ್‌ ಮೆಂಡೋನ್ಸಾ, ನಾಗಪ್ಪ ಹೆಗ್ಡೆ, ನರಸಿಂಹ ರಾವ್‌, ರತ್ನವರ್ಮ ಶೆಟ್ಟಿ, ಚಂದ್ರರಾಜ್‌ ಬಿ., ಬಿ. ಸದಾಶಿವ ರಾವ್‌, ಸುಂದರ ಹೆಗ್ಡೆ, ಅಚ್ಯುತ್‌ ಆಚಾರ್ಯ, ಸೀನಿಯರ್‌ ಗ್ರೇಡ್‌ನ‌ ಎಚ್‌. ನಾಗೇಶ್‌ ಶೆಣೈ, ಸನತ್‌ ಕುಮಾರ್‌, ಯಶೋಧರ ಬಲ್ಲಾಳ್‌, ಸುಧಾಕರ ಪೈ, ಕೆ. ಕೃಷ್ಣಪ್ಪ ಪೂಜಾರಿ, ಯಶೋಧರ ಬಲ್ಲಾಳ್‌, ರಘುಚಂದ್ರ ಬಂಗ, ವಿನಯ ಕುಮಾರ, ಎ. ಪ್ರಭಾಚಂದ್ರ, ವನಜಾ ಬಾೖ, ಪುಷ್ಪಾ ಸೇವೆ ಸಲ್ಲಿಸಿದ್ದು 2018ರಿಂದ ವಸಂತಿ ಬಿ. ಅವರು ಕರ್ತವ್ಯನಿರತರಾಗಿದ್ದಾರೆ.

ಸಾಧಕ ಹಳೆ ವಿದ್ಯಾರ್ಥಿಗಳು
ಎನ್‌.ಎಸ್‌. ಜೈನಿ ಅವರ ಪುತ್ರರಾದ ಪದ್ಮನಾಭ ಜೈನಿ, “ಕುಂದ ಕುಂದ ಭಾರತಿ ಆಚಾರ್ಯ ಪಾರ್ಶ್ವದೇವ ಪ್ರಶಸ್ತಿ’ ಪುರಸ್ಕೃತ ಧನ್ಯಕುಮಾರ, ನ್ಯಾಯಾಧೀಶೆ ಲತಾ, ನಾರಾವಿಯ ಡಾ| ಶೀತಲ್‌ ಕುಮಾರ್‌, ಜ್ಞಾನಚಂದ್ರ (ಸಾಂಸ್ಕೃತಿಕ), ಅಂತಾರಾಷ್ಟ್ರೀಯ ಖ್ಯಾತಿಯ ಛಾಯಾಗ್ರಾಹಕ ಜಿನೇಶ್‌ ಪ್ರಸಾದ್‌, ಎಸ್‌ಡಿಎಂ ಲಾ ಕಾಲೇಜಿನ ಹಿರಿಯ ಪ್ರಾಧ್ಯಾಪಿಕೆ ಡಾ| ಬಾಲಿಕಾ, ಉಪಪ್ರಾಚಾರ್ಯೆ ಕೆ. ವಾಣಿ, ಸಹಕಾರಿ ಅರುಣ್‌ಕುಮಾರ್‌ ಜೈನ್‌, ನೇಮಿಚಂದ್ರ ಜೈನ್‌, ಗಣೇಶ ಪ್ರಸಾದ್‌ ಜೀ (ಸಾಹಿತ್ಯ) ಈ ಶಾಲೆಯ ಹೆಮ್ಮೆಯ ಸಾಧಕ ಹಳೆ ವಿದ್ಯಾರ್ಥಿಗಳು.

ದಿ| ಜಿನದತ್ತ ಶೆಟ್ಟಿ, ದಿ| ಕುಂಟಡ್ಕ ಜಿನರಾಜ ಶೆಟ್ಟಿ (ಕಂಬಳ), ದಿ| ನಮಿರಾಜ ಶೆಟ್ಟಿ, ದಿ| ಅನಂತ್ರಾಜ್‌ ಶೆಟ್ಟಿ ಇವರೇ ಮೊದಲಾದವರು ಶಾಲಾ ಪ್ರಗತಿಯಲ್ಲಿ ಕೈಜೋಡಿಸಿದವರು. ಜೈನರಲ್ಲಿ ಮಹಿಳಾ ಶಿಕ್ಷಣಕ್ಕೆ ಅಷ್ಟೊಂದು ಮಹತ್ವ ಇಲ್ಲದ ಕಾಲದಲ್ಲಿ ಎನ್‌.ಎಸ್‌. ಜೈನಿ ಅವರು ತಮ್ಮ ಮನೆಯಲ್ಲೇ ಸಮಾಜದ ಹೆಣ್ಮಕ್ಕಳಿಗೆ ಉಚಿತ ಊಟೋಪಚಾರ ನೀಡಿ ಶಿಕ್ಷಣ ನಡೆಸಲು ಅವಕಾಶ ಕಲ್ಪಿಸಿದ್ದರು.

ಸುಸಜ್ಜಿತ ಸೌಲಭ್ಯಗಳು
ಶಾಲೆಯಲ್ಲಿ ಈಗ ಓರ್ವ ಮುಖ್ಯ ಶಿಕ್ಷಕಿ, 4 ಮಂದಿ ಸಹಶಿಕ್ಷಕರು ಹಾಗೂ ಓರ್ವ ಗೌರವ ಶಿಕ್ಷಕಿ ಇದ್ದು 92 ಮಂದಿ ಮಕ್ಕಳಿದ್ದಾರೆ. ಆಟದ ಬಯಲು, ಬಾವಿ, ಕುಡಿಯುವ ನೀರು ಪೂರೈಕೆಯ ವ್ಯವಸ್ಥೆ, ಆಟದ ರಂಗಮಂದಿರ ಮೊದಲಾದ ಮೂಲಸೌಕರ್ಯಗಳಿವೆ. ಶಾಲೆಯಲ್ಲಿ ಸ್ವತ್ಛತೆ ಕಾಪಾಡಿಕೊಂಡು ಬರಲಾಗಿದೆ. ಪ್ರತಿವರ್ಷ ಹೆತ್ತವರು ಹಾಗೂ ಶ್ರೀ ಕ್ಷೇ.ಧ. ಗ್ರಾ.ಅ. ಯೋಜನೆಯವರ ಸಹಕಾರದೊಂದಿಗೆ ಕೈ ತೋಟವನ್ನು ನಿರ್ಮಿಸಿ ತರಕಾರಿಗಳನ್ನು ಬೆಳೆಸಲಾಗುತ್ತಿದೆ. ಶೈಕ್ಷಣಿಕ, ಕ್ರೀಡಾರಂಗಗಳಲ್ಲಿ ಉತ್ತಮ ಸಾಧನೆ ವ್ಯಕ್ತವಾಗುತ್ತಿದೆ.

ಸ್ವಚ್ಛ ಸುಂದರ ಗ್ರಾಮೀಣ ಪರಿಸರದಲ್ಲಿರುವ ನಮ್ಮ ಶಾಲೆಯಲ್ಲಿ ಉತ್ತಮ ಶಿಕ್ಷಕ ವರ್ಗದವರಿದ್ದು ವಿದ್ಯಾರ್ಥಿಗಳಿಗೆ ಉತ್ತಮ ಶಿಕ್ಷಣ ಲಭಿಸುತ್ತಿದ್ದು ಶೈಕ್ಷಣಿಕ ಮಾತ್ರವಲ್ಲ ಕ್ರೀಡಾಕ್ಷೇತ್ರಗಳಲ್ಲೂ ವಿದ್ಯಾರ್ಥಿಗಳು ಗುರುತಿಸಿಕೊಂಡಿದ್ದಾರೆ.
-ವಸಂತಿ ಬಿ., ಮುಖ್ಯೋಪಾಧ್ಯಾಯಿನಿ

ಪೇಟೆಯ ಯಾವ ಶಾಲೆಗೂ ಕಡಿಮೆ ಇಲ್ಲದ ಶೈಕ್ಷಣಿಕ ವಾತಾವರಣ ನಮ್ಮ ನೆಲ್ಲಿಕಾರು ಶಾಲೆಯಲ್ಲಿತ್ತು. ಶಿಕ್ಷಕರ ಮುತುವರ್ಜಿ, ಪ್ರೀತಿ, ವಾತ್ಸಲ್ಯ ಸ್ಮರಣೀಯ. ನನ್ನ ತಂದೆ ಕೃಷ್ಣಪ್ಪ ಪೂಜಾರಿ ಅವರು ಇಲ್ಲಿ ಮುಖ್ಯೋಪಾಧ್ಯಾಯರಾಗಿದ್ದರು.
-ಲತಾ, ಹಳೆ ವಿದ್ಯಾರ್ಥಿನಿ, ನ್ಯಾಯಾಧೀಶೆ

 ಧನಂಜಯ ಮೂಡುಬಿದಿರೆ

Advertisement

Udayavani is now on Telegram. Click here to join our channel and stay updated with the latest news.

Next