Advertisement

ವಿದ್ಯಾಭ್ಯಾಸದ ಕೊರತೆ ನೀಗಿಸಲು ಆರಂಭವಾದ ಶಾಲೆಗೀಗ 108ರ ಸಂಭ್ರಮ

09:53 AM Nov 24, 2019 | Team Udayavani |

ಶತಮಾನದ ಉತ್ತರಾರ್ಧದಲ್ಲಿ ಬ್ರಿಟಿಷ್‌ ಆಡಳಿತದಡಿ, ಊರ ಹಿರಿಯರ ಮುತುವರ್ಜಿಯಲ್ಲಿ ಸ್ಥಾಪನೆಗೊಂಡು ಈಗಲೂ ವಿದ್ಯೆಯ ಬೆಳಕನ್ನು ಪಸರಿಸುತ್ತಿರುವ ಹಲವು ಸರಕಾರಿ ಶಾಲೆಗಳು ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿವೆ. ಈಗಿನ ಆಂಗ್ಲ ಮಾಧ್ಯಮ ಶಿಕ್ಷಣದ ಆಕರ್ಷಣೆಯ ನಡುವೆ ಈ ಶಾಲೆಗಳು ಸುತ್ತಮುತ್ತಲಿನ ಊರುಗಳಿಗೆ ಅಕ್ಷರಶಃ ಜ್ಞಾನ ದೇಗುಲಗಳೇ ಆಗಿವೆ. ಶತಮಾನದ ಹಿರಿಮೆಯ ಕನ್ನಡ ಮಾಧ್ಯಮ ಸರಕಾರಿ ಶಾಲೆಗಳನ್ನು ಗುರುತಿಸಿ ಪರಿಚಯಿಸುವ ಪ್ರಯತ್ನ ನಮ್ಮದು.

Advertisement

1911 ಶಾಲೆ ಆರಂಭ
ಮಾದರಿ ಶಾಲೆಯಲ್ಲೀಗ ವಿದ್ಯಾರ್ಥಿಗಳ ಕೊರತೆ

ಚೇಳಾಯಾರು: ಊರಿನಲ್ಲಿ ಶಿಕ್ಷಣದ ಅಗತ್ಯವನ್ನು ಪರಿಗಣಿಸಿದ ಚೇಳಾçರುವಿನ ಹಿರಿಯರು 1911ರಲ್ಲಿ ಚೇಳಾಯಾರು ಬೋರ್ಡ್‌ ಶಾಲೆಯನ್ನು ಆರಂಭಿಸಿದರು. 1966ರ ತನಕ ಎರಡು ಮೂರು ಅಧ್ಯಾಪಕರಿಂದಲೇ ಕಾರ್ಯ ನಿರ್ವಹಿಸುತ್ತಿದ್ದ ಈ ಶಾಲೆಯಲ್ಲಿ ಅನಂತರ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚುತ್ತಿದ್ದಂತೆಯೇ 1996ರಲ್ಲಿ 11 ಶಿಕ್ಷಕರು ಮುನ್ನೂರಕ್ಕೂ ಮಿಕ್ಕಿ ವಿದ್ಯಾರ್ಥಿಗಳಿದ್ದರು. ಸುಸಜ್ಜಿತ ಗ್ರಂಥಾಲಯದ ಜತೆಗೆ ಸುಸಜ್ಜಿತ ಸವಲತ್ತುಗಳನ್ನು ಈ ಶಾಲೆ ಹೊಂದಿದೆ. ಆದರೆ ಕ್ರಮೇಣ ಗ್ರಾಮದಲ್ಲಿ ಹೆಚ್ಚಿನ ಶಾಲೆಗಳು ತೆರೆದಾಗ ವಿದ್ಯಾರ್ಥಿಗಳ ಕೊರತೆಯಾಗಿ ಈಗ 36 ವಿದ್ಯಾರ್ಥಿಗಳಿದ್ದು 4 ಶಿಕ್ಷಕರು ಕಾರ್ಯ ನಿರ್ವಹಿಸುತ್ತಿದ್ದಾರೆ.

ಸರಕಾರಿ ಜಾಗದೊಂದಿಗೆ ಕೊಲ್ಯ ದಿ| ಕೃಷ್ಣಯ್ಯ ಅಧಿ ಕಾರಿ ಮಕ್ಕಳು 25 ಸೆಂಟ್ಸ್‌ ದಾನದ ಜಾಗದಲ್ಲಿ ಶಾಲೆ ಆರಂಭವಾಗಿದ್ದು ಮಕ್ಕಳ ಸಂಖ್ಯೆ ಹೆಚ್ಚಾದಾಗ 1971ರಲ್ಲಿ ಹೊಸ ಸಾರ್ವಜನಿಕ ಕಟ್ಟಡ ನಿರ್ಮಾಣಗೊಂಡಿತು. 1973ರಲ್ಲಿ ಸರಕಾರದ ನಿಯಮದಂತೆ ಮುಖ್ಯೋಪಾಧ್ಯಾಯರ ನೇಮಕದೊಂದಿಗೆ ಶಾಲೆಯು ಮಾದರಿ ಹಿರಿಯ ಪ್ರಾಥಮಿಕ ಶಾಲೆಯಾಗಿ ನಾಮಾಂಕಿತಗೊಂಡಿತು.

ಉದಾರ ದಾನಿಗಳ ಸಹಕಾರಿ
7ನೇ ತರಗತಿ ಉತ್ತೀರ್ಣಗೊಂಡ ಮಕ್ಕಳ ಭವಿಷ್ಯಕ್ಕಾಗಿ 1984ರಲ್ಲಿ ಅಂದಿನ ಶಾಸಕ ಎಂ. ಲೋಕಯ್ಯ ಶೆಟ್ಟಿ ಅವರ ಸಹಕಾರದಲ್ಲಿ ಪ್ರೌಢಶಾಲೆ ಮಂಜೂರಾಯಿತು. ಬೋರ್ಡ್‌ ಶಾಲೆ ದ.ಕ. ಜಿ.ಪಂ. ಮಾದರಿ ಹಿರಿಯ ಪ್ರಾಥಮಿಕ ಶಾಲೆಯಾಗಿ ಬದಲಾಯಿತು.

Advertisement

ಶಾಲೆಯ ಅಭಿವೃದ್ಧಿಗೆ ದಿ| ಗಣಪತಿ ಅಧಿಕಾರಿ, ನಾರಾಯಣ ಅಧಿಕಾರಿ, ಸಿ. ಹರಿದಾಸ್‌ ಭಟ್‌, ತಿಮ್ಮಪ್ಪ ಶೆಟ್ಟಿ, ವೆಂಕಪ್ಪ ಶೆಟ್ಟಿ,ವಿಟuಲ ಪ್ರಭು, ಎಸ್‌. ಈಶ್ವರ ಭಟ್‌ ಹೀಗೆ ಅನೇಕ ಉದಾರ ದಾನಿಗಳು ಸಹಕಾರಿಸಿದ್ದಾರೆ. 1981ರಲ್ಲಿ ಶಿಕ್ಷಣ ಸಚಿವ ಸುಬ್ಬಯ್ಯ ಶೆಟ್ಟಿ ಶಾಲಾ ಮೈದಾನ ಒದಗಿಸಲು ಸರಕಾರದಿಂದ ಅನುದಾನ ಒದಗಿಸಿದ್ದರು.

ಶಾಲೆಯ ಸರ್ವಾಂಗೀಣ ಅಭಿವೃದ್ಧಿಗೆ ಕೊಡುಗೆ ನೀಡಿದ ಊರ ಹಿರಿಯರು, ಪ್ರಮುಖರು ಈ ಶಾಲೆ ಮಾದರಿಯಾಗಿ ಬೆಳೆಯಲು ಕಾರಣಕರ್ತರಾಗಿದ್ದಾರೆ. ಸ್ಮಾರಕ ನಿಧಿ  ಬಹುಮಾನ, ಧ್ವಜಸ್ತಂಭ ನಿರ್ಮಾಣ, ಸ್ಥಳೀಯ ಯುವಕ ಮಂಡಲ, ಕ್ರಿಕೆಟ್‌ ಸಂಸ್ಥೆಗಳು, ರೋಟರಿ, ಎಂಆರ್‌ಪಿಎಲ್‌, ಎನ್‌ಎಂಪಿಟಿ ಸೇರಿದಂತೆ ಅನೇಕರು ಕೈ ಜೋಡಿಸಿದ್ದಾರೆ.

ಶಾಲೆಯ ಹಳೆ ವಿದ್ಯಾರ್ಥಿಗಳ ಸಂಘ ಮಕ್ಕಳಿಗೆ ಬಸ್‌ ಟಿಕೆಟ್‌ ಹಣವನ್ನು ನೀಡಿ ವೆಚ್ಚ ಭರಿಸುತ್ತಿದೆ. ಶಾಲೆಗೆ ನೇಮಕಾತಿಯಾಗುವ ಮಕ್ಕಳ ಹೆಸರಿನಲ್ಲಿ 1 ಸಾವಿರ ರೂ. ಠೇವಣಿ ಇಡಲಾಗುತ್ತಿದೆ. ಇಸ್ಕಾನ್‌ನಿಂದ ಬಿಸಿಯೂಟ ಮತ್ತು ಸರಕಾರದಿಂದ ಉಚಿತ ಸಮವಸ್ತ್ರ, ಶಾಲಾ ಬ್ಯಾಗ್‌, ಊಟದ ಬಟ್ಟಲು, ಲೋಟವನ್ನು ನೀಡಲಾಗುತ್ತಿದೆ. ದಾನಿಗಳ ನೆರವಿನಿಂದ ಶಾಲೆಯಲ್ಲಿ ಕಂಪ್ಯೂಟರ್‌ ಸೌಲಭ್ಯವಿದೆ. ಶಾಲೆಯ ಬಾವಿಗೆ ಮಳೆಕೊಯ್ಲು ಅಳವಡಿಸಲಾಗಿದೆ.

ಸಾಧನೆಗಳು
ಇಲ್ಲಿನ ವಿದ್ಯಾರ್ಥಿಗಳು ಇತರ ಶಾಲೆಗಿಂತ ಕಡಿಮೆಯಿಲ್ಲ ಎಂಬಂತೆ ಖೋ-ಖೋ ಸ್ಪರ್ಧೆಯಲ್ಲಿ ಬಹುಮಾನ, ಚೆಸ್‌, ಪ್ರತಿಭಾ ಕಾರಂಜಿಯಲ್ಲಿ ಬಹುಮಾನ, ಪಠ್ಯೇತರ ಚಟುವಟಿಕೆಯಲ್ಲಿ ಪದಕವನ್ನು ಗಳಿಸಿಕೊಟ್ಟಿದ್ದಾರೆ. ಇಲ್ಲಿನ ವಿದ್ಯಾರ್ಥಿಗಳು, ವಿಜ್ಞಾನ ವಿಭಾಗದ ಸ್ಪರ್ಧೆ ಇನ್‌ಸ್ಪಾಯರ್‌ನಲ್ಲಿ ಭಾಗವಹಿಸಿ ಜಿಲ್ಲಾ ಮಟ್ಟದ ಪ್ರಶಸ್ತಿ ಪಡೆದು ರಾಜ್ಯವನ್ನು ಪ್ರತಿನಿ ಧಿಸಿದ್ದರು.

ಶಾಲೆಯಲ್ಲಿ ಭಜನೆ, ಶಾರದಾ ಪೂಜೆ ನಡೆಸಲಾಗುತ್ತಿದೆ. ಗ್ರಂಥಾಲಯದಲ್ಲಿ 2ಸಾವಿರಕ್ಕೂ ಮಿಕ್ಕೂ ಪುಸ್ತಕಗಳಿವೆ. ಈಗ ಇಲ್ಲಿನ ಜನವಸತಿ ನಿರ್ವಸಿತ ಪ್ರದೇಶಕ್ಕೆ ಮತ್ತೂಂದು ಶಾಲೆ ವರ್ಗವಾಗಿ ಬಂದಿದ್ದರಿಂದಾಗಿ ಈಗ ವಿದ್ಯಾರ್ಥಿಗಳು ಹಂಚಿ ಹೋಗಿ ಕೊರತೆ ಎದುರಾಗಿದೆ.

ಸುಸಜ್ಜಿತ ಸೌಲಭ್ಯಗಳ ಕೊರತೆ
15 ಶಾಲಾ ಕೊಠಡಿ, ಸಭಾಭವನ ಸವಲತ್ತು ಹೊಂದಿದೆ. ಮಕ್ಕಳಿಲ್ಲದೆ ಹೆಚ್ಚುವರಿ ಸೌಲಭ್ಯ ಪಡೆಯಲು ತೊಡಕಾಗಿದೆ. ಇದೆಲ್ಲದರ ನಡುವೆಯೂ ಈ ಶಾಲೆಯು ತನ್ನ ಶತಮಾನೋತ್ಸವ ಕಾರ್ಯಕ್ರಮ ನಡೆಸಿದ್ದು, ಶತಮಾನ ಕಂಡ ಬೆರಳೆಣಿಕೆಯ ಶಾಲೆಯಲ್ಲಿ ಇದೂ ಒಂದಾಗಿದೆ. ವಿದ್ಯಾರ್ಥಿಗಳ ಹೆಚ್ಚಳಕ್ಕೆ ಶಿಕ್ಷಕರು ಮನೆ-ಮನೆ ತಿರುಗಿದರೂ ಆಂಗ್ಲ ಮಾಧ್ಯಮ ಮತ್ತು ಹೈಟೆಕ್‌ ಶಾಲೆಯೆಡೆ ಸೆಳೆತ ಹೆಚ್ಚುತ್ತಿದೆ. ಈ ಶಾಲೆ ಶತಮಾನ ಕಂಡಿದ್ದು ಮೂಲ ಸವಲತ್ತಿದ್ದರೂ ವಿದ್ಯಾರ್ಥಿಗಳ ಕೊರತೆಯಿದೆ.

ಇಲ್ಲಿ ಕಲಿತ ವಿದ್ಯಾರ್ಥಿಗಳು ಶಾಲೆಗೆ, ಊರಿಗೆ ಕೀರ್ತಿ ತಂದಿದ್ದಾರೆ. ಎಲ್‌ಕೆಜಿ-ಯುಕೆಜಿಗೆ ಮೂರೂವರೆ ವರ್ಷದಲ್ಲೇ ಮಕ್ಕಳು ಸೇರುತ್ತಾರೆ. ಸರಕಾರಿ ಶಾಲೆಯಾದರೆ 1ನೇ ತರಗತಿಗೆ 5ವರ್ಷವಾಗಿರಬೇಕು.ಇದೂ ಕೂಡ ಕಾರಣವಿರಬಹುದು.
– ಕೃಷ್ಣವೇಣಿ , ಮುಖ್ಯ ಶಿಕ್ಷಕಿ (ಪ್ರಭಾರಿ)

ಗ್ರಾಮದಲ್ಲಿ 100 ವರ್ಷದ ಹಿಂದೆಯೇ ಶಾಲೆಯಿತ್ತು ಎಂಬುದಕ್ಕೆ ಪೂರ್ವಜರಿಗೆ ಶಿಕ್ಷಣದ ಬಗ್ಗೆ ಇದ್ದ ಜ್ಞಾನ, ಪ್ರೀತಿ ಕಾರಣ ಎಂದರೂ ತಪ್ಪಾಗಲಾರದು. ರಂಗ ಮಂದಿರ ನಿರ್ಮಿಸುವ ಕನಸಿದೆ.
-ಜಯಾನಂದ ಚೇಳಾಯಾರು, ಹಳೆ ವಿದ್ಯಾರ್ಥಿ

- ಲಕ್ಷ್ಮೀನಾರಾಯಣ ರಾವ್‌

Advertisement

Udayavani is now on Telegram. Click here to join our channel and stay updated with the latest news.

Next