Advertisement

ಒಡೆದ ಚರಂಡಿ ನಿರ್ಮಿಸಲು ಪಪಂ. ಮೀನಮೇಷ!

05:25 PM Apr 01, 2019 | Naveen |

ತಾವರಗೇರಾ: ಪಟ್ಟಣದ ಮುಖ್ಯ ಬಜಾರ್‌ ರಸ್ತೆಯ ಒತ್ತುವರಿ ಜಾಗ(ರಸ್ತೆ ಅಗಲೀಕರಣ) ತೆರವುಗೊಳಿಸುವ ಕಾರ್ಯವನ್ನು ಪಪಂ ಆಡಳಿತ ಅರ್ದಂಬರ್ದ ಮಾಡಿ ಕೈ ತೊಳೆದುಕೊಂಡಿದೆ. ಆದರೆ, ಇಲ್ಲಿವರೆಗೆ ಯಾವುದೇ ರಸ್ತೆಯಾಗಲಿ, ಚರಂಡಿಯಾಗಲಿ ನಿರ್ಮಿಸುವ ಗೋಜಿಗೆ ಹೋಗಿಲ್ಲ. ಇದರಿಂದ ರಸ್ತೆ ಮೇಲೆಲ್ಲ ಚರಂಡಿ
ನೀರು ಹರಿಯುತ್ತಿದೆ.

Advertisement

ಕಳೆದ ಮೂರು-ನಾಲ್ಕು ತಿಂಗಳ ಹಿಂದೆ ರಸ್ತೆ ಅಗಲೀಕರಣ ಸಮಯದಲ್ಲಿ ರಸ್ತೆ ಪಕ್ಕದ ಚರಂಡಿ ಒಡೆದು ಹಾಕಲಾಗಿದೆ. ಪಟ್ಟಣದ ಕೆಲವು ವಾರ್ಡ್‌ಗಳ ಚರಂಡಿ ನೀರು ಹೊರ ಹೋಗುವಂತೆ ಚರಂಡಿ ನಿರ್ಮಿಸಲಾಗಿತ್ತು. ಆದರೆ ಪಪಂ ಆಡಳಿತ ಈ ಚರಂಡಿ ದುರಸ್ತಿಗಾಗಿ ಜಿಲ್ಲಾಡಳಿತಕ್ಕೆ ಮನವಿ ಮಾಡಿದ್ದರು ಸಹ ಅಧಿಕಾರಿಗಳು ಕಾಮಗಾರಿ ಮಂಜೂರಾತಿಗೆ ಮುಂದಾಗಿಲ್ಲ. ಇದರಿಂದ ಸಾರ್ವಜನಿಕರು ಕಲುಷಿತ ನೀರಿನಲ್ಲೇ ನಡೆದಾಡುವಂತಾಗಿದೆ.

ರಸ್ತೆ ಪಕ್ಕದಲ್ಲಿ ನಿರ್ಮಿಸಿದ್ದ ಮನೆಗಳು, ಅಂಗಡಿಗಳು ರಸ್ತೆ ಅಗಲೀಕರಣಕ್ಕಾಗಿ ಮಾಲೀಕರು ಕಿತ್ತಿದ್ದು, ಕಳೆದ ಮೂರು ತಿಂಗಳಿಂದ ರಸ್ತೆ ಅಗಲೀಕರಣ ಪ್ರಕ್ರಿಯೆಯು ಸಹ
ವಿಳಂಬವಾಗಿದೆ. ಕಾನೂನು ಆದೇಶದ ಜಾರಿಗಾಗಿ ಕಾಯಲಾಗುತ್ತಿದೆ. ಆದರೆ, ಚರಂಡಿ ನೀರು ರಸ್ತೆಯಲ್ಲಿ ಹರಿದು ಹೋಗುವುದು ತಡೆಯಲು ಮುಖ್ಯವಾಗಿ ಚರಂಡಿ ನಿರ್ಮಿಸಬೇಕಿದೆ. ಹೀಗಾಗಿ ಸಾರ್ವಜನಿಕರು ರಸ್ತೆಯಲ್ಲಿ ಓಡಾಡಬೇಕಾದರೆ ಹರಸಾಹಸ ಪಡುವಂತಹ ಪರಿಸ್ಥಿತಿ ಮುಂದುವರಿದಿದೆ.

ಚರಂಡಿ ನೀರು ನಿಲ್ಲುವುದರಿಂದ ಕೆಲವು ಕುಟುಂಬಗಳಿಗೆ ಊಟ ಸೇವನೆ ಸಹ ಅಸಾಧ್ಯವಾಗಿದೆ. ಚರಂಡಿಯ ಕಲುಷಿತ ನೀರಿನಲ್ಲಿ ಸೊಳ್ಳೆಗಳ ಹಾವಳಿ ಹೆಚ್ಚಾಗಿದೆ. ಅನಾರೋಗ್ಯದಿಂದ ಜನರು ಆಸ್ಪತ್ರೆ ಸೇರುವಂತಾಗಿದೆ. ವಾಹನ ಸವಾರರು ಬಿದ್ದು, ಗಾಯವಾಗಿರುವ ಘಟನೆಗಳು ಸಹ ನಡೆದಿವೆ. ಹೀಗೆ ಈ ರಸ್ತೆ ಅಗಲಿಕರಣದ ಪ್ರಕ್ರಿಯೆ ಸಾರ್ವಜನಿಕರಿಗೆ ತೊಂದರೆಯಾಗಿದ್ದು, ಸ್ಥಳೀಯ ಆಡಳಿತ ಮತ್ತು ಜಿಲ್ಲಾಡಳಿತದ ಅಧಿಕಾರಿಗಳ ವಿರುದ್ಧ ಜನರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಈ ಬಗ್ಗೆ ಜಿಲ್ಲಾ ಯೋಜನಾಧಿಕಾರಿ ವಿಜಯ ಮೆಕ್ಕಲಕಿ ಅವರನ್ನು ಸಂಪರ್ಕಿಸಿದಾಗ, ರಸ್ತೆ ಅಗಲೀಕರಣ ಪ್ರಶ್ನಿಸಿ ಸ್ಥಳಿಯರು ಹೈಕೋರ್ಟ್‌ ಮೊರೆ ಹೋಗಿದ್ದಾರೆ. ನಾವು ಸಂಬಂಧಪಟ್ಟ ದಾಖಲಾತಿಗಳನ್ನು ಸಲ್ಲಿಸಿದ್ದು, ಆದೇಶ ಬಂದ ನಂತರ ರಸ್ತೆ ಅಗಲೀಕರಣ ಕಾಮಗಾರಿ ಆರಂಭಿಸಲಾಗುವುದು. ಆದರೆ ಚರಂಡಿ ನಿರ್ಮಾಣಕ್ಕೆ ಈಗಾಗಲೆ ಯೋಜನೆ ತಯಾರಿಸಿ, ಕಾಮಗಾರಿ ಆರಂಭಿಸಲು ಮುಂದಾಗಿದ್ದು, ಈ ಪ್ರಕ್ರಿಯೇ ಚುನಾವಣೆ ಘೋಷಣೆಗೂ ಮುಂಚಿತವಾಗಿ ಮಾಡಲಾಗಿದೆ. ಆದರೆ ಕೆಲವು ಕಾರ್ಯಗಳ ನಿಮಿತ್ತ ವಿಳಂಬವಾಗಿದೆ. ಇನ್ನೂ ಎರಡು, ಮೂರು ದಿನಗಳಲ್ಲಿ ಚರಂಡಿ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

Advertisement

ರಸ್ತೆ ಪಕ್ಕದಲ್ಲಿ ಚರಂಡಿ ನಿರ್ಮಿಸಲು ಜಿಲ್ಲಾಡಳಿತಕ್ಕೆ ಪಪಂ ಮನವಿ ಸಲ್ಲಿಸಿದ್ದರು
ಅಧಿಕಾರಿಗಳು ಚರಂಡಿ ನಿರ್ಮಾಣಕ್ಕೆ ಮುಂದಾಗಿಲ್ಲ. ವಾಹನ ಸವಾರರು ಮತ್ತು ಕೆಲವು ಕುಟುಂಬಗಳು ಸ್ಥಳೀಯ ಆಡಳಿತದ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ನಾರಾಯಣಗೌಡ ಮೆದಿಕೇರಿ
ಪಪಂ ಸದಸ್ಯರು.

ನಾಲ್ಕು ತಿಂಗಳು ಕಳೆದರೂ ಸಹ ಚರಂಡಿ ಕಾಮಗಾರಿ ಕೈಗೊಂಡಿಲ್ಲ. ಇದರಿಂದ ಸಾರ್ವಜನಿಕರಿಗೆ, ವ್ಯಾಪಾರಿಗಳಿಗೆ ತೊಂದರೆಯಾಗಿದೆ. ಕೂಡಲೇ ಕಾಮಗಾರಿ ಕೈಗೆತ್ತಿಕೊಳ್ಳಬೇಕು. ಇಲ್ಲದಿದ್ದಲ್ಲಿ ಹೋರಾಟ ನಡೆಸಲಾಗುವುದು.
ವಿಜಯಕುಮಾರ ಸಾಸ್ವಿಹಾಳ,
ಸಂಘಟನೆ ಮುಖಂಡ.

ಎನ್‌.ಶಾಮೀದ್‌

Advertisement

Udayavani is now on Telegram. Click here to join our channel and stay updated with the latest news.

Next