Advertisement

ಸೌಲಭ್ಯವಿಲ್ಲದೇ ನರಳುತ್ತಿವೆ ಅಂಗನವಾಡಿ

10:49 AM Feb 04, 2019 | |

ತಾವರಗೇರಾ: ಸುಸಜ್ಜಿತ ಕಟ್ಟಡ, ಕುಡಿವ ನೀರು, ಭದ್ರತೆ ಕೊರತೆ, ಶುದ್ಧ ವಾತಾವರಣ, ಮಾತೃಪೂರ್ಣ ಯೋಜನೆ, ಗಾಳಿ, ಬೆಳಕು, ನೆರಳು ಹೀಗೆ ವಿವಿಧ ಸಮಸ್ಯೆಗಳಿಂದ ಸುತ್ತಮುತ್ತಲಿನ ಅಂಗನವಾಡಿ ಕೇಂದ್ರಗಳು ನರಳಾಡುತ್ತಿದೆ.

Advertisement

ಪಟ್ಟಣದ ಕೆಲವು ವಾರ್ಡ್‌ಗಳ ಅಂಗನವಾಡಿ ಕೆಂದ್ರಗಳು ಮತ್ತು ಹೋಬಳಿ ವ್ಯಾಪ್ತಿಯ ಕಿಲ್ಲಾರಹಟ್ಟಿ, ಜುಮಲಾಪುರ, ದೋಟಿಹಾಳ ಗ್ರಾಮಗಳ ಅಂಗನವಾಡಿ ಕೇಂದ್ರಗಳಲ್ಲಿ ಕಂಡು ಬರುವ ಸಾಮಾನ್ಯ ಚಿತ್ರಣವಿದು. ರಾಮಜೀ ನಾಯ್ಕ ತಾಂಡದಲ್ಲಿ ಅಂಗನವಾಡಿ ಕೇಂದ್ರದ ಕಟ್ಟಡ ನಿರ್ಮಾಣವಾಗಿಲ್ಲ. 20ಕ್ಕೂ ಹೆಚ್ಚು ಮಕ್ಕಳಿಗೆ ಪ್ರತಿದಿನ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಮಧ್ಯಾಹ್ನದ ಬಿಸಿಯೂಟ ವ್ಯವಸ್ಥೆ ಮಾಡಲಾಗುತ್ತಿದೆ. ಇದರಿಂದಾಗಿ ಮಾತೃಪೂರ್ಣ ಯೋಜನೆಯಡಿ ಗರ್ಭಿಣಿಯರು, ಬಾಣಂತಿಯರು, ಶಿಶುಗಳ ಪೌಷ್ಟಿಕ ಆಹಾರ ಪದಾರ್ಥಗಳು ಸಿಗುತ್ತಿಲ್ಲ. ರಾಮಜೀ ನಾಯ್ಕ ತಾಂಡ ಮತ್ತು ಸಂಗಟೇರ ಹಟ್ಟಿಯ ಮಕ್ಕಳು ಅಂಗನವಾಡಿ ಕೇಂದ್ರದ ಶಿಕ್ಷಣದಿಂದ ವಂಚಿತರಾಗಿದ್ದು, ಕೆಂದ್ರವಿಲ್ಲದೇ ಶಾಲೆ ಕೇವಲ ಊಟಕ್ಕೆ ಸಿಮೀತವಾಗಿದೆ. ಆದರೇ ಇಲ್ಲಿನ ಫಲಾನುಭವಿಗಳಿಗೆ ಹಾಲು, ಮೊಟ್ಟೆ ತಲುಪುತ್ತಿಲ್ಲ ಎಂದು ಪಾಲಕರು ಆರೋಪಿಸುತ್ತಾರೆ.

ವಲಯಗಳ ವಿವರ: ಒಟ್ಟು ಮೂರು ಅಂಗನವಾಡಿ ವಲಯಗಳಲ್ಲಿ ಮುದೇನೂರು ವಲಯದ 33 ಅಂಗನವಾಡಿ ಕೇಂದ್ರಗಳ ಪೈಕಿ 4 ಕೇಂದ್ರಗಳು ಬಾಡಿಗೆ ಕಟ್ಟಡದಲ್ಲಿ ನಡೆಯುತ್ತಿವೆ. ತಾವರಗೇರಾ ಎ ವೃತ್ತದಲ್ಲಿ 21 ಕೇಂದ್ರಗಳು ಇವೆ. ಇವುಗಳಲ್ಲಿ 9 ಕೇಂದ್ರಗಳು ಬಾಡಿಗೆ ಕಟ್ಟಡದಲ್ಲಿವೆ. ತಾವರಗೇರಾ ಬಿ ವೃತ್ತದಲ್ಲಿ 23 ಅಂಗನವಾಡಿ ಕೇಂದ್ರಗಳಿದ್ದು, ಇದರಲ್ಲಿ 4 ಕೇಂದ್ರಗಳು ಬಾಡಿಗೆ ಕಟ್ಟಡಗಳಲ್ಲಿ ನಡೆಯುತ್ತಿವೆ.

ಹೀಗೆ 17 ಅಂಗನವಾಡಿ ಕೇಂದ್ರಗಳನ್ನು ಚಿಕ್ಕ ಮತ್ತು ಶಿಥಿಲಗೊಂಡ ಖಾಸಗಿ ಕಟ್ಟಡಗಳಲ್ಲಿ ನಡೆಸಲಾಗುತ್ತಿದೆ. ಇದ್ಲಾಪುರ, ಜುಮಲಾಪುರ, ಮಾದಾಪುರ ಸೇರಿದಂತೆ 10ಕ್ಕೂ ಹೆಚ್ಚು ಕೇಂದ್ರಗಳು ಶಿಥಿಲಗೊಂಡ ಕಟ್ಟಡದಲ್ಲಿ ನಡೆಯುತ್ತಿವೆ. ಕೆಲ ಕೇಂದ್ರಗಳಿಗೆ ಮಕ್ಕಳು ತೆರಳಲು ರಸ್ತೆಗಳೇ ಇಲ್ಲ. ಮಕ್ಕಳನ್ನು ತೊಟ್ಟಿಲು ಸೇವೆಯಲ್ಲಿ ಕಳುಹಿಸಬೇಕಿದೆ. ಜುಮಲಾಪುರ ಗ್ರಾಮದ ಗ್ರಾಪಂ ಹತ್ತಿರದಲ್ಲಿ ನಿರ್ಮಿಸಿರುವ ಅಂಗನವಾಡಿ ಕೇಂದ್ರ ನಿರ್ಮಾಣಕ್ಕೆ ತಾಪಂ ಅನುದಾನಡಿ ಎರಡು ವರ್ಷದಲ್ಲಿ ಅಂದಾಜು 1.20 ಲಕ್ಷ ರೂ. ವೆಚ್ಚ ಮಾಡಲಾಗಿದೆ. ಆದರೆ ಸರ್ಕಾರದ ಹಣ ಖರ್ಚಾಗಿದೆ ಕೊಠಡಿ ಮಾತ್ರ ಉಪಯೋಗವಿಲ್ಲದ್ದಂತಾಗಿದೆ. ಇಂತಹ ದಯನೀಯ ಪರಿಸ್ಥಿತಿಯ ಅಂಗನವಾಡಿ ಕೇಂದ್ರಗಳ ಗೋಳು ಕೇಳುವರಿಲ್ಲ.

ಸೌಲಭ್ಯ ಮರೀಚಿಕೆ: ಗಡಿಭಾಗದ 26ಕ್ಕೂ ಹೆಚ್ಚು ಕೇಂದ್ರಗಳಿಗೆ ಸುತ್ತಲು ಕಾಂಪೌಂಡ್‌, ಮೆಟ್ಟಿಲುಗಳು, ಕಿಟಕಿ, ಆಟದ ಮೈದಾನ, ಕುಡಿವ ನೀರು, ವಿದ್ಯುತ್‌ ಸಂಪರ್ಕ, ಶೌಚಾಲಯ ಸೇರಿದಂತೆ ಅಗತ್ಯ ಮೂಲ ಸೌಲಭ್ಯಗಳಿಲ್ಲ. ಇಲ್ಲಿನ ಮಕ್ಕಳಿಗೆ ಗುಣಮಟ್ಟದ ಆಹಾರ, ಮೊಟ್ಟೆ ಸಹ ನೀಡುತ್ತಿಲ್ಲ. ಬಳೂಟಗಿ ಗ್ರಾಮದ ಎಸ್‌ಸಿ ಕಾಲೋನಿಯ ಕೇಂದ್ರ ತಿಪ್ಪೆ ಗುಂಡಿ ಮತ್ತು ಮಹಿಳಾ ಸಾರ್ವಜನಿಕ ಶೌಚಾಲಯ ಮಧ್ಯದಲ್ಲಿದೆ. ಹಲವು ಕೇಂದ್ರಗಳು ಮುಖ್ಯರಸ್ತೆ, ಇಕ್ಕಟ್ಟಾದ ಓಣಿಗಳಲ್ಲಿ, ಅಸುರಕ್ಷತಾ ಸ್ಥಳದಲ್ಲಿ ಕಾರ್ಯ ನಿರ್ವಹಿಸುತ್ತಿವೆ.

Advertisement

ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯು ಪ್ರತಿ ವರ್ಷ ಲಕ್ಷಾಂತರ ರೂ. ಖರ್ಚು ಮಾಡಿ ಅಂಗನವಾಡಿಗಳ ದುರಸ್ತಿ, ಸುಣ್ಣ ಬಣ್ಣ ಕಾರ್ಯಕ್ಕೆ ಅಸ್ತು ಎಂದರೆ. ಅಧಿಕಾರಿಗಳ ಬೇಜವಾಬ್ದಾರಿ ವರ್ತನೆ, ಜನಪ್ರತಿನಿಧಿಗಳ ಇಚ್ಛಾಶಕ್ತಿ ಕೊರತೆಯಿಂದ ಕಳಪೆ ಕಾಮಗಾರಿಗಳು ನಡೆಯುತ್ತಿವೆ. ಗುತ್ತಿಗೆದಾರರಿಗೆ ಅಂಗನವಾಡಿ ಅಭಿವೃದ್ಧಿ ಅನುದಾನ ಚಿನ್ನದ ಮೊಟ್ಟೆಯಿದ ಕೋಳಿಯಂತಾಗಿದೆ. ಅಭಿವೃದ್ಧಿ ಉದ್ದೇಶ ಮಾತ್ರ ಶೂನ್ಯ ಸಾಧನೆಯಾಗುತ್ತಿದೆ. ಸಂಬಂಧಿಸಿದ ಇಲಾಖೆ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಇತ್ತ ಗಮನಹರಿಸಬೇಕು ಎಂದು ಸಾರ್ವಜನಿಕರಿಂದ ಒತ್ತಾಯ ಕೇಳಿಬಂದಿದೆ.

ಜುಮಲಾಪುರ ಗ್ರಾಮದ ಅಂಗನವಾಡಿ ಕೇಂದ್ರಕ್ಕೆ ಸರ್ಕಾರಿ ಭೂಮಿ ಕೊರತೆ ಇದೆ. ಕಟ್ಟಡಗಳ ಕೊರತೆ ಇರುವ ಗ್ರಾಮಗಳ ಪಟ್ಟಿ ತಯಾರಿಸಲಾಗುವುದು. ಮೂಲ ಸೌಲಭ್ಯಗಳ ಕೊರತೆ ಬಗ್ಗೆ ಅಂಗನವಾಡಿ ಕಾರ್ಯಕರ್ತೆಯರ ಜೊತೆ ಚರ್ಚಿಸಿ ಕ್ರಮ ಕೈಗೊಳ್ಳಲಾಗುವುದು.
ಶ್ರೀದೇವಿ,
ಇಲಾಖೆಯ ವಲಯ ಮೇಲ್ವೀಚಾರಕಿ, ಮುದೇನೂರು

Advertisement

Udayavani is now on Telegram. Click here to join our channel and stay updated with the latest news.

Next