Advertisement

ಮೂರನೇ ಕ್ರಮಾಂಕ ಸೂಕ್ತ: ಶ್ರೇಯಸ್‌ ಅಯ್ಯರ್‌

11:18 PM Feb 28, 2022 | Team Udayavani |

ಧರ್ಮಶಾಲಾ: ಭಾರತ ತಂಡದ ಭರವಸೆಯ ಬ್ಯಾಟರ್‌ ಶ್ರೇಯಸ್‌ ಅಯ್ಯರ್‌ ಶ್ರೀಲಂಕಾ ವಿರುದ್ಧದ ಮೂರೂ ಟಿ20 ಪಂದ್ಯಗಳಲ್ಲಿ ಅಜೇಯ ಅರ್ಧ ಶತಕ ಸಿಡಿಸಿ ಭಾರೀ ಸುದ್ದಿಯಲ್ಲಿದ್ದಾರೆ. ಇದೀಗ ವಿರಾಟ್‌ ಕೊಹ್ಲಿ ಮೀಸಲಾಗಿರುವ 3ನೇ ಕ್ರಮಾಂಕದಲ್ಲಿ ಮುಂದುವರಿಯುವ ಅಭಿಲಾಷೆ ವ್ಯಕ್ತಪಡಿಸಿದ್ದಾರೆ.

Advertisement

ಶ್ರೀಲಂಕಾ ವಿರುದ್ಧ ವಿರಾಟ್‌ ಕೊಹ್ಲಿ ವಿಶ್ರಾಂತಿ ಪಡೆದ ಕಾರಣ ಶ್ರೇಯಸ್‌ ಅಯ್ಯರ್‌ಗೆ 3ನೇ ಕ್ರಮಾಂಕಕ್ಕೆ ಭಡ್ತಿ ನೀಡಲಾಯಿತು. ಈ ಅವಕಾಶವನ್ನು ಎರಡೂ ಕೈಗಳಿಂದ ಬಾಚಿಕೊಂಡಿರುವ ಅಯ್ಯರ್‌ ಮೂರು ಪಂದ್ಯಗಳಲ್ಲಿ ಕ್ರಮವಾಗಿ 57, 74 ಮತ್ತು 73 ರನ್‌ ಗಳಿಸಿ ಮಿಂಚಿದರು. ಮೂರರಲ್ಲೂ ನಾಟೌಟ್‌ ಆಗಿ ಉಳಿದರು.

“ಪ್ರಬಲ ಸ್ಪರ್ಧೆ ಇದೆ’
ಪಂದ್ಯದ ಬಳಿಕ ವರ್ಚುವಲ್‌ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಶ್ರೇಯಸ್‌ ಅಯ್ಯರ್‌ “ನಾನು ನನ್ನಿಂದ ಅಥವಾ ತಂಡದ ಕೋಚ್‌ಗಳಿಂದ ಯಾವುದೇ ನಿರೀಕ್ಷೆ ಗಳನ್ನು ಇಟ್ಟುಕೊಂಡಿಲ್ಲ. ಏಕೆಂದರೆ ನಮ್ಮ ತಂಡದಲ್ಲಿ ಬಹಳ ಸ್ಪರ್ಧೆಯಿದೆ. ಪ್ರತಿಯೊಬ್ಬರೂ ಪಂದ್ಯವನ್ನು ಗೆಲ್ಲಿ ಸುವ ಸಾಮರ್ಥ್ಯ ಹೊಂದಿದ್ದಾರೆ. ವೈಯಕ್ತಿಕವಾಗಿ ನನಗೆ ಸಿಕ್ಕಂತಹ ಪ್ರತಿಯೊಂದು ಕ್ಷಣ ಮತ್ತು ಅವಕಾಶವನ್ನು ನಾನು ಆನಂದಿಸಲು ಬಯಸುತ್ತೇನೆ’ ಎಂದರು.
“ನಾನು ಮೈದಾನಕ್ಕೆ ಇಳಿಯುವಾಗಲೆಲ್ಲ ಪಂದ್ಯವನ್ನು ಫಿನಿಶ್‌ ಮಾಡುವುದಕ್ಕೆ ಬಯಸುತ್ತೇನೆ. ನನ್ನ ಮನಃಸ್ಥಿತಿ ಕೂಡ ಯಾವಾಗಲೂ ಹಾಗೆಯೇ ಇರುತ್ತದೆ’ ಎಂದರು.

3ನೇ ಕ್ರಮಾಂಕ ಸೂಕ್ತ
“ನಿಸ್ಸಂಶಯವಾಗಿ ಈ ಸ್ವರೂಪದ ಕ್ರಿಕೆಟ್‌ನಲ್ಲಿ ಅಗ್ರ ಕ್ರಮಾಂಕದ 3 ಸ್ಥಾನಗಳಲ್ಲಿ ಉತ್ತಮ ಇನ್ನಿಂಗ್ಸ್‌ ಕಟ್ಟುವ ಅವಕಾಶ ಇರುತ್ತದೆ. ಒಂದು ವೇಳೆ ಕೆಳ ಕ್ರಮಾಂಕದಲ್ಲಿ ಬ್ಯಾಟಿಂಗ್‌ ಇಳಿದರೆ ನಮಗೆ ಸೆಟ್‌ ಆಗುವುದಕ್ಕೆ ಅವಕಾಶ ಇರುವುದಿಲ್ಲ. ಆಗ ನಾವು ಮೊದಲ ಎಸೆತದಿಂದಲೇ ಹೊಡಿಬಡಿ ಆಟಕ್ಕೆ ಮುಂದಾಗಬೇಕಾಗುತ್ತದೆ. ಆದ್ದರಿಂದ ವೈಯಕ್ತಿಕವಾಗಿ ನನಗೆ ಯಾವುದು ಉತ್ತಮ ಕ್ರಮಾಂಕ ಎಂದು ಕೇಳಿದರೆ ಅದು ಮೂರನೇ ಕ್ರಮಾಂಕ ಎಂದೇ ಹೇಳುತ್ತೇನೆ’ ಎಂಬುದಾಗಿ ಅಯ್ಯರ್‌ ಹೇಳಿದರು.

ಇದನ್ನೂ ಓದಿ:2ನೇ ಟೆಸ್ಟ್: 4ನೇ ದಿನದಾಟದ ಅಂತ್ಯ: ಗೆಲುವಿನತ್ತ ದಕ್ಷಿಣ ಆಫ್ರಿಕಾ

Advertisement

ತಂಡದಲ್ಲಿಲ್ಲ ಖಾಯಂ ಸ್ಥಾನ!
ವಿರಾಟ್‌ ಕೊಹ್ಲಿ ತಂಡಕ್ಕೆ ಮರಳಿದಾಗ ಶ್ರೇಯಸ್‌ ಅಯ್ಯರ್‌ ನಂ.3ನೇ ಸ್ಥಾನವನ್ನು ತೆರವು ಮಾಡಬೇಕಾಗುತ್ತದೆ. ಹಾಗಾದರೆ ಶ್ರೇಯಸ್‌ ಅಯ್ಯರ್‌ ಯಾವ ಕ್ರಮಾಂಕದಲ್ಲಿ ಬ್ಯಾಟಿಂಗ್‌ ಮಾಡುತ್ತಾರೆ ಎನ್ನುವ ಪ್ರಶ್ನೆ ಉದ್ಭವಿಸುತ್ತದೆ.
ಟೀಮ್‌ ಇಂಡಿಯಾ ಆಡಳಿತ ಮಂಡಳಿ ಯೋಜನೆಯಂತೆ ರಿಷಭ್‌ ಪಂತ್‌ 4ನೇ ಮತ್ತು ಸೂರ್ಯಕುಮಾರ್‌ ಯಾದವ್‌ 5ನೇ ಸ್ಥಾನದಲ್ಲಿರುತ್ತಾರೆ. ಆಲ್‌ರೌಂಡರ್‌ ಕೋಟಾದಲ್ಲಿರುವ ವೆಂಕಟೇಶ್‌ ಅಯ್ಯರ್‌ ಮತ್ತು ರವೀಂದ್ರ ಜಡೇಜ 6ನೇ ಮತ್ತು 7ನೇ ಕ್ರಮಾಂಕದಲ್ಲಿ ಇರುತ್ತಾರೆ.

ಒಂದೊಮ್ಮೆ ಶ್ರೇಯಸ್‌ ಅಯ್ಯರ್‌ 3ನೇ ಕ್ರಮಾಂಕದಲ್ಲಿ ಆಡದಿದ್ದರೆ ಅವರ ನೇರ ಸ್ಪರ್ಧೆ ಸೂರ್ಯಕುಮಾರ್‌ ಯಾದವ್‌ ಅವರೊಂದಿಗೆ ಇರುತ್ತದೆ. ಸದ್ಯ ಯಾದವ್‌ ಅವರನ್ನು ಆಡುವ ಬಳಗದಿಂದ ಕೈಬಿಡುವುದು ಅನುಮಾನ. ಅವರು ಕೇವಲ 14 ಟಿ20 ಪಂದ್ಯಗಳಲ್ಲಿ ಅತ್ಯುತ್ತಮ ಪ್ರದರ್ಶನ ಕಾಯ್ದುಕೊಂಡು ಬಂದಿದ್ದಾರೆ. ಹೀಗಾಗಿ ಅಯ್ಯರ್‌ಗೆ ಖಾಯಂ ಸ್ಥಾನ ನೀಡುವುದು ಗಂಭೀರ ಸಮಸ್ಯೆಯೇ ಆಗಿದೆ. ಕಳೆದ ವೆಸ್ಟ್‌ ಇಂಡೀಸ್‌ ಎದುರಿನ ಸರಣಿಯೇ ಇದಕ್ಕೆ ಉತ್ತಮ ನಿದರ್ಶನ.

Advertisement

Udayavani is now on Telegram. Click here to join our channel and stay updated with the latest news.

Next