Advertisement
ಬಹುಶಃ ಯಶ್ ಮಧ್ಯ ಪ್ರವೇಶಿಸಿ, ಈ ವಿಷಯವನ್ನು ಇಲ್ಲಿಗೇ ಬಿಟ್ಟುಬಿಡಿ, ಇಲ್ಲಿ ಚರ್ಚಿಸುವಂತಹದ್ದು ಏನೂ ಇಲ್ಲ ಎಂದು ಅಭಿಮಾನಿಗಳಿಗೆ ಹೇಳದಿದ್ದರೆ, ಈ ವಿಷಯ ಎಲ್ಲಿಗೆ ಹೋಗಿ ಮುಟ್ಟುತ್ತಿತ್ತೋ ಗೊತ್ತಿಲ್ಲ. ಆ ಲೆವೆಲ್‌ಗೆ ರಶ್ಮಿಕಾ ಮಂದಣ್ಣ ಅವರ ಹೇಳಿಕೆ ಕೋಲಾಹಲವನ್ನೇ ಉಂಟು ಮಾಡಿತು. ಕೊನೆಗೆ ಯಶ್ ತಮ್ಮ ಅಭಿಮಾನಿಗಳಿಗೆ ಸಮಾಧಾನ ಮಾಡುವುದರ ಜೊತೆಗೆ, ರಶ್ಮಿಕಾ ಸಹ ಕ್ಷಮೆ ಕೇಳಿದರು. ಅಲ್ಲಿಗೆ ಎಲ್ಲವೂ ಬಗೆಹರಿದಂತಾಯಿತು.
Related Articles
Advertisement
ಸುದೀಪ್ ಎಂದೋ ಮತ್ತು ಯಾವತ್ತೋ ಆಡಿದ ಮಾತು, ಒಂದು ಸ್ನೇಹವನ್ನು ಮುರಿಯಬಹುದು ಎಂದು ಯಾರೂ ನಿರೀಕ್ಷಿಸಿರಲಿಲ್ಲ. ಅದೇ ತರಹ ನಿರ್ಮಾಪಕ ಸೂರಪ್ಪ ಬಾಬು ಯಾವತ್ತೋ ಹಿರಿಯ ನಟ ತೂಗುದೀಪ ಶ್ರೀನಿವಾಸ್ ಅವರ ಪಾತ್ರದ ಕುರಿತು ಹೇಳಿದ್ದು, ಇನ್ನಾéವತ್ತೋ ವಿವಾದಕ್ಕೆ ಕಾರಣವಾಗಿ, ಅದ್ಯಾವುದೋ ರೂಪ ಪಡೆಯಿತು. ಯಾವತ್ತೋ ಮತ್ತು ಯಾವುದೋ ಸಂದರ್ಭದಲ್ಲಿ ಆಡಿದ ಮಾತು, ಅದ್ಹೇಗೆ ಇನ್ನೆಂದೋ ಕಾಡುತ್ತದೆ ಎಂದರೆ, ಅದಕ್ಕೆ ಪ್ರಮುಖ ಕಾರಣ ಅಭಿಮಾನ.
ಅಭಿಮಾನವೆನ್ನುವುದು ಅತಿರೇಕಕ್ಕೆ ಹೋದರೆ ಏನಾಗುತ್ತದೆ ಎಂಬುದಕ್ಕೆ ಉದಾಹರಣೆಗಳಿವು. ಅಭಿಮಾನ ಮತ್ತು ಅಭಿಮಾನಿಗಳ ಕಚ್ಚಾಟ ಕನ್ನಡ ಚಿತ್ರರಂಗಕ್ಕೆ ಹೊಸದೇನಲ್ಲ. ಕನ್ನಡ ಚಿತ್ರರಂಗದಲ್ಲಿ ಇದೇ ವಿಷಯವಾಗಿ ಸಾಕಷ್ಟು ಚರ್ಚೆಗಳೂ ಆಗಿವೆ, ಸಾಕಷ್ಟು ಸಮಸ್ಯೆಗಳೂ ಆಗಿವೆ. ಹಿಂದೆ ಕೆಲವು ಗಲಾಟೆಗಳಾದರೂ, ಇಷ್ಟೊಂದು ಸುದ್ದಿಯಾಗುತ್ತಿರಲಿಲ್ಲ. ಆದರೆ, ಸೋಷಿಯಲ್ ಮೀಡಿಯಾದಿಂದಾಗಿ ಇವತ್ತು ಹೆಚ್ಚು ಸುದ್ದಿಯಾಗುತ್ತಿದೆ.
ಅಷ್ಟೇ ಅಲ್ಲ, ಯಾವತ್ತೋ, ಯಾರೋ, ಏನೋ ಆಡಿದ ಮಾತುಗಳು, ಇವತ್ತು ಅವರನ್ನೇ ದೆವ್ವವಾಗಿ ಕಾಡುತ್ತಿವೆ. ಸಣ್ಣಸಣ್ಣ ವಿಷಯಗಳು ದೊಡ್ಡದಾಗಿ ವಿವಾದಗಳಾಗುತ್ತಿವೆ. ಇದೆಲ್ಲದರಿಂದ ಚಿತ್ರರಂಗದಲ್ಲಿ ಈಗ ಮಾತಾಡುವುದಕ್ಕೇ ಭಯಪಡುವಂತಾಗಿದೆ. ತಾವು ಆಡಿದ ಮಾತು, ತಮಗೆ ಯಾವತ್ತು ಗುನ್ನ ಇಡುತ್ತದೋ ಎಂದು ಹೆದರುವಂತಾಗಿದೆ. ಇವತ್ತು ಬಹುಶಃ ಎಲ್ಲಾ ಕಲಾವಿದರಿಗೂ ಸೋಷಿಯಲ್ ಮೀಡಿಯಾದಲ್ಲಿ ಅಭಿಮಾನಿಗಳ ಸಂಘಗಳಿವೆ.
ಆ ಅಭಿಮಾನಿ ಸಂಘಗಳೆಲ್ಲಾ ತಮ್ಮ ನೆಚ್ಚಿನ ನಟ-ನಟಿಯರ ಕುರಿತು ಯಾವ ತರಹದ ಸುದ್ದಿ ಬರುತ್ತಿದೆ ಎಂದು ಗಮನಿಸುತ್ತಲೇ ಇರುತ್ತಾರೆ. ಒಳ್ಳೆಯ ಸುದ್ದಿಗಳು ಬಂದಾಗ, ಅದನು ಇನ್ನಷ್ಟು ಜನರಿಗೆ ತಲುಪಿಸಿ, ತಮ್ಮ ಮೆಚ್ಚಿನ ನಟ-ನಟಿಯ ಇಮೇಜನ್ನು ಬೂಸ್ಟ್ ಮಾಡುವುದೂ ಅವರೇ. ಒಂದು ಪಕ್ಷ ಸ್ವಲ್ಪ ನೆಗೆಟಿವ್ ಆಗಿದೆ ಎಂದು ಗೊತ್ತಾದರೆ ದೊಡ್ಡ ರಂಪ ಮಾಡುವುದೂ ಅವರೇ.
ರಶ್ಮಿಕಾ ಅವರ ಉದಾಹರಣೆಯನ್ನೇ ತೆಗೆದುಕೊಳ್ಳುವುದಾದರೆ, “ಮೊನ್ನೆ ಮೊನ್ನೆ ಚಿತ್ರರಂಗಕ್ಕೆ ಬಂದ ರಶ್ಮಿಕಾಗೆ ಯಶ್ ಬಗ್ಗೆ ಮಾತನಾಡುವ ಅರ್ಹತೆ ಇಲ್ಲ’ ಎಂಬ ಕಾಮೆಂಟ್‌ಗಳ ಜೊತೆಗೆ, ರಶ್ಮಿಕಾ ನಟಿಸಿದ “ಕಿರಿಕ್ ಪಾರ್ಟಿ’ ಚಿತ್ರದ ಕೆಲವು ಫೋಟೋಗಳನ್ನು ಬಳಸಿ ಅದಕ್ಕೂ ಟ್ರಾಲ್‌ಗಳನ್ನು ಮಾಡಿದ್ದಾರೆ. “ವಾಂಟೆಡ್- ಡೆಡ್ ಔರ್ ಅಲೈವ್’ ಎಂಬ ಪೋಸ್ಟರ್‌ಗಳನ್ನು ಹಾಕಿ ಸಿಟ್ಟು ಪ್ರದರ್ಶಿಸುತ್ತಿದ್ದಾರೆ.
ಇತ್ತೀಚೆಗೆ, “ದುನಿಯಾ’ ವಿಜಯ್ ಜೊತೆಗೆ ನಟಿಸುವುದಕ್ಕೆ ಇಷ್ಟ ಇಲ್ಲ ಎಂದು ಸಿಂಧು ಲೋಕನಾಥ್ ಒಂದು ಮಾತು ಹೇಳಿದ್ದಕ್ಕೆ, ಅವರ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಟೀಕೆ ವ್ಯಕ್ತವಾಯಿತು. ಹಿಂದೆಲ್ಲಾ ಯಾರಾದರೂ ಇನ್ನೊಬ್ಬರ ಬಗ್ಗೆ ಮಾತಾಡಿದ್ದರೆ, ಅದು ಅವರ ವೈಯಕ್ತಿಕ ಅಭಿಪ್ರಾಯ ಎಂದು ಹೇಳಲಾಗುತಿತ್ತು. ಆದರೆ, ಈಗ ಹಾಗಿಲ್ಲ. ಒಂದು ಪದ ಸ್ವಲ್ಪ ನೆಗೆಟಿವ್ ಅನಿಸಿದರೂ, ಅದರ ಸ್ವರೂಪವೇ ಬೇರೆಯಾಗುತ್ತಿದೆ.
ಸಂಬಂಧಪಟ್ಟ ನಟ-ನಟಿಯರು ಸುಮ್ಮನಿದ್ದರೂ, ಅವರ ಅಭಿಮಾನಿ ಬಳಗ ಸುಮ್ಮನಾಗುತ್ತಿಲ್ಲ. ಯಶ್ ಬಗ್ಗೆ ರಶ್ಮಿಕಾ ಹಾಗೆ ಹೇಳಿದ್ದಕ್ಕೆ, ಯಶ್ ಅವರಿಂದ ಯಾವುದೇ ಟೀಕೆ ಬರಲಿಲ್ಲ. ಆದರೆ, ಅವರ ಅಭಿಮಾನಿಗಳು ಮತ್ತು ಇತರರಿಂದ ಸಾಕಷ್ಟು ಟೀಕೆ ವ್ಯಕ್ತವಾಯಿತು. ಕೊನೆಗೆ ಯಶ್ ಮುಂದೆ ಬಂದು, “ನನ್ನ ಬಗ್ಗೆ ಯಾವುದೇ ರೀತಿಯ ಅಭಿಪ್ರಾಯ ಇರಬಾರದೆಂದೇನಿಲ್ಲ. ಅವರ ಅಭಿಪ್ರಾಯ ಅವರದು.
ಅದನ್ನು ಹೀಗಳೆಯುವ ಕೆಲಸ ಯಾರೂ ಮಾಡಬಾರದು. ಎಲ್ಲರ ಅಭಿಪ್ರಾಯವನ್ನು ಗೌರವಿಸೋಣ’ ಎಂದು ದೊಡ್ಡತನ ಮೆರೆದರು. ಅಲ್ಲಿಗೆ ಪ್ರಕರಣ ಬಗೆಹರಿದಂತಾಯಿತು. ಇಲ್ಲಿ ಅಭಿಮಾನಿಗಳು ಒಂದು ವಿಷಯವನ್ನು ಗಮನಹರಿಸಬೇಕಿದೆ. ಅಭಿಮಾನವೆನ್ನುವುದು ಓಕೆ. ಆದರೆ, ಅದು ಅತಿರೇಕಕ್ಕೆ ಹೋದರೆ, ಇದೆಲ್ಲದರಿಂದ ತಾವು ಮೆಚ್ಚಿದ ನಟ-ನಟಿಯರೇ ಅಪವಾದ ಹೊರಬೇಕಾಗುತ್ತದೆ. ಮೊನ್ನೆ ನಡೆದ ಪ್ರಕರಣದಲ್ಲಿ ಯಶ್ ಸುಮ್ಮನಿದ್ದರೂ, ಅವರ ಅಭಿಮಾನಿಗಳು ಮಾಡಿದ ರಂಪಾಟದಿಂದಾಗಿ, ಅವರು ಸಾಕಷ್ಟು ಕಸಿವಿಸಿ ಎದುರಿಸಬೇಕಾಯಿತು.
ಹಾಗಾಗಿ ಮೊದಲು ಅಭಿಮಾನಿಗಳು ಸಂಯಮದಿಂದ ಇರುವುದನ್ನು ಅಭ್ಯಾಸ ಮಾಡಿಕೊಳ್ಳಬೇಕು. ಮುಂಚೆಲ್ಲಾ ಅಭಿಮಾನಿಗಳ ಸಂಘದ ನಡುವೆ ಕಚ್ಚಾಟಗಳಾಗಿ, ಕೈಕೈ ಮಿಲಾಯಿಸುವುದಕ್ಕೆ ಹೋಗಿದ್ದೆಲ್ಲವರೂ ಇದೆ. ಆದರೆ, ಅದ್ಯಾವುದೂ ಹೆಚ್ಚು ಬೆಳಕಿಗೆ ಬರುತ್ತಿರಲಿಲ್ಲ. ಹಾಗಾಗಿ ದೊಡ್ಡ ಮಟ್ಟದಲ್ಲಿ ಮನಸ್ಸುಗಳು ಕೆಡುತ್ತಿರಲಿಲ್ಲ. ಈಗ ಹೊಡೆದಾಟ, ಬಡಿದಾಟಗಳೆಲ್ಲಾ ನಿಂತು, ಎಲ್ಲರೂ ಮೊಬೈಲು, ಲ್ಯಾಪ್‌ಟಾಪ್ ಅಂತ ಅಪ್‌ಡೇಟ್ ಆಗುತ್ತಿದ್ದಾರೆ ಎಂದುಕೊಳ್ಳುವಷ್ಟರಲ್ಲೇ ಜಗಳಗಳು ಹೆಚ್ಚಾಗುತ್ತಿವೆ, ಮನಸ್ಸುಗಳು ಚೂರಾಗುತ್ತಿವೆ.
ಅಭಿಮಾನಿಗಳ ಅತಿರೇಕದ ಅಭಿಮಾನ ಆಯಾ ಸ್ಟಾರ್ ನಟರ ಮಧ್ಯೆ ಗೊತ್ತಿಲ್ಲದಂತೆ ಒಂದು ಬಿರುಕು ತರುತ್ತಿರುವುದಂತೂ ಸುಳ್ಳಲ್ಲ. ಸಣ್ಣಪುಟ್ಟ ವಿಷಯಗಳನ್ನಿಟ್ಟುಕೊಂಡು, ಸಿನಿಮಾದ ಯಾವುದೋ ಒಂದು ಡೈಲಾಗ್ ಇಟ್ಟುಕೊಂಡು ಸೋಶಿಯಲ್ ಮೀಡಿಯಾಗಳಲ್ಲಿ ಅಭಿಮಾನಿಗಳು ಟಾಂಗ್ ಕೊಡುವ ಹಾಗೂ ನೇರಾನೇರ ಕಚ್ಚಾಡುವ ಮೂಲಕ ನಟರ ಮಧ್ಯೆಯೇ ಸಣ್ಣ ಮೈಮನಸ್ಸು ಉಂಟಾಗುವಂತಾಗಿದೆ.
ಅಭಿಮಾನಿಗಳ ಅತಿರೇಕದ ವರ್ತನೆಯಿಂದ ಅತ್ತ ಕಡೆ ಅಭಿಮಾನಿಗಳನ್ನು ಬಿಟ್ಟುಕೊಡಲಾಗದೇ, ಇತ್ತ ಕಡೆ ಮತ್ತೂಬ್ಬ ನಟನ ವಿರೋಧವೂ ಕಟ್ಟಿಕೊಳ್ಳಲಾಗದಂತಹ ಸಂದಿಗ್ಧ ಪರಿಸ್ಥಿತಿ ಸ್ಟಾರ್ ನಟರಿಗೆ ಎದುರಾಗುತ್ತಿದೆ. ಈ ಸಂದಿಗ್ಧತೆಯಲ್ಲಿ ಕೆಟ್ಟ ಹೆಸರು ಮಾತ್ರ ಚಿತ್ರರಂಗಕ್ಕೆ.
* ಚೇತನ್ ನಾಡಿಗೇರ್